ಬುಧವಾರ, ಮೇ 12, 2021
20 °C

ಚಿನ್ನದ ವ್ಯಾಪಾರಿಯ ದರೋಡೆಗೆ ಸಂಚು:ನಾಲ್ವರ ಬಂಧನ, ಮಾರಕಾಸ್ತ್ರ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಚಿನ್ನದ ವ್ಯಾಪಾರಿಯೊಬ್ಬರ ದರೋಡೆಗೆ ಸಂಚು ರೂಪಿಸಿದ್ದ ನಾಲ್ಕು ಜನರನ್ನು ಬಂಧಿಸಿರುವ ಜಯನಗರ ಠಾಣೆ ಪೊಲೀಸರು, ಆರೋಪಿಗಳಿಂದ ಒಂದು ಕಾರು ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.ಜೆ.ಪಿ ನಗರ ನಿವಾಸಿ ತಬರೇಜ್‌ಖಾನ್ (26), ಜಯನಗರದ ಮೊಹಮ್ಮದ್ ಮೆಹತಾಬ್ (24), ಎಚ್‌ಬಿಆರ್ ಲೇಔಟ್ ನಿವಾಸಿ ಮಹಮ್ಮದ್ ಶಾದಾಬ್ (20) ಹಾಗೂ ಶಿವಾಜಿನಗರದ ಇಮ್ರೋನ್‌ಬೇಗ್ (26) ಬಂಧಿತ ಆರೋಪಿಗಳು.ಪ್ರಕರಣದ ಮತ್ತೊಬ್ಬ ಆರೋಪಿ ಟ್ಯಾನರಿ ರಸ್ತೆಯ ನಿವಾಸಿ ಬಾಬು ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿಗಳು ಮಾ. 31 ರಂದು ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಜಯನಗರ ಎಂಟನೇ ಹಂತದ ರಾಜಲಕ್ಷ್ಮಿ ಕಲ್ಯಾಣ ಮಂಟಪದ ಬಳಿ ಚಿನ್ನದ ವ್ಯಾಪಾರಿಯೊಬ್ಬರನ್ನು ಅಡ್ಡಗಟ್ಟಿ ಅವರ ಬಳಿ ಇರುವ ಚಿನ್ನದ ಆಭರಣ ಹಾಗೂ ನಗದನ್ನು ದರೋಡೆ ಮಾಡಲು ಸಂಚು ರೂಪಿಸಿದ್ದರು. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.ಕೊಲೆ ರಹಸ್ಯ ಬಯಲು : ಬಂಧಿತ ಆರೋಪಿಗಳ ವಿಚಾರಣೆ ವೇಳೆ ಕೊಲೆ ರಹಸ್ಯವೊಂದು ಬಯಲಾಗಿದೆ. ತಿಲಕನಗರದ ಅಪಾರ್ಟ್‌ಮೆಂಟ್ ಒಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಜಾನಕಿದಾಸ್ ಎಂಬುವರನ್ನು ಕೊಲೆ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.ಆರೋಪಿಗಳು ಜಾನಕಿದಾಸ್ ಅವರ ಸಹಾಯದಿಂದ ಒಂದು ಕಾರನ್ನು ಕದ್ದು, ಅದರ ಬಣ್ಣ ಹಾಗೂ ನಂಬರ್ ಪ್ಲೇಟ್ ಬದಲಾಯಿಸಿ ಕಾರನ್ನು ಬಳಸುತ್ತಿದ್ದರು. ಅಪಾರ್ಟ್‌ಮೆಂಟ್‌ನಿಂದ ಕಾರು ಕಳುವು ಮಾಡಲು ಸಹಕರಿಸಿದ್ದಕ್ಕಾಗಿ ಜಾನಕಿದಾಸ್ ಆರೋಪಿಗಳ ಬಳಿ ಹಣ ಕೇಳಿದ್ದ.ಹಣ ನೀಡುವುದಾಗಿ ಜಾನಕಿದಾಸ್ ಅವರನ್ನು ಮಾ.7 ರಂದು ಕಾರಿನಲ್ಲಿ ಕರೆದುಕೊಂಡು ಹೋಗಿರುವ ಆರೋಪಿಗಳು ಅವರ ಕುತ್ತಿಗೆಗೆ ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದರು. ನಂತರ ಶವವನ್ನು ಬಿಡದಿಯ ಬಳಿ ಎಸೆದು ಹೋಗಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ.ಆರೋಪಿಗಳ ವಿರುದ್ಧ ಅಶೋಕ್‌ನಗರ, ಕೆ.ಜಿ.ಹಳ್ಳಿ ಹಾಗೂ ರಾಮನಗರ ಪೊಲೀಸ್ ಠಾಣೆಗಳಲ್ಲಿ ಕೊಲೆ, ವಾಹನ ಕಳವು ಮತ್ತಿತರ ಪ್ರಕರಣಗಳು ದಾಖಲಾಗಿವೆ.ದಕ್ಷಿಣ ವಿಭಾಗದ ಡಿಸಿಪಿ ಸೋನಿಯಾ ನಾರಂಗ್ ಹಾಗೂ ಜಯನಗರ ಉಪ ವಿಭಾಗದ ಎಸಿಪಿ ಜಿ.ಬಿ.ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಎಸ್.ಕೆ.ಉಮೇಶ್ ಮತ್ತು ಪೊಲೀಸ್ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.