ಚಿನ್ನಕ್ಕಿಂತ ಹೆಚ್ಚು ಮಿನುಗಿದ ಷೇರು

7
ಚಿನ್ನ: ದಶಕದಲ್ಲಿ ಪ್ರತಿವರ್ಷ ಶೇ20ರಷ್ಟು ಮೌಲ್ಯ ಹೆಚ್ಚಳ

ಚಿನ್ನಕ್ಕಿಂತ ಹೆಚ್ಚು ಮಿನುಗಿದ ಷೇರು

Published:
Updated:
ಚಿನ್ನಕ್ಕಿಂತ ಹೆಚ್ಚು ಮಿನುಗಿದ ಷೇರು

ನವದೆಹಲಿ(ಪಿಟಿಐ): ಚಿನ್ನವೆಂಬ ಹಳದಿ ಲೋಹ ಭಾರತೀಯರ ಪಾಲಿಗೆ ನೂರಾರು ವರ್ಷಗಳಿಂದಲೂ ಬಹಳ ಅಚ್ಚುಮೆಚ್ಚಿನದು. ಕಷ್ಟಕಾಲಕ್ಕೆ ಕೈ ಅಳತೆಯಲ್ಲೇ ಒದಗುವ ಸಂಪತ್ತೂ ಆಗಿದೆ. ಕಷ್ಟದ ದುಡಿಮೆಯ ಹಣದ ಉಳಿತಾಯಕ್ಕೆ ಉತ್ತಮ ಮಾರ್ಗವೂ ಆಗಿದೆ. ಇದೆಲ್ಲವೂ ಅಲ್ಲದೆ, ಇತ್ತೀಚಿನ ವರ್ಷಗಳಲ್ಲಿ `ಬಂಡವಾಳ ಹೂಡಿ ಲಾಭ ಗಳಿಸುವುದಕ್ಕೆ ನಂಬಿಕೆ ಇಡಬಹುದಾದ ಸರಕು' ಕೂಡಾ ಆಗಿದೆ. ಆದರೆ,ವರ್ಷ 2012 ಈ ಕೊನೆಯ ಅಂಶವನ್ನು ಸ್ವಲ್ಪ ಮಟ್ಟಿಗಷ್ಟೇ ನಿಜವಾಗಿಸಿದೆ.ಹಣ ಬೆಳೆಸುವ ಉದ್ದೇಶದಿಂದ, ಖರೀದಿ-ಮಾರಾಟ ಮೂಲಕ ಲಾಭ ಗಳಿಸುವ ಲೆಕ್ಕಾಚಾರ ಹಾಕಿದವರ ಮೊಗವನ್ನು ಈ ಮಿನುಗುವ ಲೋಹ ಮತ್ತಷ್ಟು ಮಿನುಗಿಸಲು ಯತ್ನಿಸಿದರೂ, ಈ ಸ್ಪರ್ಧೆಯಲ್ಲಿ ಈ ಬಾರಿ ಷೇರುಪೇಟೆಯದೇ ಮೇಲುಗೈ ಆಯಿತು. ಅಂದರೆ, ಚಿನ್ನ ಖರೀದಿಗಿಂತ ಷೇರುಗಳಲ್ಲಿ ಹೂಡಿಕೆ ಹೆಚ್ಚಿನ ಲಾಭ ತಂದುಕೊಟ್ಟಿದೆ. ಷೇರುದಾರರಿಗೆ ಶೇ 25ರಷ್ಟು ಲಾಭವಾಗಿದ್ದರೆ, ಚಿನ್ನ ಪ್ರಿಯರಿಗೆ ಇದರ ಅರ್ಧದಷ್ಟು ಗಳಿಕೆಯಷ್ಟೇ ಆಗಿದೆ.ಚಿನ್ನಕ್ಕಿಂತ ಮಿಂಚಿದ ಷೇರು

ಪೇಟೆ ಪಂಡಿತರ ಅನುಭವದ ಮಾತುಗಳ ಪ್ರಕಾರ, `ಹೂಡಿಕೆ ವಿಚಾರದಲ್ಲಿ ಷೇರುಪೇಟೆ 2012ರಲ್ಲಿ ಲಾಭದಾಯಕವಾಗಿದ್ದಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಹೆಚ್ಚಿನ ಬಂಡವಾಳ ಹರಿದುಬಂದಿದ್ದರಿಂದ ಷೇರುಪೇಟೆ ಮೇಲೆದ್ದಿತು. ಪರಿಣಾಮ ಷೇರುಗಳು ಹೂಡಿಕೆದಾರರಿಗೆ ಶೇ 25ಕ್ಕೂ ಅಧಿಕ ಪ್ರಮಾಣದಲ್ಲಿ ಲಾಭ ತಂದುಕೊಟ್ಟಿವೆ'.ಇನ್ನೊಂದೆಡೆ, ಚಿನ್ನದಲ್ಲಿ ಹಣ ಹೂಡಿದವರು ಶೇ 12.95ರಷ್ಟು ಲಾಭವನ್ನಷ್ಟೇ ಪಡೆಯಲು ಸಾಧ್ಯವಾಗಿದೆ. ಬೆಳ್ಳಿಯೂ ತನ್ನನ್ನು ನಂಬಿದವರ ಕೈಹಿಡಿದೆ. ರಜತ ಲೋಹ ಹೂಡಿಕೆದಾರರಿಗೆ ಶೇ 12.84ರಷ್ಟು ಲಾಭ ತಂದುಕೊಟ್ಟಿದೆ.ಕುತೂಹಲದ ಸಂಗತಿ ಎಂದರೆ 2011ನೇ ವರ್ಷ ಇದಕ್ಕೆ ತದ್ವಿರುದ್ಧವಾಗಿತ್ತು. ಅಂದರೆ, ಷೇರುಪೇಟೆ ಪಾಲಿಗೆ ಕಠಿಣ ವರ್ಷವಾಗಿದ್ದರೆ, ಚಿನಿವಾರ ಪೇಟೆಯಲ್ಲಿ ಹಬ್ಬದ ವಾತಾವರಣವಿದ್ದಿತು.2011ರಲ್ಲಿ  ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್‌ಇ)ದ ಸಂವೇಧಿ ಸೂಚ್ಯಂಕ ಒಟ್ಟಾರೆ ಶೇ 25ರಷ್ಟು ಕುಸಿತ ಅನುಭವಿಸಿತು. ಚಿನ್ನವು ತನ್ನನ್ನು ಖರೀದಿಸಿದವರಿಗೆ ಶೇ 32ರಷ್ಟು ಭಾರಿ ಲಾಭವನ್ನು ತಂದುಕೊಟ್ಟಿತು. ಬೆಳ್ಳಿಯಿಂದ ಬಂದ ಲಾಭದ ಫಲ ಕೇವಲ ಶೇ 8ರಷ್ಟಿದ್ದಿತು.ಚಿನಿವಾರ ಪೇಟೆ ಅಂಕಿ-ಅಂಶ ಪ್ರಕಾರ ಕಳೆದ 15 ವರ್ಷಗಳ ವಹಿವಾಟಿನಲ್ಲಿ 12 ವರ್ಷದಲ್ಲಿ ಚಿನ್ನದ ಖರೀದಿ ಲಾಭಕರ ಎನಿಸಿದೆ. ಕಳೆದೊಂದು ದಶಕದಲ್ಲಿ ಚಿನ್ನದ ಮೌಲ್ಯ ಪ್ರತಿವರ್ಷ ಸರಾಸರಿ ಶೇ 20ರ ಪ್ರಮಾಣದಲ್ಲಿ ಹೆಚ್ಚುತ್ತಲೇ ಬಂದಿದೆ. ಇದೇ ವೇಳೆ ಷೇರುಗಳ ಮೌಲ್ಯ ಶೇ 18ರಷ್ಟು ಹೆಚ್ಚಳ ಕಂಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry