ಚಿನ್ನದ ಗಣಿ ಮತ್ತೆ ಆರಂಭಿಸಲು ಪ್ರಸ್ತಾವ

7

ಚಿನ್ನದ ಗಣಿ ಮತ್ತೆ ಆರಂಭಿಸಲು ಪ್ರಸ್ತಾವ

Published:
Updated:

ಕೋಲಾರ: ಕೆಜಿಎಫ್‌ನಲ್ಲಿರುವ ಚಿನ್ನದ ಗಣಿಯನ್ನು ಮತ್ತೆ ಆರಂಭಿಸಬೇಕು. ಕಾರ್ಮಿಕರಿಗೆ ಪುನರ್‌ವಸತಿ ಕಲ್ಪಿಸುವ ಕುರಿತು ಸಿಪಿಐಎಂ ಸಂಸತ್ತಿನಲ್ಲಿ ಪ್ರಸ್ತಾಪಿಸಲಿದೆ. ರಾಜ್ಯಸಭೆಯಲ್ಲಿ ನಾನೇ ಅದನ್ನು ಪ್ರಸ್ತಾಪಿಸುವೆ. ಈ ವಿಚಾರದಲ್ಲಿ ಎಡಪಕ್ಷಗಳ ಬೆಂಬಲವನ್ನೂ ಪಡೆಯಲು ಪ್ರಯತ್ನಿಸಲಾಗುವುದು ಎಂದು ರಾಜ್ಯಸಭಾ ಸದಸ್ಯ, ಸಿಪಿಐಎಂ ಪ್ರಮುಖ ಸೀತಾರಾಮ ಯೆಚೂರಿ ಭರವಸೆ ನೀಡಿದರು.ಚಿನ್ನದ ಗಣಿ ಮತ್ತೆ ಆರಂಭಿಸಲು ಒತ್ತಾಯಿಸಿ, ನಗರದ ಕೆಇಬಿ ಸಮುದಾಯ ಭವನದಲ್ಲಿ ಬುಧವಾರ ಸಿಐಟಿಯು ಮತ್ತು ಡಿವೈಎಫ್‌ಐ ಜಂಟಿಯಾಗಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಚಿನ್ನದ ಗಣಿ ಕಾರ್ಖಾನೆಯ ಮಾಜಿ ಕಾರ್ಮಿಕರು, ಕುಟುಂಬದವರು, ಜಿಲ್ಲೆಯ ಎಲ್ಲ ಕ್ಷೇತ್ರದ ಜನರು ಪ್ರಬಲ ಹೋರಾಟವನ್ನು ಆರಂಭಿಸುವುದು ಇಂದಿನ ಸಂದರ್ಭದಲ್ಲಿ ಅತ್ಯಗತ್ಯ ಎಂದು ಪ್ರತಿಪಾದಿಸಿದರು.ಚಿನ್ನದ ಗಣಿಯನ್ನು ಖಾಸಗೀಕರಿಸುವ ಯಾವುದೇ ಕ್ರಮವನ್ನು ನಮ್ಮ ಪಕ್ಷ ಪ್ರಬಲವಾಗಿ ವಿರೋಧಿಸಲಿದೆ. ಗಣಿಯನ್ನು ಮತ್ತೆ ಆರಂಭಿಸುವುದರಿಂದ ಉದ್ಯೋಗವನ್ನು ನೀಡಲು ಸಾಧ್ಯ. ಪ್ರದೇಶದ ಅಭಿವೃದ್ಧಿಯೂ ಆ ಮೂಲಕ ಸಾಧ್ಯವಾಗುತ್ತದೆ ಎಂದರು.‘ಕೋಟ್ಯಂತರ ರೂಪಾಯಿಗೆ ಕ್ರಿಕೆಟ್ ಆಟಗಾರರ ಮಾರಾಟ ನಡೆಯುತ್ತಿದೆ. ಆದರೆ ದೇಶದಲ್ಲಿ ಬಡತನ ತಾಂಡವವಾಡುತ್ತಿದೆ, ಒಂದೆಡೆ ಐಪಿಎಲ್ ಭಾರತವಿದೆ. ಮತ್ತೊಂದೆಡೆ ಬಿಪಿಎಲ್ ಭಾರತವಿದೆ. ದೇಶದ ಜನಕ್ಕೆ ಬೇಕಾಗಿರುವುದು ಆಹಾರ, ಉದ್ಯೋಗ ಮತ್ತುಆರೋಗ್ಯ ಸಂಬಂಧಿಯಾದ ಮೂಲಸೌಕರ್ಯಗಳು. 2ಜಿ ತರಂಗಾಂತರ ಹಗರಣ, ಕಾಮನ್‌ವೆಲ್ತ್ ಕ್ರೀಡಾಕೂಟದ ಹಗರಣಗಳಲ್ಲಿ ಒಳಗೊಂಡಿರುವ ಹಣವನ್ನು ಸರಿಯಾಗಿ ಬಳಸಿದ್ದರೆ ದೇಶದ ಹಲವು ಸಮಸ್ಯೆಗಳನ್ನು ನಿವಾರಿಸಬಹುದಿತ್ತು ಎಂದು ಅಭಿಪ್ರಾಯಪಟ್ಟರು.ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷ ವಿಜೆಕೆ ನಾಯರ್ ಮಾತನಾಡಿ, ಗಣಿಯನ್ನು ಮತ್ತೆ ಆರಂಭಿಸಿದ ನಂತರದ ಐದು ವರ್ಷದಲ್ಲೆ 10ರಿಂದ 15 ಸಾವಿರ ಮಂದಿಗೆ ಉದ್ಯೋಗ ದೊರಕಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.ಪ್ರಾಂತ ರೈತ ಸಂಘದ ಪ್ರಮುಖ ಜಿಸಿ ಬೈಯ್ಯಾರೆಡ್ಡಿ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ದೇಶದ ಜನತೆ ಒಗ್ಗಟ್ಟಾದ ರೀತಿಯಲ್ಲಿಯೇ ಜಿಲ್ಲೆಯ ಎಲ್ಲರೂ ಪಕ್ಷಾತೀತವಾಗಿ ಒಗ್ಗಟ್ಟಾಗಿ ಹೋರಾಟವನ್ನು ರೂಪಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.ಸಮಾವೇಶದ ನಿರ್ಣಯವನ್ನು ಬಿ.ವಿ.ಸಂಪಂಗಿ ಮಂಡಿಸಿದರು. ಅದನ್ನು ಅಂಗೀಕರಿಸಲಾಯಿತು. ಬಿಜಿಎಂಎಲ್ ಉಳಿಸಿ ಹೋರಾಟ ಸಮಿತಿಯನ್ನೂ ಇದೇ ಸಂದರ್ಭದಲ್ಲಿ ರಚಿಸಲಾಯಿತು.ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಘಟಕದ ಮುಖಂಡರಾದ ಮೀನಾಕ್ಷಿ ಸುಂದರಂ, ಈಶ್ವರಮ್ಮ, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಿ.ಗೀತಾ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಪ್ರಮುಖರಾದ ಜಿ.ಸಿ.ಬೈಯಾರೆಡ್ಡಿ, ಪಿ.ಆರ್.ಸೂರ್ಯನಾರಾಯಣ, ಮತ್ತು ಟಿ.ಎಂ.ವೆಂಕಟೇಶ್, ಬಿಜಿಎಂಎಲ್ ನೌಕರರ ಸಂಘದ ಪ್ರಮುಖರಾದ ಶ್ರೀನಿವಾಸನ್, ತಂಗರಾಜ್ ವೇದಿಕೆಯಲ್ಲಿದ್ದರು. ನಾಗರತ್ನಮ್ಮ ಸ್ವಾಗತಿಸಿದರು. ವಿಜಯಕೃಷ್ಣ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry