ಬುಧವಾರ, ಜುಲೈ 28, 2021
26 °C

ಚಿನ್ನದ ಬೆಲೆಯ ನಾಗಾಲೋಟ...

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

ಚಿನ್ನದ ಬೆಲೆಯ ನಾಗಾಲೋಟ...

ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಯಾರೊಬ್ಬರ ಊಹೆಗೂ ನಿಲುಕದ ರೀತಿಯಲ್ಲಿ ಏರಿಕೆಯಾಗುತ್ತಿವೆ. ಇವೆರಡೂ ಯಾವಾಗಲೂ ಮೌಲ್ಯಯುತ ಲೋಹಗಳೆಂದೇ ಪರಿಗಣಿಸಲಾಗಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಬೆಲೆಗಳು ನಾಟಕೀಯ ರೀತಿಯಲ್ಲಿ ಹೆಚ್ಚಳಗೊಳ್ಳುತ್ತಿವೆ. ಚಿನ್ನದಲ್ಲಿ ಹೂಡಿಕೆ ಮಾಡುವ ಮತ್ತು ಚಿನ್ನದ ನಾಣ್ಯಗಳ ಖರೀದಿ ಪ್ರವೃತ್ತಿಯೂ  ಹೆಚ್ಚುತ್ತಿರುವುದರಿಂದ ಬೇಡಿಕೆಯೂ ಏರುಗತಿಯಲ್ಲಿಯೇ ಸಾಗಿದೆ.ಚಿನ್ನಾಭರಣ ತಯಾರಿಕೆಯಲ್ಲಿ ಬಳಸುವ 22 ಕ್ಯಾರಟ್ ಚಿನ್ನದ ಬೆಲೆಯು  ವರ್ಷದಿಂದ ವರ್ಷಕ್ಕೆ ಶೇ 30ರಷ್ಟು ಹೆಚ್ಚಳಗೊಳ್ಳುತ್ತಲೇ ಸಾಗಿದೆ. ಈ ವರ್ಷದ ದೀಪಾವಳಿ ಹೊತ್ತಿಗೆ ಬೆಲೆ ಪ್ರತಿ 10 ಗ್ರಾಂಗಳಿಗೆ 25 ಸಾವಿರಕ್ಕೆ ತಲುಪುವ ನಿರೀಕ್ಷೆ ಇದೆ.ಅರ್ಥ ವ್ಯವಸ್ಥೆಗೆ ಸಂಬಂಧಿಸಿದ ಕಂಪನಗಳು ಜಾಗತಿಕ ಮಟ್ಟದಲ್ಲಿ ಸಂಭವಿಸಿದಾಗೊಮ್ಮೆ  ಚಿನ್ನ -ಬೆಳ್ಳಿ ಖರೀದಿಗೆ  ಇನ್ನಷ್ಟು ಹಣ ಸುರಿಯುವ ಪ್ರವೃತ್ತಿ ಕಂಡು ಬರುತ್ತಿದೆ.   ಹಣಕಾಸಿನ ವಹಿವಾಟಿನಲ್ಲಿನ ಸಂಭವನೀಯ ನಷ್ಟ ತಡೆಗಟ್ಟಲು ಹೆಚ್ಚೆಚ್ಚು ಹಣ ಹೂಡಿಕೆಯ ಪ್ರವೃತ್ತಿ ಕಂಡು ಬರುತ್ತದೆ.ಅಮೆರಿಕದ ಕೇಂದ್ರೀಯ ಬ್ಯಾಂಕ್, ಆರ್ಥಿಕ ಪುನಶ್ಚೇತನ ಉತ್ತೇಜಿಸಲು ಬಡ್ಡಿ ದರಗಳನ್ನು ಶೂನ್ಯದ ಹತ್ತಿರಕ್ಕೆ ನಿಗದಿಪಡಿಸಿದ್ದರಿಂದ ಡಾಲರ್ ದುರ್ಬಲಗೊಂಡಿದೆ. ಹೀಗಾಗಿ ಚಿನ್ನದ ಬೇಡಿಕೆ ವಿಶ್ವದಾದ್ಯಂತ ಹೆಚ್ಚುತ್ತಿದೆ.ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿನ ಕಡಿಮೆ ಬಡ್ಡಿ ದರ ಮತ್ತು ಮೃದು ಹಣಕಾಸು ನೀತಿಗಳಿಂದಾಗಿ ಬಂಡವಾಳವನ್ನು ಹೆಚ್ಚು ಲಾಭದಾಯಕವಾಗಿರುವ ಚಿನ್ನ ಮತ್ತಿತರ ಪದಾರ್ಥಗಳಲ್ಲಿ ತೊಡಗಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಭೌತಿಕ ಮತ್ತು ಡಿಮ್ಯಾಟ್ ಖಾತೆಯಲ್ಲಿ ಚಿನ್ನ ಖರೀದಿಸುವ ಪ್ರವೃತ್ತಿಯೂ ಬೇಡಿಕೆ ಮತ್ತು ಪೂರೈಕೆಯಲ್ಲಿ ಅಸಮತೋಲನಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ದಿನೇ ದಿನೇ ಹೊಸ ಎತ್ತರಕ್ಕೆ ಏರುತ್ತಿವೆ.ಜಾಗತಿಕ ಅರ್ಥವ್ಯವಸ್ಥೆಯ ಸುಸ್ಥಿರ ಚೇತರಿಕೆಗೆ ಸಂಬಂಧಿಸಿದ ಅಸ್ಥಿರತೆಯು ಇತ್ತೀಚಿನ ದಿನಗಳಲ್ಲಿ ‘ಸುರಕ್ಷಿತ ಹೂಡಿಕೆ’ಯ ಚಿನ್ನದ ಬೆಲೆ ಏರಿಕೆಯ ಮುಖ್ಯ ಕಾರಣವಾಗಿದೆ.ಬೆಳ್ಳಿ ಬೆಲೆಯಂತೂ ಒಂದು ವರ್ಷದಲ್ಲಿ  ಎರಡು ಪಟ್ಟು ಹೆಚ್ಚಾಗಿದೆ. ಸಂಗ್ರಹಿಸಿ ಇಟ್ಟುಕೊಳ್ಳುವುದರಿಂದ ಹೆಚ್ಚುವ ಮೌಲ್ಯ, ಹಣದುಬ್ಬರ ವಿರುದ್ಧದ ರಕ್ಷಣೆ ಮತ್ತು ಕರೆನ್ಸಿ ವ್ಯವಸ್ಥೆಯ ವೈಫಲ್ಯವೂ ಇದಕ್ಕೆ ಕಾರಣ. ಚಿನ್ನ ಸಾಕಷ್ಟು ದುಬಾರಿಯಾಗಿದ್ದರೂ ಇದೇ 6ರಂದು ಆಚರಿಸಲಿರುವ ‘ಅಕ್ಷಯ ತೃತೀಯ’ ದಿನದ ಬೇಡಿಕೆ ಇನ್ನೂ ಹೆಚ್ಚುವ ನಿರೀಕ್ಷೆ ಇದೆ. ದುಬಾರಿ ಬೆಲೆ ಇದ್ದರೂ ಬೇಡಿಕೆ ಕುಸಿಯದು ಎನ್ನುವ ನಿರೀಕ್ಷೆ ಚಿನ್ನಾಭರಣ ವರ್ತಕರಲ್ಲಿ ಇದೆ.ಇದೇ ಕಾರಣಕ್ಕೆ ಬ್ರಾಂಡೆಡ್ ಚಿನ್ನಾಭರಣ ಮಾರಾಟಗಾರರು ಗ್ರಾಹಕರನ್ನು ಸೆಳೆಯಲು ಹೊಸ ಹೊಸ ಆಕರ್ಷಕ ಯೋಜನೆಗಳನ್ನು ಪ್ರಕಟಿಸುತ್ತಲೇ ಇದ್ದಾರೆ. ತಯಾರಿಕಾ ಶುಲ್ಕದಲ್ಲಿ ರಿಯಾಯ್ತಿ, ನಿರ್ದಿಷ್ಟ ಮೊತ್ತದ ಖರೀದಿಗೆ ಬೆಳ್ಳಿ ಲಕ್ಷ್ಮಿ ವಿಗ್ರಹ ಕೊಡಲು ಮುಂದಾಗಿದ್ದಾರೆ.ಬೆಲೆ ಏರಿಕೆಯು ಖರೀದಿದಾರರನ್ನು ನಿರುತ್ಸಾಹಗೊಳಿಸಬಾರದು ಎನ್ನುವ ಕಾರಣಕ್ಕೆ  ಆಭರಣಗಳ ಮುಂಗಡ ಖರೀದಿ ಸೌಲಭ್ಯವನ್ನೂ ಕೆಲ ಪ್ರಮುಖ ಚಿನ್ನಾಭರಣ ಮಾರಾಟ ಸಂಸ್ಥೆಗಳು ಒದಗಿಸಲು ಮುಂದಾಗಿವೆ. ಸದ್ಯದ ಬೆಲೆಯಲ್ಲಿ ಆಭರಣಗಳನ್ನು ಮುಂಗಡವಾಗಿ ಖರೀದಿಸಿದರೆ, ‘ಅಕ್ಷಯ ತೃತೀಯ’ದಿನದಂದು ಬೆಲೆ ಹೆಚ್ಚಿದ್ದರೆ, ಮುಂಗಡ ಖರೀದಿ ಬೆಲೆಗೇನೆ ನೀಡಲು ಅಥವಾ ಬೆಲೆ ಕಡಿಮೆಯಾಗಿದ್ದರೆ ಹೆಚ್ಚುವರಿ ಹಣ ಮರಳಿಸಲು ಮುಂದಾಗಿದ್ದಾರೆ.ಚಿನ್ನ ಖರೀದಿಗೆ ‘ಅಕ್ಷಯ ತೃತೀಯ’ ಪವಿತ್ರ ದಿನ ಎಂದು ಅನೇಕರು ಪರಿಗಣಿಸುವ ಹಿನ್ನೆಲೆಯಲ್ಲಿ, ಅನೇಕರು ಸಾಂಕೇತಿಕವಾಗಿಯೂ ಚಿನ್ನ ಖರೀದಿಸುತ್ತಾರೆ.  ಈ ಕಾರಣಕ್ಕೆ ಬಹುತೇಕ ಚಿನ್ನಾಭರಣ ಮಾರಾಟಗಾರರು 1 ಗ್ರಾಂನಿಂದ ಹಿಡಿದು 10 ಗ್ರಾಂವರೆಗಿನ ಹಗುರ ಉತ್ಪನ್ನಗಳಾದ  ಉಂಗುರ, ಬ್ರೆಸ್‌ಲೆಟ್ಸ್‌ಗಳನ್ನೂ ಮಾರಾಟಕ್ಕೆ ಇರಿಸಿದ್ದಾರೆ.ಇನ್ನೂ ಕೆಲ ಆಭರಣ ಮಳಿಗೆಗಳು - ಬೆಲೆ ಕಡಿತದ ಆಮಿಷ ಒಡ್ಡಿ ಗುಣಮಟ್ಟದ ಜತೆ ರಾಜಿಯಾಗುವುದಿಲ್ಲ ಎನ್ನುವ ಧೋರಣೆಯನ್ನೂ ತಳೆದಿದ್ದಾರೆ.ವಿಶ್ವ ಚಿನ್ನ ಮಂಡಳಿಯ ಅಂದಾಜಿನ ಪ್ರಕಾರ ದೇಶದಲ್ಲಿನ ಚಿನ್ನಾಭರಣಗಳ ಮಾರುಕಟ್ಟೆಯು 13.5 ಶತಕೋಟಿ ಡಾಲರ್‌ಗಳಷ್ಟಿದೆ. (60,750 ಕೋಟಿಗಳಷ್ಟಿದೆ.)

ಹಣ ಹೂಡಿಕೆಗೆ ಜನರು ಈಗ ಹೊಸ ಚಿನ್ನ ಮತ್ತು ಬೆಳ್ಳಿಯತ್ತ ನೋಡುತ್ತಿದ್ದಾರೆ.ಷೇರುಪೇಟೆ ಸೂಚ್ಯಂಕ ಮತ್ತು ರಿಯಲ್ ಎಸ್ಟೇಟ್ ವಹಿವಾಟಿನಲ್ಲಿನ ಬೆಲೆ ಏರಿಕೆಗಿಂತ ಇವೆರಡೂ ಲೋಹಗಳ ಬೆಲೆ ಏರಿಕೆ ಪ್ರಮಾಣ ಹೆಚ್ಚುತ್ತಿದೆ.ಚಿನ್ನವನ್ನು ಭೌತಿಕವಾಗಿ ಸಂಗ್ರಹಿಸಿ ಇಟ್ಟುಕೊಳ್ಳುವುದರ ಜತೆಗೆ, ಷೇರುಪೇಟೆಯಲ್ಲಿ ಭೌತಿಕವಲ್ಲದ ರೂಪದಲ್ಲಿ ಇರುವ  ‘ಚಿನ್ನದ ಇಟಿಎಫ್’ಗಳಲ್ಲಿ ಹಣ ತೊಡಗಿಸುವ ಪ್ರವೃತ್ತಿಯೂ ಹೆಚ್ಚುತ್ತಿದೆ. ಮಾರುಕಟ್ಟೆಯಲ್ಲಿನ ಚಿನ್ನದ ಬೆಲೆಯನ್ನೇ ಈ ಯೂನಿಟ್‌ಗಳು ಹೊಂದಿರುತ್ತವೆ. ಒಂದು ಯೂನಿಟ್ ಎಂದರೆ, ಒಂದು ಗ್ರಾಂ ಚಿನ್ನದ ಬೆಲೆಗೆ ಸಮನಾಗಿರುತ್ತದೆ. ಇಂತಹ ‘ಇಟಿಎಫ್’ಗಳಲ್ಲಿನ ಹೂಡಿಕೆಯು ಬಡ್ಡಿ ಅಥವಾ ಲಾಭಾಂಶ ತಂದುಕೊಡಲಾರದು. ಮಾರಾಟ ಮಾಡಿದರೆ ಮಾತ್ರ ಹಣ ಕೈಸೇರುತ್ತದೆ.ಭಾರತೀಯರು ಸಾಂಪ್ರದಾಯಿಕವಾಗಿ   ಭೌತಿಕವಾಗಿಯೇ ಚಿನ್ನ ಸಂಗ್ರಹಿಸಿ ಇಟ್ಟುಕೊಳ್ಳಲು ಬಯಸುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ‘ಗೋಲ್ಡ್ ಇಟಿಎಫ್’ಗಳಲ್ಲಿ ಹಣ ತೊಡಗಿಸುವ ಪ್ರವೃತ್ತಿ ಗಮನಾರ್ಹವಾಗಿ ಹೆಚ್ಚಳಗೊಂಡಿದೆ.ಈ ಗೋಲ್ಡ್ ಇಟಿಎಫ್‌ಗಳ ಸಂಪತ್ತು  ನಿರ್ವಹಣೆಯು (assets under management-AUM) 2010ರ ಮಾರ್ಚ್‌ನಲ್ಲಿ  1,590 ಕೋಟಿಗಳಷ್ಟಿದ್ದರೆ,  2011ರ ಮಾರ್ಚ್‌ನಲ್ಲಿ  4,400 ಕೋಟಿಗಳಷ್ಟಾಗಿ ಮೂರು ಪಟ್ಟುಗಳಷ್ಟು ಹೆಚ್ಚಾಗಿದೆ.ಇದು ಭೌತಿಕವಲ್ಲದ ರೂಪದಲ್ಲಿ ಚಿನ್ನ ಖರೀದಿಸುವ ಬೇಡಿಕೆಗೆ ಕನ್ನಡಿ ಹಿಡಿಯುತ್ತದೆ.ಗೋಲ್ಡ್ ಇಟಿಎಫ್- ಎಂದರೆ, ಭೌತಿಕ ಸ್ವರೂಪದ ಚಿನ್ನವನ್ನು ಕಾಗದ ಅಥವಾ ವಿದ್ಯುನ್ಮಾನ ರೂಪದಲ್ಲಿ ಇರುವುದು ಎಂದರ್ಥ.  