ಚಿಲ್ಕರಾಗಿ: ಉಲ್ಬಣಿಸಿದ ನೀರಿನ ಸಮಸ್ಯೆ

7

ಚಿಲ್ಕರಾಗಿ: ಉಲ್ಬಣಿಸಿದ ನೀರಿನ ಸಮಸ್ಯೆ

Published:
Updated:

ಕವಿತಾಳ: ಸಮೀಪದ ಪಾಮನಕಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಲ್ಕರಾಗಿ ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ನಿರಂತರವಾಗಿದ್ದು ಬೇಸಿಗೆ ಆರಂಭದಲ್ಲಿಯೇ ಸಮಸ್ಯೆ ಮತ್ತಷ್ಟು ಉಲ್ಬಣಿಸಿದೆ.ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಿಲ್ಕರಾಗಿಯಲ್ಲಿ 140-150 ಮನೆಗಳಿದ್ದು ಅಂದಾಜು 700-800ಜನ ವಾಸಿಸುತ್ತಾರೆ. ಪಂಚಾಯಿತಿ ಪ್ರತಿನಿಧಿಸುವ ಒಬ್ಬ ಸದಸ್ಯನಿದ್ದಾನೆ. ಅಂತರ್ಜಲ ಮಟ್ಟ ಕುಸಿತ ಮತ್ತು ಫ್ಲೋರೈಡ್‌ಯುಕ್ತ ನೀರು ಜನರನ್ನು ಕಂಗಾಲಾಗಿಸಿದೆ. ಗ್ರಾಮದಲ್ಲಿರುವ ಒಂದೇ ಒಂದು ಕೊಳವೆಬಾವಿಯ ಉಪ್ಪು ನೀರು ಬಳಕೆಗೂ ಯೋಗ್ಯವಾಗಿಲ್ಲ, ಅಡುಗೆ ಮಾಡಿದರೆ ಬೇಳೆ ಕುದಿಯುವದಿಲ್ಲ, ಬಟ್ಟೆ ತೊಳೆದರೆ ಸಾಬೂನು ಹತ್ತುವುದಿಲ್ಲ ಎನ್ನುತ್ತಾರೆ ಗ್ರಾಮಸ್ಥರು.6 ಕಿ.ಮೀ. ದೂರದ ಬೆಂಚಮರಡಿ ಗ್ರಾಮದಿಂದ ನೀರು ಸರಬರಾಜು ಮಡಲಾಗುತ್ತಿದ್ದರೂ ನೀರಿನ ಬವಣೆ ನೀಗಿಲ್ಲ. ಇಡೀ ದಿನ ಕೆಲಸ ಬಿಟ್ಟು ಮಹಿಳೆಯರು ಮಕ್ಕಳು ನೀರಿಗಾಗಿ ಕಾಯುವ ಪರಿಪಾಟಲು ಮುಂದುವರಿದಿದೆ. ಸಮೀಪದ ಗುಡಿಹಾಳ ಗ್ರಾಮದಲ್ಲಿ ನಿರ್ಮಿಸಲಾದ ಕೆರೆಗೆ ನೀರು ತುಂಬಲಾಗಿದ್ದರೂ ಪೈಪ್‌ಲೈನ್ ಇಲ್ಲದ ಕಾರಣ ನೀರು ಸರಬರಾಜು ಆಗುತ್ತಿಲ್ಲ. ಇದೀಗ ಬೆಂಚಮರಡಿಯಿಂದ ಕಲ್ಪಿಸಿರುವ ಸಂಪರ್ಕಕ್ಕೆ ಹಿಲಾಲಾಪುರ ಬೆಂಚಮರಡಿ ಗ್ರಾಮಗಳಲ್ಲಿ ಕೆಲವರು ಅನಧಿಕೃತ ಸಂಪರ್ಕ ಪಡೆದಿದ್ದು ನೀರು ಸರಬರಾಜಿನಲ್ಲ ತೊಂದರೆಯಾಗಿದೆ ಎನ್ನುತ್ತಾರೆ ಗ್ರಾಮದ ಶಂಭುರಡ್ಡೆಪ್ಪಗೌಡ.ಗ್ರಾಮದಲ್ಲಿ ನಿರ್ಮಿಸಲಾದ ಮೆಲ್ತೊಟ್ಟಿಗೆ ನೀರಿಲ್ಲ. ಈಗಲೂ ಸಂಪು ನಿಮಾರ್ಣ ನಡೆಯುತ್ತಿದೆ ಆದರೂ ಅದಕ್ಕೆ ಯಾವ ನೀರು ಸರಬರಾಜಿಗೆ ಕ್ರಮ ಕೈಗೊಳ್ಳುತ್ತಾರೆ ಎನ್ನುವುದು ತಿಳಿಯುತ್ತಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ.

ಬೇಸಿಗೆ ಆರಂಭದಲ್ಲಿಯೇ ನೀರಿನ ಸಮಸ್ಯೆ ಹೆಚ್ಚುತ್ತಿರುವುದನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಮನಕ್ಕೆ ತರಲಾಗಿದೆ. ಹಳ್ಳದ ಹತ್ತಿರದ ಕೊಳವೆಬಾವಿ ದುರಸ್ತಿಗೊಳಿಸಬೇಕು ಹಾಗೊಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ಪಂಚಾಯಿತಿಗೆ ಬೀಗಮುದ್ರೆ ಹಾಕಿ ಪ್ರತಿಭಟನೆ ಮಾಡುವುದಾಗಿ ಮಲ್ಲರಡ್ಡೆಪ್ಪಗೌಡ, ಅಮರೇಶಪ್ಪ ಚಕೋಟಿ, ಮಾನಪ್ಪ ಹರಿಜನ, ರಾಮಂಚಂದ್ರಪ್ಪ ಹಡಪದ ಮತ್ತು ಶಿವಪ್ಪ ಮೇಸನ್ ಎಚ್ಚರಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry