ಚೀನಾದಲ್ಲಿ ಹಾಗೆ...ನಮ್ಮಲ್ಲಿ ಹೇಗೆ...?

ಸೋಮವಾರ, ಮೇ 20, 2019
30 °C

ಚೀನಾದಲ್ಲಿ ಹಾಗೆ...ನಮ್ಮಲ್ಲಿ ಹೇಗೆ...?

Published:
Updated:
ಚೀನಾದಲ್ಲಿ ಹಾಗೆ...ನಮ್ಮಲ್ಲಿ ಹೇಗೆ...?

`ಅಯ್ಯ್ ನಮ್ಮ ಮಗು ತುಂಬಾ ಸೂಕ್ಷ್ಮ. ನಿನ್ನೆ ನೀವು ಬಹಳ ವ್ಯಾಯಾಮ ಮಾಡಿಸಿದ್ರಂತೆ. ಅದಕ್ಕೆ ಸ್ಪೋರ್ಟ್ಸ್ ಟ್ರೇನಿಂಗ್‌ಗೆ ಹೋಗಲ್ಲ ಅಂತಾನೆ...~ ಹೀಗಂತಾ ಸ್ಟೈಲ್ ಆಗಿ ಕಂಗ್ಲಿಷ್ ಆ್ಯಕ್ಸೆಂಟ್‌ನಲ್ಲಿ ರಾಗ ಎಳೆದಿದ್ದಳು ಹೈಟೆಕ್ ಅಮ್ಮ.`ಫೀಸ್ ಕೊಡಕ್ಕೆ ಆಗಲ್ಲ ಸರ್. ನಮ್ಮ ಮಗಳಿಗೆ ಫ್ರೀಯಾಗಿ ಟ್ರೇನಿಂಗ್ ಕೊಟ್ಟರೆ ಒಳ್ಳೇ ಸಾಧನೆ ಮಾಡ್ತಾಳೆ~ ಎಂದು ಗೋಗರೆದಿದ್ದ ಆ ಬಡಪಾಯಿ ಅಪ್ಪ. ಆದರೆ ಕೋಚಿಂಗ್ ಕ್ಯಾಂಪ್ ಆಯೋಜಿಸಿದ್ದ ವ್ಯಕ್ತಿಯ ಮನಸ್ಸು ಕರಗಲಿಲ್ಲ.ರಾಷ್ಟ್ರೀಯ ಕ್ರೀಡಾಕೂಟಕ್ಕೆ ಬಂದಿದ್ದಳು ಯುವ ಅಥ್ಲೀಟ್. ಆದರೆ ಕೈಯಲ್ಲಿದ್ದ ಬಿಡಿಗಾಸಿನಲ್ಲಿ ಒಳ್ಳೆ ಡಯಟ್ ಸಾಧ್ಯವಿರಲಿಲ್ಲ. ಆದ್ದರಿಂದ ಕಂಠೀರವ ಕ್ರೀಡಾಂಗಣದ ಹೊರಗಿರುವ ತಳ್ಳುವ ಗಾಡಿಯಲ್ಲಿ ಚಿತ್ರಾನ್ನ ತಿಂದು ಡಾಮೆಟ್ರಿಯಲ್ಲಿ ಮಲಗುವುದಕ್ಕೆ ಹೋದಳು.`ತಂಡಕ್ಕೆ ಆಯ್ಕೆ ಮಾಡಿಸುತ್ತೇನೆ. ನಿನಗೆ ಸಿಗುವ ಭತ್ಯೆಯಲ್ಲಿ ಇಪ್ಪತ್ತು ಪರ್ಸೆಂಟ್ ನನಗೆ ಕೊಡಬೇಕು~ ಹೀಗೆಂದು ದರ್ಪದಿಂದಲೇ ಕ್ರೀಡಾಪಟುವಿಗೆ ಹೇಳಿದ್ದ ಕ್ರೀಡಾ ಆಡಳಿತದ ಚುಕ್ಕಾಣಿ ಹಿಡಿದಿದ್ದ ಆ ಅಧಿಕಾರಿ. ಪರ್ಸೆಂಟೇಜ್ ಫಿಕ್ಸಿಂಗ್‌ಗೆ ಒಪ್ಪಿದವರು ತಂಡಕ್ಕೆ ಇನ್; ಒಪ್ಪದವರು ಔಟ್.ಸ್ಪೋರ್ಟ್ಸ್ ಕೋಟಾದಲ್ಲಿ ಮೆಡಿಕಲ್ ಹಾಗೂ ಎಂಜಿನಿಯರಿಂಗ್ ಸೀಟ್ ಪಡೆಯುವವರೆಗೆ ಮಾತ್ರ ಆಟ. ಆನಂತರ ಕ್ರೀಡೆಗೆ `ಟಾಟಾ~ ಎನ್ನುವ ಮನೋಭಾವವನ್ನು ಮಕ್ಕಳಲ್ಲಿ ಬಿತ್ತುವ ಪಾಲಕರು. ಆದ್ದರಿಂದಲೇ ವೃತ್ತಿಪರ ಶಿಕ್ಷಣದ ಸೀಟ್ ಸಿಕ್ಕನಂತರ ಕ್ರೀಡೆಯ ಕೈಬಿಟ್ಟವರ ಸಂಖ್ಯೆ ಶೇಕಡಾ 78 ರಷ್ಟು ಎಂದು ಬೇಸರದಿಂದ ಹೇಳಿದರು ಅನುಭವಿ ಕೋಚ್.ಭಾರತದವರು ಒಲಿಂಪಿಕ್ಸ್‌ನಂಥ ದೊಡ್ಡ ಕ್ರೀಡಾಕೂಟದಲ್ಲಿ ಅದ್ಭುತ ಎನಿಸುವ ಸಾಧನೆ ಮಾಡಲು ಏಕೆ ಸಾಧ್ಯವಾಗುವುದಿಲ್ಲವೆಂದು ವಿವರಿಸಲು ಇಷ್ಟು ಸಾಕು. ಈ ಐದು ಅಂಶಗಳು ಮೂಲದಲ್ಲಿಯೇ ದೇಶದ ಕ್ರೀಡಾ ಶಕ್ತಿಯನ್ನು ಕುಗ್ಗಿಸುತ್ತಿವೆ. ಆನಂತರ ಸರ್ಕಾರದ ಇಚ್ಛಾಶಕ್ತಿಯ ವಿಷಯ. ಕ್ರೀಡಾ ಕ್ಷೇತ್ರವನ್ನು ಬಲಗೊಳಿಸುವ ಆಸಕ್ತಿಯ ಚರ್ಚೆ. ಎಲ್ಲದಕ್ಕೂ ನಾವು ಸರ್ಕಾರವನ್ನು ದೂರುವ ಜಾಯಮಾನ ಬೆಳೆಸಿಕೊಂಡವರು. ಮನೆ ಮುಂದೆ ಬೀಳುವ ಕಸದಿಂದ ಹಿಡಿದು ಪ್ರತಿಯೊಂದಕ್ಕೂ ಸರ್ಕಾರವನ್ನು ದೂರಿ ಮನಸ್ಸು ಹಗುರ ಮಾಡಿಕೊಳ್ಳುವ ಜನ ನಾವು. ಆದರೆ ಮೂಲದಲ್ಲಿ ನಾವೇ ಎಡವುತ್ತಿದ್ದೇವೆ ಎನ್ನುವ ಯೋಚನೆ ಮಾಡುವುದೇ ಇಲ್ಲ.ಸಮಸ್ಯೆ ಶುರುವಾಗುವುದೇ ಪಾಲಕರಿಂದ. ಮಕ್ಕಳನ್ನು ಅತಿಯಾಗಿ ಮುದ್ದುಮಾಡುವ ಉತ್ಸಾಹದಲ್ಲಿ ಅವರನ್ನು ತಿದ್ದಿತೀಡಿ ಸಿದ್ಧಪಡಿಸಿದ ಪ್ರತಿಮೆಯಾಗಿ ಮಾಡುವುದನ್ನೇ ಮರೆತು ಬಿಡುತ್ತಾರೆ. ಇನ್ನೊಂದೆಡೆ ಇದಕ್ಕೆ ತದ್ವಿರುದ್ಧವಾದ ರೀತಿ. ಆಸಕ್ತಿ ಇದ್ದರೂ ಆರ್ಥಿಕ ಶಕ್ತಿ ಇರುವುದಿಲ್ಲ. ಇಂಥ ವೈಪರಿತ್ಯಗಳ ದೇಶದಲ್ಲಿನ ಸ್ಥಿತಿಯು `ಹಲ್ಲು ಇದ್ದರೆ ಕಡಲೆ ಇಲ್ಲ; ಕಡಲೆ ಇದ್ದರೆ ಹಲ್ಲಿಲ್ಲ~ ಎನ್ನುವಂತಾಗಿದೆ. ಇಂಥ ಪರಿಸ್ಥಿತಿಯಲ್ಲಿ ಸತ್ವವುಳ್ಳ ಕ್ರೀಡಾಪಟುಗಳನ್ನು ರೂಪಿಸಲು ವ್ಯವಸ್ಥೆಯೊಂದು ಅಗತ್ಯ ಎನಿಸುತ್ತದೆ. ವ್ಯವಸ್ಥಿತವಾದ ಕ್ರೀಡಾ ಕ್ಷೇತ್ರ ರೂಪಿಸುವುದು ಎಂದಾಕ್ಷಣ ನೆನಪಾಗುವುದು ನೆರೆಯ ಚೀನಾ ದೇಶ.ಚೀನಾ ಎಂದರೆ ವಿಶ್ವದ ಕ್ರೀಡಾ ಶಕ್ತಿ. ಅಮೆರಿಕಾ ಜಗತ್ತಿನ ಹಿರಿಯಣ್ಣ ಎನ್ನುವಂತೆ ಪೋಸ್ ಕೊಟ್ಟರೂ ಕ್ರೀಡಾ ಅಂಗಳದಲ್ಲಿ ಚೀನಾ ದೇಶಕ್ಕೆ ತಮ್ಮನಾಗಿಯೇ ಉಳಿಯುತ್ತದೆ. ಭಾರತವಂತೂ ತನ್ನದೇ ನೆರೆಯ ದೇಶದ ಎದುರು `ತೃತಿಯ ದರ್ಜೆ ರಾಷ್ಟ್ರ~ದಂತೆ ಕಾಣಿಸುತ್ತದೆ. ಲಂಡನ್ ಒಲಿಂಪಿಕ್ ಕೂಟದ ಪದಕ ಪಟ್ಟಿಯನ್ನು ನೋಡಿದರೆ ಸಾಕು ನಮ್ಮ ದೇಶವು ಕ್ರೀಡಾ ಕ್ಷೇತ್ರದಲ್ಲಿ ಹೊಂದಿರುವ ಸ್ಥಾನ-ಮಾನ ಏನೆನ್ನುವುದು ಸ್ಪಷ್ಟವಾಗಿಬಿಡುತ್ತದೆ. ಹೀಗೆ ಆಗುವುದಕ್ಕೆ ಮತ್ತೆ ನಾವು ಸರ್ಕಾರವನ್ನೇ ಹೊಣೆಯಾಗಿಸುತ್ತೇವೆ. ಅದು ನಮ್ಮ ಜಾಯಮಾನ ಬಿಡಿ!ಅದು ಹೋಗಲಿ ಬಿಡಿ; ಇಲ್ಲಿ ಒಂದಿಷ್ಟು ಚಿತ್ರಗಳಿವೆ ನೋಡಿ. ಇವು ಚೀನಾದಲ್ಲಿ ಕ್ರೀಡಾ ತರಬೇತಿ ಹೇಗೆ ಹಾಗೂ ಯಾವ ವಯಸ್ಸಿನಲ್ಲಿ ಆರಂಭವಾಗುತ್ತದೆನ್ನುವ ವಿವರಣೆ ನೀಡುತ್ತವೆ. ದೇಹ ಸ್ವರೂಪ ಹಾಗೂ ಮುಂದೆ ಬೆಳೆದಾಗ ಆಗುವ ದೈಹಿಕ ಬದಲಾವಣೆಗಳನ್ನು ಮೊದಲೇ ಗುರುತಿಸಿ ವಿವಿಧ ಕ್ರೀಡೆಗಳಿಗೆ ತರಬೇತಿ ನೀಡುತ್ತಿರುವ ಕ್ಷಣಗಳು ಇಲ್ಲಿ ಚಿತ್ರಗಳಾಗಿವೆ. ಭಾರತದಲ್ಲಿ ಎಲ್ಲಿಯಾದರೂ ಹೀಗೆ ಆಗಿದ್ದನ್ನು ಕಂಡಿದ್ದೀರಾ? ಕಂಡಿತ ಇಲ್ಲ. ನಾವು ಈ ವಯಸ್ಸಿನ ಮಕ್ಕಳನ್ನು ಮುದ್ದು ಮಾಡಿ ಎತ್ತಿಕೊಂಡು ಮುತ್ತಿಡುತ್ತೇವೆ. ಆದರೆ ಚೀನಾದಲ್ಲಿ ಕ್ರೀಡಾ ತರಬೇತಿಯ ಕ್ಯಾಂಪ್‌ನಲ್ಲಿ ಅದೇ ವಯಸ್ಸಿನ ಮಕ್ಕಳು ಯುದ್ಧಕ್ಕೆ ಸಿದ್ಧವಾಗುವ ಯೋಧರಂತೆ ತರಬೇತಿ ಪಡೆಯುತ್ತಾರೆ.ಅಲ್ಲಿನ ಸರ್ಕಾರದ ಆಸಕ್ತಿಯ ಜೊತೆಗೆ ಪಾಲಕರು ತೋರುವ ಉತ್ಸಾಹವೇ ಕ್ರೀಡಾ ತಯಾರಿ ವ್ಯವಸ್ಥಿತವಾಗಿ ನಡೆಯಲು ಕಾರಣ. ನಮ್ಮಲ್ಲಿ ಅದೆರಡೂ ಇಲ್ಲ ಎನ್ನುವ ಕಾರಣಕ್ಕಾಗಿಯೇ ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ ನಲ್ವತ್ತರ ಆಚೆಗಿದೆ ಭಾರತದ ಸ್ಥಾನ.ನೂರು ಕೋಟಿ ಜನಸಂಖ್ಯೆ ಇರುವಂಥ ದೇಶಕ್ಕೆ ಬೆರಳೆಣಿಕೆಯಷ್ಟು ಮಾತ್ರ ಪದಕಗಳು ಎನ್ನುವ ಕೊರಗು ಪ್ರತಿ ನಾಲ್ಕು ವರ್ಷಗಳಿಗೆ ಒಮ್ಮೆ ನಮ್ಮನ್ನು ಕಾಡುತ್ತದೆ. ದೈಹಿಕವಾಗಿ ಸಾಕಷ್ಟು ವೈವಿಧ್ಯತೆ ಇರುವ ದೇಶದಲ್ಲಿ ಎಲ್ಲ ಕ್ರೀಡೆಗೂ ಒಗ್ಗುವಂಥ ಪ್ರತಿಭೆಗಳನ್ನು ಹುಡುಕುವುದು ಕಷ್ಟವಲ್ಲ. ಆದರೆ ಹುಡುಕುವ ಆಸಕ್ತಿ ಹಾಗೂ ತರಬೇತಿ ನೀಡಿ ಬೆಳೆಸುವ ಉತ್ಸಾಹಕ್ಕೆ ಮಾತ್ರ ಭಾರಿ ಕೊರತೆ!ಚೀನಾದವರಂತೆ ಕ್ರೀಡಾ ಪ್ರತಿಭೆಗಳನ್ನು ಗುರುತಿಸುವ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಆ ದೇಶವು ಈ ಉದ್ದೇಶಕ್ಕಾಗಿಯೇ ಪ್ರತಿ ವರ್ಷವೂ ಪರಿಣತ ಕೋಚ್‌ಗಳನ್ನು ಹಳ್ಳಿಹಳ್ಳಿಗೆ ಕಳುಹಿಸುತ್ತದೆ. ಅಲ್ಲಿನ ಮಕ್ಕಳ ಸಾಮರ್ಥ್ಯ ಗುರುತಿಸಿ ತರಬೇತಿ ಕೇಂದ್ರಕ್ಕೆ ಕರೆತರಲಾಗುತ್ತದೆ. ಆನಂತರ ಶುರುವಾಗುತ್ತದೆ ಕಠಿಣ ಅಭ್ಯಾಸ. ಒಂದು ರೀತಿಯಲ್ಲಿ ಯುದ್ಧಕ್ಕೆ ಯೋಧರನ್ನು ಸಿದ್ಧಗೊಳಿಸುವಂಥ ತರಬೇತಿ. ಮಮಕಾರವನ್ನು ಬದಿಗಿಟ್ಟು ಕ್ರೀಡಾಪಟುಗಳನ್ನು ಗಟ್ಟಿಗೊಳಿಸುವ ಕ್ರಿಯೆ ಅದು. ಆದರೆ ಇಂಥ ತರಬೇತಿಯನ್ನು ತಪ್ಪೆಂದು ಕೆಲವರು ವಿಶ್ವ ಮಾಧ್ಯಮಗಳಲ್ಲಿ ಬೊಬ್ಬೆ ಹಾಕಿದ್ದಾರೆ. ಅದಕ್ಕೆ ಕಿವಿಗೊಡದ ಚೀನಾ ಕ್ರೀಡೆಯಲ್ಲಿ ತಾನೇ ಶಕ್ತಿಕೇಂದ್ರ ಎಂದು ಎದೆಯುಬ್ಬಿಸಿ ಸಾರುತ್ತಲೇ ಬಂದಿದೆ. ಭಾರತವು ಎಂದು ಹಾಗೆ ವಿಶ್ವಾಸದಿಂದ ಬೀಗುತ್ತದೋ...!  

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry