ಚುನಾವಣಾ ಆಯೋಗದ ಅಧಿಕಾರಕ್ಕೆ ಕತ್ತರಿ ಹಾಕುವ ಯತ್ನ?

7

ಚುನಾವಣಾ ಆಯೋಗದ ಅಧಿಕಾರಕ್ಕೆ ಕತ್ತರಿ ಹಾಕುವ ಯತ್ನ?

Published:
Updated:

ನವದೆಹಲಿ (ಪಿಟಿಐ): ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆ ಜಾರಿಗೊಳಿಸುವ ಅಧಿಕಾರವನ್ನು ಮೊಟಕುಗೊಳಿಸಲು ಸರ್ಕಾರ ಮುಂದಾಗಿದೆ ಎಂಬ ವರದಿಗಳು ಭುಗಿಲೆದ್ದು ಮಂಗಳವಾರ ತೀವ್ರ ವಿವಾದ ಹುಟ್ಟುಹಾಕಿವೆ. ಕೇಂದ್ರ ಚುನಾವಣಾ ಆಯೋಗ ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ `ಇದು ಆಯೋಗದ ಅಧಿಕಾರಕ್ಕೆ ಕತ್ತರಿ ಹಾಕುವ ಯತ್ನ~ ಎಂದಿದೆ.

ಸರ್ಕಾರ ತಕ್ಷಣವೇ ಪ್ರತಿಕ್ರಿಯಿಸಿ, ಒಂದೆಡೆ ಇದನ್ನು ಸಂಪೂರ್ಣ ಕುಚೋದ್ಯದ ವದಂತಿ ಎಂದು ತಳ್ಳಿಹಾಕಿದ್ದರೂ, ಮತ್ತೊಂದೆಡೆ ರಾಜಕೀಯ ಪಕ್ಷಗಳು ಇಚ್ಛಿಸಿದ್ದೇ ಆದರೆ ಈ ವಿಷಯವನ್ನು ಚುನಾವಣಾ ಸುಧಾರಣೆಯ ಭಾಗವಾಗಿ ಚರ್ಚೆಗೆ ಪರಿಗಣಿಸಬಹುದು ಎಂದು ಮಗುಮ್ಮಾಗಿ ಹೇಳಿದೆ.

ಬುಧವಾರ ನಡೆಯಲಿರುವ ಸಚಿವರ ಸಮಿತಿ ಸಭೆಯು ಚುನಾವಣಾ ನೀತಿ ಸಂಹಿತೆಗೆ ಶಾಸನಬದ್ಧ ಸ್ವರೂಪ ನೀಡುವ ಕುರಿತು ಪರಿಶೀಲಿಸಲಿದೆ; ಒಂದೊಮ್ಮೆ ಹೀಗಾದರೆ ನೀತಿ ಸಂಹಿತೆ ಜಾರಿಗೊಳಿಸುವ ಅಧಿಕಾರ ಚುನಾವಣಾ ಆಯೋಗದಿಂದ ನ್ಯಾಯಾಲಯಕ್ಕೆ ವರ್ಗಾವಣೆಯಾಗಲಿದೆ; ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ವಿಚಾರಣೆ ಕೂಡ ಆಯೋಗದ ವ್ಯಾಪ್ತಿಯಿಂದ ನ್ಯಾಯಾಲಯದ ವ್ಯಾಪ್ತಿಗೆ ಬರಲಿದೆ  ಎಂಬ ವರದಿಗಳು ಹರಿದುಬಂದು ವಿವಾದ ಉಂಟಾಗಿದೆ.

ಭ್ರಷ್ಟಾಚಾರ ನಿಗ್ರಹ ಸಂಬಂಧ ಜಾರಿಗೆ ತರಬೇಕಾದ ನೀತಿ ಕುರಿತು ಅವಲೋಕಿಸಲು ರಚಿತಲಾಗಿರುವ ಸಚಿವರ ಸಮಿತಿ ಕೂಡ, ಮಾದರಿ ನೀತಿ ಸಂಹಿತೆಗೆ ಶಾಸನಬದ್ಧ ಸ್ವರೂಪ ನೀಡುವ ಮೂಲಕ ಆಯೋಗದ ಅಧಿಕಾರ ಮೊಟಕುಗೊಳಿಸುವ ಪ್ರಸ್ತಾವ ತನ್ನ ಮುಂದಿದೆ ಎಂಬ ವರದಿಗಳನ್ನು ಬಲವಾಗಿ ಅಲ್ಲಗಳೆದಿದೆ. ಪ್ರಣವ್ ಮುಖರ್ಜಿ, ಕಪಿಲ್ ಸಿಬಲ್, ಸಲ್ಮಾನ್ ಖುರ್ಷಿದ್, ಸಿಬ್ಬಂದಿ ಇಲಾಖೆ ಪ್ರಮುಖರು ಈ ಸಮಿತಿಯಲ್ಲಿದ್ದಾರೆ.

ಈ ಸಂಬಂಧ ಸಿಬ್ಬಂದಿ ಇಲಾಖೆ ಕೂಡ ಅಧಿಕೃತ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, `ಸಂಹಿತೆ ಜಾರಿಗೊಳಿಸುವ ಆಯೋಗದ ಅಧಿಕಾರವನ್ನು ಮೊಟಕುಗೊಳಿಸುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದಾಗಲೀ ಅಥವಾ ಸಚಿವರ ಸಮಿತಿ ಮುಂದಾಗಲೀ ಇಲ್ಲ~ ಎಂದಿದೆ. ಆದರೆ ಸಿಬ್ಬಂದಿ ಇಲಾಖೆಯು ಸಚಿವರ ಸಮಿತಿಗೆ ಕಳುಹಿಸಿರುವ ಟಿಪ್ಪಣಿಯಲ್ಲಿ ಈ ಕುರಿತು ಪ್ರಸ್ತಾಪಿಸಿದೆ. ಚುನಾವಣಾ ಆಯೋಗದ ನಿರ್ದೇಶನಗಳಿಗೆ ಶಾಸನಬದ್ಧ ಸ್ವರೂಪ ನೀಡುವ ಕುರಿತು ಶಾಸಕಾಂಗ ಪರಿಶೀಲಿಸಬಹುದು ಎಂದು ಅದು ಸಲಹೆ ನೀಡಿದೆ.

ಸಚಿವರ ಸಮಿತಿ ಅಧ್ಯಕ್ಷರಾದ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು, ಯೋಜನೆಗಳು ನೆನೆಗುದಿಗೆ ಬೀಳಲು ಚುನಾವಣಾ ನೀತಿ ಸಂಹಿತೆ ಬಹುಮುಖ್ಯ ಕಾರಣವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಂತರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರ ಸಲಹೆ ಮೇರೆಗೆ, ಈ ವಿಷಯವನ್ನು ಸಚಿವರ ಸಮಿತಿ ಸಭೆಯ ಕಾರ್ಯಸೂಚಿಯಲ್ಲಿ ಸೇರಿಸಲು ಒಪ್ಪಿಗೆಯಾಗಿದೆ ಎಂದು ಅದು ಟಿಪ್ಪಣಿಯಲ್ಲಿ ತಿಳಿಸಿದೆ.

ಆದರೆ ಪ್ರಣವ್ ಮುಖರ್ಜಿ ಇದನ್ನು ಅಲ್ಲಗಳೆದಿದ್ದಾರೆ. `ಅಂತಹ ಯಾವ ಪ್ರಸ್ತಾವವೂ ಸಚಿವರ ಸಮಿತಿ ಮುಂದೆ ಇಲ್ಲ. ಈ ಯೋಚನೆ ಎಲ್ಲಿಂದ ಉದ್ಭವವಾಯಿತೋ ಗೊತ್ತಿಲ್ಲ~ ಎಂದಿದ್ದಾರೆ.

ಸಚಿವ ಖುರ್ಷಿದ್ ಕೂಡ ಅಂತಹ ಯಾವುದೇ ಪ್ರಸ್ತಾವವನ್ನು ಅಲ್ಲಗಳೆದಿದ್ದಾರೆ. `ನನಗೆ ಗೊತ್ತಿರುವ ಪ್ರಕಾರ, ಈಗಿನ ಚುನಾವಣಾ ಪ್ರಕ್ರಿಯೆ ಮುಗಿದ ನಂತರ ಚುನಾವಣಾ ಸುಧಾರಣೆ ಕುರಿತು ಸರ್ವ ಪಕ್ಷಗಳ ಸಭೆ ನಡೆಯಲಿದೆ. ಚುನಾವಣಾ ಆಯೋಗ ಸೂಚಿಸಿರುವ ಹಲವು ವಿಷಯಗಳೇ ಅದರಲ್ಲಿ ಪ್ರಮುಖವಾಗಿ ಚರ್ಚೆಗೆ ಬರಲಿವೆ~ ಎಂದಿದ್ದಾರೆ.

`ಚುನಾವಣಾ ನೀತಿ ಸಂಹಿತೆಗೆ ಶಾಸನಬದ್ಧ ಸ್ವರೂಪ ನೀಡುವ ವಿಷಯ ಸರ್ವ ಪಕ್ಷಗಳ ಸಭೆಯ ಕಾರ್ಯಸೂಚಿಯಲ್ಲಿ ಸೇರಿಲ್ಲ. ಆದರೆ ಯಾವುದಾದರೂ ರಾಜಕೀಯ ಪಕ್ಷ ಬಯಸಿದ್ದೇ ಆದರೆ ಈ ಕುರಿತ ಚರ್ಚೆ ಕೈಗೆತ್ತಿಕೊಳ್ಳಲಾಗುವುದು~  ಎಂದೂ ಹೇಳಿದ್ದಾರೆ.

ಸಚಿವರ ಸಮಿತಿಯಲ್ಲಿರುವ ಮತ್ತೊಬ್ಬರಾದ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಲಖನೌದಲ್ಲಿ ಸುದ್ದಿಗಾರರ ಜತೆ ಮಾತನಾಡಿ, `ಚುನಾವಣಾ ನೀತಿ ಸಂಹಿತೆಗೆ ಶಾಸನಬದ್ಧ ಸ್ವರೂಪ ನೀಡುವ ವಿಷಯ ಕಾರ್ಯಸೂಚಿಯಲ್ಲಿ ಇಲ್ಲ~ ಎಂದಿದ್ದಾರೆ.

ನೀತಿ ಸಂಹಿತೆ ಉಲ್ಲಂಘಿಸುವವರ ಪಕ್ಷವಾಗುತ್ತಿರುವ ಕಾಂಗ್ರೆಸ್ ಆಯೋಗದ ಅಧಿಕಾರವನ್ನು ಮೊಟಕುಗೊಳಿಸಲು ಮುಂದಾಗಿದೆ ಎಂದು ಬಿಜೆಪಿ ಆಪಾದಿಸಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಲ್ಲಿ ಸಿಲುಕಿರುವ ಕಾಂಗ್ರೆಸ್, ತನ್ನ ನಾಯಕರನ್ನು ರಕ್ಷಿಸುವ ಜತೆಗೆ ಜನರ ಗಮನ ಬೇರೆಡೆ ಸೆಳೆಯಲು ಹೀಗೆ ಮಾಡುತ್ತಿದೆ ಎಂದು ಸಿಪಿಎಂ ನಾಯಕಿ ಬೃಂದಾ ಕಾರಟ್ ಟೀಕಿಸಿದ್ದಾರೆ.

ರಾಜಕೀಯ ವ್ಯಕ್ತಿಯಿಂದ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆಯೋ,  ಇಲ್ಲವೋ ಎಂಬ ವಿಚಾರಣೆ ನ್ಯಾಯಾಲಯಕ್ಕೆ ಹೋದರೆ ಅದು ಇತ್ಯರ್ಥವಾಗಲು ವರ್ಷಗಟ್ಟಲೆ ಹಿಡಿಯುತ್ತದೆ. ಅದೇ ವೇಳೆ, ತಪ್ಪೆಸಗಿದವರು ಅಧಿಕಾರದ ಫಲವನ್ನು ಉಣ್ಣುತ್ತಿರುತ್ತಾರೆ ಎಂದು ಚುನಾವಣಾ ಆಯುಕ್ತ ಎಸ್.ವೈ.ಖುರೇಷಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry