ಚಿ. ಮೂ ಮತ್ತು ವೀರಶೈವ ವಾದ

7

ಚಿ. ಮೂ ಮತ್ತು ವೀರಶೈವ ವಾದ

Published:
Updated:

ವಾರಕ್ಕೊಮ್ಮೆ ತಪ್ಪದೇ ಪತ್ರಿಕೆಯಲ್ಲಿ ಕಾಣಿಸಿಕೊಳ್ಳುವ ಉತ್ಸಾಹದ ಡಾ. ಚಿದಾನಂದ ಮೂರ್ತಿ ಅವರು ಈ ವಾರವೂ ‘ವೀರಶೈವ ವಿವಾದಕ್ಕೆ ಅಂತಿಮ ತೆರೆ’ ಹೆಸರಿನ ಹುರುಳಿಲ್ಲದ ಲೇಖನ ಬರೆದಿದ್ದಾರೆ. ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವ ಸಿದ್ಧರಾಮರ ‘ಷಟ್ಸ್ಥಲ ವಚನ’ ಕಟ್ಟುಗಳಲ್ಲಿ ವೀರಶೈವ ಪದ ಕಂಡುಬರುವುದಿಲ್ಲವೇಕೆ? ಎಂಬ ನನ್ನ ಮುಖ್ಯ ಪ್ರಶ್ನೆಯನ್ನು ಮುಚ್ಚಿಟ್ಟು, ಕೃತಕವಾಗಿರುವ ‘ಹೆಚ್ಚಿನ ವಚನ’ಗಳನ್ನು ಬಳಸಿಕೊಂಡು, ಈ ಮೊದಲಿನಂತೆ ಮತ್ತೆ ಮತ್ತೆ ಮುಗ್ಧ ಜನರನ್ನು ಹಾದಿತಪ್ಪಿಸುವ ಕೆಲಸ ಮಾಡಿದ್ದಾರೆ.ಇದಲ್ಲದೆ ಕೊಪ್ಪಳ ಜಿಲ್ಲೆಯ ಶಾಸನ ಸಂಪುಟದಲ್ಲಿ (ಕ್ರಿ. ಶ. 1033) ‘ವೀರಮಾಹೇಶ್ವರ’ ಪದ ಕಣ್ಣಿಗೆ ಬೀಳುತ್ತಲೇ ಇದು ವೀರಶೈವಕ್ಕೆ ಸಮಾನ ಪದವೆಂದೂ, ಬಸವಣ್ಣನಿಗೆ ಮೊದಲು ವೀರಶೈವ ಪದವಿದ್ದಿತೆಂದೂ ಭಾವಿಸಿ, ಈ ವಾದಕ್ಕೆ ಸ್ವಯಂ ಅಂತಿಮ ತೆರೆ ಘೋಷಿಸಿದ್ದಾರೆ. ಆದರೆ ಕೆಲವು ವರ್ಷಗಳ ಹಿಂದೆ ‘ವೀರಮಾಹೇಶ್ವರ -- ವೀರಶೈವ .....’

ಎಂಬ ನನ್ನ ಲೇಖನದಲ್ಲಿ ಶಾಸನಾಧಾರದಿಂದಲೇ ವೀರಶೈವವು ಬಸವೋತ್ತರಯುಗದ ಶಬ್ದವೆಂದು ಖಚಿತಪಡಿಸಿರುವುದರಿಂದ ಚಿ. ಮೂ. ಅವರದು ಸರಿಯಾದ ಶೋಧವಲ್ಲ ಮತ್ತು ಹೊಸ ಶೋಧವೂ ಅಲ್ಲ. ಒಂದು ವೇಳೆ ಬಹಳ ಹಿಂದೆಯೇ ‘ವೀರಮಾಹೇಶ್ವರ’ ಶಬ್ದವು ಶಾಸನದಲ್ಲಿ ಬಂದಿದ್ದರೆ ಅದು ಬಸವಣ್ಣನವರ ಲಿಂಗಾಯತಕ್ಕೆ ಸಮಾನ ಪದವಲ್ಲ; ಸ್ಥಾವರಲಿಂಗಪೂಜೆ ಇತ್ಯಾದಿ ಕಂದಾಚಾರಗಳನ್ನು ಪ್ರತಿಪಾದಿಸುವ ಆಚಾರ್ಯ ಸಂಪ್ರದಾಯದ್ದಾಗಿದೆ.ಇದಕ್ಕಿಂತ ಮುಖ್ಯ ಸಂಗತಿಯೆಂದರೆ, ಇವರು ಹೇಳುವ ಕೊಪ್ಪಳ ಜಿಲ್ಲೆಯ ಶಾಸನದಲ್ಲಿ ರಾಜನೊಬ್ಬನಿಗೆ ‘ವೀರಮಾಹೇಶ್ವರ’ವೆಂಬ ಧಾರ್ಮಿಕ ಪದ ಬಳಸಿದುದು ಎಷ್ಟರ ಮಟ್ಟಿಗೆ ಸರಿ? ಮೇಲಾಗಿ ರಾಜನ ಶೌರ್ಯವನ್ನು ಸೂಚಿಸುವ ಬಿರುದುಗಳ ಮಧ್ಯೆ ಈ ಶಬ್ದ ಬಂದರುವುದರಿಂದ, ಶೌರ್ಯದಲ್ಲಿ ವಿಷ್ಣುವಿಗೆ ಸಮಾನ ಅರ್ಥದ ‘ವೀರನಾರಾಯಣ’ದಂತೆ ಇದೂ ಸಹ ಶೌರ್ಯದಲ್ಲಿ ಮಹೇಶ್ವರನಿಗೆ ಸಮಾನರೆಂಬ ಅರ್ಥದ ಶಬ್ದವಾಗಿರಬಾರದೇಕೆ?

ಹಾಗಿದ್ದರೆ ಶಾಸನಸ್ಥ ಇದರ ಸರಿಯಾದ ರೂಪ ‘ವೀರಮಾಹೇಶ್ವರ’ ವಲ್ಲ, ‘ವೀರಮಹೇಶ್ವರ’ವೇಕಿರಬಾರದು? ಎಂಬ ಸಂದೇಹಗಳು ತಲೆದೋರಿರುವುದು ಸಹಜ. ನಿಜಸ್ಥಿತಿಯೆಂದರೆ ಈ ಶಾಸನ ಸಂಪುಟದಲ್ಲಿರುವ ‘ವೀರಮಾಹೇಶ್ವರ’ ಎಂಬುದು ಅಚ್ಚಿನ ದೋಷವಾಗಿದ್ದು ಶಾಸನಶಿಲೆಯಲ್ಲಿ ‘ವೀರಮಹೇಶ್ವರ’ ಎಂದೇ ಇದೆ. (ಹಂಪಿ ವಿಶ್ವವಿದ್ಯಾಲಯದ ಡಾ. ಪರಶಿವಮೂರ್ತಿ ಅವರು ನನ್ನ ವಿನಂತಿಯ ಮೇರೆಗೆ ಈ ಶಾಸನ ಶಿಲೆ ಪರೀಕ್ಷಿಸಿ, ನನಗೆ ಇದನ್ನು ತಿಳಿಸಿದ್ದಾರೆ). ಬೇರೆ ಶಾಸನಗಳಲ್ಲಿಯೂ ಶೌರ್ಯ ಪ್ರತೀಕವಾಗಿ ಅನೇಕ ಅರಸರಿಗೆ ‘ವೀರಮಹೇಶ್ವರ’ ಬಿರುದನ್ನು ಬಳಸಲಾಗಿದೆ. ಹೀಗಾಗಿ ಚಿ. ಮೂ. ಅವರದು ಪತ್ರಿಕಾಪ್ರಸಿದ್ಧಿಯ ಆತುರದ ಲೇಖನವೆನಿಸುತ್ತದೆ.ಇದಲ್ಲದೆ ವೀರಶೈವವು ಲಿಂಗಾಯತಕ್ಕೆ ಭಿನ್ನವೂ, ಬಸವೋತ್ತರ ಕಾಲೀನ ಶಬ್ದವೂ ಎಂಬ ವಾದದಿಂದ ಸಮಾಜದಲ್ಲಿ ‘ಅನಾಹುತಗಳು ಆಗಿಯೇ ಬಿಟ್ಟಿವೆ’ ಎಂದು ಬರೆದಿದ್ದಾರೆ. ವಸ್ತುಸ್ಥಿತಿ ಇದಲ್ಲ. ಆಚಾರ್ಯ ಸಂಪ್ರದಾಯದ ವೀರಶೈವದ ಸವಾರಿಯಿಂದ ಗುರುಸಂಪ್ರದಾಯದ ಲಿಂಗಾಯತವು ಕುಲಗೆಟ್ಟಿರುವುದರಿಂದ ಮತ್ತು ಗುರು - ವಿರಕ್ತರು ಮೊದಲಿನಂತೆಯೇ (ಸಮಾಜ ಶೋಷಣೆ ಮಾಡುತ್ತ) ಸಹಕಾರದಿಂದ ಮುಂದುವರಿಯಬೇಕೆಂದು ಕೆಲವು ಸಂಶೋಧಕರು ಬರೆಯುತ್ತಿರುವುದರಿಂದ ಅನಾಹುತಗಳು ಸಮಾಜದಲ್ಲಿ ಸಂಭವಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry