ಚಿತ್ರ ರೂಪಕ : ಜ್ವಾಜಲ್ಯಮಾನ ...ಜೂನ್

7

ಚಿತ್ರ ರೂಪಕ : ಜ್ವಾಜಲ್ಯಮಾನ ...ಜೂನ್

Published:
Updated:
ಚಿತ್ರ ರೂಪಕ : ಜ್ವಾಜಲ್ಯಮಾನ ...ಜೂನ್

`ಸ್ಥಾಪಿತ ಆದರ್ಶ~ ಬಿಂಬಿಸುವ ಮಾಧ್ಯಮವಾಗಿ, ಬಹುಕೃತ ದೃಷ್ಟಿಕೋನ `ಸೌಂದರ್ಯ~ದ ಪರಿಕಲ್ಪನೆಯಾಗಿ, `ವೈಭೋಗ ಜೀವನದ~ ಅವಿಭಾಜ್ಯ ಅಂಗವಾಗಿ ಚಿತ್ರಕಲೆಯನ್ನು ಪರಿಗಣಿಸುವುದಾದರೆ, ಅಂಥ ದೃಷ್ಟಿಗೆ ಇಷ್ಟವಾಗಬಹುದಾದ ಚಿತ್ರ `ಫ್ಲೇಮಿಂಗ್ ಜೂನ್~. ಇದು `ವಿಕ್ಟೋರಿಯನ್ ನಿಯೋಕ್ಲಾಸಿಸಿಸಂ~ ಶೈಲಿಯ ಉತ್ತಮ ಪ್ರಾತಿನಿಧಿಕ ಚಿತ್ರಗಳಲ್ಲೊಂದು.`ಕಾಸ್ಲಿಸಿಸಂ~ ಎಂಬ ಹೆಸರೇ ಸೂಚಿಸುವಂತೆ, ಇದು ಅತ್ಯುತ್ತಮ ಗುಣಮಟ್ಟ, ಉನ್ನತ ಆದರ್ಶ, ಅನನ್ಯತೆಯ ಪರಮೋಚ್ಛ ಸಂಕೇತವನ್ನು ನಿರೂಪಿಸುವ ಶೈಲಿ/ಪಂಥ. ಪಾಶ್ಚಾತ್ಯ ಸಾಂಸ್ಕೃತಿಕ ಚರಿತ್ರೆಯ ಪರಿಭಾಷೆಯಲ್ಲಿ `ಕ್ಲಾಸಿಕ್~ ಎನ್ನುವುದು ಮೂಲತಃ ಗ್ರೀಕ್-ರೋಮನ್ ನಾಗರಿಕತೆಯ ಉನ್ನತ ಸ್ಥಿತಿಯನ್ನು ಸೂಚಿಸುವ ಪದ.ಅಂತೆಯೇ ಯೂರೋಪ್ ರಾಷ್ಟ್ರಗಳ ಸಾಂಸ್ಕೃತಿಕ ಚರಿತ್ರೆಯು ಗ್ರೀಕೋರೋಮನ್ ಅಂತಃಸತ್ವದ ಪ್ರಭಾವಕ್ಕೊಳಗಾಗಿದ್ದ ಕಾಲಘಟ್ಟವನ್ನು `ನಿಯೋಕಾಸ್ಲಿಕಲ್ ಕಾಲ~ ಎನ್ನಲಾಗುತ್ತದೆ. ಈ ಹಿನ್ನೆಲೆಯಲ್ಲಿ `ಆದರ್ಶ ಸೌಂದರ್ಯ~ದ ಜಾಡುಹಿಡಿದ ಚಿತ್ರಕಲಾ ಶೈಲಿ `ನಿಯೋಕ್ಲಾಸಿಸಿಸಂ~. ದೇವಾನುದೇವತೆಗಳನ್ನು ಪ್ರತಿನಿಧಿಸುವ ಧಾರ್ಮಿಕ, ಪೌರಾಣಿಕ ಕಥಾವಸ್ತು, ವೈಭವೋಪೇತ ಜೀವನಶೈಲಿ, ಆಕರ್ಷಕ ಮತ್ತು ಅಲಂಕಾರಿಕ ದೃಶ್ಯನಿರೂಪಣೆ ಈ ಶೈಲಿಯ ಮೂಲಾಂಶಗಳು.