ಶುಕ್ರವಾರ, ನವೆಂಬರ್ 22, 2019
22 °C

ಚಿಲಿಪಿಲಿ `ಚೆಲ್ಲಾಪಿಲ್ಲಿ'

Published:
Updated:

 

ತೆರೆಯ ಮೇಲೆ ಹಾಡುಗಳು ಮೂಡುತ್ತಿದ್ದವು; ದೂರದಲ್ಲೆಲ್ಲೋ ಹಕ್ಕಿಗಳು ಚಿಲಿಪಿಲಿ ಎಂದಂತೆ. ಅದು `ಚೆಲ್ಲಾಪಿಲ್ಲಿ' ಚಿತ್ರದ ಧ್ವನಿಮುದ್ರಿಕೆ ಬಿಡುಗಡೆ ಸಮಾರಂಭ. ಧ್ವನಿಮುದ್ರಿಕೆ ಬಿಡುಗಡೆ ಎಂದರೆ ಚಿತ್ರವೊಂದು ಮಹತ್ವದ ಘಟ್ಟ ತಲುಪಿದೆ ಎಂದೇ ಅರ್ಥ.

ಅಂಥ ಮಹತ್ವದ ಕಾರ್ಯಕ್ರಮದಲ್ಲಿಯೂ ನಾಯಕ ನಾಯಕಿ ಹಾಜರಿರಲಿಲ್ಲ. ಈಟಿವಿಯ `ಬಿಗ್‌ಬಾಸ್' ಕರೆಗೆ ವಿಜಯರಾಘವೇಂದ್ರ ಓಗೊಟ್ಟಿದ್ದರು. ಬದಲಿಗೆ ಅವರ ತಂದೆ ಚಿನ್ನೇಗೌಡರು ಹಾಜರಿದ್ದರು. ತಾವೂ ಮಗನನ್ನು ಟೀವಿಯಲ್ಲಿಯಷ್ಟೇ ನೋಡಬೇಕಿದೆ ಎಂದರು. `ಬಿಗ್‌ಬಾಸ್' ಮಹಿಮೆ ಹಾಗಿತ್ತು.ನಾಯಕಿ ಐಶ್ವರ್ಯ ನಾಗ್ ಅನಾರೋಗ್ಯದ ಕಾರಣ ಭಾಗವಹಿಸಿರಲಿಲ್ಲ. ನಿರ್ದೇಶಕ ಸಾಯಿಕೃಷ್ಣ ಈ ಅನುಪಸ್ಥಿತಿಯನ್ನೆಲ್ಲಾ ತುಂಬುವಂತೆ ವೇದಿಕೆಯ ತುಂಬಾ ಓಡಾಡುತ್ತಿದ್ದರು. ಅವರ ಚೊಚ್ಚಿಲ ಕಾಣಿಕೆ ಇದು. ಸಂಗೀತ ನಿರ್ದೇಶಕ ಮಿಕ್ಕು ಕಾವಿಲ್ ಅವರಿಗೂ ಇದು ಪ್ರಥಮ ಪ್ರಯೋಗ. ಹಾಸ್ಯಚಿತ್ರಕ್ಕೆ ತಕ್ಕಂತೆ ಅವರು ಹಾಡುಗಳನ್ನು ಹೆಣೆದಿದ್ದಾರೆ.

ಅವರಿಗೆ ತಮಿಳು, ಹಿಂದಿ, ಮಲಯಾಳಂ ಚಿತ್ರಗಳು ಅರಸಿ ಬಂದಿವೆಯಂತೆ. ಹಾಡುಗಳಿಗೆ ಮಂಜು ಕಾರವಾರ ಸಾಹಿತ್ಯವಿದೆ. ಅಂದಹಾಗೆ ಅವರದೂ ಮೊದಲ ಹೆಜ್ಜೆ. ಚಿತ್ರದ ನಿರ್ಮಾಣೋತ್ತರ ಕಾರ್ಯಗಳೆಲ್ಲ ಪೂರ್ಣಗೊಂಡಿವೆ ಎಂದು ಹೇಳುವುದನ್ನು ನಿರ್ದೇಶಕರು ಮರೆಯಲಿಲ್ಲ. ಆದರೆ ಚಿತ್ರ ಬಿಡುಗಡೆ ಯಾವಾಗ ಎಂಬುದನ್ನು ಗುಟ್ಟಾಗಿಯೇ ಇಟ್ಟರು. ಯುವಕರೇ ತುಂಬಿರುವ ಚಿತ್ರ ಯಶಸ್ವಿಯಾಗಲಿ ಎನ್ನುವುದು ಚಿನ್ನೇಗೌಡರ ಹಾರೈಕೆ. ಇದೇ ಇಂಗಿತ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ಅನೂರಾಧಾ ಹಾಗೂ ನಟ ಎಂ.ಎಸ್. ಉಮೇಶ್ ಅವರ ಮಾತಿನಲ್ಲಿ ಅಡಗಿತ್ತು. ಉಮೇಶ್ ಮಂಗಳೂರಿನಲ್ಲಿ ನಡೆದ ಚಿತ್ರೀಕರಣದ ನೆನಪುಗಳಿಗೆ ಜಾರಿದರು.

ಅನೇಕ ತುಳು ರಂಗಭೂಮಿ ಕಲಾವಿದರು ಚಿತ್ರದಲ್ಲಿ ಅಭಿನಯಿಸಿರುವುದನ್ನು ಸ್ಮರಿಸಿದರು.ನಿರ್ಮಾಪಕ ಸುದೇಶ್ ಭಂಡಾರಿ, ಝೇಂಕಾರ್ ಮ್ಯೂಸಿಕ್‌ನ ಭರತ್ ಜೈನ್ ಮುಂತಾದವರು ವೇದಿಕೆಯಲ್ಲಿದ್ದರು.

 

ಪ್ರತಿಕ್ರಿಯಿಸಿ (+)