ಚುನಾವಣಾ ಆಯುಕ್ತರಿಂದ ಆಸ್ತಿ ಘೋಷಣೆ

ಗುರುವಾರ , ಜೂಲೈ 18, 2019
25 °C

ಚುನಾವಣಾ ಆಯುಕ್ತರಿಂದ ಆಸ್ತಿ ಘೋಷಣೆ

Published:
Updated:

ನವದೆಹಲಿ (ಪಿಟಿಐ): `ಇತರರಿಗೆ ಹೇಳುವ ಮೊದಲು ನೀನು ಪಾಲಿಸು ಎಂಬ ನಾಣ್ಣುಡಿಗೆ ಬದ್ಧರಾಗಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೇಷಿ ಹಾಗೂ ಇತರ ಇಬ್ಬರು ಚುನಾವಣಾ ಆಯುಕ್ತರಾದ ವಿ.ಎಸ್. ಸಂಪತ್ ಮತ್ತು ಎಚ್.ಎಸ್. ಬ್ರಹ್ಮ ಅವರು ತಮ್ಮ ಸ್ಥಿರಾಸ್ತಿಗಳನ್ನು ಸಾರ್ವಜನಿಕವಾಗಿ ಘೋಷಿಸಿಕೊಂಡಿಸಿದ್ದಾರೆ.ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಹೇಳಿಕೆ ಪ್ರಕಾರ, ಖುರೇಷಿ ಅವರು ಮೂರು ನಿವೇಶನಗಳನ್ನು ಹೊಂದಿದ್ದು, ಇದರಲ್ಲಿ ಗುಡಗಾಂವ್, ಗ್ರೇಟರ್ ನೊಯಿಡಾ ಹಾಗೂ ಆಗ್ರಾದಲ್ಲಿ ತಲಾ ಒಂದೊಂದು ನಿವೇಶನಗಳಿವೆ. ಹರಿಯಾಣ ನಗರಾಭಿವೃದ್ಧಿ ಆಡಳಿತವು 1980ರಲ್ಲಿ ಖುರೇಷಿ ಅವರಿಗೆ ಗುಡಗಾಂವ್‌ನ ಸೆಕ್ಟರ್ 17ರಲ್ಲಿ ರೂ 63,089 ಬೆಲೆಯ 500 ಚದುರ ಗಜಗಳ ವಿಸ್ತೀರ್ಣದ ನಿವೇಶನ ಮಂಜೂರು ಮಾಡಿದೆ.

ಈಗ ಇದರ ಮೌಲ್ಯ ರೂ 1.75 ಕೋಟಿಗಳಾಗಿವೆ. ಇದರೊಂದಿಗೆ ಖುರೇಷಿಯವರು 2006ರಲ್ಲಿ ಗ್ರೇಟರ್ ನೊಯಿಡಾದಲ್ಲಿ ತಮ್ಮ ನಿವೃತ್ತಿಯ ಹಣ, ಭವಿಷ್ಯ ನಿಧಿ ಹಾಗೂ ಬ್ಯಾಂಕ್ ಸಾಲಗಳ ಮೂಲಕ ರೂ 36 ಲಕ್ಷ ಬೆಲೆಯ 350 ಚದುರ ಗಜಗಳ ವಿಸ್ತೀರ್ಣದ ನಿವೇಶನವನ್ನು ಖರೀದಿಸಿದ್ದಾರೆ. ಇದಲ್ಲದೆ, ಆಗ್ರಾದಲ್ಲಿ 525 ಚದುರ ಗಜಗಳ ವಿಸ್ತೀರ್ಣದ ನಿವೇಶನಕ್ಕೆ ಹೆಸರು ನೋಂದಾಯಿಸಿರುವ ಖುರೇಷಿ, ತಮ್ಮ ಉಳಿತಾಯ ಹಣದಲ್ಲಿ ರೂ 8 ಲಕ್ಷಗಳನ್ನು ಈಗಾಗಲೇ ಮುಂಗಡವಾಗಿ ಪಾವತಿಸಿದ್ದಾರೆ.ಸಂಪತ್ ಅವರು 1986ರಲ್ಲಿ ಹೈದರಾಬಾದ್‌ನ ಪ್ರತಿಷ್ಠಿತ ಬಂಜಾರ ಹಿಲ್ಸ್‌ನಲ್ಲಿ ರೂ 47,009 ಬೆಲೆಗೆ 436.6 ಚದುರ ಮೀಟರ್‌ಗಳ ವಸತಿ ಭೂಮಿಯನ್ನು ಖರೀದಿಸಿದ್ದಾರೆ. ಇದರ ಈಗಿನ ಮೌಲ್ಯ ರೂ 2 ಕೋಟಿಗಳಾಗಿದ್ದು, ಇದರಿಂದ ವಾರ್ಷಿಕ ರೂ 7.50 ಲಕ್ಷಗಳನ್ನು ಭೋಗ್ಯದ ಬಾಡಿಗೆಯಾಗಿ ಪಡೆಯುತ್ತಿದ್ದಾರೆ.

ಇದಲ್ಲದೆ, ಅವರು ಆಂಧ್ರ ಪ್ರದೇಶದ ಗುತ್ತಲ ಬೇಗಂಪೇಟೆಯಲ್ಲಿ ರೂ 68,500 ಬೆಲೆಗೆ 418.05 ಚದುರ ಮೀಟರ್‌ಗಳ ವಸತಿ ನಿವೇಶನ ಹೊಂದಿ, 1991ರಲ್ಲಿ ವಾಸದ ಮನೆ ನಿರ್ಮಿಸಿದ್ದಾರೆ.ಈಗ ಇದರ ಮೌಲ್ಯ ರೂ 95 ಲಕ್ಷಗಳೆಂದು ಅಂದಾಜಿಸಿದ್ದು, ವಾರ್ಷಿಕ ರೂ 3.60 ಲಕ್ಷ ಆದಾಯ ಸಹ ಗಳಿಸುತ್ತಿದ್ದಾರೆ. ಇದರೊಂದಿಗೆ ಅವರು ಹೈದರಾಬಾದ್‌ನ ಯೆಲ್ಲರೆಡ್ಡಿ ಗುಡಾದಲ್ಲಿ ರೂ 18 ಲಕ್ಷಗಳಿಗೆ 1957 ಚದುರ ಅಡಿಗಳ ಅಪಾರ್ಟ್‌ಮೆಂಟ್‌ನ್ನೂ ಪಡೆದಿದ್ದಾರೆ. ಈಗ ಇದರ ಮೌಲ್ಯ ರೂ 40 ಲಕ್ಷಗಳೆಂದು ಅಂದಾಜಿಸಲಾಗಿದೆ.ಬ್ರಹ್ಮ ಅವರು ತಮಗೆ ಪಿತ್ರಾರ್ಜಿತವಾಗಿ ಬಂದ ರೂ 5 ಲಕ್ಷ ಹಣದಿಂದ ಅಸ್ಸಾಂನ ಗೋಸ್ಸಾಯಿಗಾಂವ್‌ನಲ್ಲಿ ಮನೆಯೊಂದನ್ನು ನಿರ್ಮಿಸಿದ್ದು, ಕೋಕ್ರಾಜ್‌ಹಾರದಲ್ಲಿ ರೂ 8 ಲಕ್ಷ ಮೌಲ್ಯದ 40 ಬಿಘಾಗಳಷ್ಟು (ಎಕರೆಯಷ್ಟು) ಕೃಷಿ ಭೂಮಿ ಹೊಂದಿದ್ದಾರೆ.ಇದಲ್ಲದೆ, ಅವರು 1989ರಲ್ಲಿ ಹೈದರಾಬಾದ್‌ನ ಜೂಬಿಲೀ ಹಿಲ್ಸ್‌ನಲ್ಲಿ ಮನೆ ನಿರ್ಮಿಸಲು ಸಹಕಾರ ಸಂಘವೊಂದರಿಂದ ರೂ 8 ಲಕ್ಷಗಳಿಗೆ ಭೂಮಿ ಖರೀದಿಸಿದ್ದು, ಈಗ ಇದರ ಮೌಲ್ಯ ರೂ 3.80 ಕೋಟಿಗಳೆಂದು ಅಂದಾಜಿಸಲಾಗಿದೆ. ಪ್ರಸ್ತುತ ಈ ಆಸ್ತಿಯಿಂದ ಮಾಸಿಕ ಒಂದು ಲಕ್ಷ ರೂಪಾಯಿಗಳ ಆದಾಯ ಬರುತ್ತಿರುವುದಾಗಿಯೂ ತಿಳಿಸಲಾಗಿದೆ.ಆದರೆ ಈ ಮೂವರು ಚುನಾವಣಾ ಆಯುಕ್ತರು ತಮ್ಮ ಕುಟುಂಬದ ಆಸ್ತಿ ವಿವರ ಬಹಿರಂಗಪಡಿಸಿದ ಬಗ್ಗೆ ಹೇಳಿಕೆಯಲ್ಲಿ ಯಾವುದೇ ಪ್ರಸ್ತಾಪ ಮಾಡಿಲ್ಲ.ಆಯೋಗವು ಇತ್ತೀಚೆಗಷ್ಟೇ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಮುನ್ನ ಅಪರಾಧ ಹಿನ್ನೆಲೆ ಮತ್ತು ಆಸ್ತಿ ಘೋಷಣಾ ಅರ್ಜಿಗಳಲ್ಲಿ ಹೆಚ್ಚುವರಿ ಮಾಹಿತಿ ಭರ್ತಿ ಮಾಡಬೇಕಾದ ನಿಯಮಾವಳಿ ಜಾರಿಗೊಳಿಸಿರುವುದನ್ನು ಸ್ಮರಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry