ಮಂಗಳವಾರ, ಮಾರ್ಚ್ 9, 2021
23 °C

ಈ ವಾರಾಂತ್ಯದಲ್ಲಿ ಚುಂಚನಕಟ್ಟೆ ಜಲಪಾತಕ್ಕೆ ಭೇಟಿ ಕೊಡಿ

ಶೃತಿ ಎಂ.ಪಿ. Updated:

ಅಕ್ಷರ ಗಾತ್ರ : | |

ಈ ವಾರಾಂತ್ಯದಲ್ಲಿ ಚುಂಚನಕಟ್ಟೆ ಜಲಪಾತಕ್ಕೆ ಭೇಟಿ ಕೊಡಿ

ಮಳೆಯ ಸೊಬಗು ವರ್ಣಿಸಲು ಸಾಧ್ಯವೇ?  ತಂಪಿನ ಸುಂದರ ಪ್ರಕೃತಿಯ ಸೌಂದರ್ಯದಲ್ಲಿ ಮಿಂದರೆ ಸಮಯ ಹೋಗುವುದೇ ತಿಳಿಯದು. ಹಸಿರಿನ ಮರಗಿಡಗಳ ಎಲೆಯ ತುದಿಯಲ್ಲಿ ನಿಂತು ನಳನಳಿಸುವ ಹನಿ. ನೆನೆದ ಮಣ್ಣಿನ ನೆಲ, ಸುತ್ತ ಆಹ್ಲಾದಕರ ವಾತಾವರಣ.ಜುಳುಜುಳು ಸದ್ದು ಮಾಡುತ್ತಾ ಹರಿಯುವ ಹಳ್ಳಗಳ ನಾದ ಕೇಳುತ್ತಾ ಹಸಿರಿನ ಮಡಿಲಿನಲ್ಲಿ ಮೈ ಮರೆಯುವುದು, ಜಲಪಾತದ ರಮಣೀಯತೆಯನ್ನು ಕಣ್ತುಂಬಿಕೊಳ್ಳುವುದು ಅವಿಸ್ಮರಣೀಯ ಕ್ಷಣ. ಇಂತಹ ಸುಂದರ ಸ್ಥಳ ಚುಂಚಿಕಟ್ಟೆ (ಚುಂಚನಕಟ್ಟೆ)ಜಲಪಾತ. ಇದು ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲ್ಲೂಕಿನಲ್ಲಿದೆ. ಕಾವೇರಿ ನದಿ ಧುಮ್ಮಿಕ್ಕಿ ಹರಿಯುವ ಈ ತಾಣ ಮೋಹಕವಾಗಿದೆ.ಪ್ರಕೃತಿ ಸೌಂದರ್ಯದ ಈ ತಾಣ  ಪ್ರವಾಸಿಗರ ಕಣ್ಸೆಳೆಯುತ್ತದೆ. ಜಲಪಾತದ ಸಮೀಪವೆ  ಕೋದಂಡರಾಮ ದೇವಸ್ಥಾನವಿದೆ. ದೇಗುಲದಲ್ಲಿರುವ ಸೀತಾದೇವಿಯ ವಿಗ್ರಹವು ಶ್ರೀರಾಮನ ಬಲಭಾಗಕ್ಕಿರುವುದು ಇಲ್ಲಿಯ ವಿಶೇಷ.ಪ್ರಚಲಿತ ಕಥೆಯ ಪ್ರಕಾರ ಶ್ರೀರಾಮನು ವನವಾಸದ ವೇಳೆ ಈ ಸ್ಥಳಕ್ಕೆ ಭೇಟಿ ನೀಡಿ, ಇಲ್ಲಿ ನೆಲೆಸಿ ಚುಂಚ ಮತ್ತು ಆತನ ಪತ್ನಿ ಚುಂಚಿಯರ ಆತಿಥ್ಯ ಸ್ವೀಕರಿಸಿದ್ದನಂತೆ. ಹಲವು ಕನ್ನಡ ಚಿತ್ರಗಳ ಚಿತ್ರೀಕರಣ ಈ ಸ್ಥಳದಲ್ಲಿ ನಡೆದಿದೆ. ಚುಂಚಿಕಟ್ಟೆ ಜಲಪಾತವು 70 ಅಡಿ ಎತ್ತರದಿಂದ ಧುಮ್ಮಿಕ್ಕುತ್ತದೆ. ಇದನ್ನು ಜನರು ‘ಧನುಷ್ಕೋಟಿ’ ಎಂದೂ ಕರೆಯುತ್ತಾರೆ. ಮಳೆಗಾಲದಲ್ಲಿ ಈ ಜಲಪಾತದ ನೋಟ ರಮಣೀಯವಾಗಿರುತ್ತದೆ.ಜಲಪಾತ ಮೂರು ಹಂತದಲ್ಲಿ ಧುಮುಕುತ್ತದೆ. ಸುಲಭವಾಗಿ ಜಲಪಾತದ ಬಳಿ ಸಾಗಿ ಬಂಡೆಯ ಮೇಲೆ ಕುಳಿತು ನೀರು ಮುಟ್ಟಬಹುದು. ಬಂಡೆಗಳ ಮೂಲೆಗಳಿಂದ ಬರುವ ನೀರು ಸ್ಫಟಿಕದಷ್ಟು ಶುಭ್ರವಾಗಿರುತ್ತದೆ. ಜಲಪಾತದ ಮೊರೆತ ಹಾಗೂ ನೀರಿನ ಸಿಂಚನ ಒಂದು ಚೇತೋಹಾರಿ ಅನುಭವ. ಚುಂಚಿಕಟ್ಟೆ ಜಲಪಾತದ ಬಳಿ ಊಟ– ತಿಂಡಿ ಸಿಗುವುದಿಲ್ಲ. ಜೂನ್‌ ತಿಂಗಳಿನಲ್ಲಿ ಇಲ್ಲಿ ಹರಿವ ನೀರಿನಲ್ಲಿ ಸೀಗೆಪುಡಿ ಮಿಶ್ರಣವಾಗಿರುತ್ತದೆ ಎಂಬ ನಂಬಿಕೆಯೂ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.