ಸೋಮವಾರ, ಡಿಸೆಂಬರ್ 16, 2019
18 °C
ವಾಟಾಳ್, ಕಾಂಗ್ರೆಸ್, ಕೆಜೆಪಿ ಅಭ್ಯರ್ಥಿಯಿಂದ ನೀತಿಸಂಹಿತೆ ಉಲ್ಲಂಘನೆ

ಚುನಾವಣಾ ಆಯೋಗದ ಆದೇಶ ಧೂಳಿಪಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಚಾಮರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ಸೋಮವಾರ ಕಾಂಗ್ರೆಸ್, ಕರ್ನಾಟಕ ಜನತಾ ಪಕ್ಷ ಹಾಗೂ ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ಉಮೇದುವಾರಿಕೆ ಸಲ್ಲಿಸಿದ ಅಭ್ಯರ್ಥಿಗಳು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಪ್ರಕರಣ ನಡೆದಿದೆ.ಚುನಾವಣಾ ನಿಯಮಾವಳಿ ಪ್ರಕಾರ ನಾಮಪತ್ರ ಸಲ್ಲಿಸುವ ವೇಳೆ ಚುನಾವಣಾಧಿಕಾರಿ ಕಚೇರಿ ಪ್ರವೇಶಿಸಲು ಅಭ್ಯರ್ಥಿ ಸೇರಿದಂತೆ 5 ಮಂದಿಗೆ ಮಾತ್ರ ಅವಕಾಶವಿದೆ. ಆದರೆ, 5ಕ್ಕಿಂತಲೂ ಹೆಚ್ಚು ಮಂದಿ ಅಭ್ಯರ್ಥಿಗಳೊಟ್ಟಿಗೆ ಚುನಾವಣಾಧಿಕಾರಿ ಕಚೇರಿ ಪ್ರವೇಶಿಸಿದರು.ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ವೇಳೆ ಒಬ್ಬ ಸೂಚಕರು ಚುನಾವಣಾಧಿಕಾರಿ ಮುಂದೆ ಹಾಜರಿರಬೇಕು. ಪಕ್ಷೇತರ ಅಭ್ಯರ್ಥಿಗೆ 10 ಸೂಚಕರು ಇರುತ್ತಾರೆ. ಆದರೆ, ಚುನಾವಣಾಧಿಕಾರಿ ಕಚೇರಿಯೊಳಗೆ ನಾಮಪತ್ರ ಸಲ್ಲಿಸುವಾಗ ಮಾತ್ರ 5 ಮಂದಿಯೇ ಇರಬೇಕು. ಒಂದು ವೇಳೆ ಚುನಾವಣಾಧಿಕಾರಿ 10 ಮಂದಿ ಸೂಚಕರನ್ನು ಪರಿಶೀಲಿಸಲು ಇಚ್ಛಿಸಿದರೆ ಮಾತ್ರವೇ ಎಲ್ಲ ಸೂಚಕರು ನಾಮಪತ್ರ ಸಲ್ಲಿಸುವಾಗ ಕಚೇರಿ ಪ್ರವೇಶಿಸಲು ಅವಕಾಶವಿದೆ.ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಬರುತ್ತಿದ್ದ ವೇಳೆ ಅವರ ಹಿಂದೆಯೇ ಬೆಂಬಲಿಗರು ದಾಂಗುಡಿ ಇಡುತ್ತಿದ್ದರು. ಪೊಲೀಸರು ಎಲ್ಲ ದ್ವಾರದಲ್ಲೂ ಬಂದೊಬಸ್ತ್ ಕೈಗೊಂಡರೂ ನುಸುಳುವ ಮಂದಿಗೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ. ಕೇವಲ ಐವರು ಮಾತ್ರ ಪ್ರವೇಶ ನೀಡಬೇಕು ಎಂದು ಚುನಾವಣಾಧಿಕಾರಿಯಾದ ಸಂಬಯ್ಯ ಹಾಗೂ ಸಹಾಯಕ ಚುನಾವಣಾಧಿಕಾರಿ ಚಂದ್ರಕಾಂತ್ ಭಜಂತ್ರಿ ಮನವಿ ಮಾಡಿದರೂ, ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಕಿವಿಗೊಡಲಿಲ್ಲ.ಕಾಂಗ್ರೆಸ್ ಅಭ್ಯರ್ಥಿ ಸಿ. ಪುಟ್ಟರಂಗಶೆಟ್ಟಿ ನಾಮಪತ್ರ ಸಲ್ಲಿಸುವಾಗ ಸಂಸದ ಆರ್. ಧ್ರುವನಾರಾಯಣ ಸೇರಿದಂತೆ 10 ಮಂದಿ ಪಕ್ಷದ ಮುಖಂಡರು ಚುನಾವಣಾಧಿಕಾರಿಯ ಕಚೇರಿಯಲ್ಲಿದ್ದರು.ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಉಮೇದುವಾರಿಕೆ ಸಲ್ಲಿಸಿದರು. ಅವರ ಪುತ್ರಿ, ಪುತ್ರ ಸೇರಿದಂತೆ 8 ಮಂದಿ ಚುನಾವಣಾಧಿಕಾರಿಯ ಕಚೇರಿಯಲ್ಲಿದ್ದರು.ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿಯಾಗಿ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ ನಾಮಪತ್ರ ಸಲ್ಲಿಸಿದರು. ಅವರ ಪತ್ನಿ ಸೇರಿದಂತೆ 7 ಮಂದಿ ಚುನಾವಣಾಧಿಕಾರಿಯ ಕಚೇರಿಯಲ್ಲಿದ್ದರು.ಚುನಾವಣಾ ಆಯೋಗ ರೂಪಿಸಿರುವ ನಿಯಮಾವಳಿ ಅನ್ವಯ ನಾಮಪತ್ರ ಸಲ್ಲಿಸುವ ಕೇಂದ್ರದಿಂದ 100 ಮೀ. ದೂರದಲ್ಲಿ ವಾಹನ ನಿಲುಗಡೆ ಮಾಡಬೇಕು. ಗುಂಪು ಸೇರದಂತೆ ಮುಂಜಾಗ್ರತಾ ಕ್ರಮವಹಿಸಬೇಕು. ಜತೆಗೆ, ಕೇಂದ್ರದ ಒಳಗೆ ಅಭ್ಯರ್ಥಿ ಸೇರಿದಂತೆ ಕೇವಲ ಐವರು ಪ್ರವೇಶಿಸಲು ಮಾತ್ರವೇ ಅನುಮತಿಯಿದೆ.ಆದರೆ, ಈ ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ತಾಲ್ಲೂಕು ಕಚೇರಿಯ ಆವರಣ ಪ್ರವೇಶಿಸಿದ ವೇಳೆ ಅವರ ಬೆಂಬಲಿಗರು ಕೂಡ ಒಳಪ್ರವೇಶಿಸಿದರು. ನಾಮಪತ್ರ ಸಲ್ಲಿಸುವ ಕೇಂದ್ರದ ಮುಂಭಾಗ ಹಾಕಿದ್ದ ಕುರ್ಚಿಗಳಲ್ಲಿ ಆಸೀನರಾದರು.

ಪ್ರತಿಕ್ರಿಯಿಸಿ (+)