ಚಿನ್ನಾಭರಣಕ್ಕೂ ಬಂತು ಆನ್‌ಲೈನ್ ಮಳಿಗೆ

7

ಚಿನ್ನಾಭರಣಕ್ಕೂ ಬಂತು ಆನ್‌ಲೈನ್ ಮಳಿಗೆ

Published:
Updated:
ಚಿನ್ನಾಭರಣಕ್ಕೂ ಬಂತು ಆನ್‌ಲೈನ್ ಮಳಿಗೆ

ಚಿನ್ನಾಭರಣ ಪ್ರಿಯ ಪ್ರಮದೆಯರ ಆದ್ಯತೆಗಳು ಆಧುನಿಕ ಜೀವನ ಶೈಲಿಗೆ ಪೂರಕವಾಗಿ ಬದಲಾಗುತ್ತಿವೆ. ಹಗುರ, ಆಕರ್ಷಕ, ಹೆಚ್ಚು ದುಬಾರಿ ಅಲ್ಲದ, ಕಚೇರಿ, ಮತ್ತಿತರ ಕಡೆಗಳಿಗೆ ತೆರಳುವಾಗ ಸುಲಭವಾಗಿ ಧರಿಸಬಹುದಾದ, ಹೊರೆಯಾಗದ ಆದರೆ, ಸುತ್ತಮುತ್ತಲಿನವರ ಗಮನ ಸೆಳೆಯುವಂತಹ ಆಭರಣಗಳ ಬಳಕೆಯತ್ತ ಮಾನಿನಿಯರ ಮನ ಹರಿಯುತ್ತಿದೆ. ಇಂತಹ ಆಭರಣಗಳನ್ನು ಖರೀದಿಸಲು ಪ್ರತಿಷ್ಠಿತ ಚಿನ್ನಾಭರಣ ಮಳಿಗೆಗಳಿಗೆ ತೆರಳಿದರೆ ಬಹುತೇಕ ಸಂದರ್ಭಗಳಲ್ಲಿ ನಿರಾಶೆಯಿಂದ ಮರಳಬೇಕಾಗುತ್ತದೆ. ಮದುವೆ ಮತ್ತಿತರ ಸಮಾರಂಭಗಳಿಗೆ ಧರಿಸುವಂತಹ ತೂಕದ, ದುಬಾರಿ ಆಭರಣಗಳೇ ಅಲ್ಲಿ ಹೆಚ್ಚಾಗಿ ಲಭ್ಯ ಇರುತ್ತವೆ. ಸಾಂಪ್ರದಾಯಿಕ ಆಭರಣಗಳ ಭರಾಟೆಯಲ್ಲಿಯೂ, ಮಹಿಳೆಯ ವ್ಯಕ್ತಿತ್ವಕ್ಕೆ ಹೊಸ ಮೆರುಗು ನೀಡುವ ಪುಟ್ಟ ಆಭರಣಗಳ ಅಗತ್ಯ ಇದ್ದೇ ಇದೆ. ಇಂತಹ ಎರಡು ಬಗೆಯ ಚಿನ್ನಾಭರಣಗಳ ಮಾರುಕಟ್ಟೆಯಲ್ಲಿ ದೊಡ್ಡ ಅಂತರ ಇದೆ. ಈ ಕೊರತೆ ನಿವಾರಿಸಿ ನವ ನವೀನ ಬಗೆಯ ಚಿನ್ನಾಭರಣ ಪ್ರಿಯರ ಅಗತ್ಯಗಳನ್ನು ಪೂರೈಸುವುದು ಸದ್ಯದ ಅಗತ್ಯವಾಗಿದೆ. ಉತ್ಸಾಹಿ ಉದ್ಯಮಿಗಳು ಬೆಂಗಳೂರಿನಲ್ಲಿ ಅಂತಹ ಸಾಧ್ಯತೆ ನಿಜ ಮಾಡಿದ್ದಾರೆ. ಚಿನ್ನಾಭರಣಗಳನ್ನು ಮನೆ, ಕಚೇರಿಯಲ್ಲಿಯೇ ಕುಳಿತು ಕಂಪ್ಯೂಟರ್, ಇಂಟರ್‌ನೆಟ್ ಮೂಲಕ ಖರೀದಿಸಲು ನೆರವಾಗುವ, `ಬ್ಲೂಸ್ಟೋನ್ ಡಾಟ್‌ಕಾಂ~ (www.BlueStone.com) ತಾಣವು ಇಂತಹ ವಹಿವಾಟಿಗೆ ಈಗ ಚಾಲನೆ ನೀಡಿದೆ.ಸಮಕಾಲೀನ ವಿನ್ಯಾಸ, ಕೈಗೆಟುಕುವ ಬೆಲೆ, ವಿಶ್ವಾಸಾರ್ಹ ಆಭರಣಗಳನ್ನು ಮನೆಯಲ್ಲಿ ಕುಳಿತಲ್ಲಿಯೇ ಪಾರದರ್ಶಕ ರೀತಿಯಲ್ಲಿ ಖರೀದಿಸುವ ಅವಕಾಶವನ್ನು ಈ ತಾಣ ನೀಡಲಿದೆ. ವಿದ್ಯಾ ನಟರಾಜ್ ಮತ್ತು ಗೌರವ್ ಕುಶ್ವಾಹ ಅವರು ಇದರ ಸಹ ಸ್ಥಾಪಕರಾಗಿದ್ದಾರೆ.ಮಹಿಳೆಯರಿಗೆ ಚಿನ್ನಾಭರಣಗಳ ಹೊಸ, ಹೊಸ ವಿನ್ಯಾಸಗಳ ವ್ಯಾಪಕ ಆಯ್ಕೆಯ ಆಭರಣಗಳು, ಕಿರಿಕಿರಿ ಇಲ್ಲದೇ ಕುಳಿತಲ್ಲಿಯೇ ಖರೀದಿ, ಮನೆ ಬಾಗಿಲಿಗೆ ಉತ್ಪನ್ನ, ಇಷ್ಟವಾಗದಿದ್ದರೆ 30 ದಿನಗಳಲ್ಲಿ ಮರಳಿಸುವ, ಕ್ರೆಡಿಟ್ ಕಾರ್ಡ್ ಮೂಲಕ ಬಡ್ಡಿ ಇಲ್ಲದೇ ಸಮಾನ ಮಾಸಿಕ ಕಂತುಗಳ ಮೂಲಕವೂ ಹಣ ಪಾವತಿ ಸೌಲಭ್ಯ ಮುಂತಾದವು ಈ ವಹಿವಾಟಿನ ಇತರ ವೈಶಿಷ್ಟ್ಯಗಳಾಗಿವೆ.ದುಡಿಯುವ ಮಹಿಳೆಯರು, ಆನ್‌ಲೈನ್ ಖರೀದಿ ಬಗ್ಗೆ ಒಲವು ಹೊಂದಿದವರು, ಮಹಾನಗರಗಳಲ್ಲಿ ಮಾತ್ರ ಲಭ್ಯ ಇರುವ ಮಳಿಗೆಗಳಿಗೆ ಭೇಟಿ ನೀಡಲು ಸಾಧ್ಯವಿಲ್ಲದ ಇತರ ನಗರ - ಪಟ್ಟಣಗಳ ವನಿತೆಯರೂ ಈ ಆನ್‌ಲೈನ್ ಮಳಿಗೆ ಮೂಲಕ, ತಮಗಿಷ್ಟದ ಆಭರಣ ಖರೀದಿಸಬಹುದು. ತಮ್ಮ ಮುಖದ ಅಂದ ಹೆಚ್ಚಿಸುವ, ವ್ಯಕ್ತಿತ್ವಕ್ಕೆ ಹೊಸ ಮೆರುಗು ನೀಡುವ, ಕೈಗೆಟುಕುವ ಬೆಲೆಯ ವಿಶಾಲ ಶ್ರೇಣಿಯ ಆಭರಣಗಳನ್ನು ಖರೀದಿಸಬಹುದು.ಗರಿಷ್ಠ ಗುಣಮಟ್ಟ, ಕಡಿಮೆ ಬೆಲೆ ಮತ್ತು ವಿಶ್ವಾಸ ಮೂಡಿಸುವ ವಹಿವಾಟು ಮುಂತಾದವು ಈ ತಾಣದ ಇತರ ವೈಶಿಷ್ಟ್ಯಗಳಾಗಿವೆ ಎಂದು ಎಂದು ವಿದ್ಯಾ ಹೇಳುತ್ತಾರೆ.ಫ್ರಾನ್ಸ್‌ನ ಪ್ರತಿಷ್ಠಿತ `ಐಎನ್‌ಎಸ್‌ಇಎಡಿ~ ಬಿಸಿನೆಸ್ ಸ್ಕೂಲ್‌ನ ಎಂಬಿಎ ಪದವೀಧರೆ ವಿದ್ಯಾ ನಟರಾಜ್ ಅವರಿಗೆ ರೀಟೇಲ್ ವಹಿವಾಟಿನ ಹಿನ್ನೆಲೆ ಮತ್ತು ಅನುಭವವೇ ಈ ಹೊಸ ಉದ್ದಿಮೆಯ ಸಾಹಸಕ್ಕೆ ಕೈಹಾಕಲು ಪ್ರೇರಣೆ ನೀಡಿದೆ. ಪುಸ್ತಕಗಳು ಮತ್ತು ಜೀವನಶೈಲಿಯ ಉತ್ಪನ್ನಗಳ ಸರಣಿ ಮಾರಾಟ ಮಳಿಗೆ ಲ್ಯಾಂಡ್‌ಮಾರ್ಕ್ ಲಿಮಿಟೆಡ್ (ಇದು ಈಗ ಟಾಟಾ ಟ್ರೆಂಟ್‌ಗೆ ಮಾರಾಟವಾಗಿದೆ) ಅನ್ನು ನಿರ್ವಹಿಸುತ್ತಿದ್ದ ಕುಟುಂಬದ ಸದಸ್ಯರಾಗಿರುವ ವಿದ್ಯಾ ಅವರಲ್ಲಿ, ಚಿನ್ನಾಭರಣ ವಹಿವಾಟಿನಲ್ಲಿ ಏನನ್ನಾದರೂ ಹೊಸ ಸಾಹಸ ಮಾಡಬೇಕೆಂಬ ತುಡಿತ ಮೊದಲಿನಿಂದಲೂ ಇತ್ತು. ಫ್ರಾನ್ಸ್‌ನಲ್ಲಿ ಕಲಿಯುವಾಗಲೇ ಇಂತಹ ಒಂದು ಕನಸು ಅವರಲ್ಲಿ ಮೊಳಕೆ ಒಡೆದಿತ್ತು.ಬೆಂಗಳೂರಿನ ಪ್ರತಿಷ್ಠಿತ ಚಿನ್ನಾಭರಣ ವಹಿವಾಟಿನ ಸಂಸ್ಥೆ ಸಿ. ಕೃಷ್ಣಯ್ಯ ಚೆಟ್ಟಿ ಆಂಡ್ ಸನ್ಸ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸಿ. ಗಣೇಶ್ ನಾರಾಯಣ ಅವರನ್ನು ವರಿಸಿರುವ ವಿದ್ಯಾ, ಮದುವೆ ನಂತರ ತಮ್ಮ ಕನಸಿಗೆ ಮೂರ್ತ ರೂಪ ಕೊಟ್ಟಿದ್ದಾರೆ.ದೆಹಲಿ `ಐಐಟಿ~ಯ ಕಂಪ್ಯೂಟರ್ ಸೈನ್ಸ್ ಎಂಜಿನಿಯರ್ ಪದವೀಧರ ಮತ್ತು ಚಕ್ಪಕ್ ಡಾಟ್ ಕಾಂ (www.Chakpak.com) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೌರವ್ ಕುಶ್ವಾಹ ಅವರು, ಅಮೆಜಾನ್ ಸಂಸ್ಥೆಯಲ್ಲಿನ ಇ-ಕಾಮರ್ಸ್, ಆನ್‌ಲೈನ್ ಮಾರುಕಟ್ಟೆ ಮತ್ತು ತಂತ್ರಜ್ಞಾನದ ಅನುಭವ ಆಧರಿಸಿ `ಬ್ಲೂಸ್ಟೋನ್‌ಡಾಟ್ ಕಾಂ~ ಸಂಸ್ಥೆಯ ಪರಿಕಲ್ಪನೆ ಸಾಕಾರಗೊಳಿಸಿದ್ದಾರೆ.ಆನ್‌ಲೈನ್‌ನಲ್ಲಿ ಚಿನ್ನಾಭರಣ ಖರೀದಿಸಲು ಹೊಸ ಅನುಭವ ನೀಡುವ ನಿಟ್ಟಿನಲ್ಲಿ ಈ ತಾಣವನ್ನು ಆಕರ್ಷಕವಾಗಿ, ಗರಿಷ್ಠ ಮಟ್ಟದಲ್ಲಿ `ಗ್ರಾಹಕ ಸ್ನೇಹಿ~ಯಾಗಿ ರೂಪಿಸಲಾಗಿದೆ.ಕ್ರಮೇಣ ಆಧುನಿಕತೆ ಮೈಗೂಡಿಸಿಕೊಳ್ಳುತ್ತಿರುವ ದೇಶಿ ಗ್ರಾಹಕರಿಗೆ, ಶ್ರೇಷ್ಠಮಟ್ಟದ ಕುಸುರಿ ಕೆಲಸ, ಗುಣಮಟ್ಟ, ಅಂತರರಾಷ್ಟ್ರೀಯ ವಿನ್ಯಾಸದ ಆಭರಣಗಳನ್ನು ವಿಶ್ವಾಸಾರ್ಹ ತಾಣದಲ್ಲಿ ಖರೀದಿಸುವ ಸದವಕಾಶ ಒದಗಿಸಲಾಗಿದೆ ಎಂದು ವಿದ್ಯಾ ಹೇಳುತ್ತಾರೆ.ಗ್ರಾಹಕರು ಚಿನ್ನಾಭರಣ ಅಂಗಡಿಯಲ್ಲಿ ಆಭರಣಗಳನ್ನು ಹಿಂದೆ ಮುಂದೆ ತಿರುಗಿಸಿ ನೋಡಿ, ಅದರ ಅಂದ ಖಚಿತಪಡಿಸಿಕೊಳ್ಳುವಂತೆ, ಇಲ್ಲಿಯೂ ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ಆಭರಣಗಳನ್ನು ವಿವಿಧ ಆಯಾಮಗಳಲ್ಲಿ ವೀಕ್ಷಿಸುವಂತಹ ಸೌಲಭ್ಯ ಕಲ್ಪಿಸಲಾಗಿದೆ. ಜತೆಗೆ ಆಭರಣಗಳ ಸಕಲ ವಿವರಗಳೆಲ್ಲ ಜತೆಯಲ್ಲಿಯೇ ನೀಡಲಾಗಿರುತ್ತದೆ.ವಿದ್ಯಾ ನಟರಾಜ್ ಅವರ ಜತೆಗಿನ ಸಂದರ್ಶನದ ಆಯ್ದ ಭಾಗಗಳು..