ಮುಂಬೈ ಷೇರುಪೇಟೆ ಅಥವಾ ರಾಷ್ಟ್ರೀಯ ಷೇರುಪೇಟೆಗಳಲ್ಲಿ ಈ ಯೂನಿಟ್‌ಗಳ ವಹಿವಾಟು ನಡೆಯುತ್ತದೆ.ದೇಶದಲ್ಲಿ ಸದ್ಯಕ್ಕೆ 10 ಮ್ಯೂಚುವಲ್  ಫಂಡ್‌ಗಳು  (ಎಎಂಸಿ) ‘ಗೋಲ್ಡ್ ಇಟಿಎಫ್’ ವಹಿವಾಟು ನಡೆಸುತ್ತಿವೆ.2007ರ ಏಪ್ರಿಲ್‌ನಲ್ಲಿ ತಲಾ 10 ಗ್ರಾಂಗಳಿಗೆ  9,357ರಷ್ಟಿದ್ದ ಚಿನ್ನದ ಬೆಲೆ ಈಗ  22 ಸಾವಿರ ಆಸುಪಾಸಿನಲ್ಲಿ ಇದೆ. ಹೀಗಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಚಿನ್ನವು ವಾರ್ಷಿಕ ಶೇ 20ರಷ್ಟು ಲಾಭ ತಂದುಕೊಡುತ್ತಿದೆ.‘ಗೋಲ್ಡ್ ಇಟಿಎಫ್’ ಖರೀದಿ ಮತ್ತು ಮಾರಾಟದ ಬಗ್ಗೆ ಜನರಲ್ಲಿ ಅರಿವು  ಮೂಡಿಸಲು ರಾಷ್ಟ್ರೀಯ ಷೇರುಪೇಟೆಯು   nsegold.com ಹೆಸರಿನ ಇಂಟರ್‌ನೆಟ್ ತಾಣವನ್ನೂ ಆರಂಭಿಸಿದೆ.ಷೇರುಪೇಟೆಯಲ್ಲಿ ಚಿನ್ನದ ವಿನಿಮಯ ವಹಿವಾಟು ನಡೆಸುವ ಮ್ಯೂಚುವಲ್ ಫಂಡ್‌ಗಳಲ್ಲಿ  ( Gold Exchange Traded Funds - ETF)   ಹಣ ತೊಡಗಿಸುವುದು ಕಳೆದ ಮೂರು ವರ್ಷಗಳೀಂದಿಚೆಗಿನ ಹೊಸ ಬೆಳವಣಿಗೆಯಾಗಿದೆ.ಒಟ್ಟಾರೆ ವಿಶ್ವದಾದ್ಯಂತ ಚಿನ್ನ ಮತ್ತು ಬೆಳ್ಳಿ ಖರೀದಿಯ ಹಸಿವು ಹೆಚ್ಚಾಗುತ್ತಿದೆ. ಅದಕ್ಕೆ ತಕ್ಕಂತೆ ಬೆಲೆಯೂ ಏರುಗತಿಯಲ್ಲಿ ಇದೆ. ಒಮ್ಮೆ ಏರಿದ ಬೆಲೆ  ಮತ್ತೆಂದೂ ಗಮನಾರ್ಹವಾಗಿ ಕಡಿಮೆಯಾದ ಉದಾಹರಣೆಗಳು ಇತಿಹಾಸದಲ್ಲಿ ಕಂಡುಬಂದಿಲ್ಲ.ಹೀಗಾಗಿ ಬಡವ - ಬಲ್ಲಿದರು ಈ ಬೆಲೆ ಏರಿಕೆಯ ಬಿಸಿಯೊಂದಿಗೆ ರಾಜಿ ಮಾಡಿಕೊಳ್ಳುವುದು ಅನಿವಾರ್ಯ ಎನ್ನುವಂತಹ ಪರಿಸ್ಥಿತಿ ಉದ್ಭವಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.