ಇಂಥ ಹಲವು ಹಿನ್ನೆಲೆಯನ್ನೊಳಗೊಂಡು ಉಸಿರುಪಡೆದ ಚಿತ್ರ `ಫ್ಲೇಮಿಂಗ್ ಜೂನ್~. ಅತ್ಯಂತ ಸುಸಜ್ಜಿತ, ಆಧುನಿಕ ಒಳಾಂಗಣದಲ್ಲಿ ಅಷ್ಟೇ ನಾಟಕೀಯ ಭಂಗಿಯಲ್ಲಿ ಮಲಗಿರುವ ಹೆಂಗಸು. ಸುಮಾರು ಮೂರು ಮುಕ್ಕಾಲು ಅಡಿ ಉದ್ದಳತೆಯ (47/47 ಇಂಚು) ಈ ತೈಲವರ್ಣಚಿತ್ರ ಬಹುಪಾಲು ಅಲಂಕಾರಿಕ ಉದ್ದೇಶಕ್ಕಾಗಿಯೇ ರಚಿಸಲಾಗಿದೆ ಅನಿಸಲು ಸಾಕಷ್ಟು ಕಾರಣಗಳಿವೆ.

 

ಕ್ಯಾನ್ವಾಸಿನ ನಡೂಮಧ್ಯದ ಸಂಯೋಜನೆ, ಅತಿ ಅನಿಸುವಷ್ಟು ಎದ್ದು ಕಾಣುವ ಕಡುಕಿತ್ತಳೆ ಬಣ್ಣದ ಬಳಕೆ, ವರ್ಣ ಸಂಯೋಜನೆಯ ದೃಷ್ಟಿಯಲ್ಲಿ ಇಡಿಯಾಗಿ ನೋಡುವುದಾದರೆ, ಇದೊಂದು ಆಕರ್ಷಕ ಆಕಾರ ಮತ್ತು ಬಣ್ಣದ ಹೂವಿನಂತೆ ಕಾಣುವ ಹೆಣ್ಣಿನ ಚಿತ್ರಣ!

ಬಲಗಾಲಿನ ಬೆರಳುಗಳನ್ನು ನೆಲಕ್ಕೆ ತಾಕಿದಂತೆ ಊರಿ, ಎಡಗಾಲು ಮಡಚಿಕೊಂಡ ಭಂಗಿಯಲ್ಲಿ ನಿದ್ದೆ ಹೋಗಿರುವ ಈಕೆಯನ್ನು ಪ್ರಚೋದನಕಾರಿ ಭಂಗಿಯಲ್ಲಿರುವಂತೆ ಪ್ರಜ್ಞಾಪೂರ್ವಕವಾಗಿ ಚಿತ್ರಿಸಲಾಗಿದೆ.ಅಂಗಸೌಷ್ಟವ ಮತ್ತಷ್ಟು ಎದ್ದುಕಾಣುವಂತೆ ತೋರಲು ಉಡುಗೆ ಇದೆ! ಮೈಗೆ ಅಂಟಿಕೊಂಡಂತಿರುವ ಪಾರದರ್ಶಕ ಕಿತ್ತಳೆ ಬಣ್ಣದ ತೆಳ್ಳನೆಯ ಬಟ್ಟೆ ಮೈಬಣ್ಣವನ್ನು ಮತ್ತಷ್ಟು ಉಜ್ವಲಗೊಳಿಸಿ ಚಿನ್ನದ ಮೆರುಗಿನಂಥ, ಬೆಚ್ಚನೆ ಬೆಂಕಿಯ ಜ್ವಾಲೆಯಂಥ ಆವರಣ ಸೃಷ್ಟಿಸುತ್ತದೆ. ಶಾರೀರಿಕ ಪ್ರಮಾಣಬದ್ಧತೆಯ ಬಗೆಗಾಗಲೀ, ಬಟ್ಟೆಯ ಸ್ವಾಭಾವಿಕ ಚಿತ್ರಣದ ಬಗೆಗಾಗಲೀ ಹೆಚ್ಚು ತಲೆಕೆಡಿಸಿಕೊಳ್ಳದ ಕಲಾವಿದ, ಚಿತ್ರವನ್ನು ಅತಿರಂಜಿತಗೊಳಿಸಿ, ಒಟ್ಟಾರೆ ಅಲಂಕಾರಿಕ ಕೃತಿಯನ್ನಾಗಿಸುವತ್ತ ಆಸಕ್ತನಾದಂತಿದೆ.ಇಲ್ಲಿ ತದ್ರೂಪಿನ ನಿರೂಪಣೆಗಿಂತ ಹೆಚ್ಚಾಗಿ ಅತಿಶಯದ ಚಿತ್ರಣಕ್ಕೆ ಪ್ರಾಶಸ್ತ್ಯ ಸಿಕ್ಕಿದೆ. ಇಂಥ ಹಲವು ಕಾರಣಗಳಿಂದಾಗಿ, ಈ ಚಿತ್ರದ ಹೆಂಗಸು ಅತಿಮಾನುಷ ಅಥವಾ ಕೃತ್ರಿಮ ಅಂತಲೂ ಅನಿಸಿದರೆ ಆಶ್ಚರ್ಯವಿಲ್ಲ!ಹತ್ತೊಂಬತ್ತನೆಯ ಶತಮಾನದ ವೈಭೋಗದ, ಶ್ರೀಮಂತಿಕೆಯ, ಕೊಳ್ಳುಬಾಕ ಸಂಸ್ಕೃತಿಯ `ವಿಕ್ಟೋರಿಯಾ ಯುಗ~ದ (ಕ್ರಿ.ಶ.1837-1901) ಅವಧಿಯಲ್ಲಿ ಈ ಚಿತ್ರ ರಚನೆಯಾದುದು ಎಂಬುದನ್ನು ಇಲ್ಲಿ ನೆನಪಿಡಬೇಕು. ವೈಜ್ಞಾನಿಕ, ತಾಂತ್ರಿಕ-ಕೈಗಾರಿಕಾ ಕ್ರಾಂತಿಯ ಹಿನ್ನೆಲೆ, ಕಲೆ, ಸಾಹಿತ್ಯ, ಕ್ರೀಡೆ, ರಂಗಭೂಮಿ - ಒಟ್ಟಾರೆ ಮನರಂಜನಾತ್ಮಕ ಚಟುವಟಿಕೆಗಳ ಬಗೆಗಿನ ಒಲವು, ಜೊತೆಗೆ ಶ್ರೀಮಂತ ಮಧ್ಯಮ ವರ್ಗಗಳೂ ಕಲಾಕೃತಿಗಳನ್ನು ಕೊಂಡುಕೊಳ್ಳುವ ಅಭಿರುಚಿ ಮತ್ತು ಉಮೇದು ಗಳಿಸಿಕೊಂಡ ಕಾಲ ಅದು.ಈ ಒಟ್ಟಾರೆ ಕೊಳ್ಳುಬಾಕ ಮನಸ್ಥಿತಿಗೆ ಪೂರಕವಾಗಿ ರಚನೆಯಾಗುತ್ತಿದ್ದುದು ಭಾವೋತ್ತೇಜನಗೊಳಿಸುವ ಮತ್ತು ಬಳಕೆಗೆ ಉದ್ದೀಪಿಸುವಂತಹ ಚಿತ್ರಗಳು. ಅಂದರೆ, `ಸೌಂದರ್ಯ~ ಮತ್ತು `ಸೇವನೆಗೆ ಅರ್ಹ~ ವಸ್ತುಗಳು ಈ ಚಿತ್ರಗಳ ಮೂಲ ಆಕರ. ಇಲ್ಲಿ ಅತಿಮುಖ್ಯ ವಸ್ತುವಿಷಯ - ಹೆಣ್ಣು! ಪುರುಷಕೇಂದ್ರಿತ ಸಮಾಜದ ಪುರುಷ ಕಲಾವಿದರಿಂದ ಪುರುಷ ದೃಷ್ಟಿಗಾಗಿಯೇ ರಚನೆಗೊಳ್ಳುತ್ತಿದ್ದ ಕಲಾಕೃತಿಗಳಿವು ಎಂಬುದನ್ನು ಮರೆಯುವಂತಿಲ್ಲ! ಇದಕ್ಕೆ ರೂಪದರ್ಶಿ ಮಾತ್ರ ಮಹಿಳೆಯಾಗಿರಬೇಕಾದ್ದು ಆ ಮಟ್ಟಿಗೆ ಸಹಜವೇ!ಅಂದಹಾಗೆ, `ಫ್ಲೇಮಿಂಗ್ ಜೂನ್~ ಕಲಾಕೃತಿಯ ಕರ್ತೃ- ಫ್ರೆಡರಿಕ್ ಲೀಟನ್ ( ಕ್ರಿ.ಶ. 1830-1896). ಇಂಗ್ಲೆಂಡಿನ ಶ್ರೀಮಂತ ವೈದ್ಯ ಕುಟುಂಬದ ಹಿನ್ನೆಲೆಯ ಈತ ಆ ಕಾಲದ ಅತ್ಯಂತ ಯಶಸ್ವಿ, ಪ್ರಭಾವಶಾಲಿ ಕಲಾವಿದ ಮತ್ತು ಶಿಲ್ಪಿ. ಲಂಡನ್ ರಾಯಲ್ ಅಕಾಡೆಮಿಯ ಅಧ್ಯಕ್ಷನೂ ಆಗಿದ್ದವನು.`ಸಮ್ಮರ್ ಸ್ಲಂಬರ್~ ಎಂಬ ಕಲಾಕೃತಿಗಾಗಿ ನಿದ್ರಿಸುವ ಹೆಂಗಸಿನ ಚಿತ್ರದ ಕರಡುಪ್ರತಿಗಳನ್ನು ರಚಿಸುತ್ತಿದ್ದ ಲೀಟನ್‌ಗೆ ಆ ಕರಡನ್ನೇ ಪ್ರತ್ಯೇಕ ಕಲಾಕೃತಿ ಮಾಡಬೇಕೆನಿಸಿದ್ದರಿಂದ ಹುಟ್ಟದ ಕೃತಿ - `ಫ್ಲೇಮಿಂಗ್ ಜೂನ್~. ಆತ ತೀರಿಹೋಗುವ ಹಿಂದಿನ ವರ್ಷ (1895), ಅರವತ್ನಾಲ್ಕರ ಇಳಿವಯಸ್ಸಿನಲ್ಲಿ ರಚಿಸಿದ ಚಿತ್ರ ಇದು.ಮೇಲ್ನೋಟಕ್ಕೆ ಕೇವಲ ಅಲಂಕಾರಿಕ ಕಲಾಕೃತಿಯಂತೆ ಕಂಡುಬರುವ ಚಿತ್ರದ ಶೀರ್ಷಿಕೆಯ ಜಾಡುಹಿಡಿದು ಹೊರಟರೆ, ಆಸಕ್ತಿಕರ ವಿಷಯಗಳು ಕಾಣಿಸತೊಡಗುತ್ತವೆ. ಈ ಮೊದಲು ಹೇಳಿದಂತೆ, ಈ ಚಿತ್ರದ ಹೆಂಗಸು ಆಧುನಿಕ ಅಥವಾ ದಿನನಿತ್ಯದ ಸಾಮಾನ್ಯ ಮಹಿಳೆಗಿಂತ ಹೆಚ್ಚಾಗಿ ಪೌರಾಣಿಕ ದೇವತೆಯನ್ನು ಹೋಲುವ ಸಾಧ್ಯತೆಯೇ ನಿಚ್ಚಳವಾಗಿದೆ. ಈಕೆಯನ್ನು ಸೌಂದರ್ಯ, ಪ್ರೇಮ, ಕಾಮ ಮತ್ತು ಸಮೃದ್ಧಿಯ ಸಂಕೇತವಾದ ರೋಮನ್ ದೇವತೆ `ವೀನಸ್~ಗೆ ಹೋಲಿಸುವುದೂ ಉಂಟು.ಹಾಗೆಯೇ ಜೂನ್ ತಿಂಗಳ ಜೊತೆ ತಾಳೆ ಹಾಕುವುದಾದರೆ, ಗ್ರೀಕ್ ದೇವತೆ `ಪರ‌್ಸೆಫನಿ~ ಇಲ್ಲಿ ನೆನಪಾಗುತ್ತಾಳೆ. ಸುಗ್ಗಿ, ಹಣ್ಣಿನ ಬೀಜಗಳು ಮತ್ತು ಕತ್ತಲ ಭೂಗರ್ಭವನ್ನು ಪ್ರತಿನಿಧಿಸುವ ದೇವತೆ ಈಕೆ. ಅಲ್ಲದೆ, ನಿದ್ರೆ ಮತ್ತು ಸಾವಿನ ನಡುವೆ ಸಂಬಂಧ ಕಲ್ಪಿಸುತ್ತದೆಂದು ನಂಬಲಾಗಿರುವ `ವಿಷಪೂರಿತ ಓಲಿಯಾಂಡರ್~ ಗಿಡದ ಚಿತ್ರಣವನ್ನು ಬಲಮೇಲ್ಭಾಗದಲ್ಲಿ ಕಾಣಬಹುದು. ಇಂಥ ಹಲವು ಗ್ರಹಿಕೆಗಳು ಈ ಚಿತ್ರಕ್ಕೆ ನಿರಂತರ ಚಲನೆಯನ್ನು ತಂದುಕೊಡುತ್ತವೆ.ಲೀಟನ್ ಲಾಸ್ಯ

ವಿಕ್ಟೋರಿಯಾ ಕಲೆಯನ್ನು ಪ್ರಸಿದ್ಧಿಗೆ ತಂದವರಲ್ಲಿ ಬ್ರಿಟಿಷ್ ಕಲಾವಿದ ಫ್ರೆಡೆರಿಕ್ ಲೀಟನ್ ಪ್ರಮುಖ. ಸಾಂಪ್ರದಾಯಿಕ ಚಿತ್ರಕಲೆಯಲ್ಲಿ ಸಿದ್ಧಹಸ್ತನಾಗಿದ್ದ ಆತ ಭಾವಚಿತ್ರ ರಚನೆಯಲ್ಲಿಯೂ ಅನನ್ಯತೆ ಮೆರೆದವನು. ಲೀಟನ್ ಅಧ್ಯಕ್ಷನಾಗಿದ್ದ ಎರಡು ದಶಕಗಳ ಅವಧಿಯಲ್ಲಿ ಇಂಗ್ಲೆಂಡ್‌ನ ರಾಯಲ್ ಕಲಾ ಅಕಾಡೆಮಿ ಪ್ರತಿಷ್ಠೆಯ ಉತ್ತುಂಗಕ್ಕೇರಿತು.1830ರಲ್ಲಿ ಇಂಗ್ಲೆಂಡ್‌ನ ಸ್ಕರ್ಬರೋನಲ್ಲಿ ಜನನ. ಜರ್ಮನಿ, ಇಟಲಿಯಲ್ಲಿ ಬಾಲ್ಯ ಕಳೆದ ಲೀಟನ್ ಚಿನ್ನದ ಚಮಚವನ್ನು ಬಾಯಲ್ಲಿಟ್ಟುಕೊಂಡು ಬೆಳೆದವನು. ಈತನ ತಾತ ರಷ್ಯಾದ ರಾಜಮನೆತನಕ್ಕೆ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ತಂದೆ ಕೂಡ ವೈದ್ಯರಾಗಿ ದುಡಿದವರು. ಹತ್ತೊಂಬತ್ತನೇ ಶತಮಾನದ ಕಲಾವಿದರಲ್ಲಿದ್ದ ಪರಂಪರೆಯಂತೆ ಆತ ರಾಯಲ್ ಅಕಾಡೆಮಿಯಲ್ಲಿ ಕಲೆಯನ್ನು ಅಭ್ಯಾಸ ಮಾಡಲೇ ಇಲ್ಲ.