ಮಂಗಳವಾರ, ಮೇ 18, 2021
30 °C

ಚಿನ್ನಾಭರಣ ವ್ಯಾಪಾರಿಗಳ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕೇಂದ್ರ ಸರ್ಕಾರ ಪ್ರಸ್ತಾವಿಕ ಬಜೆಟ್‌ನಲ್ಲಿ ಚಿನ್ನಾಭರಣಗಳ ಮೇಲೆ ತೆರಿಗೆ ವಿಧಿಸಿರುವುದನ್ನು ಪ್ರತಿಭಟಿಸಿ ಸರಾಫ ಸಂಘದ ವತಿಯಿಂದ ನಗರದ ಮರಾಠ ಗಲ್ಲಿ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.ಚಿನ್ನಾಭರಣ ವ್ಯಾಪಾರಿಗಳು ಮತ್ತು ಗ್ರಾಹಕರು ಈಗಾಗಲೇ ತೀವ್ರ ಸಂಕಷ್ಟದಲ್ಲಿದ್ದು, ಕೇಂದ್ರ ಸರ್ಕಾರದ ಪ್ರಸ್ತಾವಿತ ತೆರಿಗೆಯಿಂದ ಗ್ರಾಹಕರ ಚಿನ್ನಾಭರಣ ಖರೀದಿ ಕನಸು ಆಗಲಿದೆ. ಜೊತೆಗೆ ಚಿನ್ನಾಭರಣ ವ್ಯಾಪಾರಸ್ಥರು ಅಂಗಡಿಗಳನ್ನು ಮುಚ್ಚುವ ಪರಿಸ್ಥಿತಿ ಉಂಟಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಘೋಷಣೆ ಕೂಗಿದರು.ಈಗಾಗಲೇ ಚಿನ್ನದ ಮೇಲಿನ ಆಮದು ಸುಂಕ ಶೇ. 2 ಇದ್ದು ಅದನ್ನು ಶೇ. 4ಕ್ಕೆ ಏರಿಸಲಾಗಿದೆ. ಈ ಆಮದು ಸುಂಕದ ಜೊತೆ ಶೇ. 1 ವ್ಯಾಟ್ ಸೇರಿಸಿದರೆ 10 ಗ್ರಾಂ ಚಿನ್ನಕ್ಕೆ ಸುಮಾರು ರೂ. 1300ರಷ್ಟು ಹೆಚ್ಚಳವಾಗಲಿದೆ.ಅಂದರೆ 1 ಕಿಲೋ ಬಂಗಾರದ ಮೇಲೆ ರೂ 1.50 ಲಕ್ಷ ತೆರಿಗೆ ನೀಡಬೇಕಾಗುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ಈ ಪ್ರಸ್ತಾವಿತ ತೆರಿಗೆ ನೀತಿ ಕಳ್ಳ ವ್ಯವಹಾರಕ್ಕೆ ಪ್ರೇರಣೆ ನೀಡಿದಂತಾಗುತ್ತದೆ. 2 ಲಕ್ಷಕ್ಕೂ ಮೀರಿದ ಚಿನ್ನ ಖರೀದಿ ಮೇಲೆ ವಿಶೇಷ ತೆರಿಗೆ ಸಂಗ್ರಹಿಸಲು ಸೂಚಿರುವುದು ಗ್ರಾಹಕರ ಮೇಲೆ ಹೆಚ್ಚುವರಿ ಹೊರೆಯಾಗಿದೆ ಎಂದು ಪ್ರತಿಭಟನೆಕಾರರು ಆರೋಪಿಸಿದರು. ಪ್ರತಿಭಟನೆಗೂ ಮೊದಲು ಬೆಳಗಾವ ಗಲ್ಲಿ, ದುರ್ಗದ ಬೈಲ್ ಮೂಲಕ ಮರಾಠ ಗಲ್ಲಿಗೆ ಚಿನ್ನದ ವ್ಯಾಪಾರಿಗಳು ಮೆರವಣಿಗೆ ನಡೆಸಿದರು.ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಗೋವಿಂದ ಆರ್.ನಿರಂಜನ, ಕಾರ್ಯದರ್ಶಿ ರಾಮು ಎಸ್.ಪವಾರ, ಶ್ರೀಕಾಂತ ಕರಿ, ನವರತ್ನರಾಜ ಸಂಘವಿ, ಅಶೋಕ ಪವಾರ, ದಿಲೀಪ ತೆಲಿಸೆರಾ, ಪರಶುರಾಮ ಚಿಲ್ಲಾಳ, ಗೋಪಾಲಕೃಷ್ಣ ನಾಯಕ, ಉದಯ ರೇವಣಕರ, ಅಶೋಕ ಟೆಂಗಿನಕಾಯಿ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.