ಬುಧವಾರ, ಮಾರ್ಚ್ 3, 2021
19 °C

ಚಿನ್ನದ ಬೇಡಿಕೆ ಶೇ 12ರಷ್ಟು ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿನ್ನದ ಬೇಡಿಕೆ ಶೇ 12ರಷ್ಟು ಕುಸಿತ

ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಚಿನ್ನದ ಬೇಡಿಕೆ ಶೇ 12ರಷ್ಟು ಕಡಿಮೆಯಾಗಿ 750 ರಿಂದ 850 ಟನ್‌ಗಳಷ್ಟಾಗಬಹುದು ಎಂದು ವಿಶ್ವ ಚಿನ್ನ ಮಂಡಳಿ (ಡಬ್ಲ್ಯುಜಿಸಿ) ಅಂದಾಜಿಸಿದೆ.ದ್ವಿತೀಯ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆ ಪ್ರಮಾಣವು ಶೇ 18ರಷ್ಟು ಕಡಿಮೆಯಾಗಿ 131 ಟನ್‌ಗಳಿಗೆ ಇಳಿಕೆಯಾಗಿದ್ದರಿಂದ ವಾರ್ಷಿಕ ಬೇಡಿಕೆಯನ್ನು ಪರಿಷ್ಕರಿಸಲಾಗಿದೆ.ಇದಕ್ಕೂ ಮೊದಲು, ಮೇ ತಿಂಗಳಿನಲ್ಲಿ ವರದಿ ನೀಡಿದ್ದ ‘ಡಬ್ಲ್ಯುಜಿಸಿ’, ಈ ವರ್ಷ ಭಾರತದ ಚಿನ್ನದ  ಬೇಡಿಕೆಯು 850 ರಿಂದ 950 ಟನ್‌ಗಳಷ್ಟು ಇರಲಿದೆ ಎಂದು ಅಂದಾಜಿಸಿತ್ತು.  2015ರಲ್ಲಿ 864 ಟನ್‌ಗಳಿಗೆ ಬೇಡಿಕೆ ಕಂಡು ಬಂದಿತ್ತು.ಚಿನ್ನದ ಬೆಲೆ ಏರಿಕೆ, ಸರ್ಕಾರ ವಿಧಿಸಿದ ಹೊಸ ನಿಯಂತ್ರಣ ಕ್ರಮಗಳು, ಅವುಗಳನ್ನು ವಿರೋಧಿಸಿ ಚಿನ್ನಾಭರಣ ವರ್ತಕರು ಮುಷ್ಕರ ನಡೆಸಿದ್ದರಿಂದ ದ್ವಿತೀಯ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆ ಕುಸಿತ ಕಂಡಿದೆ.  ‘ಡಬ್ಲ್ಯುಜಿಸಿ’ಯು ಏಪ್ರಿಲ್‌– ಜೂನ್‌ ಅವಧಿಯ ತ್ರೈಮಾಸಿಕದಲ್ಲಿನ ಚಿನ್ನದ ಬೇಡಿಕೆ ಕುರಿತು  ಬಿಡುಗಡೆ ಮಾಡಿರುವ ವರದಿಯಲ್ಲಿ ಈ ವಿವರಗಳನ್ನು ನೀಡಿದೆ.‘ಗಮನಾರ್ಹ ಪ್ರಮಾಣದಲ್ಲಿ ಬೆಲೆ ಏರಿಕೆಯಾಗಿದ್ದರಿಂದ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಚಿನ್ನದ ಬೇಡಿಕೆ ಕಡಿಮೆಯಾಗಿದೆ. ಈ ಕಾರಣಕ್ಕೆ  2016ರಲ್ಲಿ ಭಾರತದ ಒಟ್ಟು ಚಿನ್ನದ ಬೇಡಿಕೆ ಪ್ರಮಾಣವು 750 ರಿಂದ 850 ಟನ್‌ಗಳಲ್ಲಿ  ಇರುವ ಸಾಧ್ಯತೆ ಇದೆ’ ಎಂದು ವಿಶ್ವ ಚಿನ್ನ ಮಂಡಳಿಯ ಭಾರತದ ನಿರ್ದೇಶಕ ಸೋಮಸುಂದರಂ ಪಿಆರ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಹಣಕಾಸಿನ ವರ್ಷದ ದ್ವಿತೀಯಾರ್ಧದಲ್ಲಿ ಚಿನ್ನದ ಬೇಡಿಕೆ ಪ್ರಮಾಣವು 500 ರಿಂದ 600 ಟನ್‌ಗಳಷ್ಟು ಇರುವ ಸಾಧ್ಯತೆ ಇದೆ. ಕಳೆದ ವರ್ಷದ ಈ ಅವಧಿಯಲ್ಲಿ 513 ಟನ್‌ಗಳಿಗೆ ಬೇಡಿಕೆ ಕಂಡು ಬಂದಿತ್ತು.‘ಮುಂಬರುವ ದಿನಗಳಲ್ಲಿ  ಬೆಲೆಯು ಯಾವ ಮಟ್ಟದಲ್ಲಿ ಇರಲಿದೆ ಎನ್ನುವುದರ ಆಧಾರದ ಮೇಲೆ ಬೇಡಿಕೆ ಪ್ರಮಾಣ ನಿರ್ಧಾರವಾಗಬಹುದು. ಉತ್ತಮ ಮುಂಗಾರು ಚಿನ್ನದ ಬೇಡಿಕೆ ಹೆಚ್ಚಿಸಬಹುದು. ಚಿನ್ನಾಭರಣ ವರ್ತಕರು ಮತ್ತು ಗ್ರಾಹಕರು ಹೊಸ ನಿಯಂತ್ರಣ ಕ್ರಮಗಳನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವುದರ ಮೇಲೆಯೂ ಬೇಡಿಕೆ ಪ್ರಮಾಣ ನಿಗದಿಯಾಗಬಹುದು’ ಎಂದು ಸೋಮಸುಂದರಂ ಹೇಳಿದ್ದಾರೆ.ಬೇಡಿಕೆ ಪ್ರಮಾಣ ಕುಸಿದಿದ್ದರಿಂದ ಭಾರತದ ಚಿನ್ನದ ಆಮದು ಪ್ರಮಾಣವು ಮೊದಲ 6 ತಿಂಗಳಲ್ಲಿ 291 ಟನ್‌ಗಳಿಗೆ ಕುಸಿದಿದೆ.  ವರ್ಷದ ಹಿಂದೆ ಇದು 470 ಟನ್‌ಗಳಷ್ಟಿತ್ತು.ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ  ಚಿನ್ನದ ಆಮದು ಪ್ರಮಾಣವು 530 ಟನ್‌ಗಳ ಆಸುಪಾಸಿನಲ್ಲಿ ಇರಬಹುದು ಎಂದೂ ‘ಡಬ್ಲ್ಯುಜಿಸಿ’ ಅಂದಾಜಿಸಿದೆ. ಚಿನ್ನದ ಆಮದು ಪ್ರಮಾಣವು ಜುಲೈನಲ್ಲಿ ₹ 20,100 ಕೋಟಿಗಳಿಂದ ₹6,700 ಕೋಟಿಗಳಿಗೆ ಅಂದರೆ ಶೇ 64ರಷ್ಟು ಇಳಿಕೆಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.