ಬ್ರುಸೆಲ್ಸ್, ಪ್ಯಾರಿಸ್, ಫ್ಲಾರೆನ್ಸ್ ಆತ ಕಲಿಕೆಗೆ ಆಯ್ದುಕೊಂಡ ತಾಣಗಳು. ನಜರೇನ್ ಹಾಗೂ ಇಟಲಿಯ ಪುನರುಜ್ಜೀವನ ಕಲಾವಿದರ ಪ್ರಭಾವ ಆತನ ಮೇಲೆ ದಟ್ಟವಾಗಿತ್ತು. ಸಿರಿವಂತ ಬದುಕು ಆತನನ್ನು ಕಲೆಗೆ ಒಡ್ಡಿಕೊಳ್ಳಲು ಇನ್ನಿಲ್ಲದಂತೆ ಸಹಾಯ ಮಾಡಿತು. 1858ರಲ್ಲಿ ರಷ್ಯಾಕ್ಕೆ ತೆರಳಿದ ಈತ ಅನೇಕ ಕಲಾವಿದರ ಒಡನಾಡಿಯಾದ. ಫ್ರೆಂಚ್ ಕಲಾವಿದರ ಪ್ರಭಾವಕ್ಕೊಳಗಾದ.1855ರಲ್ಲಿ ಮರಳಿ ಇಂಗ್ಲೆಂಡ್‌ಗೆ ಪಯಣ. ಆ ವರ್ಷ ರಾಯಲ್ ಅಕಾಡೆಮಿ ಪ್ರದರ್ಶನಕ್ಕಾಗಿ ಆತ ಕಳುಹಿಸಿದ ಫ್ಲಾರೆನ್ಸ್‌ನ ಬೀದಿಯಲ್ಲಿ ಮಡೋನಾ ಮೆರವಣಿಗೆ ಕುರಿತ ಬೃಹತ್ ಗಾತ್ರದ ಚಿತ್ರ ದೊಡ್ಡ ಸಂಚಲನವನ್ನೇ ಹುಟ್ಟುಹಾಕಿತು. ಕಲಾಕೃತಿಯ ಮೋಡಿಗೆ ಒಳಗಾದ ರಾಣಿ ವಿಕ್ಟೋರಿಯಾ ಸ್ವತಃ ಅದನ್ನು ಖರೀದಿಸಿದಳು. ಅಲ್ಲಿಂದ ಲೀಟನ್ ಬದುಕಿಗೆ ಮಹತ್ವದ ತಿರುವು. ಬಹು ಪ್ರಭಾವಿ ಸಾಂಪ್ರದಾಯಿಕ ಚಿತ್ರಗಳನ್ನು ಬರೆದಿದ್ದರೂ 1870ರ ದಶಕದಲ್ಲಿ ರಚಿಸಿದ ಅಲಂಕಾರಿಕ ಕೃತಿಗಳು ಈತನ ಮೇರು ಸಾಧನೆಗೆ ಸಾಕ್ಷಿ ಎಂಬುದು ಅನೇಕರ ಅಭಿಪ್ರಾಯ.1860ರಲ್ಲಿ ಲಂಡನ್‌ನಲ್ಲಿ ನೆಲೆಯೂರಿದ ಆತ ಬೈಬಲ್‌ನಿಂದ ಆಯ್ದ ಪೌರಾಣಿಕ ಪಾತ್ರಗಳನ್ನು ಮಧ್ಯಕಾಲೀನ ಶೈಲಿಯ ರಚನೆಯಲ್ಲಿ ತೊಡಗಿದ್ದ. 1869ರಲ್ಲಿ ಅಕಾಡೆಮಿಯ ಸದಸ್ಯತ್ವ ಪಡೆದ ಈತ ಅದರ ಅಧ್ಯಕ್ಷ ಚುಕ್ಕಾಣಿ ಹಿಡಿದಿದ್ದು 1878ರಲ್ಲಿ. ಅದೇ ವರ್ಷ ಆತನಿಗೆ `ನೈಟ್ ಬ್ಯಾಚುಲರ್~ ಬಿರುದು ದೊರೆಯಿತು.ಅಷ್ಟರಲ್ಲಾಗಲೇ ಆತ ಪೌರಾಣಿಕ ಪ್ರತಿಮೆಗಳನ್ನು ರಚಿಸುವುದರಿಂದ ದೂರವಾಗಿದ್ದ. ಸಂಜೆಯುಡುಪು, ಗ್ರೀಕ್ ಗೌನುಗಳನ್ನು ತೊಟ್ಟ ಹೆಂಗಳೆಯರು ಆತನ ಕಲಾರೂಪಸಿಯರಾಗಿ ಮೂಡಿಬಂದರು. ಸಾಯುವ ಒಂದು ದಿನ ಮೊದಲು ಆತ ಬ್ರಿಟಿಷ್ ರಾಜಮನೆತನದ ಪ್ರತಿಷ್ಠಿತ ಬ್ಯಾರನ್ ಪದವಿ ಪಡೆದ. ಆ ಮೂಲಕ ಈ ಪದವಿಗೇರಿದ ಏಕೈಕ ಬ್ರಿಟಿಷ್ ಕಲಾವಿದ ಎಂಬ ಕೀರ್ತಿಗೆ ಪಾತ್ರನಾದ. ಆತ 1896ರಲ್ಲಿ ಇಹಲೋಕ ತ್ಯಜಿಸಿದ.ಅಚ್ಚರಿಯೆಂದರೆ ಆತನ ಸಾವಿನ ಬಳಿಕ ಆತನ ಕಲಾಕೃತಿಗಳಿಗೂ ಮಂಕು ಹಿಡಿಯಿತು. ಹತ್ತಿರ ಹತ್ತಿರ ಮುಕ್ಕಾಲು ಶತಮಾನ ಅವು ಕತ್ತಲಲ್ಲೇ ಉಳಿದವು. ಅನಂತರ ಇದ್ದಕ್ಕಿದ್ದಂತೆ ಅವುಗಳಿಗೆ ಜನಪ್ರಿಯತೆ ಪ್ರಾಪ್ತವಾಯಿತು ಎಂದು ಕಲಾ ಇತಿಹಾಸಕಾರರು ಗುರುತಿಸುತ್ತಾರೆ. `ಕ್ಲೈಟಿ~ ಸರಣಿ,  `ಎ ಗರ್ಲ್ ವಿತ್ ಬ್ಯಾಸ್ಕೆಟ್ ಆಫ್ ಫ್ರೂಟ್ಸ್~, `ಎ ನೊಬೆಲ್ ಲೇಡಿ ಆಫ್ ವೆನಿಸ್~, `ಡಾಂಟೆ ಇನ್ ಎಕ್ಸೈಲ್~, `ಫ್ಲೇಮಿಂಗ್ ಜೂನ್~ ಈತನನ್ನು ಕಲಾಚರಿತ್ರೆಯಲ್ಲಿ ಅಜರಾಮರನನ್ನಾಗಿಸಿದ ಕಲಾಕೃತಿಗಳು.ಲಂಡನ್‌ನಲ್ಲಿರುವ ಲೀಟನ್‌ನ ಮನೆ ಈಗ ಪ್ರವಾಸಿಗರನ್ನು ಸೆಳೆಯುತ್ತಿರುವ ವಸ್ತುಸಂಗ್ರಹಾಲಯ. ನಗರದ ದಕ್ಷಿಣ ಕೆನ್ಸಿಂಗ್‌ಟನ್‌ನ 2 ಹಾಲೆಂಡ್ ಪಾರ್ಕ್ ರಸ್ತೆಯಲ್ಲಿರುವ ಈ ಕಲಾ ಸಂಗ್ರಹಾಲಯದಲ್ಲಿ ಲೀಟನ್ ಬದುಕನ್ನು ಬಿಂಬಿಸುವ ಅಪರೂಪದ ವಸ್ತುಗಳು ಹಾಗೂ ಆತನ ಕಲಾಕೃತಿಗಳನ್ನು ನೋಡಬಹುದು.ಲೇಖಕಿ ಕಲಾವಿದೆ ಹಾಗೂ ಸಂಶೋಧಕಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry