ಗುರುವಾರ , ಏಪ್ರಿಲ್ 15, 2021
22 °C

ಚಿರಂಜೀವಿ ಸೆಕೆಂಡ್‌ಇನಿಂಗ್ಸ್!

ಮಲ್ಲಿಕಾರ್ಜುನ ಡಿ.ಜಿ. Updated:

ಅಕ್ಷರ ಗಾತ್ರ : | |

ಹಿಂದೊಮ್ಮೆ ತೆಲುಗು ನಟ ಚಿರಂಜೀವಿಯನ್ನು ರವಿಚಂದ್ರನ್ ಕನ್ನಡ ಚಿತ್ರರಂಗಕ್ಕೆ ಕರೆತಂದಿದ್ದರು. ಅದು ಸ್ನೇಹಬಂಧನ! ರವಿಚಂದ್ರನ್ ಮಾಡಿದಂತಹ ಪ್ರಯತ್ನವನ್ನು ಈಗ ವೀರೇಂದ್ರಬಾಬು ಮಾಡುತ್ತಿದ್ದಾರೆ. ಕಥೆ, ನಿರ್ದೇಶನ, ನಿರ್ಮಾಣ ಹಾಗೂ ನಾಯಕನಟ- ಹೀಗೆ, ವೀರೇಂದ್ರಬಾಬು ಅವರು ಬಹುಮುಖ ಪಾತ್ರಗಳನ್ನು ನಿರ್ವಹಿಸುತ್ತಿರುವ ‘ಸ್ವಯಂಕೃಷಿ’ ಚಿತ್ರದಲ್ಲಿನ ಪ್ರಮುಖ ಪಾತ್ರವೊಂದರಲ್ಲಿ ಚಿರಂಜೀವಿ ನಟಿಸುವುದು ಈಗ ಹೆಚ್ಚೂ ಕಡಿಮೆ ಖಚಿತವಾಗಿದೆಯಂತೆ.‘ನಾನೇಕೆ ನಿಮ್ಮ ಚಿತ್ರದಲ್ಲಿ ನಟಿಸಬೇಕು?’

ತಮ್ಮ ಚಿತ್ರದಲ್ಲಿ ನಟಿಸುವಂತೆ ಕೋರಿದ ವೀರೇಂದ್ರಬಾಬು ಅವರನ್ನು ಚಿರಂಜೀವಿ ಕೇಳಿದ ಪ್ರಶ್ನೆಯಿದು. ಇದಕ್ಕೆ ಬಾಬು ಅವರು ನೀಡಿದ ಉತ್ತರ: ‘ನೀವು (ಚಿರಂಜೀವಿ) ನಟಿಸಿದ ಸ್ವಯಂಕೃಷಿ ತೆಲುಗು ಚಿತ್ರದ ಹೆಸರನ್ನೇ ನಮ್ಮ ಚಿತ್ರಕ್ಕೂ ಇಟ್ಟಿದ್ದೇವೆ. ಜೀವನದಲ್ಲಿ ಸೋತು ಜಿಗುಪ್ಸೆ ಹೊಂದಿರುವ ಯುವಕರು ಮನಸ್ಸು ಮಾಡಿದರೆ ಏನೆಲ್ಲಾ ಸಾಧಿಸಬಹುದೆಂಬ ಸಂದೇಶ ನಮ್ಮ ಚಿತ್ರದಲ್ಲಿದೆ.ಹಾಗಾಗಿ ಈ ಚಿತ್ರದಲ್ಲಿ ನೀವು ನಟಿಸಬೇಕು’. ಈ ವಿವರಣೆ ಚಿರಂಜೀವಿ ಅವರಿಗೆ ಸಮಾಧಾನ ಕೊಟ್ಟಿದ್ದು, ಅವರು ನಟಿಸಲು ಹೂಂ ಎಂದಿದ್ದಾರಂತೆ. ಅಂದಹಾಗೆ, ಕೆ.ವಿಶ್ವನಾಥ್ ನಿರ್ದೇಶಿಸಿದ್ದ ‘ಸ್ವಯಂಕೃಷಿ’ ಚಿತ್ರದ ನಟನೆಗಾಗಿ ಚಿರಂಜೀವಿ ಅವರಿಗೆ ಫಿಲಂಪೇರ್ ಹಾಗೂ ನಂದಿ ಪ್ರಶಸ್ತಿಗಳು ಲಭಿಸಿದ್ದವು. ಕನ್ನಡದ ‘ಸ್ವಯಂಕೃಷಿ’ ಚಿತ್ರದಲ್ಲಿ ಮತ್ತೊಂದು ವಿಶೇಷವೂ ಇದೆ, ಅಂಬರೀಷ್ ರೂಪದಲ್ಲಿ. ಈ ಚಿತ್ರದಲ್ಲಿನ ಮುಖ್ಯಮಂತ್ರಿ ಪಾತ್ರವನ್ನು ಅಂಬರೀಶ್ ಮಾಡಿದ್ದಾರಂತೆ.ಚಿರಂಜೀವಿ ಸೆಕೆಂಡ್ ಇನಿಂಗ್ಸ್!

ಉಮಾಶ್ರೀ, ಸುಮನ್, ಬಿಯಾಂಕಾ ದೇಸಾಯಿ, ತಮನ್ನಾ, ಮುಮೈತ್‌ಖಾನ್ ತಾರಾಗಣದಲ್ಲಿ ಎದ್ದುಕಾಣುವ ಹೆಸರುಗಳು.

ಆದರ್ಶ, ಹಾಸ್ಯ, ಪ್ರೇಮಕಥೆ ಒಳಗೊಂಡಿರುವ ಈ ಚಿತ್ರ 92 ದಿನಗಳ ಚಿತ್ರೀಕರಣ ಪೂರೈಸಿದೆ. ಇದರ ಹಾಡುಗಳ ಸಿ.ಡಿ. ಬಿಡುಗಡೆಯ ಕಾರ್ಯಕ್ರಮ ಪ್ರತಿ ಜಿಲ್ಲೆಯಲ್ಲೂ ಮಾದಲು ವೀರೇಂದ್ರಬಾಬು ಉದ್ದೇಶಿಸಿದ್ದು, ಈಗಾಗಲೇ ಏಳು ಜಿಲ್ಲೆಗಳಲ್ಲಿ ಬಿಡುಗಡೆ ಮಾಡಿದ್ದಾರೆ.ಚಿತ್ರದ ಸಂಗೀತ ಅಭಿಮಾನ್‌ರಾಯ್ ಅವರದ್ದು. ನಾಲ್ಕು ಹಾಡುಗಳ ಚಿತ್ರೀಕರಣವನ್ನು ತಾಜ್‌ಮಹಲ್, ಕೆಂಪುಕೋಟೆ, ಮಲ್ಪೆ ಬೀಚ್, ಬೆಂಗಳೂರು ಮೊದಲಾದೆಡೆ ಚಿತ್ರೀಕರಿಸಿದ್ದಾರಂತೆ. ಕೊನೆಯ ಹಾಡನ್ನು ತಮ್ಮ ಹುಟ್ಟೂರು ಶಿಡ್ಲಘಟ್ಟ ತಾಲ್ಲೂಕಿನ ಬೆಳ್ಳೂಟಿಯಲ್ಲಿ ಬಾಬು ಇದೀಗ ಚಿತ್ರೀಕರಿಸುತ್ತಿದ್ದಾರೆ. ಈ ಚಿತ್ರೀಕರಣದ ಸಂದರ್ಭದಲ್ಲೇ ಮಾತಿಗೆ ಸಿಕ್ಕ ಅವರು ಕನ್ನಡಕ್ಕೆ ಚಿರಂಜೀವಿ ಪುನರಾಗಮನದ ಸುದ್ದಿಸಂತಸ ಹಂಚಿಕೊಂಡರು.‘ಸ್ವಯಂಕೃಷಿ’ ಚಿತ್ರ ‘ಫ್ಯೂಚರ್ ಬೆಂಗಳೂರು’ ಚಿತ್ರಣವೂ ಹೌದಂತೆ. ಕ್ರೈಮ್, ಮೂಲಭೂತ ಸೌಲಭ್ಯ ಕೊರತೆ, ಟ್ರಾಫಿಕ್ ಹೆಚ್ಚಳ ಸೇರಿದಂತೆ ಹಲವು ಸಮಸ್ಯೆಗಳಿಂದ ಬಳಲುತ್ತಿರುವ ಬೆಂಗಳೂರಿಗಾಗಿ ಭವಿಷ್ಯದಲ್ಲಿ ಉತ್ತಮವಾಗಿ ಯೋಜನೆ ರೂಪಿಸಲು ಅಗತ್ಯವಾದ ದೂರದೃಷ್ಟಿಯ ಸಂದೇಶ ಚಿತ್ರದಲ್ಲಿದೆಯಂತೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.