ಶನಿವಾರ, ಜೂನ್ 12, 2021
28 °C

ಚಿನ್ನ ಆಮದು ತೆರಿಗೆ: ವಿವಿಧೆಡೆ ಸುವರ್ಣಕಾರರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಚಿನ್ನ ಆಮದು ಮೇಲೆ ಶೇ. 4ರಷ್ಟು ತೆರಿಗೆ ಮತ್ತು ಆಭರಣಗಳ ಮೇಲೆ ಶೇ. 1ರಷ್ಟು ಸುಂಕ ಹೇರಿದ್ದನ್ನು ವಿರೋಧಿಸಿ ನಗರದ ಚಿನ್ನದ ವ್ಯಾಪಾರಿಗಳು ಸೋಮವಾರ ವ್ಯಾಪಾರ- ವಹಿವಾಟು ಬಂದ್‌ಮಾಡಿ ಪ್ರತಿಭಟನೆ ನಡೆಸಿದರು.ನಗರದ ಸರಾಫ್ ವರ್ತಕರ ಹಾಗೂ ಸುವರ್ಣಕಾರ ಸಂಘದ ವತಿಯಿಂದ ವಲ್ಲಭಬಾಯಿ ವೃತ್ತದಲ್ಲಿ ನಡೆಸಲಾದ ಪ್ರತಿಭಟನೆಯಲ್ಲಿ  ಕೇಂದ್ರ ಸರಕಾರದ ಆಮದು ಹಾಗೂ ಅಬಕಾರಿ ಕರವನ್ನು ಪ್ರಬಲವಾಗಿ ವಿರೋಧಿಸಲಾಯಿತು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಗನಕ್ಕೇರಿದ್ದು, ಇದೀಗ ಬಜೆಟ್‌ನಲ್ಲಿ ತೆರಿಗೆ ಹೆಚ್ಚಿಸಲಾಗಿದೆ. ಇದರಿಂದ ಚಿನ್ನ ಖರೀದಿಸುವ ಗ್ರಾಹಕರ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಪ್ರತಿಭಟನಾಕಾರರು ದೂರಿದರು.ಭಗವಾನದಾಸ ಬಾರ್ಶಿ, ವಿಠ್ಠಲದಾಸ ದರಬಾರ, ದಿವಾಕರ ರಾಯ್ಕರ, ಅಶೋಕ ಬಾರ್ಶಿ, ಗೋಕುಲದಾಸ ಬಾರ್ಶಿ, ಚಂದ್ರಕಾಂತ ರಾಯ್ಕರ, ಮೌನೇಶ ಪತ್ತಾರ, ಬಾಳಪ್ಪ ಚಂದೂಕರ, ವಿಠ್ಠಲ ಪತ್ತಾರ ಹಾಗೂ ಕಾಂತು ಪತ್ತಾರ ಸೇರಿದಂತೆ ನೂರಾರು ಜನ ಪ್ರತಿಭಟನೆಯಲ್ಲಿ  ಪಾಲ್ಗೊಂಡಿದ್ದರು.ಕೇಂದ್ರಕ್ಕೆ ಮನವಿಇಳಕಲ್: ಕೇಂದ್ರ ಸರಕಾರ ಬಜೆಟ್‌ನಲ್ಲಿ ಚಿನ್ನದ ಆಮದು ಸುಂಕವನ್ನು ಶೇ.2 ರಿಂದ ಶೇ.4 ಕ್ಕೆ ಹೆಚ್ಚಿಸಿರುವುದನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ನಗರದ ಸರಾಫ್ ವರ್ತಕರ ಹಾಗೂ ಸುವರ್ಣಕಾರರ ಸಂಘ ಪ್ರತಿಭಟನೆ ನಡೆಸಿದವುಗಾಂಧಿ ಚೌಕದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ತರಕಾರಿ ಮಾರುಕಟ್ಟೆ, ನಗರಸಭೆ, ಕಂಠಿ ಸರ್ಕಲ್ ಮಾರ್ಗವಾಗಿ ವಿಶೇಷ ತಹಶೀಲ್ದಾರ ಕಛೇರಿ ತಲುಪಿತು. ಅಲ್ಲಿ ವಿಶೇಷ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.ಈಗಾಗಲೇ ಚಿನ್ನದ ಬೆಲೆ ಗಗನಕ್ಕೇರಿದೆ. ಚಿನ್ನ ಭಾರತದಲ್ಲಿ ಸಂಪ್ರದಾಯ, ಪರಂಪರೆಯ ಭಾಗವೇ ಆಗಿರುವುದರಿಂದ ಎಲ್ಲಾ ಶುಭ ಕಾರ್ಯಗಳಿಗೆ ಬಳಸುತ್ತಾರೆ. ಈಗ ಶೇ 2 ರಷ್ಟು ಸುಂಕ ಹೆಚ್ಚಿಸಿರುವುದರಿಂದ ಮತ್ತೆ 10 ಗ್ರಾಂ ಚಿನ್ನಕ್ಕೆ 1 ಸಾವಿರದಷ್ಟು ಹೆಚ್ಚಾಗುತ್ತದೆ. ಇದರಿಂದ ಚಿನ್ನದ ವ್ಯಾಪಾರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಆತಂಕ ವ್ಯಕ್ತಪಡಿಸಿದ್ದಾರೆ.ದರ ಏರಿಕೆಯಿಂದ ಗ್ರಾಹಕರಿಗೆ ಹೊರೆಯಾಗುತ್ತದೆ. ಆಗ ಚಿನ್ನದ ವ್ಯಾಪಾರದಲ್ಲಿ ಕುಸಿತವಾಗಿ ವರ್ತಕರಿಗೆ ಹಾಗೂ ಸುವರ್ಣಕಾರರಿಗೆ  ತೊಂದರೆಯಾಗುತ್ತದೆ. ಆದ್ದರಿಂದ ಕೇಂದ್ರ ಸರಕಾರ ಬಜೆಟ್‌ನಲ್ಲಿ ಹೆಚ್ಚಿಸಿರುವ ಸುಂಕವನ್ನು ತಕ್ಷಣವೇ ಹಿಂದಕ್ಕೆ ಪಡೆಯಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.ಪ್ರತಿಭಟನೆಯಲ್ಲಿ ಸರಾಫ್ ವರ್ತಕರ ಸಂಘದ ಆಧ್ಯಕ್ಷ ಚಂದ್ರಶೇಖರಪ್ಪ ಕನಕೇರಿ, ಕಾರ್ಯದರ್ಶಿ ಸಜ್ಜನರಾಜ ಸುರಾಣ, ಖಜಾಂಚಿ ಚಿನ್ನಪ್ಪ ಹೂಲಗೇರಿ, ನಂದೀಶ ಸಮಾಳದ, ಶಂಕರ ಶಿವಬಲ್, ಮಂಜುನಾಥ ಹರಿಹರ, ಬಸವರಾಜ ಹರಿಹರ, ಮಹಾಂತೇಶ ಕನಕೇರಿ, ಬಸವರಾಜ ಕುಂದಣಗಾರ, ಸಿದ್ದಪ್ಪ ಬೆಣ್ಣೂರ ಮತ್ತಿತರರು ಪಾಲ್ಗೊಂಡಿದ್ದರು.ಮೆರವಣಿಗೆಗುಳೇದಗುಡ್ಡ: ಗುಳೇದಗುಡ್ಡ ಸರಾಫ್ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ಹಾಗೂ ಬೆಳ್ಳಿ ಬಂಗಾರ ವ್ಯಾಪಾರಸ್ಥರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.ಪ್ರತಿಭಟನಾ ಮೆರವಣಿಗೆ ಸರಾಫ್ ಬಜಾರದಿಂದ ಹೊರಟು ಚೌಬಜಾರ, ಅರಳಿಕಟ್ಟಿ, ಪುರಸಭೆ ಸರ್ಕಲ್ ಮೂಲಕ ಹಾಯ್ದು ಕೇಂದ್ರ ಸರಕಾರಕ್ಕೆ ದಿಕ್ಕಾರ ಎಂದು ಘೋಷಣೆ ಕೂಗುತ್ತ ವಿಶೇಷ ತಹಶೀಲ್ದಾರ ಕಚೇರಿಗೆ ಬಂದು ಸಭೆಯಾಗಿ ಮಾರ್ಪಟ್ಟಿತು.ಮಾಜಿ ಶಾಸಕ ರಾಜಶೇಖರ ಶೀಲವಂತ ಮಾತನಾಡಿ, ಕೇಂದ್ರ ಸರಕಾರದ ಬಜೆಟ್‌ನಲ್ಲಿ ಬಂಗಾರಕ್ಕೆ ಸುಂಕ ವಿಧಿಸಿರುವುದನ್ನು ತೀವ್ರವಾಗಿ ಖಂಡಿಸಿದರು. ಸುಂಕವನ್ನು ಹೆಚ್ಚು ಮಾಡಿದರೆ ಅದರ ಪರಿಣಾಮ ನೇರವಾಗಿ ಬಡ ಮತ್ತು ಮಧ್ಯಮ ವರ್ಗದ ಜನರು ಆರ್ಥಿಕವಾಗಿ ತೊಂದರೆ ಅನುಭವಿಸಬೇಕಾಗುತ್ತದೆ, ಬಂಗಾರದ ಸುಂಕ ವಿಧಿಸಿರುವುದನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.ವಿಶೇಷ ತಹಶೀಲ್ದಾರ ಪಿ.ವಿ. ದೇಸಾಯಿ ಅವರಿಗೆ ಮನವಿ ಪತ್ರವನ್ನು ವಿತರಿಸಿದರು. ಪ್ರತಿಭಟನೆಯಲ್ಲಿ ಮುರಗೇಶ ರಾಜನಾಳ, ಗಣೇಶ ಶೀಲವಂತ, ಮಲ್ಲಿಕಾರ್ಜುನ ರಾಜನಾಳ, ಮಲ್ಲಿಕಾರ್ಜುನ ಶೀಲವಂತ, ಗಂಗಾದರ ಬಿ, ಪತ್ತಾರ, ಸುರೇಶ ತಿಪ್ಪಾ, ಶೇಖರಪ್ಪ ಎಚ್. ಪತ್ತಾರ, ಮನೋಹರ ಬಿ. ಪತ್ತಾರ, ವೆಂಕಣ್ಣ ಶಾಹಾಪೂರ, ಈರಣ್ಣ ಬಿ. ಪತ್ತಾರ ಮುಂತಾದವರು ಭಾಗವಹಿಸಿದ್ದರು. 

 

ಸಾಂಕೇತಿಕ ಧರಣಿಜಮಖಂಡಿ:  ಕೇಂದ್ರ ಸರ್ಕಾರದ ಪ್ರಸಕ್ತ ಬಜೆಟ್‌ನಲ್ಲಿ ಚಿನ್ನದ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಿದ್ದನ್ನು ವಿರೋಧಿಸಿ ನಗರದ ಎಲ್ಲಾ ಚಿನ್ನದ ವ್ಯಾಪಾರಿಗಳು ಚಿನ್ನದ ಅಂಗಡಿಗಳನ್ನು ಬಂದ್ ಮಾಡಿ ವಹಿವಾಟು ಸ್ಥಗಿತಗೊಳಿಸಿ ಸೋಮವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು.ಚಿನ್ನ ಮತ್ತು ಬೆಳ್ಳಿ ವರ್ತಕರ ರಾಷ್ಟ್ರ ಮಟ್ಟದ ಸಂಘಟನೆ ನೀಡಿದ ಭಾರತ ಬಂದ್ ಕರೆಯ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದ ತಾಲ್ಲೂಕು ಸರಾಫ್ ಸಂಘದ ಪದಾಧಿಕಾರಿಗಳು, ಸದಸ್ಯರು ತಹಸೀಲ್ದಾರ ಕಚೇರಿಗೆ ತೆರಳಿ ತಹಸೀಲ್ದಾರ ಡಾ.ಸಿದ್ದು ಹುಲ್ಲೋಳಿ ಅವರ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ರವಾನಿಸಿದರು.ಚಿನ್ನದ ಮೇಲಿನ ಆಮದು ತೆರಿಗೆಯನ್ನು ಹೆಚ್ಚಳ ಮಾಡಿದ್ದರಿಂದ ಪ್ರತಿ 10 ಗ್ರ್ಯಾಂ ಚಿನ್ನದ ಬೆಲೆಯಲ್ಲಿ ರೂ.1300 ರಷ್ಟು ಹೆಚ್ಚಳವಾಗಲಿದೆ. ಅದರಿಂದ ಕಳ್ಳ ವ್ಯವಹಾರಕ್ಕೆ ದಾರಿ ಮಾಡಿಕೊಟ್ಟಂತಾಗಿದೆ. ಅಲ್ಲದೆ ಜನಸಾಮಾನ್ಯರ ಮೇಲೆ ಅದರ ಹೊರೆ ಬೀಳಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕೂಡಲೇ ಹೆಚ್ಚುವರಿಯಾಗಿ ವಿಧಿಸಿರುವ ತೆರಿಗೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಮನವಿಯಲ್ಲಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ.ಸರಾಫ್ ಸಂಘದ ಅಧ್ಯಕ್ಷ ಅಶೋಕ ಕುಲ್ಹಳಿಕರ, ಉಪಾಧ್ಯಕ್ಷ ಸಿದ್ಧೇಶ್ವರ ಇಂಗಳಗಿ, ಕೋಶಾಧ್ಯಕ್ಷ ಅಚ್ಯುತ ಪತ್ತಾರ, ಕಾರ್ಯದರ್ಶಿ ಮನಸುಖ ಭಂಡಾರಿ, ಶ್ರೀರಾಮ ಆನಿಖಿಂಡಿ, ಸಂದೀಪ ಓಸ್ವಾಲ, ರಾಜು ಸೋನಾರ ಮತ್ತಿತರರು ಮನವಿ ಸಲ್ಲಿಸಿದ ನಿಯೋಗದಲ್ಲಿದ್ದರು.    

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.