ಭಾನುವಾರ, ಮೇ 22, 2022
21 °C

ಚಿನ್ನದ ಸಂಸ್ಕೃತಿ

ಕೆ.ಎಂ.ಸತೀಶ್ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

ಚಿನ್ನದ ಸಂಸ್ಕೃತಿ

`ನಾನು ಕಲಾ ಪ್ರದರ್ಶನದ ಸಲುವಾಗಿ ಹಲವು ದೇಶಗಳನ್ನು ಸುತ್ತುತ್ತೇನೆ.ಹೋದಲ್ಲೆಲ್ಲಾ ಅಲ್ಲಿನ ಸಾಂಪ್ರದಾಯಿಕ ಆಭರಣಗಳನ್ನು ಸಹ ನೋಡುತ್ತೇನೆ. ಎಲ್ಲೆಡೆ ಆಭರಣಪ್ರಿಯರು ಇದ್ದಾರೆ. ಚಿನ್ನವನ್ನೂ ಧರಿಸುತ್ತಾರೆ.ಆದರೆ, ನಮ್ಮ ಭಾರತೀಯ ಹೆಣ್ಣು ಮಕ್ಕಳ ಚರ್ಮದ ಕಾಂತಿಯೇ ವಿಶಿಷ್ಟವಾದುದು. ಭಾರತೀಯರಿಗೆ ಚಿನ್ನ ಹೊಂದುವಂತೆ ಬೇರೆ ಯಾರಿಗೂ ಹೊಂದುವುದಿಲ್ಲ~ ಎನ್ನುತ್ತಾರೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಛಾಪು ಮೂಡಿಸಿರುವ ಕನ್ನಡತಿ ಲಕ್ಷ್ಮಿ ಗೋಪಾಲಸ್ವಾಮಿ.ಅಂದ ಹಾಗೆ ಇವರು ಜ್ಯುವೆಲ್ಸ್ ಆಫ್ ಇಂಡಿಯಾ ಬ್ರಾಂಡ್ ರಾಯಭಾರಿ. ಜ್ಯುವೆಲ್ಸ್ ಆಫ್ ಇಂಡಿಯಾ ಅ.15ರಿಂದ 17ರ ವರೆಗೆ ಅರಮನೆ ಆವರಣದಲ್ಲಿ ದೇಶದ ಅತಿದೊಡ್ಡ ಆಭರಣ ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಿದೆ.ಇದರ ರಾಯಭಾರಿಯಾಗಿರುವ ಮುದ್ದು ಮೊಗದ ಸಹಜ ಚೆಲುವೆ ಲಕ್ಷ್ಮಿ ಗೋಪಾಲಸ್ವಾಮಿ ಚಿನ್ನ ಕುರಿತಂತೆ ಮೆಟ್ರೊ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು ಹೀಗೆ.`ಪ್ರತಿವರ್ಷ ಜ್ಯುವೆಲ್ಸ್ ಆಫ್ ಇಂಡಿಯಾ ಆಭರಣ ಪ್ರದರ್ಶನ ಏರ್ಪಡಿಸುತ್ತಾ ಬರುತ್ತಿದೆ. ಇವರ ಪರಿಕಲ್ಪನೆ ತುಂಬಾ ಇಷ್ಟವಾಗಿದ್ದರಿಂದ ನಾನು ತಕ್ಷಣ ಒಪ್ಪಿಕೊಂಡೆ~.`ಭಾರತೀಯ ಪರಂಪರೆಯಲ್ಲಿ ಆಭರಣಗಳಿಗೆ ಒಂದು ವಿಶೇಷ ಸ್ಥಾನವಿದೆ. ಚಿನ್ನವನ್ನು ಲಕ್ಷ್ಮಿ ಎಂದು ಪೂಜಿಸುವ ಮನೋಭಾವ ಇಂದಿಗೂ ನಮ್ಮಲ್ಲಿದೆ.ನಮ್ಮಲ್ಲಿ ಆಭರಣವನ್ನು ಅಲಂಕಾರಕ್ಕಷ್ಟೆ ಬಳಸುವುದಿಲ್ಲ. ಮನೆಯಲ್ಲಿ ಚಿನ್ನವಿದ್ದರೆ ಕಷ್ಟ ಕಾಲದಲ್ಲಿ ನೆರವಾಗುತ್ತದೆ ಎಂಬ ಮುಂದಾಲೋಚನೆಯಿಂದಲೂ ಮಹಿಳೆಯರು ಚಿನ್ನ ಖರೀದಿ ಮಾಡುತ್ತಾರೆ.ವ್ಯಕ್ತಿಯ ಜೀವನದಲ್ಲಿ ಆಪದ್ಬಾಂಧವನಂತೆ ಕಾರ್ಯನಿರ್ವಹಿಸುವ ಚಿನ್ನದ ರಾಯಭಾರಿಯಾಗಿರುವುದು ನನಗೆ ನಿಜಕ್ಕೂ ಖುಷಿ ಅನಿಸುತ್ತಿದೆ~.`ನಾನಾ ದೇಶದ ಆಕರ್ಷಕ ಕುಸುರಿಯುಳ್ಳ ಚಿನ್ನದ ಆಭರಣಗಳು ನನ್ನ ಸಂಗ್ರಹದಲ್ಲಿವೆ. ಅರಬ್‌ನ ಸಾಂಪ್ರದಾಯಿಕ ಆಭರಣಗಳು ನನಗೆ ಅಚ್ಚುಮೆಚ್ಚು. ಚಿನ್ನ ಧರಿಸುವುದು ನಮ್ಮ ಸಂಸ್ಕೃತಿಯ ಪ್ರತೀಕ.ಸಂಸ್ಕೃತಿ ಎಂದರೇ ಹಿರಿಯರ ರೂಢಿ-ಸಂಪ್ರದಾಯಗಳನ್ನು ಕಿರಿಯರು ಮುಂದುವರಿಸಿಕೊಂಡು ಬರುವುದು.ಅವರ ರೀತಿ-ನೀತಿಗಳು ನಮ್ಮ ನಡವಳಿಕೆಯಲ್ಲೂ ಬಿಂಬಿಸುತ್ತವೆ. ಹಿರಿಯರು ಹಾಕುತ್ತಿದ್ದ ಆಕರ್ಷಕ ಶೈಲಿಯ, ವಿಭಿನ್ನ ಕುಸುರಿಯುಳ್ಳ ಚಿನ್ನ ಕಾಲಾಂತರದಲ್ಲಿ ಕಿರಿಯರಿಗೆ ದೊರೆಯುತ್ತವೆ. ಹೀಗಾಗಿ ಚಿನ್ನದ ಮೂಲಕ ನಮ್ಮ ಚಿನ್ನದಂತಹ ನೆನಪುಗಳು ಮರುಕಳಿಸುತ್ತವೆ~. `ಈ ಆಭರಣ ಮೇಳದಲ್ಲಿ ಆಕರ್ಷಕ ಶ್ರೇಣಿಯ ಆಭರಣಗಳು, ಬ್ರ್ಯಾಂಡ್‌ಗಳನ್ನು ನೋಡಬಹುದು.ಜೈಪುರದ ಶಾಸ್ತ್ರೀಯ ಕುಂದನ್ ಮತ್ತು ಮೀನಾಕಾರಿ ಆಭರಣಗಳು, ತಮಿಳುನಾಡಿನ ಸಾರ್ವಕಾಲಿಕ ದೇವಾಲಯ ಮತ್ತು ಹಳೆಯ ಕಾಲದ ಆಭರಣಗಳು, ರಾಜಸ್ತಾನದ ಅತ್ಯಾಕರ್ಷಕ ಥೇವಾ, ಮುಂಬಯಿಯ ನವೀನ ಶೈಲಿಯ ಆಭರಣಗಳು ಹಾಗೂ ಬ್ರ್ಯಾಂಡೆಡ್ ವಜ್ರಾಭರಣಗಳು, ಕೈಕುಸುರಿಯಿಂದ ತಯಾರಾದ ಚಿನ್ನಾಭರಣ, ಬುಡಕಟ್ಟು ಸಂಸ್ಕೃತಿಯ ಆಭರಣ ವಿನ್ಯಾಸಗಳು, ಬರ್ಮಾದ ಅಪ್ಪಟ ರೂಬಿ,ವಧುವಿಗಾಗಿ ಅತ್ಯುತ್ತಮ ಆಭರಣ ಸಂಗ್ರಹ, ಬಳೆಗಳು, ಮಿಶ್ರ ವಿನ್ಯಾಸದ ಆಭರಣಗಳು ಮಹಿಳೆಯರ ಮನಸ್ಸು ಕದಿಯುವುದರಲ್ಲಿ ಸಂದೇಹವಿಲ್ಲ~.  ಲಕ್ಷ್ಮಿ ಅವರಿಗೆ ಚಿನ್ನ ಕೇವಲ ಆಭರಣವಷ್ಟೇ ಅಲ್ಲ.ಸಂಸ್ಕೃತಿಯ ಲಾಂಛನ. ಚಿನ್ನವೆಂದರೇ ಕಲೆ ಎಂಬುದು ಅವರ ಅಂಬೋಣ! ನಮ್ಮ ಸಂಸ್ಕೃತಿಯ ಶ್ರೇಷ್ಠ ಕಲೆ ಎಲ್ಲವೂ ಚಿನ್ನದ ಮೇಲೆ ಅನನ್ಯವಾಗಿ ಮೈದಳೆದಿದೆ.ಚಿನ್ನ ಹೆಣ್ಣಿನ ಭಾವನೆಗಳನ್ನು ಜೀವಂತವಾಗಿರಿಸುವ ನೆನಪುಗಳ ರಾಯಭಾರಿ. `ನಾನು ಕಲಾವಿದೆಯಾಗಿ ಚಿನ್ನವನ್ನು ಸಹ ಒಂದು ಕಲೆ ಎಂದು ಭಾವಿಸುತ್ತೇನೆ. ಚಿನ್ನ ಖರೀದಿಸಲು ಈಗ ಕಾರಣ ಬೇಕಿಲ್ಲ. ಹಾಗಾಗಿ ಮಹಿಳೆಯರೇ ಮನಸ್ಸಿಗೆ ಒಪ್ಪುವ ಚಿನ್ನ ಖರೀದಿ ಮಾಡಿ~ ಎನ್ನುತ್ತಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.