ಚಿನ್ನಾಪ್ರಯೋಗಶಾಲೆಯ ಕೊಂಕಣಿ

7

ಚಿನ್ನಾಪ್ರಯೋಗಶಾಲೆಯ ಕೊಂಕಣಿ

Published:
Updated:
ಚಿನ್ನಾಪ್ರಯೋಗಶಾಲೆಯ ಕೊಂಕಣಿ

ಕನ್ನಡ, ಕೊಂಕಣಿ, ತುಳು, ಇಂಗ್ಲೀಷ್, ಮಲೆಯಾಳಂ- ಹೀಗೆ ಐದು ಭಾಷೆಗಳ ರಂಗಭೂಮಿಯಲ್ಲಿ ಕಲಾವಿದರಾಗಿ, ನಿರ್ದೇಶಕರಾಗಿ ತೊಡಗಿಕೊಂಡಿರುವುದು ಕಾಸರಗೋಡು ಚಿನ್ನಾ ಅವರ ವಿಶೇಷ. ಶ್ರೀನಿವಾಸ ರಾವ್ ಎನ್ನುವ ಹೆಸರಿನ ಅವರು `ಕಾಸರಗೋಡು ಚಿನ್ನಾ' ಹೆಸರಿನಿಂದಲೇ ಜನಪ್ರಿಯರು. `ಮೂಕಾಭಿನಯ', `ಲಾರಿ ನಾಟಕ', `ಯಕ್ಷ ತೇರು', `ಗೀತ ಸಂಗೀತ ರಥ'- ಚಿನ್ನಾ ಪರಿಕಲ್ಪನೆಯ ಯಶಸ್ವಿ ಪ್ರಯೋಗಗಳು. `ಉಜ್ವಾಡು' ಅವರ ನಿರ್ದೇಶನದ ಕೊಂಕಣಿ ಸಿನಿಮಾ. ಗಡಿ ಭಾಗದ ಕಾಸರಗೋಡಿನವರಾದ ಪ್ರಸ್ತುತ `ಕೊಂಕಣಿ ಸಾಹಿತ್ಯ ಅಕಾಡೆಮಿ' ಅಧ್ಯಕ್ಷರಾಗಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಅವರೊಂದಿಗಿನ ಕಿರು ಮಾತುಕತೆ ಇಲ್ಲಿದೆ.

ಸಂದರ್ಶನ

ಕೊಂಕಣಿಗರನ್ನು ತಲುಪಲು ಕೊಂಕಣಿ ಸಾಹಿತ್ಯ ಅಕಾಡೆಮಿ ಯಾವ ರೀತಿಯಲ್ಲಿ ಪ್ರಯತ್ನಿಸುತ್ತಿದೆ?

ಅಕಾಡೆಮಿಯನ್ನು ಒಂದು ಪ್ರಯೋಗಶಾಲೆ ಆಗಿಸಿಕೊಂಡು ಅನೇಕ ಹೊಸ ಪರಿಕಲ್ಪನೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. `ಮನೆ ಮನೆಯಲ್ಲಿ ಕೊಂಕಣಿ' ( ಘರ್ ಘರಾಂತು ಕೊಂಕಣಿ) ಕಾರ್ಯಕ್ರಮಗಳ ಮೂಲಕ ರಾಜ್ಯದಲ್ಲಿ ಸುಮಾರು 400 ಮನೆಗಳ ಮೂಲಕ ಕೊಂಕಣಿ ಭಾಷೆಯನ್ನಾಡುವ 41ಕ್ಕೂ ಹೆಚ್ಚು ಪಂಗಡಗಳನ್ನು, ಸುಮಾರು 10 ಸಾವಿರ ಕೊಂಕಣಿಗರನ್ನು ತಲಪುವ ಕೆಲಸ ನಡೆದಿದೆ. ಕರ್ನಾಟಕ, ಕೊಂಕಣಿ ಭಾಷೆಯ ಒಂದು ಮಿನಿ ಭಾರತವಿದ್ದಂತೆ.ಕೊಂಕಣಿ ಭಾಷೆಯನ್ನಾಡುವ ಕೊನೆಯ ವ್ಯಕ್ತಿಯನ್ನೂ ತಲುಪುವ ಪ್ರಯತ್ನ ನಮ್ಮದು. ಮೇಸ್ತ, ದೇಶಭಂಡಾರಿ, ವೈಶ್ಯ, ವಾಣಿ, ಸಿದ್ದಿ,  ಕೋಮಾರ, ಕುಡಬಿ, ಕುಂಬಾರ, ಖಾರ್ವಿ ಸೇರಿದಂತೆ ಕೊಂಕಣಿ ಮಾತನಾಡುವ ಅನೇಕ ಹಿಂದುಳಿದ ವರ್ಗದವರನ್ನು ಮುಖ್ಯವಾಹಿನಿಗೆ ತರುವುದು ಅಕಾಡೆಮಿಯ ಕಾರ್ಯಕ್ರಮಗಳಲ್ಲೊಂದು. ಕೊಂಕಣಿ ಭಾಷೆಯ ಬಗ್ಗೆ ಸಂಶೋಧನೆ ನಡೆಸಲು ಆಕಾಡೆಮಿ ಪ್ರತೀ ವರ್ಷ ಐದು ಜನರಿಗೆ ತಲಾ 1 ಲಕ್ಷ ರೂ. ಶಿಷ್ಯವೇತನ ನೀಡುವ ಹೊಸ ಕಾರ್ಯಕ್ರಮ ಆರಂಭಿಸಿದೆ.

ಕೊಂಕಣಿ ರಂಗಭೂಮಿಯ ಈವರೆಗಿನ ಬೆಳವಣಿಗೆ ಹೇಗಿದೆ?

ಹಳೆಯ ಸಂಪ್ರದಾಯ ಬಿಟ್ಟು ಹೊರ ಬರಲು ಇನ್ನೂ ಮನಸು ಮಾಡದ ಕೊಂಕಣಿ ಭಾಷಿಕರು 25 ವರ್ಷಗಳಷ್ಟು ಹಿಂದೆಯೇ ಇದ್ದಾರೆ. ಕೆಲ ಸಾಂಪ್ರದಾಯಿಕ ನಾಟಕಗಳು, ಎನ್.ಬಿ. ಕಾಮತ್ ಅವರ ಹಾಸ್ಯ ನಾಟಕ ಪ್ರಯೋಗಗಳನ್ನು ಬಿಟ್ಟರೆ ಗಟ್ಟಿಯಾದ ನಾಟಕ ಕೊಂಕಣಿ ಭಾಷೆಯಲ್ಲಿ ಇನ್ನೂ ಬಂದಿಲ್ಲ. ಈ ಕೊರತೆ ತುಂಬಲು ಆಕಾಡೆಮಿ ಈಗ ಶಾಲಾ ಮಟ್ಟದಲ್ಲಿ `ರಂಗ ಸಂಸ್ಕೃತಿ' ಎಂಬ ಶಿಬಿರದಿಂದ ಕೆಲಸ ಆರಂಭಿಸಿದೆ. 13 ಜಿಲ್ಲಾ ಕೇಂದ್ರಗಳಲ್ಲಿ ನಾಟಕೋತ್ಸವ, ರಂಗ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಕನ್ನಡ, ಮರಾಠಿಯ ಅತ್ಯುತ್ತಮ ನಾಟಕಗಳು ಕೊಂಕಣಿಗೆ ಭಾಷಾಂತರ ಆಗಬೇಕು. ಕೊಂಕಣಿ ಭಾಷಿಕರೇ ಹೆಚ್ಚಾಗಿರುವ ಕುಮಟಾ, ಉಪ್ಪುಂದ ಮುಂತಾದೆಡೆ ಹೆಚ್ಚೆಚ್ಚು ಕೆಲಸ ಮಾಡುವ ಯೋಜನೆ ಇದೆ.

ಸಿನಿಮಾ ಕ್ಷೇತ್ರದಲ್ಲಿ ಕೊಂಕಣಿ ಕುಂಟುತ್ತಿರುವುದು ಯಾಕೆ?

ಉತ್ತಮ ಗುಣಮಟ್ಟದ ಕೊಂಕಣಿ ಚಲನಚಿತ್ರಗಳು ಕರ್ನಾಟಕದಲ್ಲಿ ಬಂದಿರುವುದು ವಿರಳ. ಆದರೆ, ಗೋವಾ-ಮಹಾರಾಷ್ಟ್ರಗಳಲ್ಲಿ ಉತ್ತಮ  ಚಿತ್ರಗಳು ಬಂದಿವೆ. ಕರ್ನಾಟಕದಲ್ಲೂ ಉತ್ತಮ ಕೊಂಕಣಿ ಚಿತ್ರಗಳನ್ನು ರೂಪಿಸುವ ಪ್ರಯತ್ನವನ್ನು ಅಕಾಡೆಮಿ ಬೆಂಬಲಿಸುತ್ತದೆ. ಮಂಗಳೂರಿನಲ್ಲಿ ಅಕಾಡೆಮಿ ವತಿಯಿಂದ ರಾಷ್ಟ್ರಮಟ್ಟದ ಚಲನ ಚಿತ್ರೋತ್ಸವ ನಡೆಸುವ ಪ್ರಯತ್ನ ನಡೆಸಲಾಗುತ್ತಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry