ಚಿಮೂಗೆ ಡಾಕ್ಟರೇಟ್: ಶಿಫಾರಸು ತಾತ್ಕಾಲಿಕ ತಡೆ ಮಾತ್ರ

7

ಚಿಮೂಗೆ ಡಾಕ್ಟರೇಟ್: ಶಿಫಾರಸು ತಾತ್ಕಾಲಿಕ ತಡೆ ಮಾತ್ರ

Published:
Updated:

ಬೆಂಗಳೂರು: ‘ಹಿರಿಯ ಸಂಶೋಧಕ ಚಿದಾನಂದ ಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ನೀಡಲು ಶಿಫಾರಸು ಮಾಡಿದ್ದ ಬೆಂಗಳೂರು ವಿಶ್ವವಿದ್ಯಾಲಯದ ನಿರ್ಣಯವನ್ನು ನಾನು ತಿರಸ್ಕರಿಸಿಲ್ಲ, ಬದಲಿಗೆ ತಾತ್ಕಾಲಿಕವಾಗಿ ಅದನ್ನು ತಡೆಹಿಡಿಯಲಾಗಿದೆ ಅಷ್ಟೇ’ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ ಇಲ್ಲಿ ಸ್ಪಷ್ಟಪಡಿಸಿದ್ದಾರೆ.

ಗಣರಾಜ್ಯೋತ್ಸವದ ಸಂದರ್ಭದಲ್ಲಿ ದೆಹಲಿಯಲ್ಲಿ ನಡೆದ ಪರೇಡ್‌ನಲ್ಲಿ ಭಾಗವಹಿಸಿದ್ದ ಎನ್‌ಸಿಸಿ ಕೆಡೆಟ್‌ಗಳಿಗೆ ರಾಜಭವನದಲ್ಲಿ ಭಾನುವಾರ ನಡೆದ ಅಭಿನಂದನಾ ಸಮಾರಂಭದ ನಂತರ, ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದರು.

‘ಚರ್ಚ್ ಮೇಲಿನ ದಾಳಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸೋಮಶೇಖರ ಆಯೋಗ ನೀಡಿರುವ ವರದಿಯನ್ನು ಒಪ್ಪಿಕೊಂಡಿರುವ ಮೂರ್ತಿಯವರು ರಾಜ್ಯದಲ್ಲಿ ಮತಾಂತರ ನಡೆಯುತ್ತಿದೆ ಎಂದು ವಾದ ಮಾಡಿರುವುದು ಮಾಧ್ಯಮಗಳ ಮೂಲಕ ತಿಳಿಯಿತು. ಈ ಹಿನ್ನೆಲೆಯಲ್ಲಿ ಯಾವುದೇ ವಿವಾದದಲ್ಲಿ ಸಿಲುಕಲು ಬಯಸದ ನಾನು ಈ ಕ್ರಮ ತೆಗೆದುಕೊಂಡೆ’ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

‘ಈ ವರದಿಯನ್ನು ರಾಜ್ಯದ ಸಂಪೂರ್ಣ ಕ್ರೈಸ್ತ ಸಮುದಾಯ ವಿರೋಧಿಸಿದೆ. ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿದೆ ಎಂದು ಅವರು ಯೋಚಿಸುತ್ತಿದ್ದಾರೆ. ಇದರಿಂದ ನಾನು ತುಂಬಾ ನೊಂದಿದ್ದೇನೆ. ಆದರೆ ವರದಿಯ ಪೂರ್ಣ ಪ್ರತಿ ನನಗಿನ್ನೂ ಲಭ್ಯವಾಗಿಲ್ಲ. ಇಂತಹ ಸಂದರ್ಭದಲ್ಲಿ ಚಿ.ಮೂ ಅವರಿಗೆ ಡಾಕ್ಟರೇಟ್ ಪದವಿ ನೀಡುವುದು ಸರಿಯಲ್ಲ ಎಂದು ನನಗೆ ಎನಿಸಿತು’ ಎಂದು ಭಾರದ್ವಾಜ ತಿಳಿಸಿದ್ದಾರೆ.

‘ಮೂರ್ತಿ ಅವರು ಒಳ್ಳೆಯ ಸಾಹಿತಿ, ವಿದ್ವಾಂಸ ಎನ್ನುವಲ್ಲಿ ಎರಡು ಮಾತಿಲ್ಲ. ಆದರೆ ರಾಜ್ಯದಲ್ಲಿ ಮತಾಂತರ ನಡೆಯುತ್ತಿದೆ ಎನ್ನುವುದು ನನ್ನ ಗಮನಕ್ಕೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಮೂರ್ತಿ ಹಿನ್ನೆಲೆ ಪರಿಶೀಲಿಸಬೇಕಾದ ಅನಿವಾರ್ಯತೆ ಎದುರಾಗಿದೆ’ ಎಂದರು.

ಚಿ.ಮೂ ಅಚ್ಚರಿ: ರಾಜ್ಯಪಾಲರ ಈ ಮಾತಿಗೆ ಚಿದಾನಂದ ಮೂರ್ತಿ ಅವರು ಇದೆ ವೇಳೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ‘ನಾನು ಎಂದಿಗೂ ಚರ್ಚ್ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡಿಲ್ಲ. ಆದರೆ, ಮತಾಂತರ ನಡೆಯುತ್ತಿದ್ದು, ಅದರ ನಿಯಂತ್ರಣಕ್ಕೆ ಕಾನೂನು ರೂಪಿಸಿ ಎಂದಿದ್ದೆ. ಈ ವಿಷಯದಲ್ಲಿ  ರಾಜ್ಯಪಾಲರಿಗೆ ಯಾರೋ ದಿಕ್ಕು ತಪ್ಪಿಸಿದ್ದಾರೆ. ಅದು ಏನೇ ಆಗಲಿ. ಪ್ರಾರ್ಥನಾ ಸ್ಥಳಗಳ ಮೇಲೆ ದಾಳಿ ನಡೆಸುವುದು ತಪ್ಪು. ಆದರೆ ರಾಜ್ಯಪಾಲರು ಈ ರೀತಿ ಮಾಡಿದ್ದು ಸರಿಯಲ್ಲ’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

‘ಈ ವಿವಾದದ ನಂತರವೂ ಗೌರವ ಡಾಕ್ಟರೇಟ್ ಕೊಟ್ಟರೆ ಇದನ್ನು ಪ್ರೀತಿಯಿಂದ ಸ್ವೀಕರಿಸುವುದಾಗಿಯೂ ಚಿಮೂ ಹೇಳಿದ್ದಾರೆ.

ವ್ಯಾಪಕ ಖಂಡನೆ: ಚಿಮೂ ಅವರಿಗೆ ಡಾಕ್ಟರೇಟ್ ಪದವಿ ನೀಡಿಕೆ ಸಂಬಂಧದ ರಾಜ್ಯಪಾಲರ ಕ್ರಮಕ್ಕೆ ಚಿತ್ರದುರ್ಗದ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮೂರ್ತಿಯವರು ನಮ್ಮ ನಾಡಿನ ಶ್ರೇಷ್ಠ ವಿದ್ವಾಂಸರು. ಅವರ ವಿದ್ವತ್ತು ಕಡೆಗಣಿಸುವಂತಿಲ್ಲ. ಬೆಂಗಳೂರು ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ಪ್ರಕಟಿಸುವ ಮೂಲಕ ತನ್ನ ಘನತೆಯನ್ನು ಹೆಚ್ಚಿಸಿಕೊಂಡಿತ್ತು. ಆದರೆ, ರಾಜ್ಯಪಾಲರು ವಿದ್ವತ್ ಕ್ಷೇತ್ರದಲ್ಲೂ ಧುಮುಕಿ ಕೀಳು ರಾಜಕೀಯ ಮಾಡಲು ಮುಂದಾಗಿರುವುದು ಖಂಡನೀಯ’ ಎಂದು ತಿಳಿಸಿದ್ದಾರೆ.

ರಾಜ್ಯಪಾಲರು ನಿಷ್ಪಕ್ಷಪಾತವಾಗಿ ವಿದ್ವತ್ ಗೌರವಿಸುವ ಕೆಲಸ ಮಾಡಬೇಕಾಗಿತ್ತು. ಹಾಗಾಗದೇ ಯಾವುದೋ ಒಂದು ಸರ್ಕಾರದ ಪ್ರೀತಿ ಅಥವಾ ದ್ವೇಷದ ಹಿನ್ನೆಲೆಯಲ್ಲಿ ಈ ರೀತಿ ತೀರ್ಮಾನ ಕೈಗೊಂಡಿರುವುದು ಕರ್ನಾಟಕದ ವಿದ್ವತ್ ಲೋಕಕ್ಕೆ ಮಾಡಿರುವ ದೊಡ್ಡ ದ್ರೋಹ. ಇದು ಕರ್ನಾಟಕ ಜನತೆಯ ಪ್ರತಿಭಟನೆಗೆ ಕಾರಣವಾಗುವಂತಹದು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಹಿರಿಯ ವಕೀಲೆ ಪ್ರಮಿಳಾ ನೇಸರ್ಗಿ ಅವರು ಕೂಡ ರಾಜ್ಯಪಾಲರ ಕ್ರಮವನ್ನು ಖಂಡಿಸಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಅವರು, ‘ಸಾಹಿತಿಗಳಿಗೆ ಡಾಕ್ಟರೇಟ್ ಪದವಿ ನೀಡುವ ಅಧಿಕಾರವನ್ನು ಕರ್ನಾಟಕ ಸಾಹಿತ್ಯ ಪರಿಷತ್ತಿಗೆ ವಹಿಸಬೇಕು. ಅದನ್ನು ಬಿಟ್ಟು ಎಲ್ಲಿಯೋ ಕುಳಿತು ರಾಜಕೀಯದ ಆಗುಹೋಗುಗಳನ್ನು ನೋಡಿಕೊಳ್ಳುವ ರಾಜ್ಯಪಾಲರಿಗೆ ಈ ಅಧಿಕಾರ ನೀಡಿರುವುದು ಸರಿಯಲ್ಲ’ ಎಂದರು.

ಜನತೆಗೆ ಮಾಡಿದ ಅಪಮಾನ: ಸಿ.ಎಂ

ಕಾರ್ಕಳ: ’ನಾಡಿನ ಹಿರಿಯ ಸಾಹಿತಿ ಡಾ.ಎಂ.ಚಿದಾನಂದಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ನಿರಾಕರಿಸುವ ಮೂಲಕ ರಾಜ್ಯಪಾಲರು ನಾಡಿನ ಜನತೆಗೆ ಅಪಮಾನ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾನುವಾರ ಇಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯಪಾಲರ ಬಣ್ಣ ಒಂದೊಂದಾಗಿ ಬಯಲಾಗುತ್ತಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry