ಚಿಲ್ಲರೆ ವಹಿವಾಟಿಗೆ ಸಗಟು ವಿರೋಧ

7

ಚಿಲ್ಲರೆ ವಹಿವಾಟಿಗೆ ಸಗಟು ವಿರೋಧ

Published:
Updated:
ಚಿಲ್ಲರೆ ವಹಿವಾಟಿಗೆ ಸಗಟು ವಿರೋಧದಶಕಗಳ ಕಾಲ ನೆನೆಗುದಿಗೆ ಬಿದ್ದಿದ್ದ,  ರಾಜಕೀಯ, ಸಾಮಾಜಿಕವಾಗಿ ತುಂಬ ಸೂಕ್ಷ್ಮ ಸ್ವರೂಪದ ಬಹು ಬ್ರಾಂಡ್‌ನ ಚಿಲ್ಲರೆ ವಹಿವಾಟಿನಲ್ಲಿ ವಿದೇಶಿ  ನೇರ ಹೂಡಿಕೆಗೆ (ಎಫ್‌ಡಿಐ) ಅವಕಾಶ ಮಾಡಿಕೊಡುವ ಕೇಂದ್ರದಲ್ಲಿನ ಸಂಯುಕ್ತ ಪ್ರಗತಿಪರ ಮೈತ್ರಿಕೂಟ (ಯುಪಿಎ) ಸರ್ಕಾರದ ನಿರ್ಧಾರವು ಸಾಕಷ್ಟು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.ಇದೊಂದು ದಿಟ್ಟ ನಿರ್ಧಾರ ಎಂದು `ಎಫ್‌ಡಿಐ~ ಪರ ಇರುವವರು ಸಮರ್ಥಿಸಿಕೊಂಡಿದ್ದರೆ, ವಿರೋಧಿಗಳು ` ಕೋಟ್ಯಂತರ ಸಣ್ಣ ವ್ಯಾಪಾರಿಗಳ ಜೀವನೋಪಾಯ ಹಾಳು ಮಾಡುವ ಮೂರ್ಖತನದ ತೀರ್ಮಾನವಾಗಿದೆ~ ಎಂದು ಕಟಕಿಯಾಡಿವೆ.ಕೇಂದ್ರ ಸರ್ಕಾರವು ರಾಜಕೀಯವಾಗಿ ಹೆಚ್ಚು ಅಪಾಯಕಾರಿಯಾದ ಮತ್ತು ದೇಶದ ಅರ್ಥ ವ್ಯವಸ್ಥೆಯ ಮೇಲೆ ದೂರಗಾಮಿ ಪರಿಣಾಮ ಬೀರಬಹುದಾದ ನಿರ್ಧಾರ ಕೈಗೊಂಡಿದ್ದರೂ ಇಂತಹ ವಿವಾದಾತ್ಮಕ ವಿಷಯದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಹಕ್ಕು ರಾಜ್ಯ ಸರ್ಕಾರಗಳಿಗೆ ಇದೆ.ನೀತಿ ಪ್ರಕಟಗೊಂಡ ಎರಡೇ ದಿನಗಳಲ್ಲಿ ಐದು ರಾಜ್ಯ ಸರ್ಕಾರಗಳು, ವಾಲ್‌ಮಾರ್ಟ್, ಟೆಸ್ಕೊದಂತಹ ಸರಣಿ ಸೂಪರ್ ಮಾರುಕಟ್ಟೆಗಳಿಗೆ ರತ್ನಗಂಬಳಿ ಸ್ವಾಗತ ನೀಡಲು ಮುಂದೆ ಬಂದಿವೆ. ಪಂಜಾಬ್, ಹರಿಯಾಣ, ಮಹಾರಾಷ್ಟ್ರ, ರಾಜಸ್ತಾನ ಮತ್ತು ಒಡಿಶಾ ರಾಜ್ಯಗಳು  ಈ ನಿರ್ಧಾರಕ್ಕೆ ಬಂದಿದ್ದರೆ, ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ರಾಜ್ಯಗಳಲ್ಲಿ ವಿರೋಧ ವ್ಯಕ್ತವಾಗಿದೆ.ಕೇಂದ್ರ ಸರ್ಕಾರ ಇಂತಹ ನಿರ್ಧಾರ ಕೈಗೊಂಡಿದ್ದರೂ, ಇದು ಕೇಂದ್ರ ಮತ್ತು ರಾಜ್ಯಗಳ ಸಹವರ್ತಿ ಪಟ್ಟಿಯಲ್ಲಿ ಇರುವ ವಿಷಯವಾಗಿರುವುದರಿಂದ ಬಹು ರಾಷ್ಟ್ರೀಯ ಸಂಸ್ಥೆಗಳ ಪ್ರವೇಶಕ್ಕೆ ರಾಜ್ಯಗಳ ಅನುಮತಿ ಬೇಕು. ಜತೆಗೆ ಕೃಷಿ  ಉತ್ಪನ್ನಗಳ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಾಯ್ದೆಗೂ ಸೂಕ್ತ ತಿದ್ದುಪಡಿ ತರುವುದು ಅನಿವಾರ್ಯ.ದೇಶದ ಚಿಲ್ಲರೆ ವಹಿವಾಟಿನಲ್ಲಿ ಬಹುರಾಷ್ಟ್ರೀಯ ಬೃಹತ್ ವ್ಯಾಪಾರಿ ಸಂಸ್ಥೆಗಳಿಗೆ ಅವಕಾಶ ಮಾಡಿಕೊಡುವ  ಅನುಮತಿಯು ಹಲವಾರು ನಿಬಂಧನೆಗಳಿಗೆ ಒಳಪಟ್ಟಿದೆ. 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯ ನಗರಗಳಲ್ಲಿ ಮಾತ್ರ ವಿದೇಶಿ ಸಂಸ್ಥೆಗಳು ತಮ್ಮ ಅಂಗಡಿ ತೆರೆಯಲು ಅವಕಾಶ ಕಲ್ಪಿಸಿರುವುದು ಇಂತಹ ಷರತ್ತುಗಳಲ್ಲಿ ಸೇರ್ಪಡೆಯಾಗಿದೆ. `ಎಫ್‌ಡಿಐ~ ಹೂಡಿಕೆ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಮೂರ್ನಾಲ್ಕು ವರ್ಷಗಳು ಹಿಡಿಯಲಿವೆ.ಹೀಗಾಗಿ ತಕ್ಷಣಕ್ಕೆ ಎಲ್ಲೆಡೆ ಚಿಲ್ಲರೆ ವಹಿವಾಟಿನ ಸ್ವರೂಪಕ್ಕೆ ಯಾವುದೇ ಬಗೆಯ ಧಕ್ಕೆ ಒದಗುವುದಿಲ್ಲ.ಬಹು ಬ್ರಾಂಡ್ ಚಿಲ್ಲರೆ ವಹಿವಾಟಿನಲ್ಲಿ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಶೇ 51ರಷ್ಟು ಮತ್ತು ಒಂದೇ ಬ್ರಾಂಡ್ ವಲಯದಲ್ಲಿ ಶೇ 100ರಷ್ಟು ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡುವ   ಸರ್ಕಾರದ ನಿರ್ಧಾರ ಪ್ರಕಟಗೊಳ್ಳುತ್ತಿದ್ದಂತೆ ದೇಶದಾದ್ಯಂತ ತೀಕ್ಷ್ಣ ಪ್ರತಿಕ್ರಿಯೆಗಳು ಮತ್ತು ಬೆಳವಣಿಗೆಗಳು ಕಂಡು ಬಂದಿವೆ. ಡಿಸೆಂಬರ್ 1 ರಂದು ದೇಶದಾದ್ಯಂತ `ಭಾರತ್ ವ್ಯಾಪಾರ್ ಬಂದ್~  ಆಚರಣೆಗೆ ಅಖಿಲ ಭಾರತ ವರ್ತಕರ ಒಕ್ಕೂಟವು ಕರೆ ನೀಡಿದೆ.ವಿಡಿಯೊಕಾನ್ ಸಮೂಹವು ಅಮೆರಿಕ ಮೂಲದ ಎಲೆಕ್ಟ್ರಾನಿಕ್ಸ್ ಸರಣಿ ಮಾರಾಟ ಸಂಸ್ಥೆ `ಬೆಸ್ಟ್ ಬಾಯ್~ ಜತೆ ಸಹಭಾಗಿತ್ವ ಹೊಂದಲು ಮಾತುಕತೆ ಆರಂಭಿಸಲಿದೆ. ಭಾರ್ತಿ ಎಂಟರ್‌ಪ್ರೈಸಸ್, ಕ್ಯಾಷ್ ಆಂಡ್ ಕ್ಯಾರಿ ವಹಿವಾಟಿನಲ್ಲಿನ ತನ್ನ ಪಾಲುದಾರ ಸಂಸ್ಥೆ ವಾಲ್‌ಮಾರ್ಟ್ ಚರ್ಚೆ ಆರಂಭಿಸುವುದಾಗಿ ತಿಳಿಸಿದೆ. ಸರ್ಕಾರದ ನಿರ್ಧಾರ ಸ್ವಾಗತಿಸಿರುವ ವಾಲ್‌ಮಾರ್ಟ್, ದೊಡ್ಡ ಪ್ರಮಾಣದ ಬಂಡವಾಳ ಹೂಡಿಕೆಗೆ ಅವಸರಿಸುವುದಿಲ್ಲ ಎಂದು ಹೇಳಿದೆ.ಅಗ್ಗದ ಸರಕುಗಳು ದೇಶದೊಳಗೆ ಪ್ರವಾಹ ರೂಪದಲ್ಲಿ ಹರಿದು ಬಂದು ಸ್ಥಳೀಯ ಉದ್ದಿಮೆಗಳಿಗೆ ಮಾರಕವಾಗಿ ಪರಿಣಮಿಸಲಿದೆ ಎನ್ನುವ ಟೀಕೆಯಲ್ಲಿ ಆಧಾರ ಇಲ್ಲ ಎಂದು ಸರ್ಕಾರ ಭರವಸೆ ನೀಡುತ್ತಿದೆ. ಟೀಕಾಕಾರರಿಗೆ ಉತ್ತರ ನೀಡಲು ವ್ಯಾಪಕ ಪ್ರಮಾಣದ ಜಾಹೀರಾತು ಪ್ರಚಾರಕ್ಕೂ ಚಾಲನೆ ನೀಡಿದೆ.ಈ ನಿರ್ಧಾರವು ದೇಶದ ರೀಟೇಲ್ ಉದ್ದಿಮೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ ಎಂದೂ ಭರವಸೆ ನೀಡಿದೆ.

 

ಟೀಕೆಗಳೆಲ್ಲ ನಿರಾಧಾರವಾಗಿದ್ದು ವಾಸ್ತವ ಸಂಗತಿಯು ಭಿನ್ನವಾಗಿದೆ ಎಂದು ತಿಳಿಸಿದೆ.

ಚಿಲ್ಲರೆ ವಹಿವಾಟು ನಡೆಸುವ ಅಂತರರಾಷ್ಟ್ರೀಯ ಬೃಹತ್ ಸಂಸ್ಥೆಗಳು ದೇಶದಲ್ಲಿ ತಮ್ಮ ಅಂಗಡಿ ತೆರೆಯಲು ಅವಕಾಶ ಮಾಡಿಕೊಡುವ ಮತ್ತು ವಾಲ್‌ಮಾರ್ಟ್ ಮತ್ತು ಕರ‌್ರೆಫೋರ್‌ಗಳ ಚಿಲ್ಲರೆ ವಹಿವಾಟಿನ ಸ್ವರೂಪವು ಭಾರತಕ್ಕೆ ಸೂಕ್ತವಾಗಿ ಹೊಂದಾಣಿಕೆ ಆಗುವುದಿಲ್ಲ. ಅಮೆರಿಕದ ಕಾಯಿಲೆಯನ್ನು ನಮಗೂ ಅಂಟಿಸುವ ಧೋರಣೆ ಏಕೆ- ಎನ್ನುವುದು ಬಿಜೆಪಿ ನಿಲುವಾಗಿದೆ.ಒಂದೆಡೆ ಡಾಲರ್ ಎದುರು ರೂಪಾಯಿ ಬೆಲೆ ಕುಸಿಯುತ್ತಿದೆ. ದೇಶಿ ಅರ್ಥ ವ್ಯವಸ್ಥೆಗೆ ನಮ್ಮದೇ ಆದ ಪರಿಹಾರ ಕಂಡುಕೊಳ್ಳುವ ಬದಲಿಗೆ ಅಮೆರಿಕದ ಪರಿಹಾರ ಏಕೆ ಎನ್ನುವುದು ಅನೇಕರ ವಾದವಾಗಿದೆ.ಉದ್ಯೋಗ ಅವಕಾಶಗಳ ಸೃಷ್ಟಿ, ರೈತರಿಗೆ ನ್ಯಾಯೋಚಿತ ಬೆಲೆ ಮತ್ತು ಗ್ರಾಹಕರಿಗೆ ಸ್ಪರ್ಧಾತ್ಮಕ ಬೆಲೆಯ ಲಾಭ ದೊರೆಯಲಿದೆ ಎಂದು ಬೆಂಬಲಿಗರು ಸಮರ್ಥಿಸಿಕೊಳ್ಳುತ್ತಿದ್ದಾರೆ.ಅಳೆದು ಸುರಿದು ಕೊನೆಗೂ ನಿರ್ಧಾರ ಕೈಗೊಂಡು ಆರ್ಥಿಕ ಸುಧಾರಣೆಗಳ ಜಾರಿ ನಿಟ್ಟಿದಲ್ಲಿ ಹೊಸ ಹೆಜ್ಜೆ ಇರಿಸಿದೆ. ಆರಂಭದಲ್ಲಿಯೇ ಸಾಕಷ್ಟು ವಿರೋಧ ಕಂಡುಬರುತ್ತಿದೆ. ಸರ್ಕಾರದ ಮಿತ್ರ ಪಕ್ಷಗಳೂ ಈ ನಿಲುವನ್ನು ವಿರೋಧಿಸಿವೆ. ಇಷ್ಟೆಲ್ಲ ಪ್ರತಿರೋಧಗಳ ಮಧ್ಯೆ ಚಿಲ್ಲರೆ ವಹಿವಾಟು ಉದ್ದಿಮೆಯ ಭವಿಷ್ಯ ಡೋಲಾಯಮಾನವಾಗಬಹುದು. ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ.ಸಕಾರಾತ್ಮಕ ಅರ್ಥ ವ್ಯವಸ್ಥೆಗೆ

- ಪ್ರತಿಯೊಂದು ಬಹುರಾಷ್ಟ್ರೀಯ ಸಂಸ್ಥೆ ಕನಿಷ್ಠ 100 ದಶಲಕ್ಷ ಡಾಲರ್‌ಗಳಷ್ಟು  (್ಙ 500 ಕೋಟಿ) ಬಂಡವಾಳ ಹೂಡಿಕೆ ಮಾಡಲಿವೆ ಸರಕುಗಳ ಸಾಗಾಣಿಕೆ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ಹೂಡಿಕೆ-ರಫ್ತು ಹೆಚ್ಚಳ

-ಹೊಸ ಉದ್ಯೋಗ ಅವಕಾಶಗಳ ಸೃಷ್ಟಿಗ್ರಾಹಕರ ಪಾಲಿಗೆ

-ಒಂದೇ ಛಾವಣಿಯಡಿ ಉತ್ಪನ್ನಗಳ ಆಯ್ಕೆಗೆ ಹೆಚ್ಚು ಅವಕಾಶ

-ಮಧ್ಯವರ್ತಿಗಳ ಹಾವಳಿ ಇಲ್ಲದಿರುವುದರಿಂದ ಮತ್ತು ವಿಸ್ತೃತ ವಹಿವಾಟಿನ ಕಾರಣಕ್ಕೆ ಸರಕುಗಳ ಬೆಲೆ ಇಳಿಕೆ ರೈತರು ಮತ್ತು ಪೂರೈಕೆದಾರರಿಗೆ

-ಬೃಹತ್ ಪ್ರಮಾಣದಲ್ಲಿ ಖರೀದಿ ಮತ್ತು ಉತ್ತಮ ಬೆಲೆನಕಾರಾತ್ಮಕ ಸಂಗತಿಗಳು

ಸ್ಥಳೀಯ ಕಿರಾಣಿ ಅಂಗಡಿಗಳಿಗೆ

-ಮಹಾನಗರಗಳು ಮತ್ತು (10 ಲಕ್ಷದಷ್ಟು ಜನಸಂಖ್ಯೆ ಇರುವ) ಎರಡನೇ ಸ್ಥರದ ನಗರಗಳಲ್ಲಿ ಕಾರ್ಯಾರಂಭ ಮಾಡುವ ಬೃಹತ್ ವ್ಯಾಪಾರ ಮಳಿಗೆಗಳ ಸುತ್ತಮುತ್ತಲಿನ ಕಿರಾಣಿ ಅಂಗಡಿಗಳ ವ್ಯಾಪಾರಕ್ಕೆ ಧಕ್ಕೆ ಮಧ್ಯವರ್ತಿಗಳ ಪಾಲಿಗೆ

-ಮಧ್ಯವರ್ತಿಗಳು ಅಪ್ರಸ್ತುತಗೊಳ್ಳಲಿದ್ದಾರೆ. ಬೃಹತ್ ಸಂಸ್ಥೆಗಳು ಸರಕುಗಳನ್ನು  ರೈತರಿಂದಲೇ ನೇರವಾಗಿ ಖರೀದಿಸುತ್ತವೆತ್ವರಿತವಾಗಿ ಬಿಕರಿಯಾಗುವ ಸರಕು ತಯಾರಿಕಾ ಸಂಸ್ಥೆಗಳ ಪಾಲಿಗೆ

ಬಹುರಾಷ್ಟ್ರೀಯ ಸಂಸ್ಥೆಗಳು ಸಗಟು ಖರೀದಿಗೆ ಕಡಿಮೆ ಬೆಲೆಗೆ ಪಟ್ಟು ಹಿಡಿಯುವುದರಿಂದ `ಎಫ್‌ಎಂಸಿಜಿ~ ಸಂಸ್ಥೆಗಳು ಕಡಿಮೆ ಲಾಭಕ್ಕೆ ರಾಜಿಯಾಗಬೇಕಾಗುತ್ತದೆ`ಎಫ್‌ಡಿಐ~ ಲಾಭ: ಸರ್ಕಾರದ ಚಿಂತನೆ-ಮೂರು ವರ್ಷಗಳಲ್ಲಿ 1 ಕೋಟಿಗಳಷ್ಟು ಹೊಸ ಉದ್ಯೋಗ ಅವಕಾಶಗಳ ಸೃಷ್ಟಿ

-ಚಿಲ್ಲರೆ ವಹಿವಾಟಿನಲ್ಲಿ ಹಲವು ಶತಕೋಟಿ ಡಾಲರ್‌ಗಳಷ್ಟು ಬಂಡವಾಳ ಹೂಡಿಕೆ

-ರೈತರು ಬೆಳೆಯುವ ತರಕಾರಿ ಮತ್ತು ಹಣ್ಣುಗಳಿಗೆ ಶೇ 12ರಿಂದ ಶೇ15ರಷ್ಟು ಹೆಚ್ಚುವರಿ ಬೆಲೆ ಪಡೆಯುವರು-ಸಣ್ಣ ಕೈಗಾರಿಕಾ ಘಟಕಗಳಿಂದ (ಎಸ್‌ಎಸ್‌ಐ) ಶೇ 30ರಷ್ಟು ಸರಕು ಖರೀದಿ ಕಡ್ಡಾಯ

-ಶೇ 70ರಷ್ಟು ಆಹಾರ ಪದಾರ್ಥಗಳನ್ನು ಸ್ಥಳೀಯವಾಗಿಯೇ ಖರೀದಿಸಲಾಗುವುದು

-ಮೂಲ ಸೌಕರ್ಯ ಅಭಿವೃದ್ಧಿಯಲ್ಲಿ ಶೇ 50ರಷ್ಟು ಬಂಡವಾಳ ಹೂಡಿದರೆ ಮಾತ್ರ ಅನುಮತಿ-ಕೃಷಿ ಉತ್ಪನ್ನಗಳ ಖರೀದಿಯಲ್ಲಿ ಸರ್ಕಾರಕ್ಕೆ ಆದ್ಯತೆ

ದೇಶಿ ಚಿಲ್ಲರೆ ವಹಿವಾಟಿನ ಸ್ವರೂಪ

-ಗಾತ್ರ: 400 ಶತಕೋಟಿ ಡಾಲರ್ (್ಙ 20,80,000 ಕೋಟಿ) ಗಳಷ್ಟಿದೆ. 2014ರ ಹೊತ್ತಿಗೆ 900 ಶತಕೋಟಿ ಡಾಲರ್‌ಗಳಷ್ಟು (್ಙ46,80,000 ಕೋಟಿ

-ಮಾರುಕಟ್ಟೆ ಪಾಲು: ಸಂಘಟಿತ ವಲಯದ ಪಾಲು ಶೇ 6ರಷ್ಟು

-ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಡಿಪಿ) ಶೇ 15ರಷ್ಟು ಪಾಲು

-ಒಟ್ಟಾರೆ ಉದ್ಯೋಗಾವಕಾಶಗಳಲ್ಲಿ ಶೇ 8ರಷ್ಟು ಪಾಲು

-ಕ್ಯಾಷ್ ಆಂಡ್ ಕ್ಯಾರಿ ವಹಿವಾಟಿನಲ್ಲಿ ಶೇ 100ರಷ್ಟು ವಿದೇಶಿ ಪಾಲುದಾರಿಕೆ

-ಒಂದೇ ಬ್ರಾಂಡ್‌ನ ರಿಟೇಲ್ ವಹಿವಾಟಿನಲ್ಲಿ  ಶೇ 100ರಷ್ಟು ವಿದೇಶಿ ಪಾಲುದಾರಿಕೆ

-ಬಹು ಬ್ರಾಂಡ್‌ನ ಚಿಲ್ಲರೆ ವಹಿವಾಟಿನಲ್ಲಿ ಶೇ 51ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ-2006ರ ಫೆಬ್ರುವರಿ 10ರಂದು ಒಂದೇ ಬ್ರಾಂಡ್ ವಹಿವಾಟಿನಲ್ಲಿ ಮೊದಲ ವಿದೇಶಿ ಪಾಲುದಾರಿಕೆಗೆ ಅವಕಾಶ-ಚಿಲ್ಲರೆ ವಹಿವಾಟಿನಲ್ಲಿ ಬಂಡವಾಳ ಹೂಡಿಕೆಗೆ ಭಾರತವು ವಿಶ್ವದಲ್ಲಿಯೇ ನಾಲ್ಕನೇ ಅತ್ಯುತ್ತಮ ದೇಶವಾಗಿದೆ.

-ದೇಶದ ಪ್ರಮುಖ ಜನಪ್ರಿಯ ಬ್ರಾಂಡ್‌ಗಳು: ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ರೀಟೇಲ್, ಆದಿತ್ಯ ಬಿರ್ಲಾ ಗ್ರೂಪ್‌ನ ಮೋರ್, ರಹೇಜಾ ಸಂಸ್ಥೆಯ ಶಾಪರ್ಸ್ ಸ್ಟಾಪ್, ಕಿಶೋರ್ ಬಿಯಾನಿ ಅವರ ಫ್ಯೂಚರ್ ಗ್ರೂಪ್‌ನ ಬಿಗ್ ಬಜಾರ್, ಭಾರ್ತಿ - ವಾಲ್‌ಮಾರ್ಟ್‌ನ ಬೆಸ್ಟ್ ಪ್ರ್ಯಾಕ್ಟಿಸ್, ಟಾಟಾ ಸಮೂಹದ ಕ್ರೋಮಾ.

ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುವ ಸರಕು: ಆಹಾರ, ದಿನಸಿ ಪದಾರ್ಥ, ವಸ್ತ್ರ, ಪಾದರಕ್ಷೆ ಮತ್ತು ಎಲೆಕ್ಟ್ರಾನಿಕ್ಸ್ ಸರಕು.

 

ವಿರೋಧ

-ನೆರೆಹೊರೆಯಲ್ಲಿ ಇರುವ ಲಕ್ಷಾಂತರ ಸಣ್ಣ ಪುಟ್ಟ ಅಂಗಡಿಗಳು ಬಾಗಿಲು ಹಾಕಬೇಕಾಗುತ್ತದೆ. ಇದರಿಂದ 4 ಕೋಟಿಗಳಷ್ಟು ಜನರ ಜೀವನೋಪಾಯಕ್ಕೆ ಧಕ್ಕೆ ಒದಗಲಿದೆ-ಆರಂಭದಲ್ಲಿ ಬೆಲೆಗಳನ್ನು ತಗ್ಗಿಸಿದರೂ, ವಹಿವಾಟಿನ ಜುಟ್ಟು ವಿದೇಶಿ ಬಹುರಾಷ್ಟ್ರೀಯ ಸಂಸ್ಥೆಗಳ ಕೈಗೆ ಸಿಗುತ್ತಿದ್ದಂತೆ ಬೆಲೆಗಳು ಏರತೊಡಗಬಹುದು-ಆರಂಭದಲ್ಲಿ ರೈತರಿಗೂ ನ್ಯಾಯಯುತ ಬೆಲೆ ನೀಡಿದರೂ, ರೈತಾಪಿ ವರ್ಗವು ಚಿಲ್ಲರೆ ವಹಿವಾಟುದಾರರ ಮರ್ಜಿಯಲ್ಲಿಯೇ ಇರಬೇಕಾಗುತ್ತದೆ-ಇತರರನ್ನು ಲೂಟಿ ಮಾಡುವ ಬಹುರಾಷ್ಟ್ರೀಯ ಸಂಸ್ಥೆಗಳ ಬೆಲೆ ನೀತಿಯ ಫಲವಾಗಿ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ನಷ್ಟ ಉಂಟಾಗಲಿದೆ-ಸರಕುಗಳ ಪೂರೈಕೆ ಸರಣಿ ವ್ಯವಸ್ಥೆ ವಿಭಜಿಸಿ, ಜಾಗತಿಕ ಸಂಸ್ಥೆಗಳ ಏಕಸ್ವಾಮ್ಯಕ್ಕೆ ಅವಕಾಶ ಮಾಡಿಕೊಡಲಾಗುವುದು-ಚಿಲ್ಲರೆ ವಹಿವಾಟಿನ ವಿದೇಶಿ ದೈತ್ಯ ಸಂಸ್ಥೆಗಳ ಪ್ರವೇಶದಿಂದ ಸರಕುಗಳ ತಯಾರಿಕೆ ಮತ್ತು ಸೇವಾ ವಲಯದಲ್ಲಿ  ಲಕ್ಷಾಂತರ ಜನರು ಜೀವನೋಪಾಯಕ್ಕೆ ಎರವಾಗಲಿದ್ದಾರೆ. ನಿರುದ್ಯೋಗ ಸಮಸ್ಯೆ ಇನ್ನಷ್ಟು ಉಲ್ಬಣ

 

ಬೆಂಬಲಿಗರ ವಾದ

-ರೈತರು ಮತ್ತು ವ್ಯಾಪಾರಿಗಳ ಮಧ್ಯೆ ವ್ಯವಹರಿಸುವ ಮಧ್ಯವರ್ತಿಗಳ ಹಾವಳಿಗೆ ಕೊನೆ ಹಾಡಿ, ಕೃಷಿಕರ ಉತ್ಪನ್ನಕ್ಕೆ ಹೆಚ್ಚು ಬೆಲೆ ದೊರೆಯಲಿದೆ-ಚಿಲ್ಲರೆ ವಹಿವಾಟಿನ ಸರಕುಗಳ ಬೆಲೆ  ತಗ್ಗಿಸಿ ಹಣದುಬ್ಬರಕ್ಕೆ ಕಡಿವಾಣ ಹಾಕಲಿದೆ

-ಬೃಹತ್ ಸರಣಿ ಮಾರಾಟ ಸಂಸ್ಥೆಗಳು ತಮ್ಮ ಹೂಡಿಕೆಯ ಶೇ 50ರಷ್ಟನ್ನು ಶೈತ್ಯಾಗಾರ, ಉಗ್ರಾಣದಂತಹ ಸರಕುಗಳ ಪೂರೈಕೆಯ ಮೂಲ ಸೌಕರ್ಯಕ್ಕೆ ವೆಚ್ಚ ಮಾಡುವುದರಿಂದ ತ್ವರಿತವಾಗಿ ನಾಶವಾಗುವ ಹಣ್ಣು ಮತ್ತು ತರಕಾರಿಗಳ ತ್ಯಾಜ್ಯದ ಪ್ರಮಾಣ  ಶೇ 40ರಿಂದ ಶೇ 50ರಷ್ಟು ಕಡಿಮೆ ಆಗಲಿದೆ.-ಚಿಲ್ಲರೆ ವಹಿವಾಟುದಾರರು ತಮ್ಮ ಅಗತ್ಯದ ಶೇ 30ರಷ್ಟನ್ನು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಂದಲೇ ಖರೀದಿಸಬೇಕು. ಇದರಿಂದ `ಎಸ್‌ಎಂಇ~ಗಳಿಗೆ ದೊಡ್ಡ ಮಾರುಕಟ್ಟೆ ಸೃಷ್ಟಿಯಾಗಲಿದ್ದು, ಉತ್ತಮ ತಂತ್ರಜ್ಞಾನ ಮತ್ತು ಬ್ರಾಂಡ್ ಸೌಲಭ್ಯ ದೊರೆಯಲಿದೆ-ದೇಶಕ್ಕೆ ಅಗತ್ಯವಾಗಿ ಬೇಕಾಗಿರುವ ಬಂಡವಾಳವು ತಂತ್ರಜ್ಞಾನದ ಜತೆ ಹರಿದು ಬರಲಿದೆ

-10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ (53 ನಗರಗಳು) ಮಾತ್ರ ಬೃಹತ್ ಮಳಿಗೆಗಳಿಗೆ ಅವಕಾಶ ಕಲ್ಪಿಸುವುದರಿಂದ ಇತರ ನಗರ, ಪಟ್ಟಣಗಳಲ್ಲಿ ಚಿಕ್ಕ ಪುಟ್ಟ ಮಳಿಗೆಗಳ ಅಸ್ತಿತ್ವಕ್ಕೆ ಯಾವುದೇ ಧಕ್ಕೆ ಇಲ್ಲ. ಬದಲಿಗೆ ಹೊಸ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲಿದೆ-ಮಾರುಕಟ್ಟೆಯಲ್ಲಿ ಆರೋಗ್ಯಕರ  ಸ್ಪರ್ಧೆ ಉತ್ತೇಜಿಸುವುದರಿಂದ ಉತ್ಪಾದಕರು ಮತ್ತು ಗ್ರಾಹಕರಿಗೂ ಲಾಭ ದೊರೆಯಲಿದೆ

 

ಕೃಷಿ ಮೂಲ ಸೌಕರ್ಯಗಳ ಸುಧಾರಣೆ, ಹೊಸ ಲಕ್ಷಾಂತರ ಉದ್ಯೋಗ ಅವಕಾಶ ಸೃಷ್ಟಿ ಮತ್ತು ಭಾರಿ ಪ್ರಮಾಣದ ಬಂಡವಾಳ ಹರಿದು ಬರಲಿದ್ದು ದೇಶಿ ಅರ್ಥವ್ಯವಸ್ಥೆಗೆ ನೆರವಾಗಲಿದೆ

-ಕಿಶೋರ್ ಬಯಾನಿ

(ಫ್ಯೂಚರ್ ಗ್ರೂಪ್ ಅಧ್ಯಕ್ಷ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry