ಚಿ.ಮೂಗೆ ಅಪಮಾನ: ವ್ಯಾಪಕ ಖಂಡನೆ

7

ಚಿ.ಮೂಗೆ ಅಪಮಾನ: ವ್ಯಾಪಕ ಖಂಡನೆ

Published:
Updated:

ಬೆಂಗಳೂರು: ಖ್ಯಾತ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡುವ ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಶಿಫಾರಸನ್ನು ತಿರಸ್ಕರಿಸಿದ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರ ಕ್ರಮ ವ್ಯಾಪಕ ಖಂಡನೆಗೆ ಒಳಗಾಗಿದೆ.’ಈ ಕ್ರಮದ ಮೂಲಕ ಶೈಕ್ಷಣಿಕ, ಸಾಹಿತ್ಯಿಕ ವಲಯಕ್ಕೂ ಹೀನ ರಾಜಕೀಯ ಕಾಲಿಟ್ಟಿದೆ. ವಿಭಿನ್ನ ವಿಚಾರಧಾರೆ ಹೊಂದಿರುವವರನ್ನು ಗೌರವಿಸಬೇಕೇ ಹೊರತು ಹತ್ತಿಕ್ಕುವ ಪ್ರವೃತ್ತಿ ನಿಲ್ಲಬೇಕು. ಇಲ್ಲದಿದ್ದರೆ ಪ್ರಜಾಪ್ರಭುತ್ವಕ್ಕೂ, ಸರ್ವಾಧಿಕಾರಕ್ಕೂ ಯಾವುದೇ ವ್ಯತ್ಯಾಸ ಉಳಿಯುವುದಿಲ್ಲ ಎಂದು ನಾಡಿನ ಕೆಲ ಖ್ಯಾತ ವಿದ್ವಾಂಸರು ‘ಪ್ರಜಾವಾಣಿ’ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.‘ರಾಜ್ಯಪಾಲರು ಮಾಡಿದ್ದು ಬಹಳ ತಪ್ಪು. ಅವರು ಈ ರೀತಿ ನಡೆದುಕೊಂಡಿರುವುದು ವಿಪರ್ಯಾಸ. ಚಿದಾನಂದಮೂರ್ತಿ ಅವರು ವಯಸ್ಸಿನಲ್ಲೂ, ವಿದ್ವತ್ತಿನಲ್ಲೂ ನಮಗಿಂತ ಹಿರಿಯರು. ಈ ಬೆಳವಣಿಗೆಯನ್ನು ನೋಡಿದರೆ ಸ್ವಾಭಿಮಾನ ಇರುವ ಯಾವ ಸಾಹಿತಿಯೂ ಗೌರವ ಡಾಕ್ಟರೇಟ್ ಸ್ವೀಕರಿಸಬಾರದು ಎಂದೆನಿಸುತ್ತದೆ. ಅವರಿಗೆ ಡಾಕ್ಟರೇಟ್ ಕೊಡುವ, ಕೊಡದಿರುವ ಬಗ್ಗೆ ಗುಪ್ತವಾಗಿ ಚರ್ಚೆ ನಡೆಯಬೇಕಿತ್ತು. ಆದರೆ ಈ ವಿಷಯ ರಾಜ್ಯಪಾಲರ ತನಕ ಹೋಗಿ, ದಿನಪತ್ರಿಕೆಗಳಲ್ಲಿ ಅವರಿಗೆ ‘ಡಾಕ್ಟರೇಟ್ ತಿರಸ್ಕರಿಸಲಾಗಿದೆ’ ಎಂದು ಪ್ರಕಟವಾಗುವ ಹಂತ ತಲುಪಿದ್ದು ನೋವಿನ ಸಂಗತಿ. ಯಾವ ಸಾಹಿತಿಗಳೂ ಈ ರೀತಿ ನೀಡಲಾಗುವ ಡಾಕ್ಟರೇಟ್ ಸ್ವೀಕರಿಸಬಾರದು’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ.ಎಂ.ಎಂ.ಕಲಬುರ್ಗಿ ಟೀಕಿಸಿದ್ದಾರೆ.‘ನಮ್ಮ ನಡುವಿನ ವೈಚಾರಿಕ ಭಿನ್ನತೆ ಏನೇ ಇರಬಹುದು. ಆದರೆ ಚಿದಾನಂದಮೂರ್ತಿಗಳಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಸಿಗದಂತೆ ಮಾಡಿರುವುದು ಸಾರಸ್ವತ ಲೋಕಕ್ಕೆ ಮಾಡಿದ ಅವಮಾನ’ ಎಂದು ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಎಂದು ಅಭಿಪ್ರಾಯಪಟ್ಟರು.ಕಾಂಗ್ರೆಸ್ ಏಜೆಂಟ್?’: ‘ರಾಜ್ಯಪಾಲರಿಗೆ ಸಾಹಿತ್ಯ, ಸಾಹಿತಿಗಳ ಬಗ್ಗೆ ಏನು ಗೊತ್ತಿದೆ? ಚಿದಾನಂದಮೂರ್ತಿ ಅವರು ನನ್ನ ಗುರುಗಳಾಗಿದ್ದರೂ, ಸಂಘ ಪರಿವಾರದ ವಿಚಾರಗಳನ್ನು ಬೆಂಬಲಿಸುವ ನಿರ್ಧಾರವನ್ನು ಖಂಡಿಸುತ್ತೇನೆ. ಆದರೆ ಅವರನ್ನು ಒಬ್ಬ ವಿದ್ವಾಂಸರಾಗಿ ಗೌರವಿಸುತ್ತೇನೆ. ಬೆಂಗಳೂರು ವಿ.ವಿ.ಯ ಕನ್ನಡ ಅಧ್ಯಯನ ಕೇಂದ್ರ ಸೇರಿದಂತೆ ವಿಭಾಗಗಳಲ್ಲಿ ಸತತ 40 ವರ್ಷ ದುಡಿದಿದ್ದಾರೆ. ಕೆಲವರು ರಾಜ್ಯಪಾಲರನ್ನು ಕಾಂಗ್ರೆಸ್ ಏಜೆಂಟ್ ಎಂದು ಟೀಕಿಸುತ್ತಿದ್ದರು. ಈ ಪ್ರಕರಣದಲ್ಲಿ ನಡೆದುಕೊಂಡ ರೀತಿಯನ್ನು ನೋಡಿದರೆ ನಾನೂ  ಹಾಗೆಯೇ ಕರೆಯಬೇಕಾಗುತ್ತದೆ’ ಎಂದು ಬೆಂಗಳೂರು ವಿ.ವಿ ಕನ್ನಡ ಅಧ್ಯಯನ ಕೇಂದ್ರದ ನಿವೃತ್ತ ನಿರ್ದೇಶಕರಾದ ಡಾ.ಕೆ.ಮರುಳಸಿದ್ದಪ್ಪ ಟೀಕಿಸಿದರು.‘ನಾವು ಪ್ರಜಾಪ್ರಭುತ್ವದಲ್ಲಿ ಬದುಕುತ್ತಿದ್ದೇವೆಯೇ ಹೊರತು ಸರ್ವಾಧಿಕಾರಿ ಆಡಳಿತದಲ್ಲಿಲ್ಲ. 
ವಿರೋಧಿ ಅಭಿಪ್ರಾಯಗಳನ್ನು, ಚಿಂತನೆಗಳನ್ನು ಗೌರವಿಸದಿದ್ದರೆ ಅದು ಹೇಗೆ ಪ್ರಜಾಪ್ರಭುತ್ವವಾಗುತ್ತದೆ?ನಾನು ಎಡಪಂಥೀಯನಾದ್ದರಿಂದ ಅವರ ಹಾಗೂ ನನ್ನ ಮಧ್ಯೆ  ವೈಚಾರಿಕ ಭಿನ್ನತೆಗಳಿವೆ. ಆದರೆ   ಅವರೊಬ್ಬ ಹಿರಿಯ ಸಂಶೋಧಕರಾದ್ದರಿಂದ ಅವರನ್ನು ಗೌರವಿಸುತ್ತೇನೆ.ಇಂದು ಬದುಕಿರುವ ಕೆಲವೇ ಕೆಲವು ಸಂಶೋಧಕರಲ್ಲಿ ಚಿ.ಮೂ ಅವರೇ ಮೊದಲನೇಯವರು.    ಅವರಿಗೆ ಈ ರೀತಿ ಮಾಡಿರುವುದು ಪ್ರಜಾಪ್ರಭುತ್ವದ ಲಕ್ಷಣ ಅಲ್ಲ.ಪತ್ರಿಕೆಯಲ್ಲಿ ವರದಿಯಾದಂತೆ, ಮೊದಲು ಡಾಕ್ಟರೇಟ್ ಪದವಿ ನೀಡಲು ಒಪ್ಪಿಗೆ ನೀಡಿ ನಂತರ   ಒತ್ತಡಕ್ಕೆ ಒಳಗಾಗಿ ಅವರನ್ನು  ಪಟ್ಟಿಯಿಂದ ಕೈಬಿಟ್ಟಿರುವುದಕ್ಕಿಂತ ಅಸಹ್ಯಕರವಾದ ಕೃತ್ಯ ಬೇರೊಂದಿಲ್ಲ.ರಾಜ್ಯಪಾಲರು ತಮ್ಮ ಗೌರವಕ್ಕೆ ತಕ್ಕಂತೆ ನಡೆದುಕೊಂಡಿಲ್ಲ’ ಎಂದು ಕರ್ನಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ.ವೀರಣ್ಣ ಅಭಿಪ್ರಾಯಪಟ್ಟರು.ಅವಾಂತರ ತಪ್ಪಲಿ: ‘ರಾಜ್ಯಪಾಲರ ಕ್ರಮದಿಂದ 80ರ ಇಳಿವಯಸ್ಸಿನ ಚಿದಾನಂದಮೂರ್ತಿ ಅವರಿಗೆ ಅಪಮಾನ ಆಗಿದೆ. ಹಿಂದೆಲ್ಲ ಸಮಾಜಕ್ಕೆ ಗಣನೀಯ ಸೇವೆ ಸಲ್ಲಿಸಿದವರಿಗೆ ಗೌರವ ದೊರಕುತ್ತಿತ್ತು.ಆದರೆ ಶಿಫಾರಸುಗಳ ಮೇಲೆ ನೀಡಲಾಗುತ್ತಿರುವ ಪದವಿ ಇಂದು ಮಾನ್ಯತೆ ಕಳೆದುಕೊಳ್ಳುವಂತಾಗಿದೆ. ಈ ಕುರಿತು ವ್ಯಾಪಕ ಬದಲಾವಣೆ ಅತ್ಯವಶ್ಯಕ ಎಂದು ಕೆಂಗಲ್ ಹನುಮಂತಯ್ಯ ಸ್ಮಾರಕ ಸಮಿತಿ ರಾಜ್ಯ ಅಧ್ಯಕ್ಷರಾದ ಬಿ.ಎಚ್.ಸುರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪ್ರತಿಕ್ರಿಯಿಸಲಾರೆ: ಆದರೆ ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಡಾ.ಎನ್.ಪ್ರಭುದೇವ್ ಅವರು   ‘ರಾಜ್ಯಪಾಲರು ತಮಗೆ ಸರಿಯೆನಿಸಿದ್ದನ್ನು ಮಾಡಿರಬಹುದು.  ಅದು ಅವರ ನಿರ್ಧಾರವಾದ್ದರಿಂದ ನಾನು ಪ್ರತಿಕ್ರಿಯೆ ನೀಡಲಾರೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry