ಭಾನುವಾರ, ನವೆಂಬರ್ 17, 2019
29 °C

ಚಿನ್ನದ ಬೆಲೆ ಮೀರಿಸಿದ ಕಾಳುಮೆಣಸು

Published:
Updated:

ಶಿರಸಿ: ಕರಿ ಬಂಗಾರದ ಬೆಲೆ ಮತ್ತೊಮ್ಮೆ ತೇಜಿಯಾಗಿದೆ. ನಾಲ್ಕಾರು ತಿಂಗಳುಗಳಿಂದ ಗಗನಕ್ಕೇರುತ್ತಿರುವ ಕಾಳು ಮೆಣಸಿನ ಬೆಲೆ ಕ್ವಿಂಟಲ್‌ಗೆ ಗರಿಷ್ಠ 44,900 ರೂಪಾಯಿ ತಲುಪಿದೆ. ಕಾಳುಮೆಣಸಿನ ಬೆಲೆ ಏರಿಕೆ ಕೆಲ ಬೆಳೆಗಾರರಲ್ಲಿ ಮಾತ್ರ ಸಂತಸ ತಂದಿದೆ. ರೋಗಬಾಧೆಯಿಂದ ಕಾಳು ಮೆಣಸು ಬೆಳೆ ಕುಂಠಿತಗೊಂಡಿದ್ದು, ಸಂಗ್ರಹದಲ್ಲಿದ್ದ ಮಾಲನ್ನು ಬಹುತೇಕ ರೈತರು ಈಗಾಗಲೇ ಮಾರಾಟ ಮಾಡಿದ್ದಾರೆ.

ಇಲ್ಲಿನ ಮಾರುಕಟ್ಟೆಯಲ್ಲಿ ಶುಕ್ರವಾರ ಒಂದು ಕ್ವಿಂಟಾಲ್ ಕಾಳುಮೆಣಸಿನ ದರ  ರೂ 42,900ಕ್ಕೆ ಏರಿಕೆಯಾಗಿ ಶನಿವಾರ ರೂ 41,300ಕ್ಕೆ ಇಳಿಕೆಯಾಗಿದೆ. ಸ್ಥಳೀಯ ತಳಿ ಮಲ್ಲಿಸರಕ್ಕೆ ಗರಿಷ್ಠ ದರ ದೊರೆತಿರುವುದು ವಿಶೇಷವಾಗಿದೆ. ಮಾರ್ಚ್ ಮೊದಲ ವಾರದಲ್ಲಿ ಗರಿಷ್ಠ ರೂ 36ಸಾವಿರ ಬೆಲೆ ಕಂಡಿದ್ದ ಕಾಳುಮೆಣಸು ಕೇವಲ ಹದಿನೈದು ದಿನಗಳಲ್ಲಿ ರೂ 40ಸಾವಿರ ಗಡಿ ದಾಟಿ ಮತ್ತೆ ತುಸು ಇಳಿಕೆ ಕಂಡಿತು. ನಂತರದ ದಿನಗಳಲ್ಲಿ ಕೊಂಚ ಪ್ರಮಾಣದಲ್ಲಿ ಕಾಳುಮೆಣಸಿನ ಬೆಲೆಯಲ್ಲಿ ಏರಿಳಿಕೆ ಮುಂದುವರಿದಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಾಂಬಾರ ಬೆಳೆಯಾದ ಕಾಳುಮೆಣಸಿಗೆ ಹೆಚ್ಚಿದ ಬೇಡಿಕೆ, ಕಾಳುಮೆಣಸು ಬೆಳೆಯುವ ಪ್ರಮುಖ ದೇಶಗಳಾದ ವಿಯಟ್ನಾಂ, ಬ್ರಾಝಿಲ್, ಮಲೇಷ್ಯಾಗಳಲ್ಲಿ ಕುಂಠಿತವಾದ ಬೆಳೆ ಹಾಗೂ ಹಳದಿ ಮತ್ತು ಸೊರಗು ರೋಗದ ಹಾವಳಿ ದರ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂಬುದು ಮಾರುಕಟ್ಟೆ ತಜ್ಞರ ಅಭಿಮತ.

2006-07ರಲ್ಲಿ ಕ್ವಿಂಟಲ್‌ಗೆ ರೂ 8ಸಾವಿರ ಇದ್ದ ಕಾಳುಮೆಣಸಿನ ಬೆಲೆ 2008ರಲ್ಲಿ ರೂ 12ಸಾವಿರಕ್ಕೆ ನೆಗೆದಿತ್ತು. 2011ರಲ್ಲಿ ಗರಿಷ್ಠ ರೂ 30 ಸಾವಿರ ಗಡಿ ತಲುಪಿದ ಕಾಳುಮೆಣಸು ಇಂದು ಬಂಗಾರಕ್ಕಿಂತ ಹೆಚ್ಚಿನ ಬೆಲೆ ಪಡೆದಿದೆ.

ನಗರದ ಪ್ರಮುಖ ಮಾರುಕಟ್ಟೆ ತೋಟಗಾರ್ಸ್ ಕೋ ಆಪರೇಟಿವ್ ಸೇಲ್ ಸೊಸೈಟಿ (ಟಿಎಸ್‌ಎಸ್) ಹಿಂದಿನ ಹಾಗೂ 2011ರಲ್ಲಿ 1699 ಕ್ವಿಂಟಲ್ ಕಾಳುಮೆಣಸು ಖರೀದಿಸಿದೆ. ಈ ವರ್ಷ ಈ ತನಕ 1500 ಕ್ವಿಂಟಲ್ ಆವಕ ಆಗಿದೆ. ವ್ಯಾಪಾರಕ್ಕೆ ತರಲು ರೈತರ ಬಳಿ ಮಾಲು ಇಲ್ಲ. ಟಿಎಸ್‌ಎಸ್ ಗೋಡಾನ್‌ನಲ್ಲಿ ರೈತರು ಸಂಗ್ರಹಿಸಿಟ್ಟಿದ್ದ ಕಾಳುಮೆಣಸಿನ ಶಿಲ್ಕು ಸಹ ಖಾಲಿಯಾಗುತ್ತಿದೆ. ವಿದೇಶದಲ್ಲೂ ಸಹ ಕಾಳುಮೆಣಸಿನ ಫಸಲು ಕಡಿಮೆ ಇದ್ದು, ಕಾಳು ಮೆಣಸು ಬೆಳೆಯುವ ದೇಶದ ಹೊಸ ಉತ್ಪನ್ನ ಮಾರುಕಟ್ಟೆ ಪ್ರವೇಶಿಸಿದಾಗ ಒಮ್ಮೆ ದರ ಕುಸಿತವಾಗುತ್ತದೆ. ನಂತರ ಮತ್ತೆ ದರ ಏರುಮುಖವಾಗುತ್ತದೆ ಎನ್ನುತ್ತಾರೆ ಟಿಎಸ್‌ಎಸ್ ವ್ಯವಸ್ಥಾಪಕ ರವೀಶ ಹೆಗಡೆ.

ದಾರಿ ತಪ್ಪಿಸುವ ಆನ್‌ಲೈನ್ ದರ: ಮಾರುಕಟ್ಟೆ ದರಕ್ಕಿಂತ ಆನ್‌ಲೈನ್ ದರ ಹೆಚ್ಚಿರುವುದರಿಂದ ಬೆಳೆಗಾರರು, ವ್ಯಾಪಾರಸ್ಥರಲ್ಲಿ ಗೊಂದಲ ಉಂಟಾಗುತ್ತದೆ. ಕಾಳುಮೆಣಸಿನ ಪ್ರಸ್ತುತ ಮಾರುಕಟ್ಟೆ ದರ ಸಟ್ಟಾ ವ್ಯಾಪಾರ ಎನಿಸುತ್ತದೆ ಎಂಬುದು ಹಿರಿಯ ವ್ಯಾಪಾರಿ ಡಿ.ಜಿ.ಹೆಗಡೆ ಭೈರಿ ಅಭಿಪ್ರಾಯ. 

 `ಹಿಂದೆಲ್ಲ ಒಂದು ಕ್ವಿಂಟಾಲ್ ಕಾಳುಮೆಣಸು ಒಂದು ತೊಲೆ ಬಂಗಾರಕ್ಕೆ ಸಮ ಎಂಬ ಮಾತಿತ್ತು. ಈಗ ಬಂಗಾರದ ದರ ಏರಿಕೆ ಆಗಿದ್ದರೂ ಬೆಲೆ ಅಸಮತೋಲನವಾಗಿದೆ. ರೈತರ ಬಳಿ ಈಗ ಮಾಲು ಬಹುತೇಕ ಖಾಲಿ ಆಗುತ್ತಿದೆ. ಹಿಂದಿನ ವರ್ಷ ದರ ಬಂದಾಗ ರೈತರು ಮಾಲು ವಿಕ್ರಿ ಮಾಡಿದ್ದಾರೆ. ಹಳೆಯ ಸಂಗ್ರಹ ಮುಗಿದಿದೆ. ಶಿರಸಿ ಮಾರುಕಟ್ಟೆಗೆ ಯಲ್ಲಾಪುರ, ಸಿದ್ದಾಪುರ, ಕೊಪ್ಪ, ಶೃಂಗೇರಿ, ನಿಟ್ಟೂರು ಮತ್ತಿತ್ತರ ಊರುಗಳಿಂದ ಬೆಳೆಗಾರರು ಕಾಳುಮೆಣಸು ವ್ಯಾಪಾರಕ್ಕೆ ತರುತ್ತಿದ್ದಾರೆ. ಹೀಗಾಗಿ ಸ್ಥಳೀಯ ಶಿಲ್ಕು ಎಷ್ಟಿದೆ ಎಂದು ಅಂದಾಜಿಸುವದು ಕಷ್ಟ~ ಎಂದು ಅವರು ಹೇಳುತ್ತಾರೆ.  

ಶತಮಾನದಿಂದ ಪ್ರಚಲಿತದಲ್ಲಿರುವ ಮಲ್ಲಿಸರ ತಳಿಗೆ ಉತ್ತಮ ದರವಿದ್ದರೂ ಫಣಿಯೂರು ತಳಿಗೆ ಕೇವಲ ಒಂದು ಸಾವಿರ ರೂಪಾಯಿ ಆಸುಪಾಸು ದರ ಕಡಿಮೆ ಇದೆ. ಮಾಲು ಹೊಂದಿರುವ ಕೆಲವೇ ಬೆಳೆಗಾರರು ಇನ್ನಷ್ಟು ದರ ಹೆಚ್ಚಬಹುದೆಂಬ ನಿರೀಕ್ಷೆಯಲ್ಲಿದ್ದರೆ ವ್ಯಾಪಾರಸ್ಥರು ಗಗನಕ್ಕೆ ಏರಿರುವ ಬೆಲೆ ಕಂಡು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. 

ಪ್ರತಿಕ್ರಿಯಿಸಿ (+)