ಚಿಲಿಪಿಲಿಗುಟ್ಟುವ ಗುಬ್ಬಚ್ಚಿ ಕಂಡಿರಾ...?

7

ಚಿಲಿಪಿಲಿಗುಟ್ಟುವ ಗುಬ್ಬಚ್ಚಿ ಕಂಡಿರಾ...?

Published:
Updated:
ಚಿಲಿಪಿಲಿಗುಟ್ಟುವ ಗುಬ್ಬಚ್ಚಿ ಕಂಡಿರಾ...?

ಬೆಂಗಳೂರು: ಇಂದಿನ ತಲೆಮಾರಿನ ಹಲವರಿಗೆ  `ಚಿಲಿಪಿಲಿ~ (ಟ್ವೀಟ್) ಎನ್ನುವುದು ಇಂಟರ್‌ನೆಟ್‌ನಲ್ಲಿ ಕೇಳಿಬರುವಂಥ ಪದವಾಗಿರಬಹುದು. ಸದಾ ಚಿಲಿಪಿಲಿಗುಟ್ಟುವ ಪುಟ್ಟ ಗುಬ್ಬಿ ಅವರ ಕಣ್ಣಿಗೆ    `ಟ್ವಿಟರ್. ಕಾಂ~ನಲ್ಲಿ ಮಾತ್ರ ಕಾಣುವ ಚಿತ್ರವಾಗಿರಬಹುದು.ಆದರೆ, ಹಳ್ಳಿಗಾಡಿನ ಹೆಚ್ಚಿನವರ, ನಗರ-ಪಟ್ಟಣಗಳ ಕೆಲವರ ದಿನ ಆರಂಭವಾಗುವುದೇ ಮುದ್ದಾದ ಗುಬ್ಬಚ್ಚಿಗಳ ಚಿಲಿಪಿಲಿ ನಾದದೊಂದಿಗೆ. ಗ್ರಾಮೀಣ ಪ್ರದೇಶಗಳ ಪುಟಾಣಿಗಳು ಪುರ‌್ರನೆ ಹಾರುವ ಗುಬ್ಬಚ್ಚಿಗಳನ್ನು ನೋಡುತ್ತಲೇ ತಮ್ಮ ಬಾಲ್ಯ ಕಳೆಯುತ್ತಾರೆ.ಗುಬ್ಬಚ್ಚಿಗಳು ದೇಶದ ಯಾವ ಪ್ರದೇಶದಲ್ಲಿ ಇಂದಿಗೂ ದೊಡ್ಡ ಪ್ರಮಾಣದಲ್ಲಿ ಕಂಡುಬರುತ್ತಿವೆ. ಗುಬ್ಬಚ್ಚಿಗಳು ಹಿಂದೆ ದೊಡ್ಡ ಸಂಖ್ಯೆಯಲ್ಲಿ ಕಾಣಿಸುತ್ತಿದ್ದು, ಈಗ ಕಣ್ಮರೆಯಾಗಿರುವ ಪ್ರದೇಶಗಳು ಯಾವವು. ಯಾವುದಾದರೂ ಪ್ರದೇಶದಲ್ಲಿ ಅವುಗಳ ಸಂಖ್ಯೆ ಹೆಚ್ಚಾಗಿದೆಯಾ... ಈ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಗುಬ್ಬಿಗಳ ಸಮೀಕ್ಷೆ ನಡೆಸಲು ಮುಂದಾಗಿದೆ `ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ~ (ಬಿಎನ್‌ಎಚ್‌ಎಸ್).ಈ ಕಾರ್ಯದಲ್ಲಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ, ರಾಷ್ಟ್ರೀಯ ಜೀವವಿಜ್ಞಾನ ಕೇಂದ್ರ, ಪ್ರಕೃತಿ ಸಂರಕ್ಷಣಾ ಪ್ರತಿಷ್ಠಾನ ಮತ್ತಿತರ ಸಂಘಟನೆಗಳೂ ಜೊತೆಯಾಗಿವೆ.ಗುಬ್ಬಿಗಳ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಮಾಡಬೇಕಾಗಿದ್ದು ಇಷ್ಟೆ. www.citizensparrow.in ವೆಬ್‌ಸೈಟ್‌ಗೆ ಲಾಗಿನ್ ಆಗಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ನಂತರ ಅದೇ ವೆಬ್‌ಸೈಟ್‌ನಲ್ಲಿರುವ ಪ್ರಶ್ನಾವಳಿಗೆ ಉತ್ತರಿಸಬೇಕು. ವಾಸ ಮಾಡುವ ಪ್ರದೇಶ, ಅಲ್ಲಿ ಎಷ್ಟು ವರ್ಷಗಳ ಹಿಂದೆ ಗುಬ್ಬಿಗಳು ಕಾಣಿಸಿಕೊಳ್ಳುತ್ತಿದ್ದವು, ಈಗಲೂ ಕಾಣಿಸುತ್ತಿವೆಯೇ, ಎಷ್ಟು ಸಂಖ್ಯೆಯ ಗುಬ್ಬಿಗಳು ಕಾಣಿಸಿಕೊಳ್ಳುತ್ತಿವೆ ಎಂಬ ಪ್ರಶ್ನೆಗಳಿಗೆ ಉತ್ತರ ನೀಡಬೇಕು.ಹಾಗೆಯೇ, ಗುಬ್ಬಿಗಳು ಎಷ್ಟು ವರ್ಷಗಳಿಂದ ಕಾಣಿಸಿಕೊಂಡಿಲ್ಲ ಎಂಬ ಬಗ್ಗೆಯೂ ಈ ಪ್ರಶ್ನಾವಳಿ ಮಾಹಿತಿ ಕೋರುತ್ತದೆ. ಪ್ರಶ್ನಾವಳಿಗೆ ಉತ್ತರಿಸುವವರು ತಾವು ವಾಸಿಸುವ ಸ್ಥಳ, ಆ ಸ್ಥಳದ ಅಕ್ಷಾಂಶ ಹಾಗೂ ರೇಖಾಂಶವನ್ನೂ ಗೂಗಲ್ ನಕಾಶೆಯ ಸಹಾಯದಿಂದ ಭರ್ತಿ ಮಾಡಬೇಕು. ಗುಬ್ಬಿಗಳು ಎಷ್ಟು ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿವೆ. ಆ ಪ್ರದೇಶದಲ್ಲಿ ಅವುಗಳ ಗೂಡು ಇದೆಯೇ ಎಂಬ ಕುರಿತೂ ಮಾಹಿತಿ ಒದಗಿಸಬೇಕು.ಅಲ್ಲದೆ, ಗುಬ್ಬಚ್ಚಿಗಳಿಂದ ಪಡೆದಿರಬಹುದಾದ ಆಪ್ತ, ಅಚ್ಚಳಿಯದ ಅನುಭವಗಳನ್ನೂ ಇಲ್ಲಿ ದಾಖಲಿಸಬಹುದು.ಏಕೆ ಈ ಮಾಹಿತಿ?: ಗುಬ್ಬಿಗಳ ಕುರಿತು ಆನ್‌ಲೈನ್ ಮೂಲಕ ಮಾಹಿತಿ ಸಂಗ್ರಹಿಸುತ್ತಿರುವುದು ಬಹುಶಃ ಇದೇ ಮೊದಲ ಬಾರಿಗೆ. ಹೀಗೆ ಸಂಗ್ರಹಿಸಿದ ಮಾಹಿತಿ  ವಿಶ್ಲೇಷಿಸಿ, ಈ ಕುರಿತು ವರದಿ ಸಿದ್ಧಪಡಿಸಿ ಅದನ್ನು ಕಿರು ಸಂಶೋಧನಾ ಪ್ರಬಂಧದ ರೂಪದಲ್ಲಿ ನವದೆಹಲಿಯ ಇಂಧನ ಮತ್ತು ಸಂಪನ್ಮೂಲ ಸಂಸ್ಥೆಗೆ (`ಟೆರಿ~ ವಿಶ್ವವಿದ್ಯಾಲಯ) ಸಲ್ಲಿಸಲಾಗುವುದು ಎಂದು ಬಿಎನ್‌ಎಚ್‌ಎಸ್ ಸಂಸ್ಥೆಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಕೆಲಸ ಮಾಡುತ್ತಿರುವ ಗುಬ್ಬಿಗಳ ಸಮೀಕ್ಷಾ ಕಾರ್ಯದ ಸಂಯೋಜಕ ಕೆ. ಕಾರ್ತೀಕ್ ಹೇಳುತ್ತಾರೆ.ಕರ್ನಾಟಕದಿಂದ ಇದುವರೆಗೆ 800ಕ್ಕೂ ಹೆಚ್ಚು ಮಂದಿ ತಾವು ನೋಡಿರುವ ಗುಬ್ಬಚ್ಚಿಗಳ ಕುರಿತು ಮಾಹಿತಿ ನೀಡಿದ್ದಾರೆ. ಒಟ್ಟಾರೆ ಎಂಟು ಸಾವಿರಕ್ಕೂ ಅಧಿಕ ಮಂದಿ ಮಾಹಿತಿ ನೀಡಿದ್ದಾರೆ ಎಂದು ಕಾರ್ತಿಕ್ ಹೇಳುತ್ತಾರೆ. ಗುಬ್ಬಚ್ಚಿಗಳ ಕುರಿತು ಮಾಹಿತಿ ನೀಡಿರುವವರ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ನೀಡಲಾಗಿದೆ. ಅಲ್ಲದೆ, ಅವರು ನೀಡಿರುವ ಮಾಹಿತಿ ಆಧರಿಸಿ ದೇಶದಲ್ಲಿ ಗುಬ್ಬಚ್ಚಿಗಳು ಎಲ್ಲೆಲ್ಲಿ ಕಂಡುಬಂದಿವೆ ಎಂಬ ನಕಾಶೆಯನ್ನೂ ನೀಡಲಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡು, ಮಾಹಿತಿ ನೀಡಲು ಇದೇ 31 ಕಡೆಯ ದಿನಾಂಕ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry