ಶನಿವಾರ, ಮೇ 15, 2021
22 °C
ಮಾತ್‌ಮಾತಲ್ಲಿ

ಚಿಲ್ `ಗುರು'

ನಿರೂಪಣೆ: ವಿದ್ಯಾಶ್ರೀ ಎಸ್. Updated:

ಅಕ್ಷರ ಗಾತ್ರ : | |

ಮೊದಲಿನಿಂದಲೂ ನನ್ನದು ಹಾಸ್ಯ ಪ್ರಜ್ಞೆ. ಭಾಷೆಯ ಮೇಲೆ ಹಿಡಿತವಿದೆ. ಆ ಕಾರಣದಿಂದಲೇ ನನಗೆ ಈ ವೃತ್ತಿ ಕಷ್ಟ ಎನ್ನುವ ಭಾವನೆ ಬರಲೇ ಇಲ್ಲ. ಬಾಲ್ಯದಲ್ಲಿಯೇ ಕಾರ್ಯಕ್ರಮಗಳನ್ನು ನಿರೂಪಿಸುತ್ತಿದ್ದೆ. ಜತೆಗೆ ಜಾದು ಪ್ರದರ್ಶನಗಳನ್ನು (ಮ್ಯಾಜಿಕ್ ಷೋಗಳು) ನೀಡುತ್ತಿದ್ದೆ. ಈ ಚಟುವಟಿಕೆಗಳೇ `ಸಭಾ ಕಂಪನ' ನಿವಾರಣೆಗೆ ಮೂಲ.ಜನರು ನನ್ನ ನಿರೂಪಣಾ ಶೈಲಿಗೆ ತಲೆದೂಗಿ ಚಪ್ಪಾಳೆಯ ಸುರಿಮಳೆ ಗೈಯುತ್ತಿದ್ದರು. ನನ್ನ ದನಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಈ ಮೆಚ್ಚುಗೆ ಮಾತುಗಳು ಆರ್‌ಜೆ ಆಗಬೇಕು ಎನ್ನುವ ಆಸೆ ಮೂಡಲು ಕಾರಣವಾಯಿತು. ಈ ಆಕಾಂಕ್ಷೆ ಮೊಳೆತದ್ದು ಕಾಲೇಜು ದಿನಗಳಲ್ಲಿ.ನನ್ನೂರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ. ಅಲ್ಲಿಂದ ಬೆಂಗಳೂರಿಗೆ ಬಂದು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಉದ್ಯೋಗ ಅರಸಿದೆ. ಆ ಅವಧಿಯಲ್ಲಿಯೇ ರೇಡಿಯೊ ಮಿರ್ಚಿಯಲ್ಲಿ ಆಡಿಷನ್‌ಗೆ ಕರೆದಿದ್ದರು. ಅದೃಷ್ಟ ಪರೀಕ್ಷಿಸಲು ಅರ್ಜಿ ಹಾಕಿದೆ. ಆರ್‌ಜೆ ಆಗಲು ಅದೃಷ್ಟ ನನ್ನ ಕೈ ಹಿಡಿಯಲಿಲ್ಲ. ಆದರೆ ಆಗ `ರೇಡಿಯೊ ಮಿರ್ಚಿ'ಯ ಇನ್‌ಸ್ಪೆಕ್ಟರ್ ಅಭಿಮನ್ಯು ಧಾರಾವಾಹಿ ಪ್ರಸಾರವಾಗುತ್ತಿತ್ತು. ಅದರಲ್ಲಿ ಅಭಿಮನ್ಯು ಪಾತ್ರಕ್ಕೆ ಹಿನ್ನೆಲೆ ಧ್ವನಿ ನೀಡುವ ಅವಕಾಶ ದೊರೆಯಿತು. ಅದೃಷ್ಟ ಮತ್ತೆ ಒಲಿಯಿತು. ನನ್ನ ಧ್ವನಿ ಮೆಚ್ಚಿ `ಆರ್‌ಜೆ' ಆಗುವ ಅವಕಾಶ ನೀಡಿದರು.ನನ್ನ ಕನಸು ಸಾಕಾರಗೊಂಡ ಆ ಕ್ಷಣವನ್ನು ಮರೆಯಲು ಸಾಧ್ಯವೇ ಇಲ್ಲ. ಪ್ರತಿದಿನ ಸಂಜೆ 5 ಗಂಟೆಗೆ `ಚಿಲ್ ಮಾಡಿ' ಕಾರ್ಯಕ್ರಮ ನಡೆಸಿಕೊಡುವ ಹೊಣೆ ನನ್ನದಾಯಿತು.ಕರೆ ಮಾಡುವವರ ಪರಿಚಯ ನನಗೆ ಇರುವುದಿಲ್ಲ. ಆದರೆ ಅವರು ನನ್ನ ಧ್ವನಿಯನ್ನು ಗುರುತಿಸುತ್ತಾರೆ. ಪ್ರಥಮ ಬಾರಿಗೆ ರೇಡಿಯೊದಲ್ಲಿ ಮಾತನಾಡುವಾಗ ಎರಡು ಮೂರು ಲಕ್ಷ ಜನರು ನನ್ನ ಧ್ವನಿ ಕೇಳುತ್ತಿದ್ದಾರೆ ಎಂಬುದನ್ನು ನೆನೆದು ರೋಮಾಂಚಿತನಾಗಿದ್ದೆ. ಕರೆ ಮಾಡಿದವರ ಜತೆ ಮುಕ್ತ ಮಾತುಕತೆ ನಡೆಸುತ್ತೇನೆ. ಅವರ ಮಾತು ಮತ್ತು ಭಾವನೆಗಳನ್ನು ನನ್ನ ಜತೆ ಹಂಚಿಕೊಳ್ಳುವಾಗ ಸಖತ್ ಖುಷಿಯಾಗುತ್ತದೆ. ಭಾಷೆಯ ಮೇಲೆ ಹಿಡಿತವಿರುವ ಕಾರಣ ಮಾತು ಸುಲಲಿತವಾಗಿ ಹೊರಹೊಮ್ಮುತ್ತದೆ. ಜನರ ಮೆಚ್ಚುಗೆಯ ಮಾತುಗಳು ನನ್ನ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ.  ಕರೆ ಮಾಡುವವರ ಮಾತುಗಳು ನನ್ನನ್ನು ಒಮ್ಮಮ್ಮೆ ಭಾವುಕನನ್ನಾಗಿಸಿದರೆ, ಕೆಲವೊಮ್ಮೆ ನಗು ಬರಿಸುತ್ತದೆ.ಒಂದು ದಿನ ಒಬ್ಬರು ಕರೆ ಮಾಡಿ `ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ. ಕಾರ್ಯಕ್ರಮವನ್ನು ಚೆನ್ನಾಗಿ ನಡೆಸಿಕೊಡುತ್ತೀರಿ. ನಿತ್ಯ ಬೆಳಿಗ್ಗೆ ತಪ್ಪದೇ ನಿಮ್ಮ ಕಾರ್ಯಕ್ರಮವನ್ನು  ಕೇಳುತ್ತೇನೆ' ಎಂದ. ಮೊದಲಿನ ಎರಡು ವಾಕ್ಯಗಳನ್ನು ಕೇಳಿ ಉಬ್ಬಿದ್ದ ನಾನು ಮೂರನೇ ವಾಕ್ಯ ಕಿವಿಮೇಲೆ ಬಿದ್ದದ್ದೇ ಗಾಳಿ ತೆಗೆದ ಬಲೂನಿನಂತಾದೆ. ನಾನು ನಡೆಸಿಕೊಡುವ ಕಾರ್ಯಕ್ರಮ ಸಂಜೆ ಪ್ರಸಾರವಾಗುತ್ತದೆ ಎಂಬುದು ಆತನಿಗೆ ತಿಳಿದಿರಲಿಲ್ಲ.ಇಂತಹ ಹಲವು ಪ್ರಸಂಗಗಳು ನಡೆಯುತ್ತಿರುತ್ತವೆ. ಆ ಹಾಸ್ಯ ಪ್ರಸಂಗಗಳು ನನ್ನ ಮೂಡನ್ನು ಉತ್ತಮವಾಗಿಟ್ಟಿವೆ. ಎಂಜಾಯ್ ಮಾಡುತ್ತಲೇ ಕಾರ್ಯಕ್ರಮ ನಡೆಸಿಕೊಡುತ್ತೇನೆ. ನಮ್ಮ ಮಾತು ಸವಿ ಹಂಚುವಂತಿರಬೇಕೇ ಹೊರತು ಅಪಹಾಸ್ಯ ಮಾಡುವಂತಿರಬಾರದು. ಒಮ್ಮೆ ಬಾಯಿಯಿಂದ ಹೊರಬಿದ್ದ ಮಾತನ್ನು ಮರಳಿ ಪಡೆಯವುದು ಸಾಧ್ಯವಿಲ್ಲ ಎನ್ನುವ ಅರಿವನ್ನು ಮೆದುಳಿನಲ್ಲಿ ತುಂಬಿಕೊಂಡೇ ಕಾರ್ಯಕ್ರಮ ನೀಡುತ್ತೇನೆ.ನನಗೆ ಹಲವು ಹವ್ಯಾಸಗಳಿವೆ. ಬುಲೆಟ್ ಓಡಿಸುವುದೆಂದರೆ  ತುಂಬಾ ಇಷ್ಟ. ಜಿಮ್‌ನಲ್ಲಿ ಸಾಕಷ್ಟು ಸಮಯ ದೈಹಿಕ ಕಸರತ್ತು ನಡೆಸುತ್ತೇನೆ. ಬಿಡುವಿನ ವೇಳೆಯಲ್ಲಿ ಜಾದೂ ಕಾರ್ಯಕ್ರಮ ನೀಡುತ್ತೇನೆ. ಸಂಗೀತ ನನ್ನ ನೆಚ್ಚಿನ ಕ್ಷೇತ್ರ. ಗಿಟಾರ್ ಕಲಿಯುತ್ತಿದ್ದೇನೆ. ಆರ್‌ಜೆ  ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೇರಬೇಕೆಂಬುದು ಇಚ್ಛೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.