ಬುಧವಾರ, ಮೇ 12, 2021
24 °C

ಚಿರತೆ ದಾಳಿ: ಮಹಿಳೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳೆನರಸೀಪುರ: ತಾಲ್ಲೂಕಿನ ಹರದನಹಳ್ಳಿ ಸಮೀಪದ ಸೂಜಿಕಲ್ಲು ಬೆಟ್ಟದ ತಪ್ಪಲಿನಲ್ಲಿ ಗುರುವಾರ ಮಹಿಳೆಯೊಬ್ಬರ ಶವ ಪತ್ತೆಯಾ ಗಿದ್ದು, ಚಿರತೆ ಅಥವಾ ಕತ್ತೆಕಿರುಬ (ಹೈನಾ)ನ ದಾಳಿಯಿಂದ ಈಕೆ ಮೃತಪಟ್ಟಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.ಇಲ್ಲಿನ ರಂಗಯ್ಯ ಎಂಬುವವರ ಪತ್ನಿ ಚನ್ನಮ್ಮ (45) ಮೃತಪಟ್ಟಿರುವ ಮಹಿಳೆ. ಆರು ತಿಂಗಳ ಹಿಂದೆ ಈಕೆಯ ಮೇಲೆ ಒಮ್ಮೆ ಚಿರತೆ ದಾಳಿ ನಡೆದಿತ್ತು.

ಚನ್ನಮ್ಮ ಕಳೆದ ಸೋಮವಾರದಿಂದ ನಾಪತ್ತೆಯಾಗಿದ್ದರು. ಈ ಭಾಗದಲ್ಲಿ ಯಾರೇ ನಾಪತ್ತೆಯಾದರೂ ಸಾಮಾನ್ಯವಾಗಿ ಗುಡ್ಡ- ಬೆಟ್ಟಗಳಲ್ಲಿ ಹುಡುಕಾಡಿ, ನಂತರ ಪೊಲೀಸರಿಗೆ ದೂರು ನೀಡಲಾಗುತ್ತದೆ. ಹೀಗೆ ಹುಡುಕುತ್ತಿದ್ದಾಗ ಗುರುವಾರ ಬೆಳಿಗ್ಗೆ ಗುರುತು ಹಿಡಿಯಲಾಗದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.ಶವದ ಮಾಂಸ ಭಾಗವನ್ನೆಲ್ಲ ಪ್ರಾಣಿಗಳು ತಿಂದಿದ್ದು, ಅಸ್ತಿ ಪಂಜರ ಮಾತ್ರ ಕಾಣಿಸುವ ಸ್ಥಿತಿಯಲ್ಲಿತ್ತು. ಸ್ಥಳದಲ್ಲಿದ್ದ ಬಟ್ಟೆ ಬರೆಯ ಆಧಾರದಲ್ಲಿ ಮೃತಪಟ್ಟ ಮಹಿಳೆ ಚನ್ನಮ್ಮ ಎಂದು ಗುರುತಿಸಲಾಗಿದೆ.ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿನೀಡಿದ ಡಿಎಫ್‌ಓ ಲಕ್ಷ್ಮಣ ಶವದ ಪರಿಶೀಲನೆ ನಡೆಸಿ, `ಶವದ ಸ್ಥಿತಿಯನ್ನು ನೋಡಿದರೆ ಚಿರತೆ ಅಥವಾ ಕತ್ತೆ ಕಿರುಬ ದಾಳಿ ನಡೆಸಿರುವ ಸಾಧ್ಯತೆ ಇದೆ' ಎಂದಿದ್ದಾರೆ. ಶವದ ಸುತ್ತಮುತ್ತ ಚಿರತೆ ಮತ್ತು ಕತ್ತೆ ಕಿರುಬಗಳ ಪಾದದ ಗುರುತು ಕಾಣಿಸಿಕೊಂಡಿವೆ. ಚನ್ನಮ್ಮ ಪತಿ, ಒಬ್ಬ ಪುತ್ರಿ ಹಾಗೂ ಇಬ್ಬರು ಪುತ್ರ ಇದ್ದಾರೆ.ಮೂರನೇ ಬಲಿ

ಇತ್ತೀಚೆಗೆ ಇದೇ ಜಾಗದಲ್ಲಿ ನಡೆದ ಮೂರನೇ ದಾಳಿ ಇದಾಗಿದೆ. ಕೆಲವು ತಿಂಗಳ ಹಿಂದೆ ಹರದನಹಳ್ಳಿಯ ಶಿವೇಗೌಡ ಎಂಬುವವರನ್ನು ಹಾಗೂ ಇದಾಗಿ ಕೆಲ ದಿನಗಳ ಬಳಿಕ ಪಾಂಡುರಂಗ ಎಂಬುವವರನ್ನು ಚಿರತೆ ಬಲಿ ತೆಗೆದುಕೊಂಡಿತ್ತು.ಡಿಎಸ್‌ಪಿ ಪ್ರದೀಪ್ ಕುಮಾರ್ ಹಾಗೂ ಎಸಿಎಫ್ ಚಂದ್ರಶೇಖರ್ ಅವರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಬರುತ್ತಿದ್ದಂತೆ ಸ್ಥಳೀಯರು ಅವರ ವಿರುದ್ಧವೇ ಹರಿ ಹಾಯ್ದಿದ್ದಾರೆ. ಇಂಥ ಘಟನೆ ನಡೆದಾಗ ಭೇಟಿ ನೀಡುತ್ತೀರಿ, ಬಳಿಕ ನಮ್ಮ ಕಷ್ಟ ಸುಖ ಕೇಳಲು ಯಾರೂ ಬರುವುದಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೂಡಲೇ ಇಲ್ಲಿ ಬೋನುಗಳನ್ನಿಟ್ಟು ಚಿರತೆ ಹಿಡಿಯಲು ಕ್ರಮ ಕೈಗೊಳ್ಳಬೇಕು ಎಂದೂ ಜನರು ಒತ್ತಾಯಿಸಿದ್ದಾರೆ.

ಎ.ಸಿ.ಎಫ್ ಚಂದ್ರಶೇಖರಯ್ಯ, ಡಿವೈಎಸ್‌ಪಿ ಪ್ರದೀಪ್‌ಕುಮಾರ್, ಸರ್ಕಲ್ ಇನ್‌ಸ್ಪೆಕ್ಟರ್ ಗೋಪಾಲ್‌ನಾಯಕ್, ಸಬ್‌ಇನ್‌ಸ್ಪೆಕ್ಟರ್ ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹರದನಹಳ್ಳಿ ಸುತ್ತಲ ಬೆಟ್ಟಗಳಲ್ಲಿ ಇರಬಹುದಾದ ಚಿರತೆ ಹಾಗೂ ಹೈನಾಗಳನ್ನು ಹಿಡಿಯಲು ತಕ್ಷಣ ಕ್ರಮ ತೆಗೆದುಕೊಳ್ಳುವುದಾಗಿ ಡಿಎಫ್‌ಓ ಲಕ್ಷಣ್ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.