ಚಿನ್ನ ಆಮದು ಸುಂಕ ಹೆಚ್ಚಳ ಸಂಭವ

7
ಚಾಲ್ತಿ ಖಾತೆ ಕೊರತೆಯೇ ಚಿಂತೆ: ಚಿದಂಬರಂ

ಚಿನ್ನ ಆಮದು ಸುಂಕ ಹೆಚ್ಚಳ ಸಂಭವ

Published:
Updated:
ಚಿನ್ನ ಆಮದು ಸುಂಕ ಹೆಚ್ಚಳ ಸಂಭವ

ನವದೆಹಲಿ(ಪಿಟಿಐ): ಚಿನ್ನದ ಆಮದು  ದಿನೇ ದಿನೇ ಹೆಚ್ಚುತ್ತಲೇ ಇರುವುದರಿಂದಾಗಿ ಚಾಲ್ತಿ ಖಾತೆ ಕೊರತೆ(ಸಿಎಡಿ) ಪ್ರಮಾಣದಲ್ಲೂ ಏರಿಕೆಯಾಗುತ್ತಿದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ, ಚಿನ್ನದ ಆಮದು ತಗ್ಗಿಸಲು ಸರ್ಕಾರ ಶೀಘ್ರದಲ್ಲೇ ಕೆಲವು ಅಗತ್ಯ ಕ್ರಮಗಳನ್ನು ಪ್ರಕಟಿಸಲಿದೆ ಎಂದಿದ್ದಾರೆ.`ಚಿನ್ನದ ಆಮದು ಸ್ವಲ್ಪ ತುಟ್ಟಿಯಾಗಿಸುವ ಕುರಿತು ಚಿಂತಿಸುತ್ತಿದ್ದೇವೆ. ಈ ಚಿಂತನೆ ಇನ್ನೂ ಪರಿಶೀಲನೆಯಲ್ಲಿದೆ' ಎಂದು ಬುಧವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.ಚಾಲ್ತಿ ಖಾತೆ ಕೊರತೆಯು ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ `ಒಟ್ಟಾರೆ ರಾಷ್ಟ್ರೀಯ ಉತ್ಪನ್ನ'ದ(ಜಿಡಿಪಿ) ಶೇ 4.6ರಷ್ಟು ಪ್ರಮಾಣಕ್ಕೆ ಏರಿದ್ದು, 3870 ಕೋಟಿ  ಡಾಲರ್(ಸುಮಾರು ್ಙ2,10,915ಕೋಟಿ)ಗಳಷ್ಟಾಗಿದೆ. ಈ ಅವಧಿಯಲ್ಲಿಯೇ 2025 ಕೋಟಿ ಡಾಲರ್ (್ಙ1,10,362 ಕೋಟಿ) ಮೌಲ್ಯದ ಚಿನ್ನ ಆಮದು ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.ಒಂದು ವೇಳೆ ಚಿನ್ನದ ಆಮದು ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ನೈಜ ಆಮದಿಗಿಂತ ಅರ್ಧದಷ್ಟಿದ್ದರೆ ದೇಶದ ವಿದೇಶಿ ವಿನಿಮಯ ನಿಕ್ಷೇಪವು 1050 ಕೋಟಿ ಡಾಲರ್‌ಗಳಿಗೆ (್ಙ57,225ಕೋಟಿ) ಏರಿಕೆ ಕಾಣುತ್ತಿತ್ತು. ಆದರೆ, ಆಮದು ಹೆಚ್ಚಳದಿಂದ ವಿದೇಶಿ ವಿನಿಮಯ ನಿಕ್ಷೇಪ ತೀವ್ರವಾಗಿ ಕುಸಿದಿದ್ದು 40 ಕೋಟಿ ಡಾಲರ್ (್ಙ2180 ಕೋಟಿ)ಗೆ ಇಳಿದಿದೆ ಎಂದರು.ದೇಶದಲ್ಲಿ ಈಗಾಗಲೇ ಸಾಕಷ್ಟು ಚಿನ್ನದ ಸಂಗ್ರಹವಿದೆ. 2011-12ನೇ ಸಾಲಿನಲ್ಲಿ ಒಟ್ಟು 5620 ಕೋಟಿ ಡಾಲರ್ (್ಙ3,06,290 ಕೋಟಿ)  ಮೊತ್ತದ ಚಿನ್ನ ಆಮದು ಮಾಡಿಕೊಳ್ಳಲಾಗಿದೆ. ಇನ್ನೂ ಹೆಚ್ಚಿನ ಆಮದು ಅಗತ್ಯವಿಲ್ಲ. ಆಮದು ಹೊರೆಯಿಂದ `ಸಿಎಡಿ' ಹೆಚ್ಚುತ್ತಿರುವುದು ಆತಂಕಕಾರಿ ಎಂದರು.ಚಿನ್ನದ ಆಮದು ನಿಯಂತ್ರಿಸಲು ಕಳೆದ ವರ್ಷದ ಬಜೆಟ್‌ನಲ್ಲಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ, ಸ್ಟ್ಯಾಂಡರ್ಡ್ ಚಿನ್ನದ ಗಟ್ಟಿ ಆಮದು ಮೇಲಿನ ಮೂಲ ಸೀಮಾಸುಂಕವನ್ನು ಎರಡು ಪಟ್ಟು (ಶೇ 4) ಮತ್ತು ಸ್ಟ್ಯಾಂಡರ್ಡ್ ಅಲ್ಲದ ಚಿನ್ನದ ಗಟ್ಟಿ ಮೇಲಿನ ಸೀಮಾ ಸುಂಕವನ್ನು ಶೇ 10ಕ್ಕೆ ಹೆಚ್ಚಿಸಿದ್ದರು.  ಜತೆಗೆ ಪ್ರಸಕ್ತ ಹಣಕಾಸು ವರ್ಷದ ಪ್ರಥಮಾರ್ಧ ಅವಧಿಯಲ್ಲಿ ಸರ್ಕಾರ ತೆಗೆದುಕೊಂಡ ಕೆಲವು ಕ್ರಮಗಳಿಂದ ಚಿನ್ನದ ಆಮದು ತುಸು ತಗ್ಗಿದೆ. ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ 2020 ಕೋಟಿ ಡಾಲರ್ (್ಙ110090 ಕೋಟಿ) ಮೌಲ್ಯದ ಚಿನ್ನ ಆಮದು ಮಾಡಿಕೊಳ್ಳಲಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 30.3ರಷ್ಟು ಕುಸಿದಿದೆ ಎಂದರು.ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ದೇಶದ ಒಟ್ಟಾರೆ ರಫ್ತು ವಹಿವಾಟು ಶೇ 7.4ಕ್ಕೆ ಕುಸಿದಿರುವುದು ಮತ್ತು ಒಟ್ಟಾರೆ ಆಮದು ಶೇ 4.3ರಷ್ಟು ಹೆಚ್ಚಿರುವುದು ಕೂಡ `ಸಿಎಡಿ' ಪ್ರಮಾಣ ಹೆಚ್ಚುವಂತೆ ಮಾಡಿದೆ. ಆದರೆ, ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಮೂಲಕ 1280 ಕೋಟಿ ಡಾಲರ್ (್ಙ69,760 ಕೋಟಿ) ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆ(ಎಫ್‌ಐಐ) ಮೂಲಕ 170 ಕೋಟಿ ಡಾಲರ್ (್ಙ9265 ಕೋಟಿ) ದೇಶದ ಮಾರುಕಟ್ಟೆಗೆ ಹರಿದು ಬಂದಿರುವುದರಿಂದ ಸದ್ಯ ವಿದೇಶಿ ವಿನಿಮಯ ಸಂಗ್ರಹದ ಸ್ಥಿತಿ ತೀರಾ ಸಂಕಷ್ಟದಲ್ಲೇನೂ ಇಲ್ಲ ಎಂದರು.`ಡೀಸೆಲ್ ನಿಯಂತ್ರಣ ಮುಕ್ತ-ಬಹು ಆಯಾಮ'

ಡೀಸೆಲ್ ದರ ನಿಗದಿ ಪ್ರಕ್ರಿಯೆಯನ್ನು ನಿಯಂತ್ರಣ ಮುಕ್ತಗೊಳಿಸುವುದಕ್ಕೂ ಮುನ್ನ ಸರ್ಕಾರ, ಅದರ ಪರಿಣಾಮಗಳ ವಿವಿಧ ಆಯಾಮಗಳನ್ನು ಪರಿಶೀಲಿಸಲಿದೆ ಎಂದು ಪಿ.ಚಿದಂಬರಂ ಹೇಳಿದರು.`ಡೀಸೆಲ್ ದರ ನಿಗದಿಯನ್ನು ಸದ್ಯದಲ್ಲೇನಾದರೂ ಸರ್ಕಾರಿ ನಿಯಂತ್ರಣದಿಂದ ಮುಕ್ತಗೊಳಿಸಲಾಗುವುದೇ?' ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು, `ಪತ್ರಿಕೆಯ ಒಂದು ಪುಟದಲ್ಲಿ ಡೀಸೆಲ್ ದರ ನಿಯಂತ್ರಣ ಮುಕ್ತಗೊಳಿಸಬೇಕು ಎಂದು ಬರೆಯುತ್ತೀರಿ. ಮತ್ತೊಂದು ಪುಟದಲ್ಲಿ ಇದರಿಂದ ಹಣದುಬ್ಬರ ಹೆಚ್ಚುತ್ತದೆ ಎಂದೂ ಬರೆಯುತ್ತೀರಿ' ಎಂಬ ಉದಾಹರಣೆ ನೀಡುತ್ತಲೇ ಸಮಸ್ಯೆಗೆ ವಿವಿಧ ಕೋನಗಳತ್ತ ಗಮನ ಸೆಳೆದರು.ಯಾವುದೇ ಸಮಸ್ಯೆಗಾದರೂ ಹಲವು ಆಯಾಮಗಳಿರುತ್ತವೆ. ಒಂದೇ ಆಯಾಮದಲ್ಲಿ ಚಿಂತಿಸುವುದು ಸರಿಯಲ್ಲ. ಡೀಸೆಲ್ ದರ ನಿಗದಿ ಪ್ರಕ್ರಿಯೆಯನ್ನು ನಿಯಂತ್ರಣ ಮುಕ್ತಗೊಳಿಸುವ ಸಂಬಂಧ ನಿರ್ಧಾರ ಕೈಗೊಳ್ಳುವ ಮುನ್ನ ಸರ್ಕಾರ ಹಲವು ಆಯಾಮಗಳಿಂದ ಪರಿಶೀಲಿಸಲಿದೆ ಎಂದು ಸ್ಪಷ್ಟಪಡಿಸಿದರು.ಡೀಸೆಲ್ ದರ ನಿಯಂತ್ರಣ ಮುಕ್ತಗೊಳಿಸುವುದಕ್ಕೆ ಸಂಬಂಧಿಸಿದಂತೆ `ಕೀರ್ತಿ ಫಾರಿಖ್ ಸಮಿತಿ' ನೀಡಿದ ವರದಿ ಆಧರಿಸಿ 2010ರಲ್ಲೇ ತಾತ್ವಿಕ  ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ರಾಜಕೀಯ ಒತ್ತಡದಿಂದ ಇದು ಇನ್ನೂ ಜಾರಿಗೊಂಡಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry