ಚೀತಾ ಬೈಕ್‌ಗೆ ಕಾರು ಡಿಕ್ಕಿ: ಹೆಡ್ ಕಾನ್‌ಸ್ಟೇಬಲ್ ಸಾವು

7

ಚೀತಾ ಬೈಕ್‌ಗೆ ಕಾರು ಡಿಕ್ಕಿ: ಹೆಡ್ ಕಾನ್‌ಸ್ಟೇಬಲ್ ಸಾವು

Published:
Updated:

ಬೆಂಗಳೂರು:  ನಗರದ ಎಲೆಕ್ಟ್ರಾನಿಕ್‌ಸಿಟಿ ಮತ್ತು ಯಶವಂತಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.ಹೊಸೂರು ರಸ್ತೆಯ ಕೋನಪ್ಪನ ಅಗ್ರಹಾರ ಬಳಿ ಕಾರು ಮತ್ತು ಪೊಲೀಸ್ ಚೀತಾ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಪರಪ್ಪನ ಅಗ್ರಹಾರ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಕೆ.ಕೋದಂಡರಾಮಯ್ಯ (50) ಅವರು ಸಾವನ್ನಪ್ಪಿದ್ದಾರೆ.ಕೋದಂಡರಾಮಯ್ಯ ಅವರು ಕಾನ್‌ಸ್ಟೇಬಲ್ ನಾಗಭೂಷಣ್ ಜತೆ ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದರು. ಅವರಿಬ್ಬರೂ ಚೀತಾ ವಾಹನದಲ್ಲಿ ಬೆಳಗಿನ ಜಾವ ಕೋನಪ್ಪನ ಅಗ್ರಹಾರ ಬಳಿ ಗಸ್ತು ತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಕಾರು, ಅವರ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಈ ವೇಳೆ ಕೆಳಗೆ ಬಿದ್ದ ಕೋದಂಡರಾಮಯ್ಯ ಅವರ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಚೀತಾ ಚಾಲನೆ ಮಾಡುತ್ತಿದ್ದ ನಾಗಭೂಷಣ್ ಅವರಿಗೂ ಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಂತರ ಕಾರು ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಆ ಕಾರಿನಲ್ಲಿ ಸಾಫ್ಟ್‌ವೇರ್ ಕಂಪೆನಿಯೊಂದರ ಉದ್ಯೋಗಿಗಳನ್ನು ಡ್ರಾಪ್ ಮಾಡಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.1983ರಲ್ಲಿ ಇಲಾಖೆಗೆ ಸೇರಿದ್ದ ಕೋದಂಡರಾಮಯ್ಯ ಅವರು, ಪತ್ನಿ ಮತ್ತು ಕುಟುಂಬ ಸದಸ್ಯರೊಂದಿಗೆ ಬನಶಂಕರಿ ಮೂರನೇ ಹಂತದಲ್ಲಿ ವಾಸವಿದ್ದರು. ಅವರು ನಗರದ ಬಸವನಗುಡಿ, ಹನುಮಂತನಗರ, ಪರಪ್ಪನ ಅಗ್ರಹಾರ ಸೇರಿದಂತೆ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಎಲೆಕ್ಟ್ರಾನಿಕ್‌ಸಿಟಿ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.ಮತ್ತೊಂದು ಪ್ರಕರಣ:
ಗಂಗಮ್ಮನಗುಡಿ ಸಮೀಪದ ಅಬ್ಬಿಗೆರೆಯಲ್ಲಿ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಮಥಾಯ್ ಜಾನ್ (57) ಎಂಬುವರು ಮೃತಪಟ್ಟಿದ್ದಾರೆ.ಅಬ್ಬಿಗೆರೆ ನಿವಾಸಿಯಾದ ಜಾನ್ ಅವರು ಕಾರ್ಖಾನೆಯೊಂದರಲ್ಲಿ ಉದ್ಯೋಗಿಯಾಗಿದ್ದರು. ಅವರು ಬೈಕ್‌ನಲ್ಲಿ ಬೆಳಿಗ್ಗೆ ಕೆಲಸಕ್ಕೆ ಹೋಗುತ್ತಿದ್ದಾಗ ಟ್ರ್ಯಾಕ್ಟರ್ ಎದುರಿನಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ.ಟ್ರ್ಯಾಕ್ಟರ್ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ. ಇದರಿಂದಾಗಿ ಆತನ ಗುರುತು ಪತ್ತೆಯಾಗಿಲ್ಲ. ಯಶವಂತಪುರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry