ಮಂಗಳವಾರ, ನವೆಂಬರ್ 12, 2019
28 °C
ನಮ್ಮ ಬದುಕಿನ ಬೇರುಗಳನ್ನೇ ಕಿತ್ತು ಹಾಕುವ ಅಮಾನವೀಯ ಸಂಸ್ಕೃತಿ ನಮಗೆ ಬೇಕೆ?

ಚಿಲ್ಲರೆ ಅಂಗಡಿಗಳೆಂಬ ಮಾನವೀಯ ನೆಲೆಗಳು

Published:
Updated:

ನನಗಿನ್ನೂ ಸ್ಪಷ್ಟವಾಗಿ ನೆನಪಿದೆ. ಆಗ ನಾನು ಏಳೆಂಟು ವರುಷದ ಹುಡುಗ. ನಮ್ಮಜ್ಜಿಯ ಮನೆಯಲ್ಲಿದ್ದುಕೊಂಡು ಶಾಲೆಗೆ ಹೋಗುತ್ತಿದ್ದೆ. ಪ್ರತಿ ಭಾನುವಾರ ಆ ಹಳ್ಳಿಗೆ ಹತ್ತಿರ ಇರುವ ಪಟ್ಟಣದಿಂದ ಹಸನಜ್ಜ ಒಂದು ಬಿದಿರಿನ ಕೋಲಿಗೆ ತುದಿಯಿಂದ ಕೆಳಗೆ ಸುಮಾರು ಮೂರು ನಾಲ್ಕು ಅಡಿ ಎತ್ತರಕ್ಕೆ ಭತ್ತದ ಹುಲ್ಲನ್ನು ಸುತ್ತಿಕೊಂಡು ತೆಳುವಾದ ಬಿದಿರು ಕಡ್ಡಿಗೆ ಸಕ್ಕರೆ ಪಾಕದಿಂದ ಮಾಡಲಾದ ಹಸಿರು, ಕೆಂಪು, ಸಕ್ಕರೆ ಗಿಣಿಗಳನ್ನು ಕೋಲಿಗೆ ಸಿಕ್ಕಿಸಿಕೊಂಡು `ಸಕ್ರಿಗಿಣೀ, ಸಕ್ರಿಗಿಣೀ' ಎಂದು ಕೂಗುತ್ತಾ ಮಾರಲು ಬರುತ್ತಿದ್ದ.ನಮಗೆಲ್ಲ ಖುಷಿಯೋ ಖುಷಿ. ಓಣಿಯ ಮಕ್ಕಳೆಲ್ಲಾ ಹಸನಜ್ಜನನ್ನು ಮುತ್ತಿಕೊಂಡು ಸಕ್ರಿಗಿಣೀ ತೆಗೆದುಕೊಳ್ಳುತ್ತಿದ್ದರು. ಆಗ ಅದಕ್ಕಿದ್ದ ಬೆಲೆ ಒಂದು ಆಣೆ (ಆರು ಪೈಸೆ). ಹಸನಜ್ಜ ಊರೆಲ್ಲಾ ಸುತ್ತಾಡಿ ನಮ್ಮ ಅಜ್ಜಿಯ ಮನೆಗೆ ಊಟಕ್ಕೆ ಬರುತ್ತಿದ್ದ. ಯಾವತ್ತೂ ಊಟ ನಮ್ಮಜ್ಜಿ ಮನೆಯಲ್ಲೇ. ಹಸನಜ್ಜ ಊಟ ಮಾಡಿ ನನಗೆರಡು ಸಕ್ರಿಗಿಣೀ ಕೊಟ್ಟು ತಲೆ ನೇವರಿಸಿ ಹೋಗುತ್ತಿದ್ದ.ನಾನು ಆ ಒಂದು ಭಾನುವಾರ ನಮ್ಮ ಪಕ್ಕದ ಬೀಗರ ಊರಿಗೆ ಹೋಗಿದ್ದೆ. ಮರಳಿ ಬರುವಾಗ್ಗೆ ಸಂಜೆಯಾಗಿತ್ತು. `ಹಸನಜ್ಜ ನಿನ್ನ ಕೇಳಿದ್ನೋ' ಎಂದು ನಮ್ಮಜ್ಜಿ ಹಸನಜ್ಜ ಕೊಟ್ಟ ಸಕ್ರಿಗಿಣೀ ಕೊಟ್ಟಳು. ಇದು ಹಸನಜ್ಜನ ವಾತ್ಸಲ್ಯದ ಸಿಹಿ.

ಅಜ್ಜಿ ಮನೆಯಲ್ಲಿ ಕೊಡೆ, ಬೀಗ, ಟ್ರಂಕ್ ಏನಾದರೂ ರಿಪೇರಿ ಇದ್ದರೆ ಹಸನಜ್ಜಗೆ ಕೊಟ್ಟು ರಿಪೇರಿ ಮಾಡಿಸಿಕೊಂಡು ಬರಲು ಹೇಳುತ್ತಿದ್ದಳು. ಊರಿನ ಯಾರದೇ ಮನೆಯವರ ಸಾಮಾನಿರಲಿ, ಅವರು ಕೊಟ್ಟ ವಸ್ತುಗಳ ಸಣ್ಣಪುಟ್ಟ ರಿಪೇರಿ ಮಾಡಿಸಿಕೊಂಡು ಬರುತ್ತಿದ್ದ. ಹೀಗೆ ಊರಿನೊಡನೆ ಆತನ ಸಂಬಂಧ ಬೆಸೆದುಕೊಂಡಿತ್ತು.ಆ ದಿನ ಭಾನುವಾರ ಹೊಲದ ಕಡೆ ಹೋಗಿದ್ದೆ, ಬರುವಾಗ ಸ್ವಲ್ಪ ತಡವಾಗಿತ್ತು. ಬಂದವನೆ `ಎಲ್ಲಿ ನನ್ನ ಸಕ್ರಿಗಿಣೀ?' ಎಂದು ಅಜ್ಜಿಯನ್ನು ಕೇಳಿದೆ. ಅಜ್ಜಿ ಸಪ್ಪೆ ಮುಸುಡಿ ಹಾಕಿಕೊಂಡು ನನ್ನನ್ನು ತಬ್ಬಿಕೊಂಡು ಕಣ್ತುಂಬ ನೀರು ತಂದುಕೊಂಡು `ನಿನ್ನ ಸಕ್ರಿಗಿಣೀನ ಶಿವ ಕಚ್ಚಿಕೊಂಡು ಹೋದ್ನಪ್ಪ ಎಂದಳು' `ಏನಜ್ಜಿ ಬಿಡಿಸಿ ಹೇಳು ಏನಾಯ್ತು ಹಸನಜ್ಜಗೆ' ಅಂದೆ.`ಹಸನಜ್ಜ ಊರಿಗೆ ಸಕ್ರಿಗಿಣೀ ತಗೊಂಡು ಬರುವಾಗ್ಗೆ ದಾರಿಯಲ್ಲಿ ಮರದ ನೆಳ್ಳಾಗ ದಣಿವಾರಿಸಿಕೊಳ್ಳಾಕ ಕೂತ್ಗಂಡಿದ್ನಂತೆ. ಹಸನಜ್ಜಗೆ ಅಲ್ಲೆ ಪೊದೆಯಾಗಿದ್ದ ನಾಗ್ರಹಾವ ಬಂದು ಕಡೀತಂತ, ಅಲ್ಲೆ ಬಿದ್ದು  ಸತ್ನಂತಪ್ಪ' ಎಂದಾಗ `ಅಯ್ಯೋ? ನನ್ನನ್ನ ಬಿಟ್ಟು ಎಲ್ಲಿ ಹೋದಿ ಹಸನಜ್ಜ' ಎಂದು ನನ್ನ ಬಾಯಿಂದ ನನಗರಿವಿಲ್ಲದೆ ಮಾತುಗಳು ಹೊರಬಿದ್ದವು.ಈ `ಎಫ್‌ಡಿಐ' ಎಂಬ ಗಿಡುಗ ಇಂತಹ ಸಕ್ರಿಗಿಣಿಗಳನ್ನು ತಿಂದು ಹಾಕಲು ಬರಲು ಸಜ್ಜಾಗಿ ನಿಂತಿದೆ. ನನಗೆ ಸರಿಯಾದ ನೆನಪಿದೆ. ಆಗ ಶಾಲೆಗಳು ಜಿಲ್ಲಾ ಬೋರ್ಡ್ ಅಧೀನದಲ್ಲಿದ್ದವು. ಮಾಸ್ತರಗೆ ಸಂಬಳ ಸಿಗುತ್ತಿದ್ದುದು, ಮೂರು ನಾಲ್ಕು ತಿಂಗಳಿಗೊಮ್ಮೆ. ಮಾಸ್ತರಗಳು ಊರಲ್ಲಿದ್ದ ಶಿವಣ್ಣ ಶೆಟ್ಟರ ಕಿರಾಣಿ ಅಂಗಡಿಯಲ್ಲಿ ಉದ್ರಿ ಬರೆಸಿ ಮನೆಗೆ ಬೇಕಾದ ಸಾಮಾನು ತರುತ್ತಿದ್ದರು. ಸಂಬಳ ಬಂದ ಕೂಡಲೆ ಪೂರ್ಣವಾಗಿ ಚುಕ್ತಾ ಮಾಡಿಬಿಡುತ್ತಿದ್ದರು. ಈ ತರಹದ ಅನ್ಯೋನ್ಯ ಸಂಬಂಧ ಎಲ್ಲಾ ಗ್ರಾಮಗಳಲ್ಲಿ ಇತ್ತು. ಈಗಲೂ ಚಿಲ್ಲರೆ ಅಂಗಡಿಗಳು ಗ್ರಾಮೀಣರಿಗೆ ಆಪ್ತವಾಗಿಯೇ ಉಳಿದಿವೆ. ಪಟ್ಟಣಗಳ್ಲ್ಲಲೂ ಅನೇಕ ಕಡೆ ಕಾಣಬಹುದು.ಹತ್ತಿರದ ದೊಡ್ಡ ಗ್ರಾಮಕ್ಕೆ ಸಂತೆಗೆ ಹೋದ ಜನ ತಮಗೆ ಪರಿಚಯವಿದ್ದ ಅಂಗಡಿಗಳಲ್ಲಿ ಗಂಟುಮೂಟೆ ಇಟ್ಟು ಸಂತೆ ಮಾಡಿಕೊಂಡು ಸಾಮಾನು ಸಮೇತ ಮನೆಗೆ ಮರುಳುತ್ತಿದ್ದರು. ಈಗಲೂ ಇದನ್ನು ಕಾಣಬಹುದು. ಇದು ತಲೆ-ತಲೆಮಾರಿನಿಂದ ನಡೆದು ಬಂದ ರೀತಿ, ರಿವಾಜು.ಹಲವಾರು ನ್ಯೂನತೆಗಳೊಂದಿಗೆಯೂ ವಿಶ್ವಾಸದ ಈ ಮಧುರ ಸಂಬಂಧದ ಸರಪಳಿ ತುಂಡಾಗದೆ ಇಂದಿಗೂ ಉಳಿದು ಬಂದಿದೆ. `ಎಫ್‌ಡಿಐ'ನ ಆಗಮನ ನಮ್ಮ ಹಿರಿಯರ ಪ್ರೀತಿಯ ನಂಬಿಕೆಗಳನ್ನೇ ಕಡಿದು ಹಾಕಿ ಬಿಡುತ್ತದೆ. ಏನೇ ನಾಶವಾದರು ನಮ್ಮದೆನ್ನುವ ಸಂಸ್ಕೃತಿ ನಾಶವಾಗಬಾರದು. ತಾನೇ? ನಮ್ಮ ಬದುಕಿನ ಬೇರುಗಳನ್ನೇ ಕಿತ್ತು ಹಾಕುವ ಅಮಾನವೀಯ ಸಂಸ್ಕೃತಿ ನಮಗೆ ಬೇಕೆ?ಸರಿಯಾದ ತೂಕ, ಸ್ವಚ್ಛ ಸಾಮಗ್ರಿ ಪೂರೈಕೆ ಸರಿಯಾದ ದರ ಎಲ್ಲಾ ಕರಾರುವಾಕ್ಕು ಎಂಬುದು `ಎಫ್.ಡಿ.ಐ.' ಬಗೆಗೆ ನಮ್ಮ ಆಡಳಿತಗಾರರು ನೀಡುವ ಶಿಫಾರಸ್ಸು. ಈಗಿರುವ ಕಾನೂನುಗಳಿಂದಲೇ ಇದನ್ನೆಲ್ಲಾ ನಮ್ಮ ವ್ಯಾಪಾರಿಗಳಿಂದಲೇ ಮಾಡಿಸಬಹುದು. ಈಗಾಗಲೇ ಈ ಕುರಿತು ಸಾಕಷ್ಟು ಜಾಗೃತಿ ಮೂಡುತ್ತಲಿದೆ. ಹಳ್ಳಿಗಳಲ್ಲಿ ಕೂಡ ಜನರು ಗುಣಮಟ್ಟದ ಸಾಮಗ್ರಿಗಳನ್ನು ಕೊಳ್ಳ ಬಯಸುತ್ತಿದ್ದಾರೆ.ಸರ್ಕಾರಕ್ಕೆ ಇದೆಲ್ಲಾ ಗೊತ್ತಿಲ್ಲದೇನಿಲ್ಲ. ಅವರಿಗೆ ಬೇಕಾಗಿರುವುದು ಕೋಟಿ, ಕೋಟಿ ಬಂಡವಾಳ ಹೂಡುವ ಝಗಮಗಿಸುವ ಮಾಲುಗಳು, ಬಿಗ್ ಬಜಾರಗಳು, ತಮ್ಮ ಜೇಬಿಗೆ ದುಡ್ಡು ಇಳಿಸುವ ಹುನ್ನಾರ `ವೆಲ್ತ್ ಪ್ರೊಡ್ಯೂಸ್ ವೆಲ್ತ್' ಎನ್ನುವ ಪಾಶ್ಚಿಮಾತ್ಯ ವರ್ಟಿಕಲ್ ಆರ್ಥಿಕ ನೀತಿಗೆ ಅಡಿಪಾಯವೇ ಇಲ್ಲ.ನಮ್ಮದು ಗ್ರಾಮೀಣ ವ್ಯವಸಾಯ ಆರ್ಥಿಕ ನೀತಿ. ಅದಕ್ಕೆ ಸಾವೆಂಬುದಿಲ್ಲ. ಕುಂದು ಕೊರತೆಗಳಿರಬಹುದು. ಅದನ್ನು ಸರಿಪಡಿಸಿದರಾಯಿತು. ಲಕ್ಷೋಪಲಕ್ಷ ಜನರಿಗೆ ಉದ್ಯೋಗ ದೊರೆಯುತ್ತದೆ ಎನ್ನುವ ಅವರ ಇನ್ನೊಂದು ವರಸೆ. ಆದರೆ ಲಕ್ಷೋಪಲಕ್ಷ ಚಿಕ್ಕ ಪುಟ್ಟ ವ್ಯಾಪಾರಿಗಳು ಬೀದಿಗೆ ಬೀಳುತ್ತಾರೆ ಎಂಬ ಅರಿವು ಬೇಡವೆ?ಈಗಾಗಲೇ ಅಧುನಿಕ ಮಾನವನ ಬದುಕು ಯಂತ್ರ ನಾಗರಿಕತೆ, ಜಾಗತೀಕರಣ, ಖಾಸಗೀಕರಣದಡಿಯಲ್ಲಿ ಸಿಕ್ಕು ನಲುಗುತ್ತಿದೆ. ಕಮ್ಮಾರನ ಕುಲುಮೆ, ಕುಂಬಾರನ ತಿಗುರಿ, ನೇಕಾರನ ಮಗ್ಗ, ನಿಂತು ಹಲವು ದಶಕಗಳು ಕಳೆದು ಹೋದವು. ಹೊಲದಲ್ಲಿ ಎತ್ತುಗಳಿಲ್ಲ. ಮನೆಯಲ್ಲಿ ದನಕರುಗಳಿಲ್ಲ. ಗ್ರಾಮದ ಕೌಶಲಗಳು ಮಣ್ಣು ಗೂಡಿ ಹೋಗಿವೆ. ಹಲವಾರು ವೈರುಧ್ಯಗಳ ನಡುವೆಯು ಸಂತೃಪ್ತಿಯಿಂದ ಇದ್ದ ಗ್ರಾಮ ಜೀವನ ಪಲ್ಲಟಗೊಂಡಿದೆ.ನಗರದತ್ತ ಮುಖ ಮಾಡಿರುವ ಹಳ್ಳಿಗಳು ತಮ್ಮ ಅಸ್ತಿತ್ವವನ್ನೆ ಕಳೆದು ಕೊಳ್ಳತೊಡಗಿದೆ. ಜಾಗತೀಕರಣ ನಮ್ಮ ಸಂಸ್ಕೃತಿಯನ್ನೇ ಹೀರತೊಡಗಿದೆ. ನಮ್ಮದೆನ್ನುವ ಸುಂದರವಾದ ಬದುಕು ಹೊಸ ಪರಿಕಲ್ಪನೆಗಳಿಂದಾಗಿ ಕುರೂಪವಾಗ ತೊಡಗಿದೆ. ಗಾಂಧಿ ಪ್ರಣೀತ ಸಿದ್ಧಾಂತದಿಂದ ಬಹುದೂರ ಸಾಗುತ್ತಿದ್ದೇವೆ. ದೊಡ್ಡ ದೊಡ್ಡ ಉದ್ಯಮಿಗಳು ಬಂಡವಾಳ ಶಾಹಿಗಳಿಂದ ಸುತ್ತುವರಿಯಲ್ಪಟ್ಟು ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ಬಂದಿದೆ. `ಎಫ್.ಡಿ.ಐ.' ಕೊಳ್ಳುಬಾಕ ಸಂಸ್ಕೃತಿಗೆ ತೆರೆದಿಟ್ಟ ಹೆದ್ದಾರಿ. ಈಗಾಗಲೇ ಚೀನಾ ಕೊಳ್ಳುಬಾಕ ಸಂಸ್ಕೃತಿಯ ಜಾಲದಲ್ಲಿ ಸಿಕ್ಕು ನಲುಗುತ್ತಿವೆ. ಅದರ ಎಚ್ಚರ ನಮಗಿರಲಿ.ನಮ್ಮ ಭತ್ತ, ನಮ್ಮ ಜೋಳ, ನಮ್ಮ ಹಣ್ಣು, ನಮ್ಮ ಕಾಯಿ ಪಲ್ಯವನ್ನು ಪರದೇಶದಿಂದ ಬಂದ ಪುಟ್ಟಿಯಿಂದ ಕೊಳ್ಳಬೇಕಾದ ಸ್ಥಿತಿ ಬರಬಾರದು, ಯಾವಾಗ ನಮ್ಮ ಅಡುಗೆಮನೆ ಅಲುಗಾಡ ತೊಡಗಿತೋ ಅದು ನಮ್ಮ ಪರಂಪರೆಯ ಸಾವು, ಎಚ್ಚರವಿರಲಿ.ಈ ನೆಲಕ್ಕೆ, ಈ ಜಲಕ್ಕೆ ಈ ಹವಾಮಾನಕ್ಕೆ ಒಗ್ಗಿಕೊಂಡು ಬಂದ ನಮ್ಮದೆನ್ನುವ  ಸಮುಚಿತ ಜ್ಞಾನವನ್ನೇ ನಾವು ಮರೆತುಬಿಟ್ಟಿದ್ದೇವೆ. ಹಾಗೆಂದಾಕ್ಷಣ ಆಧುನಿಕ ಸಾಧನ ಸೌಲಭ್ಯಗಳಿಂದ ದೂರ ಸರಿಯಬೇಕೆಂದು ಅರ್ಥವಲ್ಲ. ಅಭಿವೃದ್ಧಿ ಎನ್ನುವುದು ಮಾನವೀಯ ಅಂಶಗಳಿಂದ ದೂರ ಸರಿಯಬಾರದು, ನಮ್ಮ ಹಳ್ಳಿಯ ಪರಂಪರೆ, ಸೊಗಡು, ಪರಿಸರವನ್ನು ತಿಪ್ಪೆಗೆಸೆಯುವ ಯಂತ್ರ ನಾಗರಿಕತೆ ಪಾಶ್ಚಿಮಾತ್ಯ ವಾಣಿಜ್ಯ ಸಂಸ್ಕೃತಿ ಯಾರಿಗೆ ಬೇಕು? `ಎಫ್.ಡಿ.ಐ.' ಈಗ ಮಹಾನ್ ನಗರಗಳಿಗೆ ಮಾತ್ರ ಸೀಮಿತವೆಂದು ಹೇಳಲಾಗುತ್ತದೆ.ನಮ್ಮ ದೇಶದಲ್ಲಿ ಯಂತ್ರ ನಾಗರಿಕತೆಯ ಅಬ್ಬರದ ನಡುವೆಯೂ ಗ್ರಾಮ ನಗರಗಳ ನಡುವಣ ಸಾಂಸ್ಕೃತಿಕ ನೆಲೆಗಳು ಅಷ್ಟೇನು ಬದಲಾಗದೇ ಹಚ್ಚಹಸುರಾಗಿ ಉಳಿದಿವೆ. ಅವು ಮುಂದಕ್ಕೂ ಹಾಗೇ ಉಳಿಯಬೇಕು. `ಎಳೆಕೊಟ್ಟು ಹಚಡ ಕಳೆದು ಕೊಳ್ಳುವುದಕ್ಕೆ' ಮುಂದಾಗಬಾರದು. `ಹಣ, ಹಣವನ್ನು ಉತ್ಪಾದನೆ ಮಾಡುವ ಸಂಸ್ಕೃತಿ' ನಮಗೆ  ಒಗ್ಗದು. ಗಿಳಿಯನ್ನು ಕಬಳಿಸುವ ಗಿಡುಗನಿಗೆ ಆಹ್ವಾನ ಬೇಡ.

ಪ್ರತಿಕ್ರಿಯಿಸಿ (+)