ಬುಧವಾರ, ನವೆಂಬರ್ 20, 2019
20 °C
ಧಾರ್ಮಿಕ ಆಚರಣೆಗೆ ನಿರ್ಬಂಧ

ಚುನಾವಣಾಧಿಕಾರಿಗಳ ಕ್ರಮಕ್ಕೆ ಹೈಕೋರ್ಟ್ ಕಿಡಿ

Published:
Updated:

ಧಾರವಾಡ: ಚುನಾವಣಾ ನೀತಿ ಸಂಹಿತೆ ಹೆಸರಿನಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಆಚರಣೆಗೆ ನಿರ್ಬಂಧ ಹೇರುತ್ತಿರುವ ಚುನಾವಣಾಧಿಕಾರಿಗಳ ಕ್ರಮಕ್ಕೆ ಇಲ್ಲಿನ ಹೈಕೋರ್ಟ್ ಸಂಚಾರಿ ಪೀಠ ಕಿಡಿ ಕಾರಿದೆ.ರಾಮನವಮಿ ಮತ್ತು ಹನುಮ ಜಯಂತಿ ಅಂಗವಾಗಿ ಕೂಡ್ಲಿ ಆರ್ಯ ಅಕ್ಷೋಭ್ಯತೀರ್ಥ ಸಂಸ್ಥಾನ ಮಠ ಇಲ್ಲಿನ ಸೀತಾರಾಮ ಮಂದಿರದಲ್ಲಿ ಇದೇ 18ರಿಂದ 25ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜೊತೆಗೆ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆಯನ್ನೂ ಏರ್ಪಡಿಸಿದೆ. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗೆ ಅರ್ಜಿ ಸಲ್ಲಿಸಿ ಅನುಮತಿ ಕೇಳಲಾಗಿತ್ತು. ಅನುಮತಿ ನೀಡಿದ್ದ  ಚುನಾವಣಾಧಿಕಾರಿಗಳು ಅನ್ನ ಸಂತರ್ಪಣೆ ಮತ್ತು ತೀರ್ಥ ಪ್ರಸಾದ ವಿತರಿಸದಂತೆ ನಿರ್ಬಂಧ ಹೇರಿದ್ದರು.ಚುನಾವಣಾಧಿಕಾರಿಗಳ ಈ ಕ್ರಮವನ್ನು ಪ್ರಶ್ನಿಸಿ ಮಠದ ಪರವಾಗಿ ಎಚ್.ಆರ್.ಗುಡಿ ಎನ್ನುವವರು ರಿಟ್ ಅರ್ಜಿ ಸಲ್ಲಿಸಿದ್ದರು.ಬುಧವಾರ ಅರ್ಜಿ ವಿಚಾರಣೆಗೆ ಅಂಗೀಕರಿಸಿದ ನ್ಯಾಯಮೂರ್ತಿ ಕೆ.ಎಲ್.ನಾರಾಯಣಸ್ವಾಮಿ ಅವರ ಏಕ ಸದಸ್ಯಪೀಠವು ಚುನಾವಣಾಧಿಕಾರಿಗಳ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ರಾಜಕೀಯ ಪಕ್ಷಗಳು, ವ್ಯಕ್ತಿಗಳು ಧಾರ್ಮಿಕ ಕಾರ್ಯಕ್ರಮದ ನೆಪದಲ್ಲಿ ಮತದಾರರ ಮೇಲೆ ಪ್ರಭಾವ ಬೀರಬಹುದು ಎನ್ನುವ ಸಂಶಯದ ಹಿನ್ನೆಲೆಯಲ್ಲಿ ಈ ನಿಯಮ ಜಾರಿಗೊಳಿಸಲಾಗಿದೆ. ಈ ಕುರಿತು ಚುನಾವಣಾಧಿಕಾರಿಗಳಿಂದ ಮಾಹಿತಿ ಪಡೆಯುವುದಾಗಿ ಸರ್ಕಾರಿ ವಕೀಲರು ನ್ಯಾಯಪೀಠಕ್ಕೆ ಮನವಿ ಮಾಡಿದರು. ಹೀಗಾಗಿ ಪ್ರಕರಣದ ವಿಚಾರಣೆಯನ್ನು ನ್ಯಾಯಪೀಠ ಗುರುವಾರಕ್ಕೆ ಮುಂದೂಡಿತು.

ಪ್ರತಿಕ್ರಿಯಿಸಿ (+)