ಚಿನ್ನ ಆಮದಿಗೆ ಮತ್ತಷ್ಟು ಕಡಿವಾಣ

7
ರಫ್ತಿಗೆ ಉತ್ತೇಜನ; ಬಂಗಾರದ ಬೆಲೆ ಏರಿಕೆ ಸಾಧ್ಯತೆ

ಚಿನ್ನ ಆಮದಿಗೆ ಮತ್ತಷ್ಟು ಕಡಿವಾಣ

Published:
Updated:
ಚಿನ್ನ ಆಮದಿಗೆ ಮತ್ತಷ್ಟು ಕಡಿವಾಣ

ಮುಂಬೈ(ಪಿಟಿಐ): ಚಾಲ್ತಿ ಖಾತೆ ಕೊರತೆ(ಸಿಎಡಿ) ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಚಿನ್ನ ಆಮದು ಮೇಲೆ ಮತ್ತಷ್ಟು ನಿರ್ಬಂಧ ಹೇರಿದೆ. ಇದರಿಂದ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಮತ್ತು ಚಿನ್ನ ಆಮದು ಮಾಡಿಕೊಳ್ಳುವ ನೋಂದಾಯಿತ ಸಂಸ್ಥೆಗಳು ವಿವಿಧ ದೇಶಗಳಿಂದ ತರಿಸಿಕೊಳ್ಳುವ ಒಟ್ಟಾರೆ ಚಿನ್ನದಲ್ಲಿ ಶೇ 20ರಷ್ಟನ್ನು ಅಥವಾ ಐದರಲ್ಲಿ ಒಂದರಷ್ಟು ಪ್ರಮಾಣವನ್ನು ರಫ್ತು ಉದ್ದೇಶಕ್ಕಾಗಿ  ಮೀಸಲಿಡಬೇಕು. ಇದು ಕಡ್ಡಾಯ.  ನಂತರವಷ್ಟೇ ಉಳಿದ ಚಿನ್ನವನ್ನು ಆಭರಣ, ನಾಣ್ಯ ಮತ್ತಿತರ ರೂಪದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶವಿದೆ. ಹೀಗೆ ಮೀಸಲಿಡುವ ಚಿನ್ನದಲ್ಲಿ ಶೇ 75ರಷ್ಟು ರಫ್ತಾದ ಬಳಿಕವೇ ಹೊಸದಾಗಿ ಮತ್ತೆ ಚಿನ್ನವನ್ನು ಆಮದು ಮಾಡಿಕೊಳ್ಳಲು ಅವಕಾಶ ಇದೆ. ಈ ಕ್ರಮಗಳಿಂದ ಆಮದು ಹೊರೆ ತಗಲ್ಲಿದೆ, ಇನ್ನೊಂದೆಡೆ ರಫ್ತು ಚಟುವಟಿ ಕೆಗೂ ಉತ್ತೇಜನ ಸಿಕ್ಕಂತಾಗಿ ಹೆಚ್ಚಿನ ವಿದೇಶಿ ವಿನಿಮಯ ಹರಿದುಬರಲಿದೆ ಎಂದು `ಆರ್‌ಬಿಐ' ಪ್ರಕಟಣೆ ತಿಳಿಸಿದೆ.`ಆರ್‌ಬಿಐ' ನಿಯಂತ್ರಣ ಕ್ರಮಗಳು ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಲಿವೆ. ಗ್ರಾಹಕರಿಗೂ, ವರ್ತಕರಿಗೂ ಚಿನ್ನ ತುಟ್ಟಿಯಾಗಲಿದೆ ಎಂದು ಚಿನಿವಾರ ಪೇಟೆ ಪಂಡಿತರು ಹೇಳಿದ್ದಾರೆ.`ಆಮದು ಚಿನ್ನದಲ್ಲಿ ಶೇ 20ರಷ್ಟನ್ನು ರಫ್ತು ಮಾಡಬೇಕೆಂದು `ಆರ್‌ಬಿಐ' ನಿರ್ಬಂಧ ಹೇರಿದರೆ ರಫ್ತುದಾರರ ಮೇಲೆ ಒತ್ತಡ ಬೀಳುತ್ತದೆ.ಅವರು ಸಿಕ್ಕಿದಷ್ಟು ಬೆಲೆಗೆ ರಫ್ತು ಮಾಡಬೇಕಾಗುತ್ತದೆ. ಇದರಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚು. ಈ ನಷ್ಟ ಭರ್ತಿಗಾಗಿ ಸ್ಥಳೀಯ ಚಿನ್ನಾಭರಣ ತಯಾರಕರಿಗೆ ಗರಿಷ್ಠ ಬೆಲೆಯಲ್ಲಿ ಚಿನ್ನ ಮಾರಾಟ ಮಾಡುತ್ತಾರೆ. ಅವರು ಅದನ್ನು ಗ್ರಾಹಕರಿಗೆ ವರ್ಗಾಯಿಸುತ್ತಾರೆ' ಎಂದು `ಮುಂಬೈ ಬುಲಿಯನ್ ಅಸೋಸಿಯೇಷನ್' ಮಾಜಿ ಅಧ್ಯಕ್ಷ ಸುರೇಶ್ ಹಿಂದುಜಾ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.ಇನ್ನೊಂದೆಡೆ ರಫ್ತುದಾರರು `ಆರ್‌ಬಿಐ' ಕ್ರಮವನ್ನು ಸ್ವಾಗತಿಸಿದ್ದಾರೆ. ಇದರಿಂದ ರಫ್ತಿಗೆ ಹೆಚ್ಚಿನ ಚಿನ್ನ ಲಭಿಸಿದಂತಾಗಿದೆ ಎಂದು ಹೇಳಿದ್ದಾರೆ.`ಒಟ್ಟಾರೆ ಆಮದು ಚಿನ್ನದಲ್ಲಿ ಶೇ 80ರಷ್ಟನ್ನು ದೇಶೀಯ ಬಳಕೆಗೆ ಮತ್ತು ಶೇ 20ರಷ್ಟು ರಫ್ತಿಗೆ ಲಭ್ಯವಾಗುವುದರಿಂದ `ಆರ್‌ಬಿಐ'ನ 80:20ರ ಅನುಪಾತ ಕ್ರಮ ಸ್ವಾಗತಾರ್ಹವಾಗಿದೆ' ಎಂದು  ಚಿನ್ನಾಭರಣ ರಫ್ತು ಉತ್ತೇಜನಾ ಮಂಡಳಿ ಅಧ್ಯಕ್ಷ ವಿಪುಲ್ ಷಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.`ಸಿಡಿಎ' ತಗ್ಗಿಸಲು ಮತ್ತು ಡಾಲರ್ ವಿರುದ್ಧ ರೂಪಾಯಿ ಅಪಮೌಲ್ಯ ತಪ್ಪಿಸಲು `ಆರ್‌ಬಿಐ' ಸೂಕ್ತ ಕ್ರಮ ಕೈಗೊಂಡಿದೆ ಎಂದು ಗೀತಾಂಜಲಿ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಮೆಹುಲ್ ಚೋಕ್ಷಿ ಅಭಿಪ್ರಾಯಪಟ್ಟಿದ್ದಾರೆ.ಪ್ರತಿ ತಿಂಗಳು ಸರಾಸರಿ 300ರಿಂದ 500 ಕೋಟಿ ಡಾಲರ್  ಮೌಲ್ಯದ ಚಿನ್ನ ಆಮದು ಮಾಡಿಕೊಳ್ಳಲಾಗುತ್ತದೆ. ಜುಲೈನಲ್ಲಿ ಈಗಾಗಲೇ 300 ಕೋಟಿ ಮೌಲ್ಯದ ಚಿನ್ನ ಆಮದಾಗಿದೆ.2012ರಲ್ಲಿ ಒಟ್ಟಾರೆ 970 ಟನ್ ಚಿನ್ನ ಆಮದು ಮಾಡಿಕೊಳ್ಳಲಾಗಿತ್ತು. ಇದರಲ್ಲಿ ಶೇ 7ರಷ್ಟು ಚಿನ್ನ ರಫ್ತಾಗಿದೆ. ಪ್ರಸಕ್ತ ವರ್ಷ ಚಿನ್ನ ಆಮದನ್ನು 500 ಟನ್‌ಗೆ ತಗ್ಗಿಸುವುದು ಮತ್ತು ಇದರಲ್ಲಿ 100 ಟನ್ ಚಿನ್ನಾಭರಣ ರಫ್ತು ಗುರಿಯನ್ನು ಸರ್ಕಾರ ನಿಗದಿಪಡಿಸಿದೆ.ಪ್ರಪಂಚದಲ್ಲಿಯೇ ಚಿನ್ನದ ಅತಿ ದೊಡ್ಡ ಗ್ರಾಹಕ ದೇಶ ಭಾರತ ಎಂಬುದು ಇಲ್ಲಿ ಉಲ್ಲೇಖಾರ್ಹ.

ಚಿನ್ನ ಮತ್ತೆ ರೂ685 ಏರಿಕೆ; ತಿಂಗಳ ಗರಿಷ್ಠ ಧಾರಣೆ

ಮುಂಬೈ/ನವದೆಹಲಿ(ಪಿಟಿಐ): ದೇಶದ ಪ್ರಮುಖ ಚಿನಿವಾರ ಪೇಟೆಗಳಲ್ಲಿ ಮಂಗಳವಾರ ಚಿನ್ನದ ಬೆಲೆ ರೂ395ರಿಂದ ರೂ685ರವರೆಗೂ ಏರಿಕೆ ಕಂಡು ಮತ್ತೆ 28,000 ರೂಪಾಯಿಗಳ ಗಡಿ ದಾಟಿ ಮುನ್ನಡೆಯಿತು. ಜೂನ್ 19ರಲ್ಲಿದ್ದ ಮಟ್ಟಕ್ಕೆ ಬೆಲೆಯನ್ನು ಹೆಚ್ಚಿಸಿಕೊಂಡಿತು.ನವದೆಹಲಿಯಲ್ಲಿ ಸೋಮವಾರ ರೂ. 390ರಷ್ಟು ಬೆಲೆ ಹೆಚ್ಚಿಸಿಕೊಂಡಿದ್ದ 10 ಗ್ರಾಂ ಚಿನ್ನ ಮಂಗಳವಾರ ರೂ685ರಷ್ಟು ಭಾರಿ ಏರಿಕೆ ದಾಖಲಿಸಿತು. ಮುಂಬೈನಲ್ಲಿ ಮಧ್ಯಮ ಪ್ರಮಾಣದಲ್ಲಿ, ಅಂದರೆ ರೂ395ರಷ್ಟು ಬೆಲೆ ಹೆಚ್ಚಿಸಿಕೊಂಡಿತು.ಸಿದ್ಧ ಬೆಳ್ಳಿ ಮುಂಬೈನಲ್ಲಿ ರೂ565, ದೆಹಲಿಯಲ್ಲಿ  ರೂ795ರಷ್ಟು ಬೆಲೆ ಹೆಚ್ಚಿಸಿಕೊಂಡಿತು.ನ್ಯೂಯಾರ್ಕ್ ಪ್ರಭಾವ

ಭಾರತದ ಚಿನಿವಾರ ಪೇಟೆ ಸಾಮಾನ್ಯವಾಗಿ ನ್ಯೂಯಾರ್ಕ್ ಮಾರುಕಟ್ಟೆಯನ್ನೇ ಅನುಸರಿಸುತ್ತದೆ. ಮಂಗಳವಾರ ನ್ಯೂಯಾರ್ಕ್ ಚಿನಿವಾರ ಪೇಟೆಯಲ್ಲಿ ಬಂಗಾರ ಶೇ 3.3ರಷ್ಟು ಭಾರಿ ಏರಿಕೆ ಕಂಡು ಔನ್ಸ್‌ಗೆ 1,337.30 ಡಾಲರ್ ಮಟ್ಟಕ್ಕೇರಿತು. ಇದು ನ್ಯೂಯಾರ್ಕ್‌ನಲ್ಲಿ ಕಳೆದ 13 ತಿಂಗಳಲ್ಲಿಯೇ ಗರಿಷ್ಠ ಪ್ರಮಾಣದ ಬೆಲೆ ಏರಿಕೆ ಆಗಿದೆ.ಜತೆಗೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಚಿನ್ನ ಆಮದು ಮೇಲೆ ಇನ್ನಷ್ಟು ನಿರ್ಬಂಧ ಹೇರಿದ್ದರ ಪರಿಣಾಮವೂ ದೇಶದ ಚಿನಿವಾರ ಪೇಟೆಗಳ ಮೇಲಾಗಿದೆ. ಬಂಗಾರ ಮತ್ತೆ ತುಟ್ಟಿಯಾಗಲಾರಂಭಿಸಿದೆ.ಲಂಡನ್ ಇಳಿಮುಖ

ಇನ್ನೊಂದೆಡೆ ಲಂಡನ್‌ನಲ್ಲಿ ಚಿನ್ನದ ಧಾರಣೆ ಶೇ 0.3ರಷ್ಟು ಅಲ್ಪ ಪ್ರಮಾಣದಲ್ಲಿ ತಗ್ಗಿದೆ. ಮಂಗಳವಾರ ಔನ್ಸ್ ಬಂಗಾರ 1,331.60 ಡಾಲರ್ ಬೆಲೆಗೆ ಮಾರಾಟವಾಗಿದೆ. ಕೆಲವು ಹೂಡಿಕೆದಾರರ ಚಿನ್ನ ಮಾರಾಟ ಮಾಡಲಾರಂಭಿಸಿದರು. ತಿಂಗಳ ಗರಿಷ್ಠ ಮಟ್ಟದಲ್ಲಿದ್ದ ಚಿನ್ನದ ಬೆಲೆ ಇಲ್ಲಿ ಇಳಿಮುಖವಾಯಿತು.ನವದೆಹಲಿ ಧಾರಣೆ

10 ಗ್ರಾಂ ಅಪರಂಜಿ ಚಿನ್ನ ರೂ28,365ಕ್ಕೂ, ಸ್ಟ್ಯಾಂಡರ್ಡ್ ಚಿನ್ನ ರೂ28,165ಕ್ಕೂ ಏರಿಕೆಯಾಗಿದೆ. ಸಿದ್ಧ ಬೆಳ್ಳಿಯೂ ಕೆ.ಜಿ.ಗೆ ರೂ42,120ಕ್ಕೇರಿದೆ.ಮುಂಬೈ ಧಾರಣೆ

10 ಗ್ರಾಂ ಅಪರಂಜಿ ಚಿನ್ನದ ಬೆಲೆ  ರೂ27,860ಕ್ಕೂ, ಸ್ಟ್ಯಾಂಡರ್ಡ್ ಚಿನ್ನ ರೂ27,720ಕ್ಕೂ ಹೆಚ್ಚಿತು. ಸಿದ್ಧ ಬೆಳ್ಳಿ ಕೆ.ಜಿ.ಗೆ ರೂ42,450ಕ್ಕೇರಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry