ಶುಕ್ರವಾರ, ಜೂನ್ 18, 2021
23 °C

ಚುಂಬನ ಜಗತ್ತಿನೊಳಗೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚುಂಬನ ಜಗತ್ತಿನೊಳಗೆ...

ಪ್ರಣಯ, ಶೃಂಗಾರಗಳನ್ನು ಉತ್ಕಟತೆಯಿಂದ ಆರಾಧಿಸಿದ, ಅನುಭವಿಸಿದ ಅದೆಷ್ಟೋ ಕಲಾವಿದರಿದ್ದರೂ, ಆಸ್ಟ್ರಿಯಾದ ಕಲಾವಿದ ಗುಸ್ತಾವ್ ಕ್ಲಿಮ್ಟ ಅವರಲ್ಲಿ ಗಮನಾರ್ಹ ಎನಿಸುತ್ತಾನೆ. ಅದಕ್ಕೆ ಸಾಕ್ಷೀಭೂತವಾದ ಕೃತಿಗಳಲ್ಲಿ ಅವನ ಪ್ರಸಿದ್ಧ ಕೃತಿ `ದಿ ಕಿಸ್~ ಮುಖ್ಯವಾದುದು.

 

2011ರ ವ್ಯಾಲಂಟೈನ್ ದಿನದ ಸಂದರ್ಭದಲ್ಲಿ ಆನ್‌ಲೈನ್ ಗ್ಯಾಲರಿಯೊಂದು ಅತ್ಯಂತ ರೊಮ್ಯಾಂಟಿಕ್ ಎನಿಸಿದ ವಿಶ್ವ ಪ್ರಸಿದ್ಧ 10 ಚಿತ್ರಗಳನ್ನು ಪ್ರದರ್ಶಿಸಿ ಸ್ಪರ್ಧೆ ಏರ್ಪಡಿಸಿದ್ದಾಗ, ನೋಡಿದ ಸುಮಾರು 30 ಲಕ್ಷ ಜನರಲ್ಲಿ ಶೇ.37 ಮಂದಿ `ಅತ್ಯುತ್ತಮ ರೊಮ್ಯಾಂಟಿಕ್ ಚಿತ್ರ~ವೆಂದು `ದಿ ಕಿಸ್~ ಅನ್ನು ಮೆಚ್ಚಿಕೊಂಡಿದ್ದರು.ಹದಿನಾಲ್ಕು ಮಕ್ಕಳ ತಂದೆ ಎಂದು ಹೇಳಲಾದ, ಅತೀವ ಸ್ತ್ರೀಲೋಲನೆನಿಸಿದ ಗುಸ್ತಾವ್, ಮತ್ತೊಬ್ಬ ಪ್ರಸಿದ್ಧ ಕಲಾವಿದ ವ್ಯಾನ್ ಗೋನಂತೆಯೇ ಸದಾ ಪ್ರೀತಿ ಪ್ರಣಯಕ್ಕಾಗಿ ಹಂಬಲಿಸಿದವನು, ತನ್ನ ಕಾಮನೆಗಳನ್ನು ಮುಚ್ಚುಮರೆಯಿಲ್ಲದೆ  ವ್ಯಕ್ತಪಡಿಸಿದವನು.ಅದೇನೇ ಇರಲಿ, ಗುಸ್ತಾವ್ ತನ್ನ ಕೃತಿಗಳಲ್ಲಿ ನಮ್ಮ ಸಾಂಪ್ರದಾಯಿಕ ಮೈಸೂರು ಹಾಗೂ ತಂಜಾವೂರು ಶೈಲಿಯ ಚಿತ್ರಗಳಲ್ಲಿಯಂತೆ ಚಿನ್ನದ ಹಾಳೆಗಳನ್ನು ಬಳಸುತ್ತಿದ್ದ. ಅವನ `ಸುವರ್ಣ ಕಾಲ~ (1898-1908) ಎಂದು ಗುರ್ತಿಸಿರುವ ಸಂದರ್ಭದಲ್ಲಿ ಕ್ಲಿಮ್ಟ ರಚಿಸಿದ, ಸುಮಾರು ಆರು ಅಡಿ ಅಗಲ ಎತ್ತರಗಳುಳ್ಳ ಕೃತಿ- `ದಿ ಕಿಸ್~. ಚಿನ್ನದ ರೇಕುಗಳ ಹಾಗೂ ಗುಸ್ತಾವ್‌ನ ಟ್ರೇಡ್ ಮಾರ್ಕ್ ಎನಿಸಿದ ಸುರುಳಿ ಆಕೃತಿಗಳ ಬಳಕೆಯಲ್ಲಿ ಅವನನ್ನು ಪ್ರಭಾವಿಸಿದ್ದು ಬೈಜಾಂಟೈನ್ ಮೊಸಾಯಿಕ್ ಕೃತಿಗಳು. ಹಾಗಿದ್ದರೂ ವಿಶಿಷ್ಟ ಡೆಕೊರೆಟಿವ್ ರೊಮ್ಯಾಂಟಿಕ್ ನಿರ್ವಹಣೆಯಿಂದಾಗಿ ಆಧುನಿಕ ಕಲೆಯಲ್ಲಿ ಕ್ಲಿಮ್ಟಗೆ ವಿಶಿಷ್ಟ ಸ್ಥಾನವಿದೆ.ಕ್ಲಿಮ್ಟನ ತಂದೆ ಆಭರಣಗಳ ಕಲಾವಿದನಾಗಿದ್ದ. ಅವನ ಬಹುತೇಕ ಕೃತಿಗಳಲ್ಲಿ ಈ ಅಲಂಕರಣದ ಪ್ರಭಾವ ಮುಂದುವರೆಯಲು ಕಾರಣವಿರಬಹುದು. ಈ ಅಲಂಕರಣವನ್ನೇ ತನ್ನ ಬಂಡವಾಳ ಆಗಿಸಿಕೊಂಡು ಕ್ಲಿಮ್ಟ ಸಮಕಾಲೀನ ಕಲೆಗೆ ಹೊಸ ಆಯಾಮ ತಂದುಕೊಟ್ಟ. ವಿಯೆನ್ನಾದಲ್ಲಿ ಅಲಂಕರಣ ಹಾಗೂ ಕುಸುರಿಕಲೆ ಪ್ರಾಧಾನ್ಯವುಳ್ಳ ಕಲಾ ಚಳವಳಿಯೊಂದನ್ನೂ ಹುಟ್ಟುಹಾಕಿದ್ದ.ಈ ಚಿತ್ರದಲ್ಲಿ ಕಲಾವಿದ ಹಲವು ಅಸ್ಪಷ್ಟತೆಗಳನ್ನು ಮುಂದಿಟ್ಟಿದ್ದಾನೆ. ಕೃತಿಯ ಒಳಹೊಕ್ಕು ನೋಡಿದರೆ ಇಲ್ಲಿರುವುದು ಸಂಭೋಗ ಶೃಂಗಾರ. ದ್ರಾಕ್ಷಿ ಬಳ್ಳಿಯಂತಹ ಕಿರೀಟ ಧರಿಸಿದಂತಹ ಪುರುಷನೊಬ್ಬ ಸ್ತ್ರೀಯೊಬ್ಬಳನ್ನು ಉತ್ಕಟವಾಗಿ ಅಪ್ಪಿಕೊಂಡು ಚುಂಬನದಲ್ಲಿ ತಲ್ಲೆನವಾದಂತಹ ಸರಳ ಚಿತ್ರವಿದು.

 

ಈ ಇಬ್ಬರೂ ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಒಂದಾಗಿದ್ದಾರೆಂಬಂತೆ ಇಬ್ಬರ ದೇಹಾಕೃತಿಯೂ ಒಂದಾಗಿ ಸೇರಿಕೊಂಡಿದೆ. ಸುತ್ತಲಿನ ಪ್ರಪಂಚದ ಬಗ್ಗೆ ಗಮನವಿಲ್ಲದೆ ಮಹಿಳೆಯೂ ಕಣ್ಣು ಮುಚ್ಚಿ ಗಾಢಾನುರಕ್ತಿಯಿಂದ ಚುಂಬನದಲ್ಲಿ ಮೈಮರೆತಿದ್ದರೂ, ಕಲಾಕೃತಿಯಲ್ಲಿ ಅತಿರೇಕದ ಭಾವನೆ ಕಾಣಿಸುವುದಿಲ್ಲ (ಈ ಚಿತ್ರಕ್ಕೆ ಮುಂಚಿತವಾಗಿ ಅವನು ರಚಿಸಿದ ಕರಡು ಚಿತ್ರಗಳಲ್ಲಿನ ಪುರುಷ ಗಡ್ಡಧಾರಿಯಾಗಿದ್ದ. ಇದು ಸ್ವಂತ ಅವನದೇ ಚಿತ್ರವಾಗಿದೆಯಲ್ಲದೆ, ಇದರಲ್ಲಿರುವ ಮಹಿಳೆಯು ಕ್ಲಿಮ್ಟನ ಪ್ರೇಯಸಿ ಎಮಿಲಿ ಫ್ಲೋಜ್ ಎಂದು ಹೇಳಲಾಗುತ್ತದೆ).

 

ನೋಡುವುದಕ್ಕೆ ತುಂಬಾ ಸರಳವೆನಿಸಿದರೂ ಹಲವಾರು ಗೋಪ್ಯ ಅಂಶಗಳನ್ನು ಕೃತಿಯಲ್ಲಿ ಕಲಾವಿದ ಅಡಗಿಸಿಟ್ಟಿದ್ದಾನೆ. ಚುಂಬನವನ್ನು ವಸ್ತುವಾಗಿಸಿಕೊಂಡು ರಚಿತಗೊಂಡ ಚಿತ್ರ, ಶಿಲ್ಪಗಳ ಅನೇಕ ಉದಾಹರಣೆಗಳಿದ್ದರೂ ಬ್ರಾಂಕುಸಿ, ರಾಡಿನ್, ಎಡ್ವರ್ಡ್ ಮುಂಕ್ ಅವರಂತಹ ಕೇವಲ ಕೆಲವು ಕಲಾವಿದರ ವಿಶಿಷ್ಟ ಕೃತಿಗಳು ಮಾತ್ರ ಸಮಕಾಲೀನ ಕಲಾ ಇತಿಹಾಸದಲ್ಲಿ ಮುಖ್ಯವೆನಿಸಿವೆ.ಕಲಾವಿದ ತನ್ನ ವಸ್ತು-ವಿಷಯಕ್ಕೆ ತಕ್ಕಂತೆ ಸೂಕ್ತ ಸಂಯೋಜನೆ ಮಾಡಿದಾಗ ಮಾತ್ರ ವಿಷಯವು ಕಲಾತ್ಮಕವಾಗಿ ಮುಟ್ಟುತ್ತದೆ. ಅಂತೆಯೇ ಈ ಚಿತ್ರದ ಸಂದರ್ಭದಲ್ಲಿ ಕ್ಲಿಮ್ಟನ ವಿಶಿಷ್ಟವಾದ ಡಿಸೈನ್ ಪ್ಯಾಟರ್ನ್‌ನೊಂದಿಗೆ ಅಲಂಕರಣವುಳ್ಳ ಚಿತ್ರದ ಸಂಯೋಜನೆಯೂ ಗಮನಾರ್ಹವೆನಿಸಿದೆ. ವಿಭಿನ್ನ ವರ್ಣಗಳು, ವಿಭಿನ್ನ ಹೂವುಗಳನ್ನು ಸಂಯೋಜನೆಗೆ ತಕ್ಕಂತೆ ಅಲ್ಲಲ್ಲಿ ಹರಡುವ ಮೂಲಕ ಇಡೀ ಕೃತಿಯಲ್ಲಿ ಸಾಂಗತ್ಯದ ಭಾವನೆ ತರಲಾಗಿದೆ.ವಿಶೇಷವೆಂದರೆ, ಚಿತ್ರ ಯೋಜನೆಯ ಸಂದರ್ಭದಲ್ಲಿ ಒಂದೆಡೆ ತಾಟಸ್ಥ್ಯಕ್ಕೆ ಹಾಗೂ ಇನ್ನೊಂದೆಡೆ ಸಮಚಿತ್ತದ ಪುರುಷತ್ವದ ಪ್ರತಿನಿಧೀಕರಣಕ್ಕೆ ಸೂಕ್ತವೆಂದು ಕೆಲವೊಮ್ಮೆ ಹೇಳಲಾಗುವಂತಹ ನಿಖರವಾದ ಚಚ್ಚೌಕಾಕಾರದ ಕ್ಯಾನ್ವಾಸನ್ನು ಈ ಕಲಾವಿದ ಆರಿಸಿಕೊಂಡಿದ್ದಾನೆ.

 

ಬಹುತೇಕ ಅಕಾಡೆಮಿಕ್ ಕಲಾವಿದರು ಉದ್ದೇಶಪೂರ್ವಕವಾಗಿ ಅಸಮತೋಲನ ತಂದರೆ, ಇಲ್ಲಿನ ಧನಾತ್ಮಕ ಮತ್ತು ಋಣಾತ್ಮಕ ಸ್ಪೇಸ್‌ಗಳಲ್ಲಿ ಸಮತೋಲನವಿದೆ. ತೈಲ ವರ್ಣ ಮತ್ತು ನಿಜ ಚಿನ್ನದ ರೇಕುಗಳನ್ನು ಬಳಸಿರುವ ಇದರಲ್ಲಿ ಚಿತ್ರದ ಕೇಂದ್ರ ಆಕೃತಿಗಳು ಆಕಾಶದಂತಹ ಹಿನ್ನೆಲೆಯಲ್ಲಿ, ಕೆಳಗೆ ಹೂವಿನ ಹಾಸಿಗೆಯಂತಹ ಚೌಕಾಕೃತಿಯ ಮೇಲೆ ಲಂಬವಾಗಿ ನಿಂತಿರುವ ಲಿಂಗದಂತಹ (ಶಿಶ್ನದ) ಸರಳ ಆಕೃತಿಯೊಳಗೆ ಅಡಗಿವೆ.ಮೇಲ್ಭಾಗದಲ್ಲಿ ಸ್ವಲ್ಪ ಬೇರೆಯದೇ ಬಣ್ಣದಲ್ಲಿರುವ ಪುರುಷನ ಬೆನ್ನು ಮತ್ತು ಶಿರಗಳೂ ತಕ್ಷಣದಲ್ಲಿ ಗಂಡಿನ ಮರ್ಮಾಂಗದ ಒಳಭಾಗದ ನೆನಪು ತರುವುದರಲ್ಲಿ ಸಂದೇಹವಿಲ್ಲ.ಈ ಕಲಾವಿದನ ಎಂದಿನ ಶೈಲಿಯಲ್ಲಿ, ಅಂದರೆ ಆರ್ಟ್ ನೂವೊ (ಜುಗೆಂಡ್/ಸ್ಟಿಲ್ - ಅಲಂಕರಣದ ವಿನ್ಯಾಸಗಳಿಗೆ ಪ್ರಾಧಾನ್ಯ ನೀಡಿದಂತಹ ಒಂದು ಆಧುನಿಕ ಪಂಥ), ಸಿಂಬಾಲಿಸಂಗಳ ಸಮ್ಮಿಲನದ ಹಾಗೂ ಆ ಹಿಂದಿನ ಆರ್ಟ್ಸ್ ಅಂಡ್ ಕ್ರಾಫ್ಟ್ಸ್ ಚಳವಳಿಯಲ್ಲಿದ್ದ ಶೈಲಿಯಲ್ಲಿ ಈ ಕೃತಿ ರಚಿಸಿದ್ದಾನೆ. ಮೂರ್ತ ಮತ್ತು ಅಮೂರ್ತಗಳ ಸಮನಾದ ಪ್ರತಿನಿಧೀಕರಣವೂ ಇದೆ. ಕೃತಿಯಲ್ಲಿನ ವ್ಯಕ್ತಿಗಳ ಮುಖ ಮತ್ತು ಕೈಕಾಲುಗಳನ್ನಷ್ಟೇ ಮುಚ್ಚಿ ನೋಡಿದರೆ ಇದು ಎಲ್ಲ ದೃಷ್ಟಿಗಳಿಂದಲೂ ಹಿತಕರ ಅಲಂಕರಣವುಳ್ಳ ಅಮೂರ್ತ ಕೃತಿ ಎಂದೇ ಭಾವಿಸುತ್ತೇವೆ. ಅವುಗಳನ್ನು ಸೇರಿಸಿಕೊಂಡು ನೋಡಿದಾಗ ಮೂರ್ತ ಕೃತಿಯಾಗುವ ದ್ವಂದ್ವವನ್ನು ನೋಡುಗರಲ್ಲಿ ಸಷ್ಟಿಸುತ್ತದೆ.ಪ್ರಣಯಿಗಳು ನಿಂತುಕೊಂಡು ಚುಂಬಿಸುತ್ತಿದ್ದಾರೆಯೇ ಅಥವಾ ಹಳದಿ ಹಾಸಿಗೆಯ ಮೇಲೆ ಮಲಗಿದ್ದಾರೆಯೇ ಎಂಬ ದ್ವಂದ್ವವನ್ನೂ ಉಂಟುಮಾಡುವಂತೆ ಕಲಾವಿದ ಹಲವೆಡೆ ಸ್ಪಷ್ಟ ಮತ್ತು ಅಸ್ಪಷ್ಟತೆಗಳ ಬಾಗಿಲನ್ನು ತೆರೆಯುತ್ತಾನೆ. ಇಲ್ಲಿನ ವ್ಯಕ್ತಿಗಳ ಮುಖ, ಕೈಕಾಲು ಡೆಕೊರೇಟಿವ್ ಡಿಸೈನಿನ ಪ್ಯಾಟರ್ನ್‌ಗಳೊಳಗೆ ತೇಲುವಂತಿವೆ. ವ್ಯಕ್ತಿಗಳ ವಿವರಗಳು ಇಲ್ಲದಿದ್ದರೆ ಇದು ಸಮತಟ್ಟಾದ ಡಿಸೈನ್ ಮಾತ್ರ ಆಗುತ್ತಿತ್ತು.

 

ಪುರುಷ ತನ್ನ ಸ್ವಭಾವಕ್ಕೆ ತಕ್ಕ ಹಾಗೆ ಆಯಾತಾಕೃತಿಯ ವಿನ್ಯಾಸಗಳುಳ್ಳ ವಸ್ತ್ರ ಧರಿಸಿದ್ದರೆ, ಮಹಿಳೆ ಸುರುಳಿಯಂತೆ ವೃತ್ತಾಕಾರದ ವಿನ್ಯಾಸಗಳುಳ್ಳ ವಸ್ತ್ರ ಧರಿಸಿದ್ದಾಳೆ. ಕುತೂಹಲದ ಅಂಶವೆಂದರೆ ಕ್ಲಿಮ್ಟಗೆ ಈ ಸುರುಳಿಯ ವೃತ್ತಾಕಾರಗಳು ಸ್ತ್ರೀ ಜನನಾಂಗಕ್ಕೆ ರೂಪಕವಾಗಿ ಕಾಣಿಸುತ್ತದೆ ಎನ್ನುವುದಕ್ಕೆ ಅವನ ಉಳಿದ ಕೃತಿಗಳು ಸುಳುಹು ನೀಡುತ್ತವೆ. ಕಾಣಿಸುವಂತಹ ದೇಹದ ಆಕೃತಿಗಳು ತ್ರಿಮಾನದಲ್ಲಿರುವಂತೆ ಚಿತ್ರಿಸಲಾಗಿದ್ದರೆ, ಉಳಿದೆಲ್ಲೆಡೆ ಸಮತಟ್ಟಾದ (ಫ್ಲಾಟ್) ಹಾಗೂ ಆಳರಹಿತ ಮತ್ತು ದಗ್ದರ್ಶನರಹಿತ ಆಕೃತಿಗಳಿವೆ.ವರ್ಣಮೇಳದ ದೃಷ್ಟಿಯಿಂದಲೂ ಕಲಾವಿದ ಚೆನ್ನಾಗಿ ಯೋಚಿಸಿದ್ದಾನೆ. ಹಿನ್ನೆಲೆಗೆ ತಟಸ್ಥ ತೆಳು ಕಂದು ಬಣ್ಣವಿದ್ದರೆ, ಕೆಳಗಿನ ಹೂವಿನ ಹಾಸಿಗೆಗೆ ಹಸಿರು ಪ್ರಧಾನ ಬಣ್ಣ ಹಾಗೂ ವ್ಯಕ್ತಿಗಳಿಗೆ ತೆಳು ಹಳದಿ ಬಣ್ಣವಿದೆ. ಇಲ್ಲಿ ಕೆಳ ಭಾಗದಲ್ಲಿ ತಂಪು ವರ್ಣಮೇಳವಿದ್ದರೆ, ಮೇಲ್ಗಡೆ  ಸಹಜವಾಗಿಯೇ ವಸ್ತುವಿಗೆ ಅನುಗುಣವಾಗಿ ವ್ಯಕ್ತಿಗಳಿರುವೆಡೆ ಬೆಚ್ಚನೆಯ ಉಷ್ಣ ವರ್ಣಗಳನ್ನು ತಂದಿದ್ದು ಅದು ಅಪ್ಪುಗೆಯ ಬಿಸಿಯನ್ನು ಸೂಚಿಸುತ್ತದೆ.ಪುರುಷನ ವಸ್ತ್ರದ ವಿನ್ಯಾಸಗಳು ವೈದೃಶ್ಯದ ಕಪ್ಪು ಮತ್ತು ಬಿಳಿಯಲ್ಲಿದ್ದರೆ, ಮಹಿಳೆಯ ವಿನ್ಯಾಸಗಳಿಗೆ ತಂಪು ಬಣ್ಣಗಳ ನಡುವೆ ಕೆಲವೆಡೆ ಕೆಂಪು ಬಣ್ಣ ಹಚ್ಚಿ ಆಕರ್ಷಕಗೊಳಿಸಿ ಮೊದಲ ಗಮನ ಸೆಳೆಯುವಂತೆ ಮಾಡಿದ್ದಾನೆ. ಜೊತೆಗೆ ಭಾರತೀಯ ಲಾಕ್ಷಣಿಕ ಕುಂತಕ ಒಂದೆಡೆ `ಹೇಮಧೂಲಿ ಪರಿವತಃ~ ಹೇಳಿದಂತೆ ಇಲ್ಲಿನ ಚಿನ್ನದ ಹಾಳೆಗಳು ಶೃಂಗಾರದ ವೈಭವವನ್ನು ಇನ್ನಷ್ಟು ಹೆಚ್ಚಿಸುತ್ತವೆ.

 

ಈ ಅಪ್ಪುಗೆಗೆ ಪೂರಕವಾಗಿ ಹಿನ್ನೆಲೆಯಲ್ಲಿ ಚಿನ್ನದ ಪುಡಿ ಹಾರುತ್ತಿರುವಂತೆ ಭಾಸವಾಗುತ್ತದೆ. ಬಣ್ಣಗಳಲ್ಲಿ ಮಾತ್ರವಲ್ಲ, ಆಕೃತಿಗಳಲ್ಲಿಯೂ ಉತ್ತಮ ಸಮತೋಲನವಿದೆ. ಸ್ಥಿರವಾದ ಇಳಿಜಾರಿನಂತಹ ಆಯತಾಕಾರದ ಮೇಲೆ ಲಿಂಗದಂತಹ ಆಕೃತಿಯನ್ನು ಕೂರಿಸಿ ಕಲಾವಿದ ಇಲ್ಲಿ ಸ್ಥಿರತೆಯನ್ನು ತಂದಿದ್ದಾನೆ.ಹಿನ್ನೆಲೆಯ ನೆಗೆಟಿವ್ ಸ್ಪೇಸ್ ಅನ್ನು ಪೂರ್ಣ ಸಮತಟ್ಟಾಗಿಸದೆ (ಫ್ಲಾಟ್), ಮುಖ್ಯ ಅಲಂಕರಣಗಳ ಆಕೃತಿಗಳು ತೀರಾ ಮೆಲುದನಿಯಲ್ಲಿ ಅನುರಣನಗೊಳ್ಳುತ್ತವೆ. ಹೀಗೆ ಈ ಇಂಗ್ಲಿಷಿನ `ಜೆ~ (ಒ) ಅಕ್ಷರದಂತಹ ಸರಳ ಸಂಯೋಜನೆಯ ಒಳಗೆ ಎಲ್ಲಿ ಕಣ್ಣು ಹಾಯಿಸಿದರೂ ವಸ್ತುವಿಗೆ ಸರಿ ಹೊಂದುವಂತೆ, ಕರ್ಕಶವೆನಿಸದೆ ಹಾಯೆನಿಸುವಂತೆ, ಅಸಹ್ಯವೆನಿಸದಂತೆ ಜಾಣ್ಮೆಯನ್ನು ಕಲಾವಿದ ಮೆರೆದಿದ್ದಾನೆ. ಇದರೊಂದಿಗೆ ಸುಕೋಮಲ ನಿರ್ವಹಣೆಯೂ ಬೆರೆತಂತಹ ಕಲಾತ್ಮಕತೆಯನ್ನು ಮೆರೆದಿರುವುದರಿಂದ ಇದು ಕ್ಲಿಮ್ಟನ ಅತ್ಯಂತ ಪ್ರಸಿದ್ಧ ಕೃತಿಯೆನಿಸಿದೆ.ಇವನ ಉಳಿದ ಕೃತಿ ಶ್ರೇಣಿಯಲ್ಲಿ ನಗ್ನತೆ, ಕಾಮಸಂಬಂಧೀ ಅಂಶಗಳು ಮುಚ್ಚುಮರೆಯಿಲ್ಲದೆ ಮೆರೆದರೆ, ಇಲ್ಲಿ ಯಾವುದೇ ಭಾವಾತಿರೇಕವಿಲ್ಲದೇ, ಅಶ್ಲೀಲತೆಯಿಲ್ಲದಿರುವಂತೆ ಚಿತ್ರಿಸಿರುವುದರಿಂದ ಇದು ಬಹುತೇಕರಿಗೆ ಪ್ರಿಯವೆನಿಸಿದೆ. `ಮುತ್ತಿಕ್ಕುವುದೆಂದರೆ ಉಪ್ಪು ನೀರು ಕುಡಿದಂತೆ, ನೀವು ಕುಡಿದಷ್ಟೂ ದಾಹ ಹೆಚ್ಚುತ್ತಲೇ ಹೋಗುತ್ತದೆ~ ಎಂದು ಚೀನಿ ಗಾದೆ ಹೇಳುತ್ತದೆ. ಈ ಚಿತ್ರವೂ ಕೂಡ ನೋಡಿದಷ್ಟೂ ಮತ್ತೆ ಮತ್ತೆ ನೋಡಬೇಕೆನಿಸುವ ದಾಹ ಉಂಟುಮಾಡುತ್ತದೆ. ಇದಕ್ಕೆ ಇನ್ನೊಂದು ಕಾರಣವೆಂದರೆ, ಹಾಗೆ ನೋಡುವಾಗ ಕೆಲವೊಮ್ಮೆ ಚಿತ್ರದಲ್ಲಿನ ವ್ಯಕ್ತಿಗಳು ನಾವೇ ಎಂದು ಭಾಸವಾಗುವುದು.

ಲೇಖಕರು ಪ್ರಸಿದ್ಧ ಕಲಾವಿದರು, ಕಲಾ ವಿಮರ್ಶಕರು 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.