ಈ ತಾಣದ ಗ್ರಾಹಕರು ಯಾರು?

ಉತ್ತಮ ವರಮಾನ ಇರುವ, ವಿಶಿಷ್ಟ ವಿನ್ಯಾಸದ ಆಭರಣಗಳಿಗೆ ಹಣ ವೆಚ್ಚ ಮಾಡುವ ಸಾಮರ್ಥ್ಯ ಇರುವ ಮಹಿಳೆಯರೇ ಈ ತಾಣದ ಗ್ರಾಹಕರು. ಮನಮೆಚ್ಚಿದವರಿಗಾಗಿ, ಹಿತೈಷಿಗಳಿಗೆ ಕಾಣಿಕೆ ನೀಡುವವರೂ ಈ ತಾಣದಿಂದ ಆಕರ್ಷಣ ಆಭರಣಗಳನ್ನು ಖರೀದಿಸಬಹುದು. ಸಣ್ಣ - ಪುಟ್ಟ ನಗರಗಳ ಜನರು, ಮಹಾನಗರಗಳಿಗೆ ಭೇಟಿ ನೀಡಲು ಸಾಧ್ಯವಿಲ್ಲದವರಿಗೂ ಸುಲಭ ಖರೀದಿ ಅವಕಾಶ ಇಲ್ಲಿ ಲಭ್ಯ ಇದೆ.ಆಭರಣಗಳ ಬೆಲೆ ಮಟ್ಟ ಹೇಗಿದೆ?

- ಕನಿಷ್ಠ ರೂ 3000 ದಿಂದ ಗರಿಷ್ಠ ರೂ 2 ಲಕ್ಷದವರೆಗೆ ಇದೆ.ಗ್ರಾಹಕರಿಗೆ ಇತರ ಪ್ರಯೋಜನಗಳೇನು?

- ಈ ವಹಿವಾಟಿನಲ್ಲಿ ವಿಶಾಲ ಮಳಿಗೆಯ ನಿರ್ವಹಣೆ, ಸಿಬ್ಬಂದಿ, ಆಭರಣ ಸಂಗ್ರಹ, ಭದ್ರತೆ ಮತ್ತಿತರ ವೆಚ್ಚಗಳು ಇರುವುದಿಲ್ಲ. ಆ ಉಳಿತಾಯವನ್ನು ಗ್ರಾಹಕರಿಗೆ ವರ್ಗಾಯಿಸಲಾಗುವುದು.ಗ್ರಾಹಕರ ಇಷ್ಟಾನಿಷ್ಟಗಳನ್ನು ಪೂರೈಸಲಾಗುವುದೇ?

ಖಂಡಿತವಾಗಿಯೂ. ಗ್ರಾಹಕರು ತಮಗೆ ಬೇಕಾದ ಹರಳು, ವಿನ್ಯಾಸಗಳ ವಿವರ ನೀಡಿದರೆ ಅದಕ್ಕೆ ತಕ್ಕಂತೆಯೇ ಆಭರಣ ತಯಾರಿಸಿ ನೀಡಲಾಗುವುದು.ಹಣ ಪಾವತಿ ವ್ಯವಸ್ಥೆ ಹೇಗೆ?

- ಕ್ರೆಡಿಟ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಚೆಕ್, ಡಿಡಿ ಮೂಲಕ ಹಣ ಪಾವತಿಸಬಹುದು. ಸರಕು ಪೂರೈಸಿದ ಸಂದರ್ಭದಲ್ಲಿ ನಗದು ಪಾವತಿ ಮಾಡಬಹುದು. ಸರಕು ಕೈಸೇರಿದ ನಂತರವೂ ನಗದು ಪಾವತಿಸುವ ಗರಿಷ್ಠ ಮಿತಿ ಸದ್ಯಕ್ಕೆ ರೂ 10 ಸಾವಿರಕ್ಕೆ ನಿಗದಿಪಡಿಸಲಾಗಿದೆ. ಕ್ರಮೇಣ ಈ ಮೊತ್ತ ಹೆಚ್ಚಿಸಲಾಗುವುದು. ಕ್ರೆಡಿಟ್ ಕಾರ್ಡ್‌ಗಳ ಮೂಲಕ ಮಾಸಿಕ ಸಮಾನ ಕಂತುಗಳಲ್ಲಿಯೂ ಹಣ ಪಾವತಿಸಬಹುದು.ಆಭರಣಗಳ ವಿತರಣೆ ಹೇಗೆ?

- ಬೆಲೆಬಾಳುವ ಸರಕುಗಳನ್ನು ಸಾಗಿಸುವ ಬ್ಲೂಡಾಟ್‌ನಂತಹ ಕೊರಿಯರ್ ಸಂಸ್ಥೆಗಳ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಾಗುವುದು. ಸರಕಿಗೆ ವಿಮೆ ಸೌಲಭ್ಯ ಇರುತ್ತದೆ.ಮಾರುಕಟ್ಟೆ ಸ್ಥಿತಿ ಬಗ್ಗೆ ಒಂದಿಷ್ಟು ಮಾಹಿತಿ?

-ದೇಶದಲ್ಲಿ ಚಿನ್ನಾಭರಣಗಳ ವಾರ್ಷಿಕ ವಹಿವಾಟಿನ ಮೊತ್ತ ರೂ 1 ಲಕ್ಷ ಕೋಟಿಗಿಂತ ಹೆಚ್ಚಿಗೆ ಇದೆ. ಇದರಲ್ಲಿ ಆನ್‌ಲೈನ್ ಮಾರುಕಟ್ಟೆ ಪಾಲು ತುಂಬ ಕಡಿಮೆ ಇದೆ. ಈ ಮಾರುಕಟ್ಟೆ ಕ್ರಮೇಣ ಜನಪ್ರಿಯವಾಗುತ್ತಿದೆ. ಮಾರುಕಟ್ಟೆಯಲ್ಲಿ ಅತ್ಯಲ್ಪ ಅವಧಿಯಲ್ಲಿ ಗಮನಾರ್ಹ ಪ್ರಮಾಣದ ಪಾಲು ಹೊಂದುವುದು ಸಂಸ್ಥೆಯ ಉದ್ದೇಶವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry