ಬುಧವಾರ, ಏಪ್ರಿಲ್ 21, 2021
24 °C

ಚುಟುಕುಗಳ ಆತ್ಮಾವಲೋಕನ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ದಾವಣಗೆರೆಗೆ ಬಂದ್ರೆ ಮತ್ತೆ ಬಂದ್ಹಂಗಾಗ್ತದೆ

ದಾವಣಗೆರೆಗೆ ಬಂದ್ರೆ ಮತ್ತೇ ಬಂದ್ಹಂಗಾಗ್ತದೆ...

ದಾವಣಗೆರೆಗೆ ಬಂದ್ರೆ ನಮ್ಮತ್ತೆ ಬಂದ್ಹಂಗಾಗ್ತದೆ...

ಹೀಗೆ ‘ಮತ್ತೆ’ ಶಬ್ದ ಬಳಸಿ ಅರ್ಥ ವ್ಯತ್ಯಾಸದ ಪಂಚ್ ನೀಡಿದವರು ಸಾಹಿತಿ ಜರಗನಹಳ್ಳಿ ಶಿವಶಂಕರ್.- ಸಂದರ್ಭ ನಗರದಲ್ಲಿ ಭಾನುವಾರ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಆಯೋಜಿಸಿದ್ದ ಚುಟುಕು ಸಾಹಿತಿಗಳ ಸಮಾವೇಶ, ‘ಚುಟುಕು ಸ್ಪಂದನ’, ‘ಭಾವರಂಜಿತ’ ಸಂಕಲನಗಳ ಬಿಡುಗಡೆ ಹಾಗೂ ರಾಜ್ಯಮಟ್ಟದ ಚುಟುಕು ಕವಿಗೋಷ್ಠಿ ಸಮಾರಂಭದಲ್ಲಿ.ನಾನು ರೈಲಿನಲ್ಲಿ ಪ್ರಯಾಣಿಸಿ ಬಂದೆ

ಎರಡು ಬೋಗಿಗಳಾಚೆಯ ಚಾಲಕ ಕಾಣಿಸಲಿಲ್ಲ

ನಾನು ವಿಮಾನದಲಿ ಪ್ರಯಾಣಿಸಿ ಬಂದೆ

ಅಲ್ಲಿಯೂ ಚಾಲಕ ಕಾಣಿಸಲಿಲ್ಲ

ಇನ್ನು ಜಗದ ಚಾಲಕ ಕಾಣುವನೇ?

ಎನ್ನುವ ಮೂಲಕ ಲೌಕಿಕ, ಪಾರಮಾರ್ಥಿಕದ ನಡುವೆ ಕೊಂಡಿ ಬೆಸೆದರು.ಚುಟುಕುಗಳ ಆತ್ಮಾವಲೋಕನ ಅಗತ್ಯ. ಪ್ರತಿ ಸಾಹಿತಿಯೂ ಜಿ.ಎಸ್. ಶಿವರುದ್ರಪ್ಪ ಅವರ ಕಾವ್ಯಾರ್ಥ ಚಿಂತನವನ್ನು ಓದಬೇಕು. 12ನೇ ಶತಮಾನದಲ್ಲಿ ವಚನ ಸಾಹಿತ್ಯ, ಬಳಿಕ ಬಂದ ದಲಿತ, ಬಂಡಾಯ ನವ್ಯ, ನವೋದಯ... ಹೀಗೆ ಯಾವುದೇ ಪ್ರಕಾರದ ಸಾಹಿತ್ಯದ ಧ್ವನಿ ಸ್ಥಿರವಾಗಿ ನಿಲ್ಲುವುದಿಲ್ಲ. ಶತಮಾನ ಹಾಗೂ ದಶಮಾನದ ಕಾವ್ಯ ಸಮೀಕ್ಷೆಯ ಸಂದರ್ಭ ಆಯಾ ಕಾಲಘಟ್ಟದ ಕವಿ ಸಾಹಿತಿಗಳನ್ನು ಗುರುತಿಸಬೇಕು. ಚುಟುಕದಲ್ಲಿ ಹೊಸ ಧ್ವನಿಗಳ ಕಡೆಗೆ ಯೋಚನೆ ಮಾಡಬೇಕು ಎಂದರು.ಈ ದೇಹ ಹುಟ್ಟಿಗೆ ಮೊದಲು

ಕಣ್ಣಿಗೆ ಕಾಣದ ಒಂದು ಕಣ

ಸತ್ತ ಮೇಲೆ ಒಂದು ದಿನವೂ ಉಳಿಯದ ಹೆಣ

ಬದುಕಿರುವಾಗ ಬ್ರಹ್ಮಾಂಡವನ್ನೇ ಬಯಸುವ ಗುಣ...ಈ ಕವನದ ಬಗ್ಗೆ ಓದುಗರೊಬ್ಬರು ಈ ಚುಟುಕನ್ನು ದೇವೇಗೌಡ ಅವರಿಗೆ ಬರೆದದ್ದಲ್ಲವೇ ಎಂದಿದ್ದರು. ಹೀಗೆ ವಿಷಯ, ಶಬ್ದಗಳಲ್ಲಿ ಹೊಸತನ ಇರಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಉದ್ಘಾಟಿಸಿದ ಚುಟುಕು ಸಾಹಿತ್ಯ ಪರಿಷತ್‌ನ ಕೇಂದ್ರ ಸಮಿತಿಯ ಪ್ರಧಾನ ಸಂಚಾಲಕ ಎಂ.ಜಿ.ಆರ್. ಅರಸ್ ಮಾತನಾಡಿ, ಚುಟುಕು ಚಿಕ್ಕದರಲ್ಲಿ ಚೆಲುವು ತೋರಿಸುವಂಥದ್ದು. ಅದು ಮನಸ್ಸನ್ನು ಅರಳಿಸುವ ಸಾಹಿತ್ಯ. ಮನುಷ್ಯ ಸಂಬಂಧಗಳನ್ನು ವಿಸ್ತರಿಸಿ ಬೆಸೆಯುವಲ್ಲಿ ಚುಟುಕು ಸಾಹಿತ್ಯದ ಪಾತ್ರ ಮಹತ್ತರ ಎಂದು ನುಡಿದರು.‘ಚುಟುಕು ಸ್ಪಂದನ’ ಹಾಗೂ ವಿರಾಜಪೇಟೆ ಕೆದಮುಳ್ಳೂರಿನ ಕವಯತ್ರಿ ವಿ.ಎಸ್. ರಂಜಿತಾ ಅವರ ‘ಭಾವರಂಜಿತಾ’ ಕವನ ಸಂಕಲನವನ್ನು ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಮೇಯರ್ ಎಂ.ಜಿ. ಬಕ್ಕೇಶ್ ಬಿಡುಗಡೆ ಮಾಡಿದರು.ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಎಚ್. ರಾಜಶೇಖರ್ ಗುಂಡಗಟ್ಟಿ, ಶಿವಯೋಗಿ ಹಿರೇಮಠ, ಅಥಣಿ ವೀರಣ್ಣ, ಪಾಲಿಕೆ ಸದಸ್ಯ ಶಿವನಹಳ್ಳಿ ರಮೇಶ್ ಇತರರು ಉಪಸ್ಥಿತರಿದ್ದರು. ಸಂಧ್ಯಾ ಸುರೇಶ್, ವೀಣಾ ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.