ಮಂಗಳವಾರ, ಮಾರ್ಚ್ 9, 2021
18 °C

ಚಿತ್ರ ಚೌಕಟ್ಟಿನಲ್ಲಿ ಕಥೆಗಳ ಹಬ್ಬ

ಎಚ್.ಅನಿತಾ Updated:

ಅಕ್ಷರ ಗಾತ್ರ : | |

ಚಿತ್ರ ಚೌಕಟ್ಟಿನಲ್ಲಿ ಕಥೆಗಳ ಹಬ್ಬ

ಮಕ್ಕಳಲ್ಲಿ ಕಲಾಭಿರುಚಿ ಮತ್ತು ರಂಗಾಸಕ್ತಿಯನ್ನು ಬೆಳೆಸುವ ಗುರಿಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವ  ‘ವಿಜಯನಗರ ಬಿಂಬ’ ರಂಗ ಶಿಕ್ಷಣ ಕೇಂದ್ರ, ಮಕ್ಕಳ ವಿಭಾಗದಿಂದ ‘ಚಿತ್ರಕಥನ 2016–ಚಿತ್ರ ಚೌಕಟ್ಟಿನಲ್ಲಿ ಕಥೆಗಳ ಹಬ್ಬ’ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಸಹಯೋಗದೊಂದಿಗೆ ಆಗಸ್ಟ್‌ 14ರ (ಭಾನುವಾರ) ಬೆಳಿಗ್ಗೆ 10.30ಕ್ಕೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಕಥೆಗಾರ ಎಸ್‌.ದಿವಾಕರ್‌, ಲೇಖಕಿ ಜಯಶ್ರೀ ಕಾಸರವಳ್ಳಿ ಮತ್ತಿತರರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.‘ಕಲೆ, ಸಾಹಿತ್ಯ, ರಂಗಭೂಮಿ ಈ ಮೂರರ ಸಮ್ಮಿಶ್ರಣ ‘ಚಿತ್ರಕಥನ’. ಚಿತ್ರ ಬಿಡಿಸುವುದು, ಆ ಚಿತ್ರಕ್ಕೆ ಕಥೆ ಕಟ್ಟುವುದು, ಕಥೆಯನ್ನು ರಂಗರೂಪಕ್ಕೆ ತರುವುದು ಹೇಗೆ ಎಂಬುದನ್ನು ಮಕ್ಕಳು ಈ ಮೂಲಕ ಕಲಿಯಲು ಸಾಧ್ಯವಾಗಲಿದೆ’ ಎನ್ನುತ್ತಾರೆ ‘ವಿಜಯನಗರ ಬಿಂಬ’ ಕಾರ್ಯದರ್ಶಿ ಡಾ.ಎಸ್‌.ವಿ.ಕಶ್ಯಪ್‌.

‘ಪ್ರಸಕ್ತ ಸಾಲಿನಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.ಕುವೆಂಪು, ಶಿವರಾಮ ಕಾರಂತ, ಡಿ.ವಿ.ಜಿ, ಟಿ.ಪಿ.ಕೈಲಾಸಂ, ಕುಮಾರವ್ಯಾಸ, ಎ.ಎಸ್‌.ಮೂರ್ತಿ, ಗೋವಿಂದ ಪೈ, ಪಿ.ಲಂಕೇಶ್‌, ಬೇಂದ್ರೆ, ಮಾಸ್ತಿ ಅವರ ಹೆಸರಿನಲ್ಲಿ ಹತ್ತು ತಂಡಗಳನ್ನು ಮಾಡಿದ್ದೆವು. ಪ್ರತಿ ತಂಡಕ್ಕೂ ಒಂದೊಂದು ವಿಷಯ ನೀಡಿ ಚಿತ್ರ ರಚಿಸಲು ಹೇಳಲಾಗಿತ್ತು.ಹೀಗೆ ಒಂದು ತಂಡದ ಮಕ್ಕಳು ರಚಿಸಿದ ಚಿತ್ರವನ್ನು ಮತ್ತೊಂದು ತಂಡದ ಮಕ್ಕಳಿಗೆ ನೀಡಿ, ಆ ಕುರಿತು ಕಥೆ ಕಟ್ಟಿ, ಅದನ್ನು ನಾಟಕ ರೂಪಕ್ಕೆ ತರಲು ತಿಳಿಸಲಾಗಿತ್ತು. ಕಳೆದ ಇಪ್ಪತ್ತು ದಿನಗಳಿಂದ ಮಕ್ಕಳು ಸತತ ಅಭ್ಯಾಸ ನಡೆಸುತ್ತಿದ್ದು, ಒಟ್ಟು ಹತ್ತು ಚಿತ್ರಕಥನಗಳು ಭಾನುವಾರ ಪ್ರದರ್ಶನಗೊಳ್ಳಲಿವೆ’ ಎಂದು ಮಾಹಿತಿ ನೀಡುತ್ತಾರೆ ಕಶ್ಯಪ್‌.‘ಕಾರ್ಯಕ್ರಮದ ಉದ್ಘಾಟನೆಗೂ ಮುನ್ನ ಬೆಳಿಗ್ಗೆ 9ಕ್ಕೆ ವಿವಿಧ ಶಾಲೆಗಳ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ. 5ರಿಂದ 9ನೇ ತರಗತಿ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸುವರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸಂಜೆ 4.30ಕ್ಕೆ ಬಹುಮಾನಗಳನ್ನು ವಿತರಿಸಲಾಗುವುದು. ಭಾಗವಹಿಸಿದ ಎಲ್ಲ ಮಕ್ಕಳಿಗೆ ಪ್ರಶಂಸನಾ ಪತ್ರ ನೀಡಲಾಗುವುದು. 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ’ ಎನ್ನುತ್ತಾರೆ ಅವರು.‘ಪ್ರತಿ ವರ್ಷ ಜೂನ್‌ ತಿಂಗಳಲ್ಲಿ ತರಗತಿಗಳು ಆರಂಭವಾಗಿ ಜನವರಿಗೆ ಕೊನೆಯಾಗುತ್ತದೆ. ಮಕ್ಕಳಿಗೆ ನಟನೆಯ ಮೂಲ ಪಾಠವನ್ನು ಹೇಳಿಕೊಡುವುದು ಕಾರ್ಯಕ್ರಮದ ಉದ್ದೇಶ. ಬರುವ ತಿಂಗಳು ‘ಬೊಂಬೆ ಹಬ್ಬ’ ಕಾರ್ಯಕ್ರಮ ನಡೆಯಲಿದೆ. ತರಗತಿಗಳ ಮುಕ್ತಾಯದ ಸಂದರ್ಭದಲ್ಲಿ ಒಟ್ಟು 2–3 ನಾಟಕಗಳ ಪ್ರದರ್ಶನ ನೀಡಲಾಗುವುದು’ ಎಂದು ಅವರು ತಿಳಿಸಿದರು.

ಮಾಹಿತಿಗೆ: 9844153967 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.