ಚಿವುಟದಿರಿ ಮೊಗ್ಗಿನ ಮನಸು

ಮಂಗಳವಾರ, ಜೂಲೈ 16, 2019
28 °C

ಚಿವುಟದಿರಿ ಮೊಗ್ಗಿನ ಮನಸು

Published:
Updated:

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಐದು ವರ್ಷಗಳ ಹಿಂದೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದ ಅಂಕಿ, ಅಂಶಗಳು ದೇಶದ ಜನರನ್ನು ನಿಜಕ್ಕೂ ಬೆಚ್ಚಿ ಬೀಳಿಸಿದ್ದವು.ಭಾರತದಲ್ಲಿ ಪ್ರತಿ ಸೆಕೆಂಡಿಗೆ ಒಂದು ಮಗು ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗುತ್ತಿದೆ ಎಂಬ ಕಹಿಸತ್ಯವನ್ನು ಅರಗಿಸಿಕೊಳ್ಳುವುದೇ ಕಷ್ಟವಾಗಿತ್ತು.ಬೆಂಗಳೂರಿನಲ್ಲಿ ಇತ್ತೀಚೆಗೆ ಫ್ರೆಂಚ್ ಕಾನ್ಸುಲೇಟ್‌ನ ಪಾಸ್ಕಲ್ ಮಜುರಿಯರ್ ಎಂಬ 39 ವರ್ಷದ ಅಧಿಕಾರಿ ತನ್ನ ನಾಲ್ಕು ವರ್ಷದ ಹೆಣ್ಣು ಮಗುವಿನ ಮೇಲೆ ನಡೆಸಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣವೂ ಇದೇ ರೀತಿ ಇಡೀ ನಾಗರಿಕ ಸಮಾಜವನ್ನು ದಿಗ್ಭ್ರಮೆಗೊಳಿಸಿದೆ.ತನ್ನ ಮುಗ್ಧ ಕರುಳಿನ ಕುಡಿಯನ್ನು ಈ ಅಧಿಕಾರಿ ಎರಡು ವರ್ಷದವಳಿದ್ದಾಗಿನಿಂದಲೂ ಕಾಮತೃಷೆಗಾಗಿ ನಿರಂತರವಾಗಿ ಬಳಸಿಕೊಂಡಿದ್ದರು ಎನ್ನಲಾದ ಹೀನ ಕೃತ್ಯ ಮಾನವೀಯತೆಗೇ ಸವಾಲಾಗಿದೆ.ಆದರೆ ವಾಸ್ತವದಲ್ಲಿ, ದೇಶದಲ್ಲಿ ನಡೆಯುತ್ತಿರುವ ಇಂತಹ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬರುವುದೇ ಇಲ್ಲ. ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಇಂತಹ ಪ್ರಕರಣಗಳು ಗೋಡೆ ದಾಟಲಾರದೇ ಅಲ್ಲಲ್ಲೇ ಮುಚ್ಚಿಹೋಗುತ್ತಿವೆ.ಮಕ್ಕಳು ಮಾತ್ರ ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯವನ್ನು ಯಾರ ಮುಂದೆಯೂ ಮನಬಿಚ್ಚಿ ಹೇಳಿಕೊಳ್ಳಲಾಗದೇ ಮೂಕವೇದನೆ ಅನುಭವಿಸುತ್ತವೆ.ಒಳಗೊಳಗೇ ಕೊರಗಿ ಕಮರಿ ಹೋಗುತ್ತವೆ. ಬಾಲ್ಯದಲ್ಲೇ ಇಂಥ ಕ್ರೂರ ದಾಳಿಗೆ ಒಳಗಾದ ಮಕ್ಕಳ ಮೃದು ಮನಸ್ಸಿನ ಮೇಲಾಗುವ ಆಘಾತ, ಕಹಿ ಅನುಭವ ಅವರ ಬಾಳನ್ನೇ ನರಕ ಮಾಡುತ್ತದೆ.ಅವರು ದೊಡ್ಡವರಾದ ನಂತರವೂ ಬಾಲ್ಯದಲ್ಲಿ ಅವರ ಬಾಳಿನಲ್ಲಿ ನಡೆದ ಕಹಿ ಘಟನೆಗಳು ಮಾಸುವುದಿಲ್ಲ. ಅದರಲ್ಲೂ ತಮಗೆ ತಿಳಿದವರು, ತಾವು ನಂಬಿದ್ದವರಿಂದಲೇ ಇಂತಹ ದೌರ್ಜನ್ಯಗಳು ನಡೆದಾಗ ಮಕ್ಕಳ ಹೂವಿನಂತಹ ಮನಸ್ಸು ಘಾಸಿಗೊಳ್ಳುತ್ತದೆ. ಪ್ರತಿ ಹಂತದಲ್ಲೂ ಇಂತಹ ಘಟನೆ ಮಾನಸಿಕ ಮತ್ತು ಭಾವನಾತ್ಮಕವಾಗಿ ಮಕ್ಕಳ ಮನಸ್ಸನ್ನು ಜರ್ಝರಿತಗೊಳಿಸುತ್ತಲೇ ಇರುತ್ತದೆ.

 

ಸರಿಯಾದ ಸಮಯಕ್ಕೆ ದೊರೆಯದ ಸಾಂತ್ವನ, ನೆರವು ಮತ್ತು ಸಮಾಲೋಚನೆಯ ಕೊರತೆ ಅವರನ್ನು ಮಾನಸಿಕ ಖಿನ್ನತೆಗೆ ದೂಡುತ್ತದೆ. ವ್ಯಾಕುಲಚಿತ್ತರಾಗುವುದರಿಂದ ಅವರ ಬದುಕು ನರಕವಾಗುತ್ತದೆ. ಬಹುತೇಕ ಪ್ರಕರಣಗಳಲ್ಲಿ ಇಂಥ ಮಕ್ಕಳು ಇತರ ಮಕ್ಕಳಂತೆ ಸಾಮಾನ್ಯ ಜೀವನ ನಡೆಸಲು ಸಾಧ್ಯವಾಗುವುದಿಲ್ಲ ಎನ್ನುವ ಅಭಿಪ್ರಾಯ ಮಕ್ಕಳ ಮನೋರೋಗ ತಜ್ಞರದು.ಸಾಮಾನ್ಯವಾಗಿ ಇಂಥ ಪ್ರಕರಣಗಳು ನಡೆಯುವುದೇ ಮನೆ ಅಥವಾ ಕೆಲಸದ ಸ್ಥಳಗಳಲ್ಲಿ. ಭಾರತೀಯ ಕುಟುಂಬಗಳಲ್ಲಿ ಬಹುತೇಕ ಮಕ್ಕಳು ತಮ್ಮ ಪೋಷಕರು ಅಥವಾ ಕುಟುಂಬದ ಹಿರಿಯ ಸದಸ್ಯರ ಮೇಲೆ ಅವಲಂಬಿತರಾಗಿರುತ್ತಾರೆ. ಅವರೆಡೆಗೆ ಭಯಮಿಶ್ರಿತ ಗೌರವ ಭಾವನೆಯ ವಾತಾವರಣದಲ್ಲಿ ಬೆಳೆದಿರುತ್ತಾರೆ.

 

ಹಿರಿಯರು ಮತ್ತು ಮಕ್ಕಳ ನಡುವಿನ ಇಂಥ ಸಂಬಂಧ ಮಕ್ಕಳ ರಕ್ಷಣೆಗಾಗಿ ಇರುವ ಕಾನೂನುಗಳು ಪರಿಣಾಮಕಾರಿಯಾಗಿ ಜಾರಿಯಾಗುವಲ್ಲಿ ತೊಡರುಗಾಲಾಗಿವೆ.

ಕುಟುಂಬಗಳಲ್ಲಿ ನಡೆಯುವ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ವರದಿಯಾಗದ ಪರಿಣಾಮ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ.

 

ಆದರೆ, ಬಡತನ, ಅಪೌಷ್ಟಿಕತೆ, ನಿರ್ಲಕ್ಷ್ಯ, ಅನಾರೋಗ್ಯ, ನಿರಕ್ಷರತೆಯ ಕಾರಣಗಳಿಂದಾಗಿ ಇಂದು ಸರ್ವೆಸಾಮಾನ್ಯವಾಗಿ ಹೋಗಿರುವ ಸಾಮಾಜಿಕ ದೌರ್ಜನ್ಯ ಪ್ರಕರಣಗಳು ಮಾತ್ರ ತಕ್ಷಣ ಎಲ್ಲರ ಗಮನ ಸೆಳೆದುಬಿಡುತ್ತವೆ.ಅಮೆರಿಕದ ಕುಟುಂಬಗಳಲ್ಲಿ ನಡೆಯುವ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ಬಗ್ಗೆ ನಡೆಸಿದ ಅಧ್ಯಯನ ವರದಿಯೊಂದು ಇನ್ನೂ ಆಘಾತಕಾರಿ ಅಂಶಗಳ ಮೇಲೆ ಬೆಳಕು ಚೆಲ್ಲಿದೆ.ಇಂತಹ ಮಕ್ಕಳು ಮಾನಸಿಕ ರೋಗ ಮತ್ತು ಅಪರಾಧಿ ಪ್ರಜ್ಞೆಯಿಂದ ಬಳಲುತ್ತಿರುತ್ತಾರೆ. ಹೀಗಾಗಿ ಬಾಲಾಪರಾಧಿಗಳು ಮತ್ತು ಯುವ ಗರ್ಭಿಣಿಯರ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ವಾಸ್ತವ ದಿಗ್ಭ್ರಮೆ ಹುಟ್ಟಿಸುತ್ತದೆ.ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ 2007ರಲ್ಲಿ `ಮಕ್ಕಳ ಮೇಲಿನ ದೌರ್ಜನ್ಯ~ ಕುರಿತು ಬಿಡುಗಡೆ ಮಾಡಿದ ವರದಿ ಗಂಭೀರ ಚಿಂತನೆಗೆ ದಾರಿ ಮಾಡಿಕೊಟ್ಟಿದೆ.ದೇಶದಲ್ಲಿ 18 ವರ್ಷಕ್ಕಿಂತ ಕೆಳಗಿನ ವಯೋಮಾನದ 150 ದಶಲಕ್ಷ ಬಾಲಕಿಯರು ಮತ್ತು 73 ದಶಲಕ್ಷ ಬಾಲಕರು ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಅಥವಾ ಬಲವಂತವಾಗಿ ಅವರನ್ನು ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಲಾಗಿದೆ ಎಂಬುದನ್ನು ಆ ಅಂಕಿ-ಅಂಶ ಬಹಿರಂಗಪಡಿಸಿದೆ. ಇದು ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ಸರ್ಕಾರದ ಮಟ್ಟದಲ್ಲಿ ನಡೆದ ದೇಶದ ಮೊತ್ತ ಮೊದಲ ವಿಸ್ತೃತ ಸಮೀಕ್ಷೆ.2002ರಲ್ಲಿ 53 ಸಾವಿರ ಮಕ್ಕಳ ಹತ್ಯೆ ಪ್ರಕರಣಗಳು ವರದಿಯಾಗಿವೆ. ಮಕ್ಕಳ ಆರೋಗ್ಯ ಕುರಿತು ನಡೆಸಲಾದ ಜಾಗತಿಕ ಸಮೀಕ್ಷೆಯೊಂದು ಇತ್ತೀಚೆಗೆ ಒಂದು ತಿಂಗಳಿನಲ್ಲಿ ಶಾಲೆಗೆ ಹೋಗುವ ಶೇ 20ರಿಂದ 65ರಷ್ಟು ಮಕ್ಕಳು ನಿಂದನೆ ಮತ್ತು ದೈಹಿಕ ನಿಂದನೆಗೆ ಒಳಗಾಗಿದ್ದಾರೆ ಎಂಬ ಕಟುಸತ್ಯವನ್ನು ಬಹಿರಂಗಗೊಳಿಸಿದೆ.

 

ಅಂತರ ರಾಷ್ಟ್ರೀಯ ಕಾರ್ಮಿಕರ ಸಂಘಟನೆ 2004ರಲ್ಲಿ ನಡೆಸಿದ ಸಮೀಕ್ಷೆ ವಿಶ್ವದಾದ್ಯಂತ 218 ದಶಲಕ್ಷ ಬಾಲಕಾರ್ಮಿಕರ ಪೈಕಿ 126 ದಶಲಕ್ಷ ಬಾಲಕಾರ್ಮಿಕರು ಅಪಾಯಕಾರಿ ಕೆಲಸಗಳಲ್ಲಿ ತೊಡಗಿದ್ದಾರೆ ಎಂದು ತಿಳಿಸಿತ್ತು.ಆಫ್ರಿಕಾ, ಸೂಡಾನ್ ಮತ್ತು ಈಜಿಪ್ಟ್‌ನಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳಲ್ಲಿ ಪ್ರತಿ ವರ್ಷ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಬಾಲಕಿಯರು ಮತ್ತು ಮಹಿಳೆಯರ ಜನನಾಂಗಗಳನ್ನು ಊನಗೊಳಿಸಲಾಗಿದೆ. ಈ ವರದಿ ಎಂಥವರ ಜಂಘಾಬಲವನ್ನೂ ಉಡುಗಿಸಬಲ್ಲದು.ಪೋಷಕರು ಏನು ಮಾಡಬೇಕು?

ಲೈಂಗಿಕ ದೌರ್ಜನ್ಯಗಳ ಬಗ್ಗೆ ಪೋಷಕರು ತಮ್ಮ ಮಕ್ಕಳಿಗೆ ಸೂಕ್ತ ಶಿಕ್ಷಣ ನೀಡಬೇಕು. ಶಾಲೆ, ಮನೆ, ಸಾರ್ವಜನಿಕ ಸ್ಥಳಗಳಲ್ಲಿ ಪರಿಚಿತರು, ಅಪರಿಚಿತರು  ಅಥವಾ ಕುಟುಂಬದ ಸದಸ್ಯರಿಂದಲೇ ಇಂಥ ಕೃತ್ಯ ನಡೆದರೆ ತಕ್ಷಣ ಧೈರ್ಯದಿಂದ ಅದನ್ನು ಪ್ರತಿಭಟಿಸಿ, ನಿಮ್ಮ ಗಮನಕ್ಕೆ ತರುವಂತೆ ತಿಳಿಹೇಳಬೇಕು.ಮಕ್ಕಳು ಮತ್ತು ಪೋಷಕರ ನಡುವೆ ಸಂವಹನ ಕೊರತೆ ಇದ್ದರೆ ಅದನ್ನು ಹೋಗಲಾಡಿಸಬೇಕು. ಯಾವುದೇ ವಿಷಯವನ್ನಾಗಲೀ ಸಂಕೋಚವಿಲ್ಲದೆ ಮುಕ್ತವಾಗಿ ಚರ್ಚಿಸಲು ಮಕ್ಕಳಿಗೆ ಅವಕಾಶ ನೀಡಬೇಕು.ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಮತ್ತು ಲೈಂಗಿಕ ಅಪರಾಧಗಳಿಗೆ ಮಕ್ಕಳು ಬಲಿಪಶುಗಳಾಗದಂತೆ ತಡೆಯಲು ಕೇಂದ್ರ ಸರ್ಕಾರ ಸೂಕ್ತ ಕಾನೂನು ರಚಿಸಲು ಮುಂದಾಗಿದೆ.ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಮಸೂದೆಗೆ ಲೋಕಸಭೆ ಈಗಾಗಲೇ ಅಂಗೀಕಾರ ನೀಡಿದ್ದು, ರಾಷ್ಟ್ರಪತಿಯ ಅಂಕಿತ ಆಗಬೇಕಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry