ಚಿದಂಬರಂ, ಸಿಬಲ್ ರಾಜೀನಾಮೆಗೆ ಒತ್ತಾಯ

7

ಚಿದಂಬರಂ, ಸಿಬಲ್ ರಾಜೀನಾಮೆಗೆ ಒತ್ತಾಯ

Published:
Updated:

ನವದೆಹಲಿ (ಪಿಟಿಐ): ಸುಪ್ರೀಂಕೋರ್ಟ್ 2 ಜಿ ತರಂಗಾಂತರ ಪರವಾನಗಿಗಳನ್ನು ರದ್ದುಗೊಳಿಸಿ ಗುರುವಾರ ನೀಡಿದ ತೀರ್ಪು ಯುಪಿಎ ಸರ್ಕಾರದ ವಿರುದ್ಧ ಪ್ರಬಲ ದೋಷಾರೋಪವಾಗಿದೆ ಎಂದು ಪ್ರತಿಪಕ್ಷಗಳು ಟೀಕಾಸ್ತ್ರ ಪ್ರಯೋಗಿಸಿವೆ. ಈ ವೈಪಲ್ಯಕ್ಕೆ ಪ್ರಧಾನಿ ಕೂಡ ಹೊಣೆ ಎಂದು ಅವು ಹೇಳಿದ್ದರೂ ಅವರ ರಾಜೀನಾಮೆಗೆ ಒತ್ತಾಯಿಸಿಲ್ಲ. ಆದರೆ ಸಚಿವರಾದ ಪಿ.ಚಿದಂಬರಂ ಮತ್ತು ಕಪಿಲ್ ಸಿಬಲ್ ಅವರ ರಾಜೀನಾಮೆಗೆ ಪ್ರಬಲವಾಗಿ ಒತ್ತಾಯಿಸಿವೆ.ಸುಪ್ರೀಂಕೋರ್ಟ್ ತೀರ್ಪು ಯುಪಿಎ ಸರ್ಕಾರದ ವಿಶ್ವಾಸಾರ್ಹತೆ, ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಇದರಲ್ಲಿ ಭಾಗಿಯಾಗಿರುವ ಗೃಹ ಸಚಿವ ಪಿ.ಚಿದಂಬರಂ ಅವರು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.ಸ್ವಾತಂತ್ರ್ಯಾನಂತರ ರಾಷ್ಟ್ರದಲ್ಲಿ ನಡೆದ ಭಾರಿ ದೊಡ್ಡ ಹಗರಣ ಇದು. ಆದರೂ ಮನಮೋಹನ್ ಸಿಂಗ್, ಕಪಿಲ್ ಸಿಬಲ್ ಮತ್ತು ಚಿದಂಬರಂ ಇದನ್ನು ಸಂಸತ್ತಿನ ಹೊರಗೆ ಹಾಗೂ ಸಂಸತ್ತಿನಲ್ಲಿ ಸಮರ್ಥಿಸಿಕೊಳ್ಳುತ್ತಿದ್ದರು ಎಂದು ಬಿಜೆಪಿ ಮುಖ್ಯ ವಕ್ತಾರ ರವಿಶಂಕರ್ ಪ್ರಸಾದ್ ಚುಚ್ಚಿದ್ದಾರೆ.ರಾಜ್ಯಸಭೆ ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ ಲಖನೌದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಾ ಲೆಕ್ಕಪರಿಶೋಧಕರು ಸಿಎಜಿ ಲೋಪಗಳ ಬಗ್ಗೆ ಎತ್ತಿತೋರಿದರೂ ಸರ್ಕಾರವು ಎ.ರಾಜಾ ಅವರನ್ನು ಪದೇಪದೇ ಸಮರ್ಥಿಸಿಕೊಂಡಿತ್ತು ಎಂದಿದ್ದಾರೆ.ವಿರೋಧ ಪಕ್ಷವಾದ ಸಿಪಿಎಂ ಕೂಡ ಈ ತೀರ್ಪಿನ ಹಿನ್ನೆಲೆಯಲ್ಲಿ ಸರ್ಕಾರವನ್ನು ಕಟುವಾಗಿ ಟೀಕಿಸಿದೆ. `ಯುಪಿಎ ಸರ್ಕಾರದ ವಿರುದ್ಧ ಪ್ರಬಲ ದೋಷಾರೋಪ ಇದಾಗಿದ್ದು, ವಿಶೇಷವಾಗಿ, 2 ಜಿ ತರಂಗಾಂತರ ಹಂಚಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿಲ್ಲ ಎಂದು ಪದೇಪದೇ ಸಮರ್ಥಿಸಿಕೊಂಡಿದ್ದ ಸಿಬಲ್ ರಾಜೀನಾಮೆ ನೀಡಬೇಕು~ ಎಂದು ಪಕ್ಷದ ಪಾಲಿಟ್ ಬ್ಯೂರೊ ಹೇಳಿಕೆಯಲ್ಲಿ ಒತ್ತಾಯಿಸಿದೆ.ಸರ್ಕಾರ ತಕ್ಷಣವೇ ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸಬೇಕು. ಪ್ರಧಾನಿಯವರು ಈ ಕುರಿತು ತಮ್ಮ ಮೌನ ಮುರಿದು ರಾಷ್ಟ್ರದ ಜನತೆಗೆ ಉತ್ತರಿಸಬೇಕು ಎಂದು ಪಾಲಿಟ್ ಬ್ಯೂರೊ ಧ್ವನಿ ಎತ್ತಿದೆ.ದೂರಸಂಪರ್ಕ ನೀತಿಗೆ ಸ್ಪಷ್ಟತೆ- ಕಾಂಗ್ರೆಸ್

ಸುಪ್ರೀಂಕೋಟ್ ತೀರ್ಪನ್ನು ಸ್ವಾಗತಿಸಿರುವ ಯುಪಿಎ ನೇತೃತ್ವದ ಕಾಂಗ್ರೆಸ್, ಇದು ರಾಷ್ಟ್ರದ ದೂರಸಂಪರ್ಕ ನೀತಿಗೆ `ವಿವೇಚನೆ ಹಾಗೂ ಸ್ಪಷ್ಟತೆ~ಯನ್ನು ತೊಂದುಕೊಡಲಿದೆ ಎಂದಿದೆ.ಆದರೆ 122 ಪರವಾನಗಿಗಳನ್ನು ನೀಡುವಲ್ಲಿ ಮಾಜಿ ಸಚಿವ ಎ.ರಾಜಾ ಅವರು ಅಕ್ರಮ ಎಸಗಿದ್ದರಲ್ಲಿ ತನ್ನ ಪಾಲೂ ಇದೆ ಎಂಬುದನ್ನು ಒಪ್ಪಿಕೊಳ್ಳಲು ಅದು ನಿರಾಕರಿಸಿದೆ.ತೀರ್ಪಿನಲ್ಲಿ ದೋಷಾರೋಪವಿದ್ದರೆ ಅದು 2003ರ `ಮೊದಲು ಬಂದವರಿಗೆ ಮೊದಲು ಆದ್ಯತೆ~ ನೀತಿಯ ವಿರುದ್ಧವೇ ಇರುತ್ತದೆ. ಅದನ್ನು ಜಾರಿಗೊಳಿಸಿದ್ದು ಆಗ ಅಧಿಕಾರದಲ್ಲಿದ್ದ ಎನ್‌ಡಿಎ ಸರ್ಕಾರ. ಪ್ರಧಾನಿ ವಿರುದ್ಧವಾಗಲೀ ಅಥವಾ ಆಗ ಹಣಕಾಸು ಸಚಿವರಾಗಿದ್ದವರ (ಚಿದಂಬರಂ) ಮೇಲಾಗಲೀ ಕೋರ್ಟ್ ದೋಷಾರೋಪ ಹೊರಿಸಿಲ್ಲ. ತರಂಗಾಂತರ ಹಂಚಿಕೆಗೆ ಮುನ್ನ ಪ್ರಧಾನಿ ಹಾಗೂ ಆಗಿನ ಹಣಕಾಸು ಸಚಿವರು ನೀಡಿದ್ದ ಯುಕ್ತ ಸಲಹೆಗಳಿಗೆ ದೂರ ಸಂಪರ್ಕ ಸಚಿವರು ಕಿವಿಗೊಡಲಿಲ್ಲ ಎಂದು ನ್ಯಾಯಾಲಯವೇ ತಿಳಿಸಿದೆ ಎಂದು ಸಿಬಲ್ ತಿರುಗೇಟು ನೀಡಿದ್ದಾರೆ.ಸುಪ್ರೀಂಕೋರ್ಟ್ ತೀರ್ಪನ್ನು ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ. ಈ ತೀರ್ಪಿನಿಂದಾಗಿ ದೂರಸಂಪರ್ಕ ಕ್ಷೇತ್ರಕ್ಕೆ ಹೆಚ್ಚಿನ ಬಂಡವಾಳ ಸೆಳೆಯಲು ಅನುಕೂಲವಾಗುತ್ತದೆ ಎಂದೂ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry