ಗುರುವಾರ , ಜೂನ್ 24, 2021
27 °C

ಚಿರತೆ ಮರಿ ರಕ್ಷಿಸಿದ ಗ್ರಾಮಸ್ಥರು: ಅರಣ್ಯಕ್ಕೆ ಬಿಟ್ಟ ಇಲಾಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ನಾಯಿಯ ದಾಳಿಯಿಂದ ರಕ್ಷಿಸಿಕೊಳ್ಳಲು ಹೆಣಗಾಡುತ್ತಿದ್ದ ಚಿರತೆ ಮರಿಯೊಂದನ್ನು ಗ್ರಾಮಸ್ಥರೇ ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ ಘಟನೆ ಹಾಸನ ತಾಲ್ಲೂಕು ಬೋರಗಾನಹಳ್ಳಿಕೊಪ್ಪಲಿನಲ್ಲಿ ಗುರುವಾರ ಸಂಜೆ ನಡೆದಿದೆ.

ಘಟನೆಯಿಂದ ಒಂದೆಡೆ ಗ್ರಾಮಸ್ಥರಿಗೆ ಚಿರತೆಯನ್ನು ರಕ್ಷಿಸಿದ ಖುಷಿ ಇದ್ದರೆ, ಇನ್ನೊಂದೆಡೆ ಮರಿ–ಚಿರತೆಯನ್ನು ಹುಡುಕುತ್ತ ತಾಯಿ ಗ್ರಾಮಸ್ಥರ ಮೇಲೆ ದಾಳಿಮಾಡುವ ಸಾಧ್ಯತೆ ಇದೆ ಎಂಬ ಭೀತಿಯೂ ಉಂಟಾಗಿದೆ.

ನಿಟ್ಟೂರು ಸಮೀಪದ ಬೋರಗಾನಹಳ್ಳಿಕೊಪ್ಪಲಿನಲ್ಲಿ ಗುರುವಾರ ಸಂಜೆ ವೇಳೆಯಲ್ಲಿ ಮರವೊಂದರ ಮೇಲೆ ಚಿರತೆಯೊಂದು ತನ್ನ 8 ತಿಂಗಳ ಮರಿಯ ಜತೆಗೆ ಆಟವಾಡುತ್ತಿತ್ತು. ಈ ಸಂದರ್ಭದಲ್ಲಿ ಮರಿ ಆಯ ತಪ್ಪಿ ನೆಲಕ್ಕೆ ಬಿದ್ದಿದೆ. ಇದನ್ನು ನೋಡಿದ ಅಲ್ಲೇ ಸುತ್ತಮುತ್ತ ಇದ್ದ ನಾಯಿಮರಿಗಳು ಚಿರತೆ ಮರಿಯನ್ನು ಅಟ್ಟಿಸಿಕೊಂಡು ಬಂದಿವೆ. ನಾಯಿಗಳ ದಾಳಿಯಿಂದ ರಕ್ಷಿಸಿಕೊಳ್ಳುವ ಉದ್ದೇಶದಿಂದ ಮರಿ ಗ್ರಾಮದೊಳಗೆ ನುಸುಳಿತು. ಇದನ್ನು ಕಂಡ ಗ್ರಾಮಸ್ಥರು ನಾಯಿಗಳನ್ನು ದೂರ ಓಡಿಸಿ ಚಿರತೆಮರಿಯನ್ನು ಕಟ್ಟಿ ಒಂದು ಕೊಠಡಿಯಲ್ಲಿ ಕೂಡಿಟ್ಟರು. ಬಳಿಕ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಹಿಡಿದು ಸಕಲೇಶಪುರದ ರಕ್ಷಿತಾರಣ್ಯದಲ್ಲಿ ಬಿಟ್ಟಿದ್ದಾರೆ.ಕಳೆದ ಹಲವು ತಿಂಗಳಿಂದ ಗ್ರಾಮದಲ್ಲಿ ಚಿರತೆ ದಾಳಿಯ ಪ್ರಕರಣಗಳು ನಡೆಯುತ್ತಲೇ ಇದ್ದು ಸುಮಾರು ಹತ್ತಕ್ಕೂ ಹೆಚ್ಚು ಹಸುಗಳು ಚಿರತೆಗೆ ಬಲಿಯಾಗಿವೆ. ಈಗ ಮರಿಚಿರತೆ ಬೇರೆಡೆಗೆ ಸ್ಥಳಾಂತರಗೊಂಡಿರುವುದರಿಂದ ತಾಯಿ ಚಿರತೆ ಗ್ರಾಮದ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಅರಣ್ಯ ಇಲಾಖೆಯ ಕೆಲವು ಸಿಬ್ಬಂದಿ ಬೀಡುಬಿಟ್ಟಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.