ಚೀನಾ ಮೋಹ; `ತಾಯಿತ'ದ ಮೋಡಿ

7
ನಾ ಕಂಡ ವಿವೇಕಾನಂದ

ಚೀನಾ ಮೋಹ; `ತಾಯಿತ'ದ ಮೋಡಿ

ಡಾ.ಆರ್.ಬಾಲಸುಬ್ರಹ್ಮಣ್ಯಂ
Published:
Updated:

ಭಾರತದಾದ್ಯಂತ ಸಂಚರಿಸಿದ ಸ್ವಾಮಿ ವಿವೇಕಾನಂದರ ಪರಿವ್ರಾಜಕ ಜೀವನದ ಬಗ್ಗೆ ಸಾಕಷ್ಟು ದಾಖಲೆಗಳಿವೆ. ಅಮೆರಿಕದ ಅವರ ಪ್ರವಾಸದ ಬಗ್ಗೆಯೂ ಸೂಕ್ತ ಮಾಹಿತಿ ನಮಗೆ ಲಭ್ಯವಾಗುತ್ತದೆ. ಅಸೀಂ ಚೌಧರಿ ಎಂಬುವವರು ಇತ್ತೀಚೆಗೆ ಇದೆಲ್ಲವನ್ನೂ `ನ್ಯೂ ಡಿಸ್ಕವರೀಸ್' ಎಂಬ ತಮ್ಮ ಪುಸ್ತಕದಲ್ಲಿ ಅತ್ಯಂತ ಸ್ಫುಟವಾಗಿ ಬರೆದಿದ್ದಾರೆ. ಸ್ವಾಮೀಜಿ ಚೀನಾಗೆ ಭೇಟಿ ನೀಡಿದ್ದ ವಿಷಯವನ್ನು ನಾನು ಇಲ್ಲಿ ಸ್ಮರಿಸ ಬಯಸುತ್ತೇನೆ.ವಿಶ್ವ ಧರ್ಮ ಸಂಸತ್ತಿನಲ್ಲಿ ಭಾಗವಹಿಸುವ ಸಲುವಾಗಿ ಅವರು ಮೊದಲ ಬಾರಿಗೆ ಅಮೆರಿಕಕ್ಕೆ ಹೊರಟಿದ್ದರು. 1893ರ ಮೇ 31ರಂದು ಮುಂಬೈನಿಂದ ಹಡಗು ಹತ್ತಿದರು. ಕೊಲಂಬೊ, ಪೆನಾಂಗ್, ಸಿಂಗಾಪುರ, ಹಾಂಕಾಂಗ್ ಮತ್ತು ಜಪಾನ್ ಮೂಲಕ ಅಮೆರಿಕ ತಲುಪಬೇಕಿತ್ತು. ಮಧ್ಯದಲ್ಲಿ ಸಿಂಗಾಪುರ ಬಿಟ್ಟ ಹಡಗು ಹಾಂಕಾಂಗ್ ತಲುಪಿ, ಅಲ್ಲಿ ಮೂರು ದಿನಗಳ ಕಾಲ ತಂಗಿತ್ತು. ಈ ಅವಧಿಯಲ್ಲಿ ಸ್ವಾಮೀಜಿ ಸೀ ಕಿಯಾಂಗ್ ನದಿಯಿಂದ 80 ಮೈಲಿ ದೂರದಲ್ಲಿರುವ ಕ್ಯಾಂಟನ್‌ಗೆ ತೆರಳಿದ್ದರು. ಚೀನಾ, ಚೀನೀಯರು ಮತ್ತು ಅವರ ಜೀವನ ಶೈಲಿಯಿಂದ ಅವರು ಯಾವಾಗಲೂ ಆಕರ್ಷಿತರಾಗುತ್ತಿದ್ದರು.ಈ ಬಗೆಗಿನ ತಮ್ಮ ಅನುಭವವನ್ನು ಜುಲೈ 10ರಂದು ಬರೆದ ಪತ್ರದಲ್ಲಿ ಅವರು ಹಾಸ್ಯದ ಧಾಟಿಯಲ್ಲಿ ಹೀಗೆ ವಿವರಿಸಿದ್ದಾರೆ `ಭಾರತದ ಮಗು ತೆವಳುವುದನ್ನು ಕಲಿಯುವ ವೇಳೆಗಾಗಲೇ ಚೀನಾದ ಮಗು ದೊಡ್ಡ ತತ್ವಜ್ಞಾನಿಯಾಗಿ ಸಾವಧಾನದಿಂದ ಕೆಲಸಕ್ಕೆ ಹೋಗುತ್ತಿರುತ್ತದೆ. `ಅನಿವಾರ್ಯ' ಎಂಬ ಪದದ ಅರ್ಥವನ್ನು ಅದು ಚೆನ್ನಾಗಿ ತಿಳಿದುಕೊಂಡಿರುತ್ತದೆ. ಚೀನೀಯರು ಮತ್ತು ಭಾರತೀಯರ ನಾಗರಿಕತೆ ಶುಷ್ಕವಾಗಿರುವುದಕ್ಕೆ ಅವರ ಕಡು ಬಡತನವೂ ಒಂದು ಕಾರಣ' ಎಂದು ಹೇಳಿದ್ದರು.ಮೂರು ದಿನಗಳ ಕ್ಯಾಂಟನ್ ವಾಸ್ತವ್ಯ ಸ್ವಾಮೀಜಿಗೆ ಮಹತ್ವದ ಅನುಭವ ತಂದುಕೊಟ್ಟಿತು. ಸಾಕಷ್ಟು ಬೌದ್ಧ ದೇವಾಲಯಗಳಿಗೆ ಅವರು ಭೇಟಿ ನೀಡಿದ್ದರು. ಭಾರತ ಮತ್ತು ಚೀನಾದಲ್ಲಿನ ದೇವಾಲಯಗಳ ಬೌದ್ಧರ ಕೆತ್ತನೆ ಕೆಲಸ ಮತ್ತು ಅವುಗಳ ವೈರುಧ್ಯಗಳನ್ನು ಹೋಲಿಸಿ ನೋಡುತ್ತಿದ್ದರು. ಒಬ್ಬ ಸನ್ಯಾಸಿಯಾಗಿ ಚೀನೀಯರ ಮಂದಿರಗಳಿಗೆ ಭೇಟಿ ನೀಡಿ, ಅಲ್ಲಿನ ಸನ್ಯಾಸಿಗಳೊಟ್ಟಿಗೆ ಸಂವಾದ ನಡೆಸಬೇಕೆಂಬ ಮಹತ್ವಾಕಾಂಕ್ಷೆ ಅವರಿಗಿತ್ತು. ದುರದೃಷ್ಟವಶಾತ್ ಈ ಮಂದಿರಗಳಿಗೆ ವಿದೇಶಿಯರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಚೀನಾದ ಮಂದಿರಕ್ಕೆ ಕರೆದೊಯ್ಯುವಂತೆ ಅವರು ತಮ್ಮ ದುಭಾಷಿಯನ್ನು ಕೇಳಿಕೊಂಡರು.ಆದರೆ ಆತ ಅದರಿಂದ ತನ್ನ ಜೀವಕ್ಕೆ ಅಪಾಯ ಇದೆ ಎಂದು ಹೇಳಿ ಅವರ ಕೋರಿಕೆಯನ್ನು ನಯವಾಗಿ ತಳ್ಳಿಹಾಕಿದ. ಒಂದು ವೇಳೆ ತಾವೇನಾದರೂ ಬಲವಂತವಾಗಿ ಮಂದಿರ ಪ್ರವೇಶಿಸಿದ್ದೇ ಆದರೆ, ಅಲ್ಲಿ ತಮ್ಮನ್ನು ಅನುಚಿತವಾಗಿ ನಡೆಸಿಕೊಳ್ಳುವುದರ ಜೊತೆಗೆ ಏಟು ಸಹ ಬೀಳಬಹುದು ಎಂದು ತಿಳಿಸಿದ. ಆದರೆ ವಿವೇಕಾನಂದರು ಇಷ್ಟಕ್ಕೆಲ್ಲ ಹೆದರುವವರಾಗಿರಲಿಲ್ಲ. ದುಭಾಷಿಯ ಮನವೊಲಿಸಿ ಸಮೀಪದ ಮಂದಿರಕ್ಕೆ ಅವನನ್ನು ಕರೆದೊಯ್ದರು. ಅಲ್ಲಿ ಬೆತ್ತ ಹಿಡಿದು ನಿಂತಿದ್ದ ಇಬ್ಬರು ಧಾಂಡಿಗರು ಹೆದರಿಕೆ ಹುಟ್ಟಿಸುವಂತಿದ್ದರು.ಇದನ್ನು ಕಂಡ ದುಭಾಷಿ ಓಡಿ ಹೋಗಿ ಬಚ್ಚಿಟ್ಟುಕೊಂಡ. ಅಷ್ಟರಲ್ಲಿ `ಸನ್ಯಾಸಿ' ಎಂಬ ಪದಕ್ಕೆ ಚೀನೀ ಭಾಷೆಯಲ್ಲಿ ಏನೆನ್ನುತ್ತಾರೆ ಎಂಬುದನ್ನು ಸ್ವಾಮೀಜಿ ಅವನಿಂದ ಕೇಳಿ ತಿಳಿದುಕೊಂಡಿದ್ದರು. ಆ ವ್ಯಕ್ತಿಗಳು ತಮ್ಮ ಹತ್ತಿರ ಬರುತ್ತಿದ್ದಂತೆಯೇ, ತಾವೊಬ್ಬ ಭಾರತೀಯ ಯೋಗಿ ಎಂದು ಅವರು ಗಟ್ಟಿಯಾಗಿ ಕೂಗಿ ಹೇಳಿದರು. ಆ ಪದ ಮಂತ್ರಶಕ್ತಿಯಂತೆ ಕೆಲಸ ಮಾಡಿತು. ಸಿಟ್ಟಿನಿಂದ ಕೂಡಿದ್ದ ಅವರ ಮುಖಗಳಲ್ಲಿ ಕೂಡಲೇ ಗೌರವ ಭಾವ ಕಾಣಿಸಿಕೊಂಡಿತಲ್ಲದೆ, ಅವರು ಸ್ವಾಮೀಜಿಯ ಪಾದಕ್ಕೆ ಎರಗಿದರು. ಬಳಿಕ ಮೇಲೆದ್ದು ವಂದನೆ ಅರ್ಪಿಸಿ, ಜೋರಾಗಿ ಅವರ ಜೊತೆ ಮಾತನಾಡತೊಡಗಿದರು. ಅದರಲ್ಲಿ ಸ್ವಾಮೀಜಿಗೆ ಅರ್ಥವಾದದ್ದು `ಕಬಾಚ್' ಎಂಬ ಪದ ಮಾತ್ರ.ಉಳಿದಂತೆ ಅವರು ಹೇಳುತ್ತಿದ್ದುದೇನೂ ಅವರಿಗೆ ಅರ್ಥವಾಗಲಿಲ್ಲ. ಆಗ ಸ್ವಾಮೀಜಿ ದೂರದಲ್ಲಿ ನಿಂತಿದ್ದ ದುಭಾಷಿಯ ಬಳಿ ತೆರಳಿ, ಅವರು ಏನನ್ನು ಹೇಳಲು ಹೊರಟಿದ್ದಾರೆ ಎಂದು ವಿಚಾರಿಸಿದರು. ದುಷ್ಟಶಕ್ತಿಗಳು ಮತ್ತು ಅಪವಿತ್ರ ಸಂಗತಿಗಳನ್ನು ಹೊಡೆದೋಡಿಸುವ `ತಾಯಿತ'ವನ್ನು ತಮಗೆ ನೀಡುವಂತೆ ಕೇಳಿಕೊಳ್ಳುತ್ತಿದ್ದಾರೆ ಎಂದಾತ ಹೇಳಿದ. ಇದನ್ನು ಕೇಳಿ ಸ್ವಾಮೀಜಿ ಅರೆಕ್ಷಣ ಅಪ್ರತಿಭರಾದರು.ಮಂತ್ರಶಕ್ತಿ, ತಾಯಿತ ಅಂತಹವುಗಳ ಬಗ್ಗೆ ತಮಗೆ ನಂಬಿಕೆ ಇರದಿದ್ದರೂ, ಏನಾದರೂ ಮಾಡಿ ಈ ಹೊಸ ಸ್ನೇಹಿತರನ್ನು ತೃಪ್ತಗೊಳಿಸಬೇಕು ಎಂದವರಿಗೆ ಅನಿಸಿತು. ಕೂಡಲೇ ಜೇಬಿನಿಂದ ಒಂದು ತುಂಡು ಕಾಗದವನ್ನು ಹೊರತೆಗೆದು ಎರಡು ಭಾಗ ಮಾಡಿ, ಅವುಗಳಲ್ಲಿ `ಓಂ' ಎಂದು ಸಂಸ್ಕೃತ ಭಾಷೆಯಲ್ಲಿ ಬರೆದು ಇಬ್ಬರಿಗೂ ಕೊಟ್ಟರು. ಅದನ್ನು ತೆಗೆದುಕೊಂಡು ತಮ್ಮ ತಲೆಗೆ ಒತ್ತಿಕೊಂಡ ಆ ವ್ಯಕ್ತಿಗಳು, ಸ್ವಾಮೀಜಿಯನ್ನು ಮಂದಿರಕ್ಕೆ ಕರೆದೊಯ್ದು ಒಳಗೆಲ್ಲ ತೋರಿಸಿದರು.ಅಚ್ಚರಿಯ ಸಂಗತಿಯೆಂದರೆ, ಅಲ್ಲಿ ಸಂಸ್ಕೃತದ ಸಾಕಷ್ಟು ಹಸ್ತಪ್ರತಿಗಳು ಇದ್ದವು. ಅವುಗಳಲ್ಲಿ ಕೆಲವನ್ನು ಹಳೆ ಬಂಗಾಳಿ ಲಿಪಿಯಲ್ಲಿ ಬರೆಯಲಾಗಿತ್ತು. ಇದರಿಂದ, ಬಹುಶಃ ಮೊದಲು ಚೀನಾ ಮತ್ತು ಬಂಗಾಳದ ನಡುವೆ ಸಾಕಷ್ಟು ಸಂಪರ್ಕ ಇದ್ದಿರಬಹುದು ಮತ್ತು ಬೌದ್ಧ ಭಿಕ್ಕುಗಳು ಪರಸ್ಪರ ಬಂದು ಹೋಗುತ್ತಿದ್ದಿರಬಹುದು ಎಂಬ ತೀರ್ಮಾನಕ್ಕೆ ಅವರು ಬರುವಂತಾಯಿತು. ಹಾಂಕಾಂಗ್‌ನಿಂದ ಪ್ರವಾಸ ಮುಂದುವರಿಸಿದ ಸ್ವಾಮೀಜಿ, ಬಳಿಕ ಜಪಾನ್‌ನ ನಾಗಸಾಕಿಗೆ ತೆರಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry