ಶನಿವಾರ, ಜೂನ್ 19, 2021
27 °C

ಚುಟುಕು ಗುಟುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫುಟ್‌ಬಾಲ್‌: ಚಾಲೆಂಜರ್ಸ್‌ಗೆ ಜಯ

ಬೆಂಗಳೂರು:
ಯಂಗ್‌ ಚಾಲೆಂಜರ್ಸ್‌ ತಂಡದವರು ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ಆಶ್ರಯದಲ್ಲಿ ನಡೆಯುತ್ತಿರುವ ‘ಸಿ’ ಡಿವಿಷನ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಗೆಲುವು ಸಾಧಿಸಿದ್ದಾರೆ.ಬಸವನಗುಡಿಯ ಬಿಯುಎಫ್‌ಸಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ದಿನದ ಮೊದಲ ಪಂದ್ಯದಲ್ಲಿ ಚಾಲೆಂಜರ್ಸ್‌ 4–0 ಗೋಲುಗಳಿಂದ ಬಾಷ್‌ ತಂಡವನ್ನು ಮಣಿಸಿತು.ವಿಜಯೀ ತಂಡದ ಮಹೇಶ್‌ ದೇವಯ್ಯ (28ನೇ ನಿಮಿಷ), ಮಣಿ ಮಾರನ್‌ (48), ಮ್ಯಾಗಿ (53) ಹಾಗೂ ಪ್ರೇಮ್‌ (56) ತಲಾ ಒಂದು ಗೋಲು ಬಾರಿಸಿ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು. ಈ ತಂಡದವರು ಬಾಷ್‌ ತಂಡಕ್ಕೆ ಗೋಲಿನ ಖಾತೆ ತೆರೆಯಲು ಅವಕಾಶ ನೀಡಲಿಲ್ಲ.ರೆಡ್ಸ್‌ ಯುನೈಟೆಡ್‌ಗೆ ಜಯ: ದಿನದ ಇನ್ನೊಂದು ಪಂದ್ಯದಲ್ಲಿ ರೆಡ್ಸ್‌ 1(5)–1(4)ರಲ್ಲಿ ಜೆಜೆಎಫ್‌ಸಿ ತಂಡವನ್ನು ಸೋಲಿಸಿತು.ಹಾಕಿ: ರಾಜ್ಯ ತಂಡಕ್ಕೆ ಮುದ್ದಪ್ಪ ನಾಯಕ

ಬೆಂಗಳೂರು:
ಲಖನೌದಲ್ಲಿ ಮಾರ್ಚ್‌ 11 ರಿಂದ 23ರವರೆಗೆ ನಡೆಯುವ ನಾಲ್ಕನೇ ಹಾಕಿ ಇಂಡಿಯಾ ಸೀನಿಯರ್‌ ಪುರುಷರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ಎಂ.ಕೆ ಮುದ್ದಪ್ಪ ತಂಡವನ್ನು ಮುನ್ನಡೆಸಲಿ ದ್ದಾರೆ.ತಂಡ ಇಂತಿದೆ: ಜಗದೀಪ್‌ ದಯಾಳ್‌, ಕೆ.ಎಚ್‌. ಶಾನ್‌, ಬಿ.ಎಸ್‌. ಬಿದ್ದಪ್ಪ, ಸಿ.ಕೆ.ಸೋಮಣ್ಣ, ಕೆ.ಬಿ.ಪೊನ್ನಣ್ಣ, ಎಸ್‌.ಎಂ.ರಫೀಕ್‌, ವಿ.ಟಿ. ರತನ್‌ ಮುತ್ತಣ್ಣ, ಬಿ.ಪಿ. ಚೆಂಗಪ್ಪ, ಧಿರಾನ್‌ ಉತ್ತಪ್ಪ, ಎಂ.ಕೆ.ಮುದ್ದಪ್ಪ (ನಾಯಕ), ಪಿ.ಆರ್.ಮುತ್ತಣ್ಣ, ಪಿ.ಪ್ರಧಾನ್‌ ಸೋಮಣ್ಣ (ಉಪ ನಾಯಕ), ಬಿ.ಎಂ. ಮೋಹನ್ ಮುತ್ತಣ್ಣ, ಪಿ.ಎಲ್‌.ತಿಮ್ಮಣ್ಣ, ಬಿ.ವೈ.ಬಿಜು, ಜೆ.ಪಿ.ಕುಶ, ಶಂಕರ್‌ ಪಾಟೀಲ್‌, ಎಚ್‌.ಎಸ್‌. ಅಭಿಷೇಕ್‌, ಕೋಚ್‌: ಬಿ.ಕೆ. ಕಾರ್ಯಪ್ಪ, ಕೆ.ಕೆ.ಪೂಣಚ್ಚ.ಟೆನಿಸ್‌: ಸೋಮದೇವ್‌ಗೆ ನಿರಾಸೆ

ಇಂಡಿಯಾನ ವೇಲ್ಸ್‌ , ಅಮೆರಿಕ (ಪಿಟಿಐ):
ಭಾರತದ ಅಗ್ರ ಕ್ರಮಾಂಕದ ಆಟಗಾರ ಸೋಮದೇವ್‌ ದೇವವರ್ಮನ್‌ ಇಲ್ಲಿ ನಡೆಯುತ್ತಿರುವ ಇಂಡಿಯಾನ ವೇಲ್ಸ್‌ ಎಟಿಪಿ ಮಾಸ್ಟರ್ಸ್‌ ಟೂರ್ನಿಯ ಸಿಂಗಲ್ಸ್‌ನಲ್ಲಿ ನಿರಾಸೆ ಕಂಡಿದ್ದಾರೆ.ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವ ರ್‍ಯಾಂಕಿಂಗ್‌ನಲ್ಲಿ 78ನೇ ಸ್ಥಾನದಲ್ಲಿರುವ ಸೋಮ್‌ 2–6, 7–5, 3–6 ರಲ್ಲಿ ತಮಗಿಂತ ಕೆಳ ರ್‍ಯಾಂಕ್‌ (287) ಹೊಂದಿರುವ ಸ್ಪೇನ್‌ನ  ಡೇನಿಯೆಲ್‌ ಮುನೋಜ್‌ ಡೆ ಲಾ ನಾವ ಅವರ ಎದುರು ಆಘಾತ ಅನುಭವಿಸಿದರು.ಚಾಂಡಿಲಗೆ ಹೆಚ್ಚಿನ ಕಾಲಾವಕಾಶ

ನವದೆಹಲಿ (ಪಿಟಿಐ
): ಐಪಿಎಲ್‌ ಟ್ವೆಂಟಿ-20 ಕ್ರಿಕೆಟ್‌ ಟೂರ್ನಿಯಲ್ಲಿ ನಡೆದ ‘ಸ್ಪಾಟ್‌ ಫಿಕ್ಸಿಂಗ್‌’ ಪ್ರಕರಣಕ್ಕೆ ಸಂಬಂಧಿಸಿದಂತೆ ಲಿಖಿತ ಪ್ರತಿಕ್ರಿಯೆ ನೀಡಲು ಅಜಿತ್‌ ಚಾಂಡಿಲಗೆ ಬಿಸಿಸಿಐ ಹೆಚ್ಚಿನ ಕಾಲಾವಕಾಶ ನೀಡಿದೆ.ರಾಜಸ್ತಾನ ರಾಯಲ್ಸ್‌ ತಂಡದ ಮಾಜಿ ಆಟಗಾರ ಚಾಂಡಿಲ ಐಪಿಎಲ್‌ನ ಆರನೇ ಋತುವಿನ ಟೂರ್ನಿಯಲ್ಲಿ ‘ಸ್ಪಾಟ್‌ ಫಿಕ್ಸಿಂಗ್‌’ನಲ್ಲಿ ಭಾಗಿಯಾಗಿದ್ದರು. ರವಿ ಸವಾನಿ ನೇತೃತ್ವದ ಬಿಸಿಸಿಐ ಭ್ರಷ್ಟಾಚಾರ ತಡೆ ಘಟಕ ನಡೆಸಿದ್ದ ತನಿಖೆಯಲ್ಲಿ ಚಾಂಡಿಲ ತಪ್ಪಿತಸ್ಥ ಎಂಬುದು ಸಾಬೀತಾಗಿತ್ತು.ಚಾಂಡಿಲ ಬುಧವಾರ ಬಿಸಿಸಿಐ ಅಧ್ಯಕ್ಷ ಎನ್‌. ಶ್ರೀನಿವಾಸನ್‌, ರಾಜೀವ್‌ ಶುಕ್ಲಾ ಮತ್ತು ಶಿವಲಾಲ್‌ ಯಾದವ್‌ ಅವರನ್ನೊಳಗೊಂಡ ಶಿಸ್ತು ಸಮಿತಿಯ ಮುಂದೆ ಹಾಜರಾದರು. ಈ ವೇಳೆ ಅಂತಿಮ ಪ್ರತಿಕ್ರಿಯೆ ನೀಡಲು ಹೆಚ್ಚಿನ ಸಮಯಾವಕಾಶ ನೀಡಬೇಕೆಂದು ಕೋರಿದರು.‘ಚಾಂಡಿಲ ಅವರ ಕೋರಿಕೆಯನ್ನು ಶಿಸ್ತು ಸಮಿತಿ ಒಪ್ಪಿದೆ. ಲಿಖಿತ ಪ್ರತಿಕ್ರಿಯೆ ನೀಡಲು ಮಾರ್ಚ್‌ 12ರ ವರೆಗೆ ಅವಕಾಶ ನೀಡಿದೆ’ ಎಂದು ಮಂಡಳಿಯ ಕಾರ್ಯದರ್ಶಿ ಸಂಜಯ್‌ ಪಟೇಲ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಚಾಂಡಿಲ ಅಲ್ಲದೆ ಎಸ್‌. ಶ್ರೀಶಾಂತ್‌, ಅಂಕಿತ್‌ ಚವಾಣ್‌, ಅಮಿತ್‌ ಸಿಂಗ್‌ ಮತ್ತು ಸಿದ್ಧಾರ್ಥ್‌ ತ್ರಿವೇದಿ ಅವರೂ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ತಪ್ಪಿತಸ್ಥರು ಎಂಬುದು ಸಾಬೀತಾ ಗಿತ್ತು. ಬಿಸಿಸಿಐ ಶಿಸ್ತು ಸಮಿತಿ ಶ್ರೀಶಾಂತ್‌ ಮತ್ತು ಚವಾಣ್‌ ಮೇಲೆ ಆಜೀವ ನಿಷೇಧ ಹೇರಿದೆ.‘ಮಂಡಳಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ನನಗೆ ತಿಳಿದಿದೆ. ನನ್ನ ಮೇಲೆ ಆಜೀವ ನಿಷೇಧ ಶಿಕ್ಷೆ ವಿಧಿಸುವ ಸಾಧ್ಯತೆಯಿದೆ. ಆದರೆ ನಾನು ಯಾವುದೇ ತಪ್ಪು ಮಾಡಿಲ್ಲ’ ಎಂದು ಚಾಂಡಿಲ ಪ್ರತಿಕ್ರಿಯಿಸಿದ್ದಾರೆ.ಕರ್ನಾಟಕಕ್ಕೆ 6ನೇ ಸ್ಥಾನ

ನವದೆಹಲಿ (ಪಿಟಿಐ
): ಕರ್ನಾಟಕ ಮಹಿಳಾ ಹಾಗೂ ಪುರು ಷರ ತಂಡದವರು ಇಲ್ಲಿ ಕೊನೆಗೊಂಡ 64ನೇ   ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ  ಕ್ರಮವಾಗಿ 6 ಮತ್ತು 7ನೇ ಸ್ಥಾನ ಪಡೆದುಕೊಂಡಿದ್ದು, ಛತ್ತೀಸಗಡ ಹಾಗೂ ತಮಿಳುನಾಡು ತಂಡಗಳು ಚಾಂಪಿಯನ್‌ ಎನಿಸಿವೆ.ಬುಧವಾರ ಐದನೇ ಸ್ಥಾನವನ್ನು ನಿರ್ಧರಿಸಲು ನಡೆದ ಪಂದ್ಯದಲ್ಲಿ ಕರ್ನಾಟಕ ಮಹಿಳಾ ತಂಡ  59–74ರಲ್ಲಿ ಪಂಜಾಬ್‌ ಎದುರು ಸೋತರು.  ಪುರುಷರ ತಂಡ  7ನೇ  ನಡೆದ ಹಣಾಹಣಿಯಲ್ಲಿ ಕರ್ನಾಟಕ 90–74ರಲ್ಲಿ ಹರಿಯಾಣ ತಂಡವನ್ನು ಮಣಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.