ಚಿಮ್ಮಲಗಿ ನೀರಿಗೆ ರೈತರ ಪ್ರತಿಭಟನೆ

7

ಚಿಮ್ಮಲಗಿ ನೀರಿಗೆ ರೈತರ ಪ್ರತಿಭಟನೆ

Published:
Updated:

ಆಲಮಟ್ಟಿ: ಚಿಮ್ಮಲಗಿ ಏತ ನೀರಾವರಿ ಯೋಜನೆಯ ಕಾಲುವೆಗಳಿಗೆ ನೀರು ಹರಿಸಬೇಕು, ಬಸರಕೋಡ ಕೆರೆಯನ್ನು ತುಂಬಬೇಕು ಎಂಬಿತ್ಯಾದಿ ಬೇಡಿಕೆಗಳನ್ನಿಟ್ಟುಕೊಂಡು ಮುದ್ದೇಬಿಹಾಳ ತಾಲ್ಲೂಕಿನ ರೈತರು ಪ್ರತಿಭಟನೆ ನಡೆಸಿದರು.ರೈತ ಮುಖಂಡರಾದ ಗುರುನಾಥ ಬಿರಾದಾರ, ಬಸವರಾಜ ಕುಂಬಾರ ಮಾತನಾಡಿ, ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಇತ್ತೀಚಿಗೆ ತರಾತುರಿಯಲ್ಲಿ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಮುಖ್ಯಸ್ಥಾವರನ್ನು ಉದ್ಘಾಟಿಸಿ ತಿಂಗಳು ಕಳೆಯುತ್ತಾ ಬಂದರೂ, ಆ ಯೋಜನೆಯ ಕಾಲುವೆಗೆ ನೀರು ಹರಿದಿಲ್ಲ.

ಅದೇ ಕಾಲುವೆಯಿಂದ ಬಸರಕೋಡ ಕೆರೆಗೂ ನೀರು ತುಂಬುತ್ತದೆ, ಆ ಕೆರೆಯಲ್ಲಿ ಇದ್ದ ಅಲ್ಪಸ್ವಲ್ಪ ನೀರನ್ನು ಮುಖ್ಯಸ್ಥಾವರ ನಿರ್ಮಾಣಕ್ಕೆ, ಕಾಲುವೆ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ, ಆ ಕೆರೆಗೆ ಸಂಪೂರ್ಣ ಬರಿದಾಗಿದ್ದು, ಇದರಿಂದಾಗಿ ದನಕರುಗಳಿಗೂ ಕುಡಿಯಲು ನೀರಿಲ್ಲದ ಸ್ಥಿತಿ ಬಂದೊದಗಿದೆ. ಕೂಡಲೇ ಆ ಯೋಜನೆಯ ತಾಂತ್ರಿಕ ಅಡಚಣೆಗಳನ್ನು ನಿವಾರಿಸಿ, ಬರುವ ಸಂಕ್ರಾಂತಿ ವೇಳೆಗೆ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಕಾಲುವೆಗಳಿಗೆ ನೀರು ಹರಿಸಬೇಕು, ಇಲ್ಲದಿದ್ದರೇ ಮುಂದಾಗುವ ಪ್ರತಿಭಟನೆಗೆ ಕೆಬಿಜೆಎನ್‌ಎಲ್ ಅಧಿಕಾರಿಗಳೇ ಹೊಣೆ ಎಂದರು.ಶ್ರಿ ರಾಮಲಿಂಗೇಶ್ವರ ದೇವಸ್ಥಾನದಿಂದ ಕೃಷ್ಣಾ ಭಾಗ್ಯ ಜಲ ನಿಗಮದ ಮುಖ್ಯ ಎಂಜಿನಿಯರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ರೈತರ ಮಧ್ಯೆ ಕೆಲ ಕಾಲ ವಾಗ್ವಾದ ನಡೆಯಿತು.ಮುಖ್ಯ ಎಂಜಿನಿಯರ್ ಅನಂತರಾಮು ಮಾತನಾಡಿ, ಯೋಜನೆ ವಿಳಂಬಕ್ಕೆ ತಾಂತ್ರಿಕ ಅಡಚಣೆ, ವಿದ್ಯುತ್ ಸಮಸ್ಯೆಯ ಬಗ್ಗೆ ರೈತರಲ್ಲಿ ಮನವರಿಕೆ ಮಾಡಿಕೊಟ್ಟರು. ಹೆಸ್ಕಾಂನವರ ತಪ್ಪಿನಿಂದಾಗಿ ಸಮರ್ಪಕ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ವೈಜ್ಞಾನಿಕ ರೀತಿಯಲ್ಲಿ ವಿದ್ಯುತ್ ಪೂರೈಕೆಗಾಗಿ ಮತ್ತೊಂದು ವಿದ್ಯುತ್ ಲೈನ್ ಎಳೆಯಲಾಗುತ್ತಿದೆ. ಕಾಮಗಾರಿ ಪೂರ್ಣಗೊಂಡ ನಂತರ ಜನೆವರಿ ಅಂತ್ಯದ ವೇಳೆಗೆ ನೀರು ಹರಿಸಲಾಗುವುದು ಎಂದು ಅವರು ಲಿಖಿತ ವಿವರಣೆ ನೀಡಿದರು.ಬಸರಕೋಡ ಭಾಗದ ರೈತರಾದ ಶ್ರಿಶೈಲ ಮೇಟಿ, ಬಾಬು ಸೂಳಿಭಾವಿ, ಬಸವರಾಜ ಪಟ್ಟಣಶೆಟ್ಟಿ, ಬಸನಗೌಡ ಪಾಟೀಲ, ಗೌಡಪ್ಪಗೌಡ ಪಾಟೀಲ, ಸಂಗಪ್ಪ ಬಾಗೇವಾಡಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಬಿಜೆಪಿ ಪ್ರತಿಭಟನೆ

ವಿಜಾಪುರ:
ತಾಲ್ಲೂಕಿನ ತಿಕೋಟಾದಲ್ಲಿ ಬಬಲೇಶ್ವರ ಮತಕ್ಷೇತ್ರದ ಬಿಜೆಪಿ ಮುಖಂಡರು ಬೆಲೆ ಏರಿಕೆ ಹಾಗೂ ಎಫ್.ಡಿ.ಐ. ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದರು. ಜನಸಾಮಾನ್ಯರ ಹಿತ ಕಾಪಾಡುವಲ್ಲಿ ಕೇಂದ್ರ ರ್ಸಾರ ವಿಫಲವಾಗಿದೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಎಂ.ಎಸ್. ರುದ್ರಗೌಡರ, ಚಂದ್ರಶೇಖರ ಕವಟಗಿ, ನಿಂಗಪ್ಪ ಸಾಲೋಟಗಿ, ಗಿರೀಶ ಕುಲಕರ್ಣಿ, ಅಶೋಕ ಜೋರಾಪುರ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry