ಗುರುವಾರ , ಮೇ 13, 2021
24 °C

ಚಿನ್ನದ ಸಾಲ: ಸಂಸ್ಥೆಗಳಿಗೆ ಹೈಕೋರ್ಟ್ ಬಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಿನ್ನಾಭರಣಗಳನ್ನು ಅಡ ಇಟ್ಟುಕೊಂಡು ಗ್ರಾಹಕರಿಂದ ನಿಯಮ ಬಾಹಿರವಾಗಿ ಹೆಚ್ಚು ಬಡ್ಡಿ ಹಣ ವಸೂಲಿ ಮಾಡುತ್ತಿರುವ ಎಲ್ಲ ಖಾಸಗಿ ಹಣಕಾಸು ಸಂಸ್ಥೆಗಳಿಗೆ ಹೈಕೋರ್ಟ್ `ಬಿಸಿ~ ಮುಟ್ಟಿಸಿದೆ.`ನಿಯಮ ಪ್ರಕಾರ ಬಡ್ಡಿ ವಸೂಲಿ ಮಾಡದೆ, ಅದಕ್ಕಿಂತ ಹೆಚ್ಚು ವಸೂಲಿ ಮಾಡಿದರೆ ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಕೂಡಲೇ ಕಾರ್ಯಪ್ರವೃತ್ತರಾಗಿ~ ಎಂದು ಸರ್ಕಾರಕ್ಕೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಿರ್ದೇಶಿಸಿದೆ.ಇಲ್ಲಿಯವರೆಗೆ ಸರ್ಕಾರ ಈ ನಿಟ್ಟಿನಲ್ಲಿ ಮೌನ ತಾಳಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಯಾರ ವಿರುದ್ಧ? ಯಾವ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ ಎಂಬ ಬಗ್ಗೆಯೂ ತಮಗೆ ಆರು ವಾರಗಳಲ್ಲಿ ಮಾಹಿತಿ ನೀಡಬೇಕು ಎಂದು ಪೀಠ ಸ್ಪಷ್ಟಪಡಿಸಿದೆ.ಮಣಪ್ಪುರಂ, ಮುತ್ತೂಟ್ ಸೇರಿದಂತೆ ಇತರ ಖಾಸಗಿ ಸಂಸ್ಥೆಗಳ ವಿರುದ್ಧ ಡಿ.ಎಂ.ಸುರೇಶ್ ಬಾಬು ಎನ್ನುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸುತ್ತಿದ್ದಾರೆ.

ಮಾಸಿಕ ಶೇ 1ರಷ್ಟು ಬಡ್ಡಿ ಹಣ ಪಡೆದುಕೊಳ್ಳುವುದಾಗಿ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಶೇ 30ರಿಂದ 36ರಷ್ಟು ಬಡ್ಡಿ ಪಡೆದುಕೊಂಡು ಈ ಸಂಸ್ಥೆಗಳು ಜನತೆಗೆ ವಂಚಿಸುತ್ತಿವೆ ಎನ್ನುವುದು ಅರ್ಜಿದಾರರ ಆರೋಪ.ಅರ್ಜಿದಾರರು ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿ ಕಾನೂನಿನ ಅಡಿ ಎಷ್ಟು ಬಡ್ಡಿ ಹಣ ವಸೂಲಿ ಮಾಡಬೇಕು ಎಂಬ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಭದ್ರತಾ ಸಾಲವಾದರೆ ವಾರ್ಷಿಕ ಶೇ 14 ಹಾಗೂ ಭದ್ರತಾರಹಿತ ಸಾಲವಾದರೆ ಶೇ 16ರಷ್ಟು ಹಣ ವಸೂಲಿ ಮಾಡಬೇಕು ಎನ್ನುವುದು ರಾಜ್ಯ ಸರ್ಕಾರ ರೂಪಿಸಿರುವ ನಿಯಮ. ಆದರೆ ಇದಕ್ಕಿಂತ 3ರಿಂದ 4 ಪಟ್ಟು ಹೆಚ್ಚಿಗೆ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.ಕೋರ್ಟ್ ಅಸಮಾಧಾನ: ಈ ಅರ್ಜಿಯು ವಿಚಾರಣೆಗೆ ಬಂದಾಗ, `ತಪ್ಪಿತಸ್ಥರ ವಿರುದ್ಧ ಏನು ಕ್ರಮ ತೆಗೆದುಕೊಂಡಿದ್ದೀರಿ~ ಎಂದು ಸರ್ಕಾರದ ಪರ ವಕೀಲರನ್ನು ಉದ್ದೇಶಿಸಿ ನ್ಯಾಯಮೂರ್ತಿಗಳು ಪ್ರಶ್ನಿಸಿದರು. ಅದಕ್ಕೆ ವಕೀಲರು, ಮುತ್ತೂಟ್ ಹಾಗೂ ಮಣಪ್ಪುರಂ ಸಂಸ್ಥೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು. ಆದರೆ ತಪ್ಪಿತಸ್ಥರ ವಿರುದ್ಧ ಈವರೆಗೆ ಗಂಭೀರವಾಗಿ ಯಾವುದೇ ಕ್ರಮ ತೆಗೆದುಕೊಳ್ಳದ ಬಗ್ಗೆ ನ್ಯಾಯಮೂರ್ತಿಗಳು ತೀವ್ರ ವಿಷಾದ ವ್ಯಕ್ತಪಡಿಸಿದರು.`ಸರ್ಕಾರ ಇಲ್ಲಿಯವರೆಗೆ ತೆಗೆದುಕೊಂಡಿರುವ ಕ್ರಮಗಳು ಸರಿ ಇಲ್ಲ. ಕೂಡಲೇ ಕಾರ್ಯ ಪ್ರವೃತ್ತರಾಗಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು~ ಎಂದು ತಿಳಿಸಿದರು. ವಿಚಾರಣೆಯನ್ನು ಜೂನ್ ತಿಂಗಳಿಗೆ ಮುಂದೂಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.