ಚಿನ್ನಪಡೆದು ಜಿಲ್ಲೆಗೆ ಗೌರವ ತಂದರು...

7

ಚಿನ್ನಪಡೆದು ಜಿಲ್ಲೆಗೆ ಗೌರವ ತಂದರು...

Published:
Updated:

ರಾಮನಗರ: ‘ಬಡತನ ಹಾಗೂ ಆರ್ಥಿಕ ಸಮಸ್ಯೆಗಳಿಂದ ಪ್ರತಿಭೆಯನ್ನು ಬಚ್ಚಿಡಲು ಸಾಧ್ಯವಿಲ್ಲ.ಎಲ್ಲ ಬಗೆಯ ಸಮಸ್ಯೆಗಳನ್ನು ಜಯಿಸಿ ಮುಖದಲ್ಲಿ ನಗುವನ್ನು ತರಿಸುವಂತೆ ಈ ಪ್ರತಿಭೆ ಮಾಡುತ್ತದೆ’ ಎಂದು ರಾಮನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಎಲ್.ಸಿ.ರಾಜು ಅಭಿಪ್ರಾಯಪಟ್ಟರು.ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿಗಳಲ್ಲಿ ರ್ಯಾಂಕ್ ಹಾಗೂ ಚಿನ್ನದ ಪದಕಗಳನ್ನು ಪಡೆದ ರಾಮನಗರ ಜಿಲ್ಲೆಯ ವಿದ್ಯಾರ್ಥಿಗಳನ್ನು ಅಭಿನಂದಿಸುವ ಸಲುವಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕ ನಗರದ ಸ್ಫೂರ್ತಿ ಭವನದ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬಡತನ ಹಾಗೂ ಮತ್ತಿತರ ಸಮಸ್ಯೆಗಳಿದ್ದರೂ ಎಂ.ಎ ಪದವಿಯಲ್ಲಿ ರ್ಯಾಂಕ್ ಹಾಗೂ ಚಿನ್ನದ ಪದಕಗಳನ್ನು ಪಡೆಯುವ ಮೂಲಕ ಈ ವಿದ್ಯಾರ್ಥಿಗಳು ಇಡೀ ಜಿಲ್ಲೆಗೆ ಗೌರವ ಮತ್ತು ಪ್ರತಿಷ್ಠೆ ತರುವಂತಹ ಕೆಲಸವನ್ನು ಮಾಡಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ಪ್ರತಿಭೆ ಯಾರಲ್ಲಿ,ಹೇಗೆ ಇದ್ದರೂ ಅದಕ್ಕೆ ಸರಿಯಾದ ಮನ್ನಣೆ ಸಿಗುತ್ತದೆ ಎಂಬುದಕ್ಕೆ ಈ ವಿದ್ಯಾರ್ಥಿಗಳೇ ಸಾಕ್ಷಿ ಎಂದು ಅವರು ತಿಳಿಸಿದರು.ವಿದ್ಯಾರ್ಥಿಯಾದವರು ಗುರುಗಳ ಸ್ಥಾನಮಾನವನ್ನು ಮೀರಿ ನಿಲ್ಲಬೇಕು ಎಂಬುದು ನಮ್ಮೆಲ್ಲರ ಆಶಯ.ಅದೇ ನಿಜವಾದ ಗುರುದಕ್ಷಿಣೆಯಾಗುತ್ತದೆ.ಜಿಲ್ಲೆಯ ಈ ಮೂವರು ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಗುರುದಕ್ಷಿಣೆ ನೀಡಿದ್ದಾರೆ.ಇದನ್ನು ಸ್ಫೂರ್ತಿ ಹಾಗೂ ಪ್ರೇರಣೆಯಾಗಿ ತೆಗೆದುಕೊಂಡು ಜಿಲ್ಲೆಯ ಇತರ ವಿದ್ಯಾರ್ಥಿ ಸಮೂಹ ಈ ನಿಟ್ಟಿನಲ್ಲಿ ವ್ಯಾಸಂಗ ಮುಂದುವರೆಸುವಂತೆ ಅವರು ಕರೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಮುಖಂಡ ಮರಿದೇವರು ಮಾತನಾಡಿ, ಕನ್ನಡ ಪರ ಹೋರಾಟ ಮತ್ತು ಸಂಘರ್ಷದ ಮೂಲಕ ಹೆಸರಿನಲ್ಲಿರುವ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ, ಅಭಿನಂದಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.ಈ ವಿದ್ಯಾರ್ಥಿಗಳ ರೀತಿಯಲ್ಲಿ ಪ್ರಶಸ್ತಿ ಪಡೆಯುವ ನಿಟ್ಟಿನಲ್ಲಿ ಇತರ ವಿದ್ಯಾರ್ಥಿಗಳು ಅಧ್ಯಯಿಸಬೇಕು.ಪದಕ ಪಡೆಯಲು ಆಗದಿದ್ದರೂ ಕಡೇ ಪಕ್ಷ ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನಾದರೂ ಮಾಡಬೇಕು ಎಂದು ಕಿವಿಮಾತು ಹೇಳಿದರು.‘ವ್ಯಾಸಂಗಕ್ಕೆ ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ವಿದ್ಯಾರ್ಥಿಗಳಿಗೆ ಅಗತ್ಯ ಹಣಕಾಸು ಸೌಲಭ್ಯ ಕಲ್ಪಿಸಲು ನಾನು ಸದಾ ಸಿದ್ಧನಿರುತ್ತೇನೆ. ಅವಶ್ಯಕತೆ ಇರುವವರು ಬಳಸಿಕೊಳ್ಳಬಹುದು’ ಎಂದು ತಿಳಿಸಿದರು.ಪ್ರತಿಭಾ ಪುರಸ್ಕಾರ: ಕನ್ನಡ ವಿಷಯದ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ್ಯಾಂಕ್ ಹಾಗೂ ಏಳು ಚಿನ್ನದ ಪದಕಗಳನ್ನು ಪಡೆದುಕೊಂಡಿರುವ ಚನ್ನಪಟ್ಟಣದ ಸಿ.ಜಿ.ಲಕ್ಷ್ಮಿ,ಇದೇ ವಿಷಯದಲ್ಲಿ ಎರಡು ಚಿನ್ನದ ಪದಕ ಪಡೆದಿರುವ ಕುಂಬಾಪುರದ ಕೆಂಗಲ್ ಮೂರ್ತಿ ಹಾಗೂ ಇತಿಹಾಸ ಎಂ.ಎ ಪದವಿಯಲ್ಲಿ ಐದನೇ ರ್ಯಾಂಕ್ ಪಡೆದುಕೊಂಡಿರುವ ಬಿಡದಿ ಬಳಿಯ ಹಲಸಿನಮರ ದೊಡ್ಡಿ ಗ್ರಾಮದ ಗಿರಿಜಮ್ಮ ಅವರನ್ನು ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು.ಪುರಸ್ಕಾರ ಸ್ವೀಕರಿಸಿದ ಸಿ.ಜಿ.ಲಕ್ಷ್ಮಿ ಮಾತನಾಡಿ, ‘ಮಾತೃ ಭಾಷೆಯನ್ನು ಯಾವುದೇ ಕಾರಣಕ್ಕೂ ನಾವು ಕಡೆಗಣಿಸಬಾರದು. ನಮ್ಮ ಭಾಷೆಯನ್ನು ಮೊದಲು ನಾವು ಪ್ರೀತಿಸುವುದನ್ನು ಮತ್ತು ಗೌರವಿಸುವುದನ್ನು ಕಲಿಯಬೇಕು. ಆ ನಂತರ ಅದನ್ನು ಬೇರೆಯವರಿಂದ ಅಪೇಕ್ಷಿಸುವುದು ಒಳಿತು ಎಂದು ಹೇಳಿದರು.ಕರವೇ ಜಿಲ್ಲಾಧ್ಯಕ್ಷ ಬಿ.ಶ್ರೀಧರ್ ಹೊಸೂರು ಅವರು ಸ್ವಾಗತಿಸಿದರು. ಅರ್ಥಶಾಸ್ತ್ರದ ಉಪನ್ಯಾಸಕ ಜಿ.ಶಿವಣ್ಣ ನಿರೂಪಿಸಿದರು.ಪತ್ರಕರ್ತ ಶಾಂತಕುಮಾರ್ ಪ್ರಾರ್ಥಿಸಿದರು. ರಾಮನಗರ ತಾಲ್ಲೂಕು ಕರವೇ ಅಧ್ಯಕ್ಷ ಟಿ.ಆರ್.ದೇವರಾಜ್, ಕನಕಪುರದ ಅಧ್ಯಕ್ಷ ಕಬ್ಬಾಳೇಗೌಡ, ಚನ್ನಪಟ್ಟಣ ಅಧ್ಯಕ್ಷ ಸಾಗರ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವಿಜಯಮ್ಮ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry