ಮಂಗಳವಾರ, ಏಪ್ರಿಲ್ 20, 2021
24 °C

ಚಿರತೆ ಚಟುವಟಿಕೆಯತ್ತ ಎಲ್ಲರ ಚಿತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿರತೆ ಚಟುವಟಿಕೆಯತ್ತ ಎಲ್ಲರ ಚಿತ್ತ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಸುದ್ದಹಳ್ಳಿ ಮತ್ತು ಮುದ್ದೇನಹಳ್ಳಿ ಸಮೀಪದ ಹೊಸೂರು ಕ್ರಾಸ್ ಬಳಿ ಚಿರತೆ ದಾಳಿಗೆ ಜಾನುವಾರುಗಳು ಬಲಿಯಾದ ಹಿನ್ನೆಲೆಯಲ್ಲಿ ಆತಂಕಗೊಂಡಿದ್ದ ಗ್ರಾಮಸ್ಥರು ಕೊಂಚ ನಿರಾಳರಾಗಿದ್ದಾರೆ.  ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮೀಣ ಪ್ರದೇಶಗಳಲ್ಲಿ ಡಂಗುರ ಸಾರಿಸಿ ಜಾಗೃತಿ ಅಭಿಯಾನ ಕೈಗೊಂಡಿದ್ದರಿಂದ ಗ್ರಾಮಸ್ಥರು ಕಾಡು ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಓಡಾಡುವುದು ಕಡಿಮೆ ಮಾಡಿದ್ದಾರೆ. ಜಾನುವಾರುಗಳನ್ನೂ ಮೇವಿಗಾಗಿಯೂ ಬಿಡುತ್ತಿಲ್ಲ.ಸದ್ಯದ ಸ್ಥಿತಿಯಲ್ಲಿ ಚಿರತೆ ದಾಳಿ ಕಡಿಮೆಯಾಗಿ ಗ್ರಾಮಸ್ಥರು ನಿರಾಳಭಾವ ಮೂಡಿದೆಯಾದರೂ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಮತ್ತು ಇತರ ಕಾಡುಪ್ರಾಣಿಗಳ ಚಟುವಟಿಕೆ ಬಗ್ಗೆ ತೀವ್ರ ನಿಗಾ ವಹಿಸಿದ್ದಾರೆ. ಕಾಡು ಮತ್ತು ಗುಡ್ಡಗಾಡು ಪ್ರದೇಶದಲ್ಲಿನ ಆಯಕಟ್ಟಿನ ಸ್ಥಳಗಳಲ್ಲಿ ಉಳಿದುಕೊಂಡು ಪರಿಶೀಲನೆ ಮುಂದುವರಿಸಿದ್ದಾರೆ.  ಕಾಡುಪ್ರಾಣಿಗಳು ಕಂಡು ಬಂದಲ್ಲಿ, ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದಾರೆ.ಬಯಲುಸೀಮೆ ವ್ಯಾಪ್ತಿಯಲ್ಲಿದ್ದರೂ ಜಿಲ್ಲೆಯಲ್ಲಿ 35 ಸಾವಿರ ಎಕರೆಯಷ್ಟು ಅರಣ್ಯ ಪ್ರದೇಶವಿದೆ. ಗುಡಿಬಂಡೆ ತಾಲ್ಲೂಕಿನ ಆವುಲಬೆಟ್ಟದಿಂದ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿಬೆಟ್ಟದವರೆಗೆ ವಿಶಾಲವಾದ ಬೆಟ್ಟಗುಡ್ಡಗಳ ಸಾಲುಗಳಿದ್ದು, ದಟ್ಟವಾದ ಕಾಡುಪ್ರದೇಶವಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಚಿರತೆ, ಹುಲಿ, ಕಾಡುಹಂದಿ ಚಿಕ್ಕಬಳ್ಳಾಪುರಕ್ಕಿಂತ ಬಾಗೇಪಲ್ಲಿ, ಗುಡಿಬಂಡೆ ತಾಲ್ಲೂಕುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ.` ಕಾಡಿನಲ್ಲಿ ಆಹಾರ ಸಿಗದ ಸಂದರ್ಭದಲ್ಲಿ ಗುಡ್ಡಗಾಡು ಪ್ರದೇಶಕ್ಕೆ ಮೇಯಲು ಬರುವ ಪ್ರಾಣಿಗಳ ಮೇಲೆ ಸಹಜವಾಗಿಯೇ ದಾಳಿ ಮಾಡುತ್ತವೆ. ಒಮ್ಮೆ ಭೇಟೆಯಾಡಿದ ಬಳಿಕ ಸುಮಾರು 10 ರಿಂದ 15 ದಿನಗಳ ಕಾಲ ಮತ್ತೆ ಅದು ಬೇಟೆಯಾಡುವುದಿಲ್ಲ. ಮತ್ತೆ ಹಸಿವಾದಾಗಲೇ ಚಿರತೆಯು ಬೇಟೆ ಮಾಡಲು ಮುಂದಾಗುತ್ತದೆ.

ಆಗ ಸಹಜವಾಗಿಯೇ ಒಂದಿಲ್ಲೊಂದು ಪ್ರಾಣಿಯು ಚಿರತೆಗೆ ಬಲಿಯಾಗುತ್ತದೆ~ ಎಂದು ವಲಯ ಅರಣ್ಯಾಧಿಕಾರಿ ಎಸ್.ಸುರೇಶ್‌ಬಾಬು `ಪ್ರಜಾವಾಣಿ~ಗೆ ತಿಳಿಸಿದರು.`ಸದ್ಯಕ್ಕೆ ಚಿರತೆ ಅಲೆದಾಡುತ್ತಿರುವ ಕುರುಹು ಕಂಡು ಬಂದಿಲ್ಲ. ಮುಂಜಾಗ್ರತೆಯಿಂದ ಚಿರತೆ ಸೆರೆಗಾಗಿ ಅಗತ್ಯ ಸಾಧನ ಇಟ್ಟುಕೊಂಡಿದ್ದೆವೆ  ಎಂದು ಹೇಳಿದರು.ಸಿಗದ ಸಹಾಯಹಸ್ತ: ಆರೋಪ

ಚಿಕ್ಕಬಳ್ಳಾಪುರ: ಚಿರತೆ ದಾಳಿಯಿಂದ ನಮಗೆಲ್ಲ ಆತಂಕವಾಗಿದ್ದರೆ, ಚಿರತೆ ದಾಳಿಯಿಂದ ಜಾನುವಾರುಗಳನ್ನು ಕಳೆದುಕೊಂಡವರಿಗೆ ಆರ್ಥಿಕ ನಷ್ಟವಾಗಿದೆ. ಆದರೆ ಅವರಿಗೆ ಸಾಂತ್ವನ ಹೇಳಲು ಅಥವಾ ಧನಸಹಾಯ ಮಾಡಲು ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳಾಗಲಿ ಯಾರೂ ಸಹ ಮುಂದೆ ಬಂದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.`ಚಿರತೆ ದಾಳಿಯಿಂದ ಗ್ರಾಮಸ್ಥರು ಆತಂಕದಲ್ಲಿ ಇದ್ದಾರೆ ಎಂಬುದು ಜನಪ್ರತಿನಿಧಿಗಳಿಗೆ ಸೇರಿದಂತೆ ಎಲ್ಲರಿಗೂ ಗೊತ್ತಿದೆ.ಬಡ ರೈತ ಕುಟುಂಬಕ್ಕೆ ಸೇರಿದ 30 ರಿಂದ 50 ಸಾವಿರ ರೂಪಾಯಿ ಮೌಲ್ಯದ ಜಾನುವಾರುಗಳು ಬಲಿಯಾಗಿವೆ ಎಂಬ ಸಂಗತಿಯೂ ತಿಳಿದಿದೆ.ಆದರೆ ಇವತ್ತಿನವರೆಗೆ ಚುನಾಯಿತ ಪ್ರತಿನಿಧಿಗಳಲ್ಲಿ ಒಬ್ಬರೂ ಸಹ ಜಾನುವಾರುಗಳನ್ನು ಕಳೆದುಕೊಂಡ ರೈತರ ಮನೆಗೆ ಭೇಟಿ ನೀಡಿಲ್ಲ. ಸರ್ಕಾರದಿಂದ ಅಥವಾ ತಮ್ಮ ಅನುದಾನದಿಂದ ಧನಸಹಾಯ ಒದಗಿಸುವ ಬಗ್ಗೆ ಭರವಸೆಯೂ ನೀಡಿಲ್ಲ~ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.