ಶುಕ್ರವಾರ, ಏಪ್ರಿಲ್ 23, 2021
31 °C

ಚೀನಾ ಯುದ್ಧದ ಸೋಲು ಕಲಿಸಿತೇ ಪಾಠ..?

ಮಾಲತಿ ಭಟ್ Updated:

ಅಕ್ಷರ ಗಾತ್ರ : | |

ಚೀನಾ ಯುದ್ಧದ ಸೋಲು ಸ್ವತಂತ್ರ ಭಾರತದ ಸೇನಾ ಇತಿಹಾಸದಲ್ಲಿ ಎಂದೂ ಮರೆಯಲಾಗದ ಘಟನೆ. ಯುದ್ಧ ತಂತ್ರಗಾರಿಕೆಯಲ್ಲಿ ನೈಪುಣ್ಯ ಸಾಧಿಸಲು ಈ ಸೋಲು ದಿಕ್ಸೂಚಿಯಾಗಬೇಕಿತ್ತು.ನಮ್ಮ ಸೇನಾಪಡೆಗಳಲ್ಲಿನ ಅವ್ಯವಸ್ಥೆ, ಅವುಗಳನ್ನು ಬಾಧಿಸುತ್ತಿರುವ ಭ್ರಷ್ಟಾಚಾರವನ್ನು ಗಮನಿಸಿದಾಗ ಈ ಸೋಲಿನಿಂದ ನಾವು ಪಾಠ ಕಲಿತಂತೆ ಕಾಣುತ್ತಿಲ್ಲ.
ಲಡಾಕ್ ಈಶಾನ್ಯ ಭಾಗದಲ್ಲಿರುವ ಅಕ್ಸಾಯ್ ಚಿನ್ ಹಾಗೂ ಅರುಣಾಚಲ ಪ್ರದೇಶದ ವಿವಾದಾತ್ಮಕ ಪ್ರದೇಶದ ಮೇಲೆ ತನ್ನ ಹಕ್ಕು ಸಾಧಿಸಲು ಚೀನಾ ಭಾರತದ ಗಡಿಯೊಳಗೆ ನುಗ್ಗಿ 50 ವರ್ಷಗಳೇ ಕಳೆದಿವೆ. 1962ರ ಚೀನಾ ಯುದ್ಧದ ಸೋಲಿನ ಅಪಮಾನವನ್ನು ಭಾರತ ಎಂದಿಗೂ ಮರೆಯಲಾರದು.ಹಿಂದಿ- ಚೀನಿ ಭಾಯಿ,ಭಾಯಿ ಎನ್ನುತ್ತ ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ಹೆಗಲ ಮೇಲೆ ಕೈಹಾಕಿ, ಪಂಚಶೀಲ ಒಪ್ಪಂದಕ್ಕೆ ಸಹಿ ಹಾಕಿ ಸ್ನೇಹದ ನಟನೆ ತೋರಿದ್ದ ಚೀನಾ 1962ರ ಅ.20ರಂದು ಏಕಾಏಕಿ ಮ್ಯಾಕ್‌ಮಹೋನ್ ಗಡಿ ರೇಖೆ ಉಲ್ಲಂಘಿಸಿ ಭಾರತದೊಳಗೆ ಸೈನ್ಯ ನುಗ್ಗಿಸಿತ್ತು.ಚೀನಾ ಆಕ್ರಮಣದ ಕಿಂಚಿತ್ತೂ ಸುಳಿವು ಇಲ್ಲದ ಸರ್ಕಾರ, ಸೇನೆ ಕಕ್ಕಾಬಿಕ್ಕಿಯಾಗಿತ್ತು. ಥರಗುಟ್ಟುವ ಚಳಿಯಲ್ಲಿ ಸಮವಸ್ತ್ರ, ಬೂಟು, ಸಮರ್ಪಕ ಶಸ್ತ್ರಾಸ್ತ್ರ, ಆಹಾರ ದಾಸ್ತಾನು ಇಲ್ಲದೇ ಭಾರತೀಯ ಸೈನಿಕರು ವಿರೋಧಿಗಳನ್ನು ಹಿಮ್ಮೆಟ್ಟಿಸಲು ಹೋರಾಟಕ್ಕೆ ಇಳಿದಿದ್ದರು.ಅಲಿಪ್ತ ಚಳವಳಿಯ ಮುಂಚೂಣಿಯಲ್ಲಿದ್ದು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕು ಎನ್ನುವ ನೆಹರು ಅವರ ಹಪಾಹಪಿ, ಆಗಿನ ರಕ್ಷಣಾ ಸಚಿವ ವಿ.ಕೆ. ಕೃಷ್ಣ ಮೆನನ್ ಅವರ ಉದಾಸೀನ ಧೋರಣೆ, ಸೇನಾ ನಾಯಕರ ಮಾರ್ಗದರ್ಶನದ ಕೊರತೆ, ಕೆಳ ಹಂತದ ಸೈನ್ಯಾಧಿಕಾರಿಗಳು, ಸೈನಿಕರಲ್ಲಿ ಸಿದ್ಧತೆಯ ಕೊರತೆಯಿಂದ ಒಂದು ತಿಂಗಳ ನಂತರ ಭಾರತ ಸೋಲಪ್ಪಿಕೊಂಡಿತು.1959ರಲ್ಲಿ ಟಿಬೆಟ್ ಧರ್ಮಗುರು ದಲಾಯಿಲಾಮ ಮತ್ತು ಅವರ ಬೆಂಬಲಿಗರಿಗೆ ಭಾರತ ಆಶ್ರಯ ನೀಡಿದ್ದು ಚೀನಾ ಅಸಮಾಧಾನಕ್ಕೆ ಕಾರಣವಾಗಿತ್ತು. ಆ ಕಾಲದ ಜಾಗತಿಕ ರಾಜಕೀಯ ಹಾಗೂ ದಕ್ಷಿಣ ಏಷ್ಯಾ ಸನ್ನಿವೇಶದಲ್ಲಿ ಭಾರತದ ಮೇಲೆ ಮೇಲುಗೈ ಸಾಧಿಸಲು, ತಾನು ಏಷ್ಯಾದ ಅದ್ವೀತಿಯ ನಾಯಕನೆಂದು ಬಿಂಬಿಸಿಕೊಳ್ಳಲು ಚೀನಾಕ್ಕೆ ಈ ಯುದ್ಧ ಅಗತ್ಯವಾಗಿತ್ತು.ಜಾಗತಿಕ ರಾಜಕೀಯ ಸನ್ನಿವೇಶ ಹಾಗೂ ಚೀನಾ ಹುನ್ನಾರ ಅರ್ಥಮಾಡಿಕೊಳ್ಳುವಲ್ಲಿ ಭಾರತದ ರಾಜಕೀಯ ನಾಯಕರು ವಿಫಲವಾಗಿದ್ದರೆ, ಗಡಿಯುದ್ದಕ್ಕೂ ಚೀನಾ ಪಡೆಗಳು ಮಾಡಿಕೊಂಡಿದ್ದ ತಯಾರಿಯನ್ನು ಗಮನಿಸುವಲ್ಲಿ ಬೇಹುಗಾರಿಕಾ ಪಡೆಗಳು ಸೋತಿದ್ದವು.ಚೀನಾ ಯುದ್ಧದ ಸೋಲಿನಿಂದ ಕಂಗೆಟ್ಟಿದ್ದ ಭಾರತ ಅದಾದ ಮೂರೇ ವರ್ಷಗಳಲ್ಲಿ (1965) ಕಾಲು ಕೆದರಿ ಯುದ್ಧಕ್ಕೆ ಬಂದ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿತ್ತು. 1971ರ ಯುದ್ಧದಲ್ಲೂ ಭಾರತ, ಪಾಕ್ ಸೇನೆಯನ್ನು ಸೋಲಿಸಿ ಬಾಂಗ್ಲಾ ವಿಮೋಚನೆಗೆ ಕಾರಣವಾಯಿತು. ಈ ಎರಡೂ ಜಯ ಭಾರತಕ್ಕೆ ಲಭಿಸಿದ್ದು, ದುರ್ಬಲ ಪಾಕಿಸ್ತಾನ ಸೇನೆಯ ಮೇಲೆ ಎಂಬುದನ್ನು ಮರೆಯಬಾರದು.ಚೀನಾ ಯುದ್ಧದ ಸೋಲನ್ನು 50 ವರ್ಷಗಳ ನಂತರ ವಿಶ್ಲೇಷಿಸಿದಲ್ಲಿ ಭಾರತ ಈ ಸೋಲಿನಿಂದ ಗಂಭೀರ ಪಾಠ ಕಲಿಯಬಹುದಿತ್ತು ಎನಿಸುತ್ತದೆ. ಈ 50 ವರ್ಷಗಳಲ್ಲಿ ರಕ್ಷಣಾ ಇಲಾಖೆಯ ಭದ್ರ ಕೋಟೆಯನ್ನು ದುರ್ಬಲಗೊಳಿಸುವಂತೆ ಹೊರಬಿದ್ದ ಹಗರಣಗಳ ಸರಮಾಲೆ, ಸೇನಾ ಸಾಮಗ್ರಿ, ಶಸ್ತ್ರಾಸ್ತ್ರಗಳ ಖರೀದಿಯಲ್ಲಿ ವ್ಯಾಪಕವಾಗಿರುವ ದಲ್ಲಾಳಿಗಳ ಹಾವಳಿ, ಆಗಾಗ ಕೇಳಿ ಬರುತ್ತಿರುವ ಬೇಹುಗಾರಿಕಾ ವಿಭಾಗದ ವೈಫಲ್ಯ, ಸೈನ್ಯಾಧಿಕಾರಿಗಳು, ರಕ್ಷಣಾ ಇಲಾಖೆಯ ವೈಟ್ ಕಾಲರ್ ಅಧಿಕಾರಿಗಳ ನಡುವಿನ ಸಂಘರ್ಷ ಇವೆಲ್ಲ ಗಮನಿಸಿದಾಗ ಈ ಸೋಲನ್ನು ಎಲ್ಲರೂ ಮರೆತುಬಿಟ್ಟಂತೆ ಕಾಣುತ್ತದೆ.ಇತ್ತೀಚಿನ ವರ್ಷಗಳಲ್ಲಿ ಅಮೆರಿಕಕ್ಕೆ ಸೆಡ್ಡು ಹೊಡೆಯುವಂತೆ ಎಲ್ಲ ರಂಗಗಳಲ್ಲೂ ಬೆಳೆಯುತ್ತಿರುವ, ಏಷ್ಯಾದ ಸೂಪರ್ ಪವರ್ ಆಗಿರುವ ಚೀನಾಕ್ಕೆ ಭಾರತ ಎಂದಿಗೂ ಮಗ್ಗುಲ ಮುಳ್ಳು.ಹಿಂದೂ ಮಹಾಸಾಗರ ಪ್ರದೇಶದಲ್ಲಿ ಪ್ರಾಬಲ್ಯ ಸ್ಥಾಪಿಸಲು ಯತ್ನಿಸುತ್ತಿರುವ ಚೀನಾ ಶ್ರೀಲಂಕಾದೊಂದಿಗೆ ಸ್ನೇಹ ಬೆಳೆಸಿದೆ. ಭಾರತಕ್ಕೆ ಅಂಟಿಕೊಂಡೇ ಇರುವ ನೇಪಾಳದೊಂದಿಗೆ ಸೌಹಾರ್ದ ಸಂಬಂಧ ಹೊಂದಿದೆ.ಮ್ಯಾನ್ಮಾರ್‌ನೊಂದಿಗೆ ಸೇನಾ ಸಂಬಂಧ ಹೊಂದಿರುವ ಅದು ಅಲ್ಲಿನ ಬಂದರು, ಸೇನಾ ನೆಲೆಗಳನ್ನು ಬಂಗಾಳ ಕೊಲ್ಲಿಯಲ್ಲಿ ಸಮರಾಭ್ಯಾಸ ಮಾಡಲು ಬಳಸಿಕೊಳ್ಳುತ್ತಿದೆ. ಭಾರತ ಮಾತ್ರ ಎಂದಿನಂತೆ ಇದರಿಂದ ತನಗೆ ಯಾವುದೇ ನಷ್ಟವಿಲ್ಲ ಎಂಬ ಧೋರಣೆ ತಳೆದಿದೆ.ಯುದ್ಧದಂತಹ ಸನ್ನಿವೇಶ ಎದುರಾದಲ್ಲಿ ಇಂದಿನ ಆಧುನಿಕ ಯುಗದಲ್ಲಿ ಯೋಚಿಸಲು ಸಮಯವೇ ಇರುವುದಿಲ್ಲ. ಕ್ಷಣಾರ್ಧದಲ್ಲಿ ರಣನೀತಿ ರೂಪಿಸಬೇಕಾಗುತ್ತದೆ. ಒಂದೊಮ್ಮೆ ಚೀನಾದಂತಹ ಬಲಾಢ್ಯ ದೇಶ ಮತ್ತೆ ಆಕ್ರಮಣ ಮಾಡಿದಲ್ಲಿ ಭಾರತ ಈಗಲೂ ತಡಕಾಡುವ ಸ್ಥಿತಿ ಇದೆ ಎಂದು ಇತ್ತೀಚೆಗೆ ಸೇನಾ ವಿಶ್ಲೇಷಕರೊಬ್ಬರು ಅಭಿಪ್ರಾಯಪಟ್ಟಿದ್ದರು.ದೇಶದ ಸಾರ್ವಭೌಮತ್ವ ಕಾಪಾಡುವ, ಗಡಿ ಭದ್ರತೆಯಂಥ ವಿಚಾರಗಳಲ್ಲೂ ನಮ್ಮ ವ್ಯವಸ್ಥೆಯನ್ನು `ರೆಡ್ ಟೇಪಿಸಂ~ (ನಿಧಾನಗತಿಯ ಧೋರಣೆ) ಕಾಡುತ್ತಿದೆ. ದೆಹಲಿಯ ಸೌತ್‌ಬ್ಲಾಕ್‌ನ ಹವಾನಿಯಂತ್ರಿತ ಕೊಠಡಿಗಳಲ್ಲಿ ನಡೆಯುವ ಸೇನಾ ಕಾರ್ಯತಂತ್ರ ರೂಪಿಸುವ ಮಹತ್ವದ ಸಭೆಗಳಲ್ಲಿ ಗಡಿಗಳಲ್ಲಿ ಕಾರ್ಯನಿರ್ವಹಿಸುವ, ವಾಸ್ತವ ಸಂಗತಿಯ ಅರಿವು ಇರುವ ಎಷ್ಟು ಸೇನಾ ಅಧಿಕಾರಿಗಳು ಭಾಗವಹಿಸುತ್ತಾರೆ..?ಆರು ತಿಂಗಳ ಹಿಂದೆ ಭೂಸೇನಾ ಮುಖ್ಯಸ್ಥರ ಹುದ್ದೆಯಿಂದ ನಿವೃತ್ತರಾದ ಜನರಲ್ ವಿ.ಕೆ. ಸಿಂಗ್ ಹಾಗೂ ರಕ್ಷಣಾ ಸಚಿವ ಎ.ಕೆ. ಆಂಟನಿ ನಡುವಿನ ವೈಮನಸ್ಯ ಜಗಜ್ಜಾಹೀರಾಗಿದ್ದು, ಸೇನಾಧಿಕಾರಿಗಳು ಹಾಗೂ ಸರ್ಕಾರದ ನಡುವೆ ಲಾಗಾಯ್ತಿನಿಂದಲೂ ಇರುವ ಮನಸ್ತಾಪಕ್ಕೆ ಸ್ಪಷ್ಟ ನಿದರ್ಶನ.ತಮ್ಮ ಜನ್ಮದಿನಾಂಕಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲು ಏರಿದ್ದ ವಿ.ಕೆ. ಸಿಂಗ್, ಸೇನೆಯಲ್ಲಿ ಮದ್ದು, ಗುಂಡುಗಳ ಕೊರತೆ ಇರುವುದನ್ನು, ಯುದ್ಧದಂತಹ ಸನ್ನಿವೇಶ ಎದುರಾದಲ್ಲಿ ನಮ್ಮ ಸೇನೆಯಲ್ಲಿ ಸೂಕ್ತ ಸಿದ್ಧತೆ ಇಲ್ಲದಿರುವುದನ್ನು ವಿವರಿಸಿ ಸ್ವತಃ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆಯುವ ಕೆಚ್ಚೆದೆಯನ್ನು ತೋರಿದ್ದರು.ಜನರಲ್ ಸಿಂಗ್ ಜನ್ಮದಿನಾಂಕಕ್ಕೆ ಸಂಬಂಧಿಸಿದಂತೆ ಎದ್ದ ವಿವಾದದ ಕಾವಿನಲ್ಲಿ ಅವರು ಪ್ರಾಮಾಣಿಕವಾಗಿ ಬರೆದಿದ್ದ ಪತ್ರದ ವಿಚಾರ ಮರೆಯಾಗಿಹೋಯಿತು.

ಬೇಹುಗಾರಿಕೆ ವೈಫಲ್ಯ: ನಮ್ಮ ಸೇನಾಪಡೆಗಳಲ್ಲಿನ ಬೇಹುಗಾರಿಕೆ ವೈಫಲ್ಯಕ್ಕೆ ಮತ್ತೊಂದು ಉದಾಹರಣೆ 12 ವರ್ಷಗಳ ಹಿಂದಿನ ಕಾರ್ಗಿಲ್ ಸಂಘರ್ಷ.1999ರ ಮೇ ತಿಂಗಳಿನಲ್ಲಿ ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ವಲಯದಲ್ಲಿ ಪಾಕಿಸ್ತಾನ ಸೇನೆ, ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿ ಭಾರತದ ಭೂಭಾಗದ ಮೇಲೆ ಆಕ್ರಮಣ ಮಾಡಿತ್ತು.`ಆಪರೇಷನ್ ವಿಜಯ್~ ಮೂಲಕ ಭಾರತ ಸೇನೆ, ಪಾಕಿಸ್ತಾನವನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿದರೂ 527 ಸೈನಿಕರನ್ನು ಕಳೆದುಕೊಳ್ಳಬೇಕಾಯಿತು. ಆದರೆ, ಈ ಯುದ್ಧಕ್ಕೂ ಮುಂಚೆ ಕೆಲ ತಿಂಗಳಿನಿಂದ ಗಡಿ ನಿಯಂತ್ರಣ ರೇಖೆಯ ಬಳಿ ಹೆಚ್ಚುತ್ತಿದ್ದ ಪಾಕ್ ಸೇನೆಯ ಚಟುವಟಿಕೆಗಳನ್ನು ಗಮನಿಸಲು ಭಾರತ ವಿಫಲವಾಗಿತ್ತು.ಸ್ಥಳೀಯ ಕುರಿಗಾಹಿಗಳು, ದನಗಾಹಿಗಳು ಪಾಕ್ ಸೈನಿಕರ ಚಟುವಟಿಕೆಯ ಬಗ್ಗೆ ಮಾಹಿತಿ ನೀಡಿದ ಮೇಲಷ್ಟೇ ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿದ್ದು ಭಾರತದ ಸೇನಾಧಿಕಾರಿಗಳ ಗಮನಕ್ಕೆ ಬಂತು. ಲಡಾಕ್ ಬಳಿ ಅಕ್ಸಾಯ್ ಚಿನ್ ಪ್ರದೇಶದಲ್ಲಿ ಚೀನಾ ರಸ್ತೆ ನಿರ್ಮಾಣದ ಕಾರ್ಯದಲ್ಲಿ ತೊಡಗಿಕೊಂಡಿದೆ. ಸೇನಾ ಚಟುವಟಿಕೆ ನಡೆಸುತ್ತಿದೆ ಎಂಬ ವದಂತಿಗಳು ಕಳೆದ ವರ್ಷ ಕೇಳಿಬಂದಿತ್ತು. ದಪ್ಪ ಚರ್ಮದ ರಾಜಕೀಯ ನಾಯಕರು ಮಾತ್ರ ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.ಭ್ರಷ್ಟಾಚಾರದ ಪಿಡುಗು: ನಮ್ಮ ಸೇನಾಪಡೆಗಳನ್ನು ಕ್ಯಾನ್ಸರ್‌ನಂತೆ ಕಾಡುತ್ತಿರುವ ಮತ್ತೊಂದು ಪಿಡುಗು ಭ್ರಷ್ಟಾಚಾರ.ಸೇನಾಪಡೆಯ ಎಲ್ಲ ಹಂತಗಳಲ್ಲೂ ಭ್ರಷ್ಟಾಚಾರದ ಬೇರುಗಳು ಇಳಿದಿವೆ. 1989ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಜೀವ್ ಗಾಂಧಿ ಸರ್ಕಾರದ ಸೋಲಿಗೆ ಕಾರಣವಾದ ಬೋರ್ಫೋಸ್ ಹಗರಣದಿಂದ ಹಿಡಿದು ಇತ್ತೀಚಿನ ಕಳಪೆ ದರ್ಜೆಯ ಟಟ್ರಾ ಟ್ರಕ್ ಖರೀದಿ ವ್ಯವಹಾರದವರೆಗೆ ನಡೆದ ಹಗರಣಗಳು ರಕ್ಷಣಾ ಇಲಾಖೆಯ ಖರೀದಿ ವ್ಯವಹಾರಗಳಲ್ಲಿ ದಲ್ಲಾಳಿಗಳ ಬಿಗಿಹಿಡಿತ ಎಷ್ಟಿದೆ ಎಂಬುದಕ್ಕೆ ಸಾಕ್ಷಿಯಾಗಿವೆ.ಸಮರ್ಥ ಪೈಲಟ್‌ಗಳ ಕೊರತೆ, ದಶಕಗಳ ಹಿಂದಿನ ವಿಮಾನಗಳು, 15,000 ಕಿ.ಮೀ.ಗೂ ಉದ್ದದ ಗಡಿಯನ್ನು ರಕ್ಷಿಸಲು ವಿಮಾನಗಳ ಅಭಾವ ವಾಯುಪಡೆಯನ್ನು ಭಾದಿಸುತ್ತಿವೆ. ರಾತ್ರಿ ವೇಳೆ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿರದ ಹಳೆಯ ಯುದ್ಧ ಟ್ಯಾಂಕರ್‌ಗಳು, ಬಂದೂಕುಗಳ ಕೊರತೆ, 11,000ಕ್ಕೂ ಹೆಚ್ಚು ಅಧಿಕಾರಿಗಳ ಕೊರತೆ ಭೂಸೇನೆಯನ್ನು ಕಾಡುತ್ತಿವೆ.2012- 2013ನೇ ಸಾಲಿನ ನಮ್ಮ ರಕ್ಷಣಾ ಬಜೆಟ್ ಗಾತ್ರ ಬರೋಬ್ಬರಿ 1.93 ಲಕ್ಷ ಕೋಟಿ ರೂಪಾಯಿಗಳು. ಜಗತ್ತಿನ ಎಂಟನೆಯ ಅತಿದೊಡ್ಡ ರಕ್ಷಣಾ ಬಜೆಟ್ ಇದು. ರಾಜಕೀಯ ದೂರದರ್ಶಿತ್ವದ ಕೊರತೆ, ಸೇನಾಪಡೆಗಳಲ್ಲಿನ ಭ್ರಷ್ಟಾಚಾರ, ಓಬೀರಾಯನ ಕಾಲದ ವ್ಯವಸ್ಥೆಯಿಂದಾಗಿ ಇಷ್ಟೊಂದು ಹಣ ಖರ್ಚು ಮಾಡಿದರೂ ನಮ್ಮ ಸೇನಾಪಡೆಯನ್ನು 21ನೇ ಶತಮಾನಕ್ಕೆ ತಕ್ಕಂತೆ ಆಧುನೀಕರಣಗೊಳಿಸಲು, ಯುದ್ಧ ಸನ್ನದ್ಧವಾಗಿಸಲು ನಮಗೆ ಸಾಧ್ಯವಾಗಿಲ್ಲ.ಚೀನಾ ಯುದ್ಧದ ಸೋಲಿನಿಂದ ನಾವು ಪಾಠ ಕಲಿತಿದ್ದೇವೆ ಎಂದು ಹೇಳಲು ಸಾಧ್ಯವೆ...?

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.