ಭಾನುವಾರ, ಮಾರ್ಚ್ 7, 2021
32 °C
ಹಣ್ಣು, ತರಕಾರಿ, ಬೇಳೆಕಾಳುಗಳ ಬೆಲೆ ಏರಿಕೆ ಪರಿಣಾಮ

ಚಿಲ್ಲರೆ ಹಣದುಬ್ಬರ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಲ್ಲರೆ ಹಣದುಬ್ಬರ ಏರಿಕೆ

ನವದೆಹಲಿ (ಪಿಟಿಐ): ಹಣ್ಣು, ತರಕಾರಿ, ಬೇಳೆಕಾಳುಗಳ ಬೆಲೆ ಏರಿಕೆ ಪರಿಣಾಮ ಚಿಲ್ಲರೆ ಹಣದುಬ್ಬರವು ಜುಲೈ ತಿಂಗಳಿನಲ್ಲಿ ಶೇ 6.07ಕ್ಕೆ ಏರಿಕೆಯಾಗಿದೆ. ಇದು ಎರಡು ತಿಂಗಳ ಗರಿಷ್ಠ ಮಟ್ಟವಾಗಿದೆ.ಪ್ರಸಕ್ತ ಆರ್ಥಿಕ ವರ್ಷದಲ್ಲಿ ಚಿಲ್ಲರೆ ಹಣದುಬ್ಬರವನ್ನು ಶೇ 6ರೊಳಗೆ ಇರುವಂತೆ ನೋಡಿಕೊಳ್ಳುವುದಾಗಿ ಆರ್‌ಬಿಐ ಹೇಳಿತ್ತು. ಹೀಗಾಗಿ ಇದು ಆರ್‌ಬಿಐ ಅಂದಾಜು ಮಾಡಿರುವುದಕ್ಕಿಂತಲೂ ಶೇ 0.7ರಷ್ಟು ಹೆಚ್ಚೇ ಇದೆ.ಗ್ರಾಹಕ ಬೆಲೆ ಸೂಚ್ಯಂಕ ಆಧರಿಸಿದ (ಸಿಪಿಐ) ಚಿಲ್ಲರೆ ಹಣದುಬ್ಬರವು ಜೂನ್‌ ತಿಂಗಳಿನಲ್ಲಿ ಶೇ 5.77ರಷ್ಟಿತ್ತು. ಇದಕ್ಕೆ ಹೋಲಿಸಿದರು ಜುಲೈನಲ್ಲಿ ಶೇ 0.3ರಷ್ಟು ಹೆಚ್ಚಾಗಿದೆ. 2015ರ ಜುಲೈನಲ್ಲಿ ಶೇ 3.69ರಷ್ಟಿತ್ತು. ಹಬ್ಬದ ಸಂದರ್ಭಗಳು ಹತ್ತಿರ ಬರುತ್ತಿವೆ. ಇದರಿಂದಾಗಿ ಸಕ್ಕರೆ, ಖಾದ್ಯತೈಲ ಸೇರಿದಂತೆ ಆಹಾರ ಪದಾರ್ಥಗಳು, ಹಣ್ಣು, ತರಕಾರಿಗಳ ಬೆಲೆ ಹೆಚ್ಚಾಗಿದೆ.  ಇದು ಚಿಲ್ಲರೆ ಹಣದುಬ್ಬರದ ಏರಿಕೆಗೆ ಕಾರಣವಾಗಿದೆ ಎಂದು ತಜ್ಞರು ಹೇಳಿದ್ದಾರೆ.ಸಕ್ಕರೆ ಧಾರಣೆ ಶೇ 16.79 ರಿಂದ ಶೇ 21.91ಕ್ಕೆ, ಏಕದಳಧಾನ್ಯ ಶೇ 3.88, ಮೊಟ್ಟೆ ಶೇ 5.51 ರಿಂದ ಶೇ 9.34ಕ್ಕೆ ಏರಿಕೆಯಾಗಿವೆ.

ಹಣ್ಣು, ತರಕಾರಿ,ಬೇಳೆಕಾಳುಗಳ ಧಾರಣೆ ಕ್ರಮವಾಗಿ ಶೇ 3.53, 14.06 ಮತ್ತು 27.53ರಷ್ಟು ಏರಿಕೆ ಕಂಡಿವೆ. ನಗರ ಪ್ರದೇಶಗಳಲ್ಲಿ ಚಿಲ್ಲರೆ ಹಣದುಬ್ಬರ ಶೇ 5.39ರಷ್ಟಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಶೇ 6.66ರಷ್ಟಿದೆ.ಆಹಾರ ಹಣದುಬ್ಬರ: ಆಹಾರ ಹಣದುಬ್ಬರವು ಶೇ 7.79 ರಿಂದ ಶೇ 8.35ಕ್ಕೆ ಏರಿಕೆಯಾಗಿದೆ.ಕೈಗಾರಿಕಾ ಪ್ರಗತಿ ಕುಂಠಿತ: ದೇಶದ ಜೂನ್‌ ತಿಂಗಳ ಕೈಗಾರಿಕಾ ಪ್ರಗತಿಯು ಶೇ 2.1ರಷ್ಟಿದೆ. 2015ರ ಜೂನ್‌ನಲ್ಲಿದ್ದ ಶೇ 4.2ರಷ್ಟು ಪ್ರಗತಿಗೆ ಹೋಲಿಸಿದರೆ ಈ ಬಾರಿ ಶೇ 2.1ರಷ್ಟು ಇಳಿಕೆ ಕಂಡುಬಂದಿದೆ.ಕೈಗಾರಿಕಾ ಉತ್ಪಾದನಾ ಸೂಚ್ಯಂಕದ (ಐಐಪಿ) ಆಧಾರದ ಮೇಲೆ ಕೈಗಾರಿಕಾ ಪ್ರಗತಿಯನ್ನು ಲೆಕ್ಕ ಹಾಕಲಾಗುತ್ತದೆ. ಐಐಪಿಗೆ ಶೇ 75ರಷ್ಟು ಕೊಡುಗೆ ನೀಡುವ ತಯಾರಿಕಾ ವಲಯದ ಪ್ರಗತಿಯು ಶೇ 5.2 ರಿಂದ ಶೇ 0.9ಕ್ಕೆ ಕುಸಿದಿದೆ.ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ ಪ್ರಗತಿಯು ಶೇ 3.7 ರಿಂದ ಶೇ 0.7ಕ್ಕೆ ಭಾರಿ ಕುಸಿತ ಕಂಡಿದೆ.  ಜೂನ್‌ ತಿಂಗಳಿನಲ್ಲಿ ಗ್ರಾಹಕ ಬಳಕೆ ವಸ್ತುಗಳ ತಯಾರಿಕೆಯು ಶೇ 16.1 ರಿಂದ ಶೇ 5.6ಕ್ಕೆ ಇಳಿಕೆಯಾಗಿದೆ. ಅಂತೆಯೇ, ವಿದ್ಯುತ್‌ ವಲಯದ ಪ್ರಗತಿಯೂ ತಗ್ಗಿದೆ. ಗಣಿ ವಲಯದ ಪ್ರಗತಿ ಶೇ 0.4 ರಿಮದ ಶೇ 4.7ಕ್ಕೆ ಏರಿಕೆಕಂಡಿದೆ.ತಯಾರಿಕಾ ವಲಯದಲ್ಲಿರುವ ಒಟ್ಟು 22 ಕೈಗಾರಿಕೆಗಳಲ್ಲಿ 18 ಕೈಗಾರಿಕೆಗಳ ಪ್ರಗತಿಯು ಸಕಾರಾತ್ಮಕ ಮಟ್ಟದಲ್ಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.