ಚಿದು, ಮೊಯಿಲಿ ಸ್ವಾಗತ: ಬಿಜೆಪಿ ಆತಂಕ!

7

ಚಿದು, ಮೊಯಿಲಿ ಸ್ವಾಗತ: ಬಿಜೆಪಿ ಆತಂಕ!

Published:
Updated:ನವದೆಹಲಿ (ಪಿಟಿಐ):
ಪಾಕಿಸ್ತಾನಿ ಉಗ್ರ ಅಜ್ಮಲ್ ಅಮೀರ್ ಕಸಾಬ್‌ಗೆ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ದೃಢಪಡಿಸಿ ನೀಡಿದ ತೀರ್ಪನ್ನು ಕೇಂದ್ರ ಗೃಹಸಚಿವ ಪಿ.ಚಿದಂಬರಂ ಸ್ವಾಗತಿಸಿದ್ದಾರೆ. ತೀರ್ಪು ಹೊರಬಿದ್ದ ನಂತರ ಸಂಸತ್ತಿನ ಹೊರಗೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.‘ಈ ತೀರ್ಪಿನಿಂದಾಗಿ ದೇಶದ ನ್ಯಾಯಾಂಗ ವ್ಯವಸ್ಥೆಯ ಘನತೆ ಹೆಚ್ಚಿದಂತಾಗಿದೆ. ಕಸಾಬ್‌ಗೆ ಮರಣದಂಡನೆ ಶಿಕ್ಷೆ ದೃಢೀಕರಣಗೊಂಡಿರುವ ಈ ಸಂದರ್ಭದಲ್ಲಿ ನಾನು ಭಾರತದ ನ್ಯಾಯಾಂಗ ವ್ಯವಸ್ಥೆಯನ್ನು ಮತ್ತು ಪ್ರಾಸಿಕ್ಯೂಷನ್ ಅನ್ನು ಅಭಿನಂದಿಸುತ್ತೇನೆ’ ಎಂದರು.‘ಇದೇ ರೀತಿಯ ನ್ಯಾಯಾಂಗ ಪ್ರಕ್ರಿಯೆ ದೇಶದಲ್ಲಿನ ಇತರೆ ಪ್ರಕರಣಗಳಲ್ಲೂ ಕಂಡುಬರಬೇಕು’ ಎಂದು ಅವರು ಅಭಿಪ್ರಾಯಪಟ್ಟರು.ವ್ಯಥೆಯ ಸಂಗತಿ: ಮುಂಬೈ ಮೇಲೆ ನಡೆದ 26/11ರ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದಲ್ಲಿ ನಡೆಯುತ್ತಿರುವ ವಿಚಾರಣೆ ಯಾವುದೇ ಪ್ರಗತಿ ಕಾಣದಿರುವುದು ವ್ಯಥೆಯ ಸಂಗತಿ ಎಂದು ಚಿದಂಬರಂ ಇದೇ ವೇಳೆ ಹೇಳಿದರು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ವಿಚಾರಣಾ ಕೋರ್ಟ್ ಮತ್ತು ಹೈಕೋರ್ಟುಗಳಲ್ಲಿ ಈತನಕ ಯಾವುದೇ ಪ್ರಗತಿ ಕಂಡುಬಂದಿಲ್ಲ. ಈ ದಿಸೆಯಲ್ಲಿ ತ್ವರಿತ ವಿಚಾರಣೆ ಕೈಗೊಳ್ಳುವಂತೆ ನಾವೀಗ ಪಾಕಿಸ್ತಾನಕ್ಕೆ ಆಗ್ರಹಿಸಲು ಸಮಯ ಕೂಡಿ ಬಂದಿದೆ ಎಂದರು.‘ಪಾಕಿಸ್ತಾನದಲ್ಲಿ ಪರಿಸ್ಥಿತಿ ಹೇಗಿದೆಯೆಂದರೆ ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದ ಕೋರ್ಟಿನಲ್ಲಿ ಇತ್ತೀಚೆಗೆ ಪ್ರಕರಣವನ್ನು ಮುಂದೂಡಲಾಯಿತು. ಹೈಕೋರ್ಟಿನಲ್ಲಿ ಈ ಕೇಸಿಗೆ ಸಂಬಂಧಿಸಿದಂತೆ ವಿಚಾರಣೆ ಬಾಕಿಯಿದೆ ಎಂಬ ಒಂದೇ ಒಂದು ಆಧಾರದ ಮೇಲೆ ಪ್ರಕರಣ ಮುಂದಕ್ಕೆ ಹೋಯಿತು. ಆದರೆ ಹೈಕೋರ್ಟಿನಲ್ಲಿ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿಯೇ ನಿವೃತ್ತರಾಗಿದ್ದಾರೆ’ ಎಂದು ಚಿದಂಬರಂ ಪಾಕ್‌ನ ವಿಚಾರಣಾ ಕ್ರಮದ ಸ್ಥಿತಿಯನ್ನು ವಿವರಿಸಿದರು.ಮೊಯಿಲಿ ಸ್ವಾಗತ: ಕಸಾಬ್‌ಗೆ ಮರಣದಂಡನೆ ಕಾಯಂಗೊಳಿಸಿರುವ ಬಾಂಬೆ ಹೈಕೋರ್ಟಿನ ತೀರ್ಪನ್ನು ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ ಸ್ವಾಗತಿಸಿದ್ದಾರೆ.ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದ ನ್ಯಾಯಾಂಗ ವ್ಯವಸ್ಥೆ ತೃಪ್ತಿಕರವಾಗಿ ಕಾರ್ಯ ನಿರ್ವಹಿಸುತ್ತಿದೆ. ನಮ್ಮ ಕಾನೂನು ವ್ಯವಸ್ಥೆ ಹೇಗೆ ಅತ್ಯಂತ ಕ್ರಮಬದ್ಧವಾಗಿದೆ, ವ್ಯವಸ್ಥಿತವಾಗಿದೆ ಮತ್ತು ಎಲ್ಲರಿಗೂ ಹೇಗೆ ಸಮಾನ ನ್ಯಾಯ ವಿತರಣೆ ಮಾಡುತ್ತದೆ ಎಂಬುದು ಇದರಿಂದ ಸಾಬೀತಾಗಿದೆ ಎಂದರು.ಬಿಜೆಪಿಯ ಆತಂಕ: ‘ಕಸಾಬ್‌ಗೆ ನೇಣಿನ ಕುಣಿಕೆ ಬೀಳುವುದು ಇನ್ನೂ ಯಾವಾಗಲೊ ಏನೋ’ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.

ಬಾಂಬೆ ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಸುದ್ದಿಗಾರರಿಗೆ ಈ ಕುರಿತು ಸಂಸತ್ತಿನ ಹೊರಗೆ ಪ್ರತಿಕ್ರಿಯೆ ನೀಡಿದ ಪಕ್ಷದ ವಕ್ತಾರ ಪ್ರಕಾಶ್ ಜಾವಡೇಕರ್, ಕಸಾಬ್‌ಗೆ ಕೋರ್ಟ್ ವಿಧಿಸಿರುವ ಮರಣದಂಡನೆ ಶಿಕ್ಷೆಯನ್ನು ಜಾರಿಗೊಳಿಸುವುದು ಸರ್ಕಾರದ ನಿರ್ಧಾರದ ಮೇಲೆ ಅವಲಂಬಿತವಾಗಿದೆ ಎಂದರು.‘ಮರಣದಂಡನೆ ಶಿಕ್ಷೆಗೆ ಕಸಾಬ್ ಸರತಿಯಲ್ಲಿ ನಿಲ್ಲಬೇಕಾಗುತ್ತದೆ’ ಎಂದು ಆಡಳಿತ ಸರ್ಕಾರ ಈಗಲೇ ಗೊಣಗಾಟ ಆರಂಭಿಸಿರುವುದೇ ನಮ್ಮ ಈ ಅತಂಕಕ್ಕೆ ಕಾರಣ ಎಂದು ಪ್ರಕಾಶ್ ವಿವರಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry