ಚೀಟಿ ವ್ಯವಹಾರ: ರೂ 2ಕೋಟಿ ವಂಚನೆ

7

ಚೀಟಿ ವ್ಯವಹಾರ: ರೂ 2ಕೋಟಿ ವಂಚನೆ

Published:
Updated:

ಬೆಂಗಳೂರು:  ಚೀಟಿ ವ್ಯವಹಾರ ಮಾಡುತ್ತಿದ್ದ ರವಿಕುಮಾರ್ ಎಂಬಾತ ಸಾರ್ವಜನಿಕರಿಂದ ಸುಮಾರು ಎರಡು ಕೋಟಿ ರೂಪಾಯಿಯಷ್ಟು ಹಣ ಪಡೆದು ವಂಚಿಸಿ ಪರಾರಿಯಾಗಿರುವ ಘಟನೆ ಕೋಣನಕುಂಟೆ ಕ್ರಾಸ್‌ನಲ್ಲಿ ನಡೆದಿದೆ.ವಂಚನೆಗೊಳಗಾಗಿರುವ 50ಕ್ಕೂ ಹೆಚ್ಚು ಮಂದಿ ಕುಮಾರಸ್ವಾಮಿಲೇಔಟ್ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಕೋಣನಕುಂಟೆ ಕ್ರಾಸ್ ಸಮೀಪದ ಈಶ್ವರಲೇಔಟ್ ನಿವಾಸಿಯಾದ ರವಿಕುಮಾರ್ ತನ್ನ ಸಂಬಂಧಿಕ ರಾಜಶೇಖರ್ ಎಂಬಾತನ ಜತೆ ಸೇರಿಕೊಂಡು ವಸಂತಪುರ ಮುಖ್ಯರಸ್ತೆಯಲ್ಲಿ ಎಂಟು ವರ್ಷಗಳಿಂದ ನಿಸರ್ಗ ಎಂಟರ್‌ಪ್ರೈಸಸ್ ಹೆಸರಿನ ಚೀಟಿ ವ್ಯವಹಾರ ಕಂಪೆನಿ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.500ಕ್ಕೂ ಹೆಚ್ಚು ಜನರು ರವಿಕುಮಾರ್‌ನ ಕಂಪೆನಿಯಲ್ಲಿ ಹಣ ಕಟ್ಟಿದ್ದರು. ಆರಂಭದಲ್ಲಿ ಆತ ಕಂಪೆನಿ ಸದಸ್ಯರಿಗೆ ಸಕಾಲಕ್ಕೆ ಚೀಟಿ ಹಣ ಹಿಂದಿರುಗಿಸುತ್ತಿದ್ದ ಮತ್ತು ಬಡ್ಡಿ ಸಹ ಕೊಡುತ್ತಿದ್ದ. ಆದರೆ ಕೆಲ ತಿಂಗಳುಗಳಿಂದ ಸದಸ್ಯರಿಗೆ ಚೀಟಿ ಹಣ ವಾಪಸ್ ಕೊಟ್ಟಿರಲ್ಲಿಲ್ಲ. ಇದರಿಂದ ಅನುಮಾನಗೊಂಡ ಸದಸ್ಯರು ಹಣ ವಾಪಸ್ ನೀಡುವಂತೆ ಒತ್ತಾಯಿಸಿದಾಗ, ಅ.20ರಂದು ಎಲ್ಲರ ಹಣವನ್ನು ವಾಪಸ್ ಕೊಡುವುದಾಗಿ ಹೇಳಿದ್ದ. ನಂತರ ಆತ ಕಂಪೆನಿ ಮತ್ತು ಮನೆ ಖಾಲಿ ಮಾಡಿಕೊಂಡು ಕುಟುಂಬ ಸದಸ್ಯರೊಂದಿಗೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.`ನಿಸರ್ಗ ಎಂಟರ್‌ಪ್ರೈಸಸ್ ಕಂಪೆನಿಗೆ ಒಂದು ವರ್ಷದಿಂದ ಸುಮಾರು ಒಂದು ಲಕ್ಷ ರೂಪಾಯಿ ಚೀಟಿ ಹಣ ಕಟ್ಟಿದ್ದೇನೆ. ಅಂತೆಯೇ ನನ್ನ ಸಂಬಂಧಿಕರು ಹಾಗೂ ಸ್ನೇಹಿತರು ಸಹ ಹಣ ಕಟ್ಟಿದ್ದಾರೆ. ಕಂಪೆನಿ ಮುಖ್ಯಸ್ಥ ಚೀಟಿ ಹಣದೊಂದಿಗೆ ಪರಾರಿಯಾಗಿದ್ದಾನೆ~ ಎಂದು ವಸಂತಪುರ ನಿವಾಸಿ ನಾರಾಯಣ ನಾಯಕ್ ಅಳಲು ತೋಡಿಕೊಂಡರು.ಆತ ಸುಮಾರು ಎರಡು ಕೋಟಿ ರೂಪಾಯಿ ವಂಚನೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಆರೋಪಿ ವಿರುದ್ಧ ಈಗಾಗಲೇ ಹಲವು ಮಂದಿ ದೂರು ಕೊಟ್ಟಿದ್ದಾರೆ. ವಂಚನೆ ಪ್ರಕರಣ ದಾಖಲಿಸಿಕೊಂಡು ರಾಜಶೇಖರ್‌ನನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ರವಿಕುಮಾರ್ ತಲೆಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಕೊಲೆ ಆರೋಪಿ ಬಂಧನ

ಸುಬ್ರಹ್ಮಣ್ಯಪುರ ಸಮೀಪದ ಹರಿನಗರದಲ್ಲಿ ನಡೆದಿದ್ದ ಅನಂತ್ (45) ಎಂಬುವರ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಹರಿನಗರ ನಿವಾಸಿ ನಾಗರಾಜ್ (40) ಬಂಧಿತ ಆರೋಪಿ. ಸ್ನೇಹಿತರಾಗಿದ್ದ ನಾಗರಾಜ್ ಮತ್ತು ಅನಂತ್ ಅ.21ರಂದು ಒಟ್ಟಿಗೆ ಮದ್ಯಪಾನ ಮಾಡಿದ್ದರು. ಆ ಸಂದರ್ಭದಲ್ಲಿ ಹಣಕಾಸು ವಿಷಯವಾಗಿ ಪರಸ್ಪರರ ನಡುವೆ ವಾಗ್ವಾದ ನಡೆದು ಜಗಳವಾಗಿತ್ತು.ಇದರಿಂದ ಕೋಪಗೊಂಡ ನಾಗರಾಜ್, ಸ್ನೇಹಿತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ದಕ್ಷಿಣ ವಿಭಾಗದ ಡಿಸಿಪಿ ಸೋನಿಯಾ ನಾರಂಗ್ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಬಾಳೇಗೌಡ ಮತ್ತು ಸಿಬ್ಬಂದಿ ಆರೋಪಿಯನ್ನು ಬಂಧಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry