`ಚಿಲ್ಲರೆ' ವಹಿವಾಟಿಗೆ ರಾಜ್ಯಸಭೆ ಅಸ್ತು

7

`ಚಿಲ್ಲರೆ' ವಹಿವಾಟಿಗೆ ರಾಜ್ಯಸಭೆ ಅಸ್ತು

Published:
Updated:

ನವದೆಹಲಿ(ಪಿಟಿಐ/ಐಎಎನ್‌ಎಸ್):ಬಹುಬ್ರಾಂಡ್ ಚಿಲ್ಲರೆ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ನೀಡುವ ವಿವಾದಿತ ನಿರ್ಧಾರಕ್ಕೆ ಕೊನೆಗೂ ಸಂಸತ್ ಅನುಮೋದನೆ ದೊರೆತಿದೆ.ಶುಕ್ರವಾರ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳು ಮಂಡಿಸಿದ ನಿಲುವಳಿ ಸೂಚನೆಯ ಮೇಲಿನ ಮತದಾನದಲ್ಲಿ ಯುಪಿಎ 14 ಮತಗಳಿಂದ ಗೆಲುವು ಸಾಧಿಸಿತು. ಲೋಕಸಭೆಯಂತೆಯೇ ಇಲ್ಲಿಯೂ ಎಸ್‌ಪಿ  ಹಾಗೂ ಬಿಎಸ್‌ಪಿ ಸದಸ್ಯರು ನಿರ್ಣಾಯಕ ಪಾತ್ರ ವಹಿಸಿದರು.ಮತದಾನಕ್ಕೂ ಮುನ್ನ ಎಸ್‌ಪಿ ಸದಸ್ಯರು ಸಭಾತ್ಯಾಗ ಮಾಡಿದರೆ, ಬಿಎಸ್‌ಪಿ ಸದಸ್ಯರು ಆಶ್ವಾಸನೆಯಂತೆಯೇ ಸರ್ಕಾರದ ಪರ ಮತ ಹಾಕಿದರು. ನಿಲುವಳಿಯ ಪರವಾಗಿ 109 ಮತಗಳು ಹಾಗೂ ವಿರುದ್ಧವಾಗಿ 123 ಮತಗಳು ದಾಖಲಾದವು. ಸಚಿನ್ ತೆಂಡೂಲ್ಕರ್, ಮುರಳಿದೇವ್ರಾ, ಬಿಜೆಡಿಯ ಬಂಡಾಯ ನಾಯಕ ಪ್ಯಾರಿ ಮೋಹನ್ ಮಹಾಪಾತ್ರ ಗೈರುಹಾಜರಿದ್ದರು. 244 ಸದಸ್ಯ ಬಲದ ರಾಜ್ಯಸಭೆಯಲ್ಲಿ ಯುಪಿಎ ಬಲ 94.`ಚಿಲ್ಲರೆ' ವಹಿವಾಟಿಗೆ ರಾಜ್ಯಸಭೆ ಅಸ್ತು

ಇದರಲ್ಲಿ ಎಸ್‌ಪಿಯ 9 ಹಾಗೂ ಬಿಎಸ್‌ಪಿಯ 15 ಸದಸ್ಯರು ಇದ್ದಾರೆ.ಟಿಡಿಪಿ ಸಂಸದರಾದ ವೈ.ಎಸ್. ಚೌಧರಿ, ಗುಂಡು ಸುಧಾ ರಾಣಿ ಹಾಗೂ ಟಿ.ದೇವೇಂದ್ರ ಗೌಡ ಅವರು ಮತದಾನದಿಂದ ದೂರ ಉಳಿದು ಯುಪಿಎ ಪರ ನಿಂತರು. ರಾಜ್ಯಸಭೆಯಲ್ಲಿ ಟಿಡಿಪಿಯ ಐವರು ಸದಸ್ಯರು ಇದ್ದಾರೆ. 2008ರಲ್ಲಿ ನಾಗರಿಕ ಪರಮಾಣು ಸಹಕಾರ ಒಪ್ಪಂದ ಕುರಿತಂತೆ ಸಂಸತ್‌ನಲ್ಲಿ ಯುಪಿಎ ಅಗ್ನಿಪರೀಕ್ಷೆಯಲ್ಲೂ ಟಿಡಿಪಿಯ ಇಬ್ಬರು ಸಂಸದರು ಸರ್ಕಾರದ ಪರ ನಿಂತಿದ್ದರು.ಮರು ಎಣಿಕೆಗೆ ಮನವಿ: `ಎಫ್‌ಡಿಐ'ಗೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ಮತಗಳ ಸಂಖ್ಯೆ ಸದಸ್ಯ ಬಲಕ್ಕಿಂತ ಹೆಚ್ಚಿಗೆ ಕಂಡುಬಂದಿರುವುದರಿಂದ ಮರು ಎಣಿಕೆ ಮಾಡಲು ಸರ್ಕಾರ ಕೋರಿತು.ಬಿಜೆಪಿ ರಾಜಕೀಯಕ್ಕೆ ಸೋಲು: ಸಂಸತ್‌ನಲ್ಲಿ ಎಫ್‌ಡಿಐ ಅನುಮೋದನೆಗೆ ಪ್ರತಿಕ್ರಿಯಿಸಿರುವ ಸರ್ಕಾರವು, `ಬಿಜೆಪಿ ರಾಜಕೀಯಕ್ಕೆ ಹಿನ್ನಡೆಯಾಗಿದೆ' ಎಂದು ಟೀಕಿಸಿದೆ.ರಾಜ್ಯಸಭೆಯಲ್ಲಿ ಅಲ್ಪ ಬಲವಿರುವ ಸರ್ಕಾರ, ಎಫ್‌ಡಿಐ ವಿಷಯದಲ್ಲಿ ಗೆದ್ದಿದ್ದು ಹೇಗೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂಸದೀಯ ವ್ಯವಹಾರ ಸಚಿವ ಕಮಲ್ ನಾಥ್, `ಬಿಜೆಪಿ ರಾಜಕೀಯ ಕಾರ್ಯಸೂಚಿ ಅರ್ಥಮಾಡಿಕೊಂಡು ಮತ ಹಾಕುವಂತೆ ಪಕ್ಷಗಳಿಗೆ ಮನವಿ ಮಾಡಿಕೊಂಡ್ದ್ದಿದೇವು. ಅದೇ ಪ್ರಕಾರ ಆಯಿತು' ಎಂದರು.`ಹಣಕಾಸು ಮಸೂದೆಗಳಿಗೆ ಬೆಂಬಲ ನೀಡುವಂತೆ ನಾನು ಬಿಜೆಪಿಗೆ ಮನವಿ ಮಾಡಿಕೊಂಡಿದ್ದೇನೆ. ಬೆಂಬಲ ಸಿಗುವ ಆತ್ಮವಿಶ್ವಾಸವಿದೆ. ಅವರು ಮಸೂದೆಗಳಲ್ಲಿ ಒಂದೋ, ಎರಡೋ ತಿದ್ದುಪಡಿ ತರಬೇಕೆಂದು ಹೇಳುತ್ತಿದ್ದಾರೆ. ಈ ಸಂಬಂಧ ಚರ್ಚೆ ನಡೆಯುತ್ತಿದೆ. ಒಮ್ಮತ ಮೂಡಬೇಕಿದೆ' ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry