ಚುನಾವಣಾ ಕೊಡುಗೆ

7
ಕೇಂದ್ರದ 80 ಲಕ್ಷ ನೌಕರರಿಗೆ 7ನೇ ವೇತನ ಆಯೋಗ ರಚನೆ

ಚುನಾವಣಾ ಕೊಡುಗೆ

Published:
Updated:
ಚುನಾವಣಾ ಕೊಡುಗೆ

ನವದೆಹಲಿ: ಮುಂಬರುವ ಲೋಕಸಭಾ ಮತ್ತು ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಮೇಲೆ ಕಣ್ಣಿರಿಸಿರುವ ಕೇಂದ್ರ ಸರ್ಕಾರ ಏಳನೇ ವೇತನ ಆಯೋಗ ರಚಿಸುವುದಾಗಿ ಬುಧವಾರ ಘೋಷಿಸುವ ಮೂಲಕ ತನ್ನ 80 ಲಕ್ಷ ನೌಕರರು ಮತ್ತು ಪಿಂಚಣಿ­ದಾರರಿಗೆ ಭಾರಿ ‘ಚುನಾವಣಾ ಉಡುಗೊರೆ’ ನೀಡಿದೆ.ವಾಡಿಕೆಗಿಂತ ಒಂದು ವರ್ಷ ಮೊದಲೇ ವೇತನ ಆಯೋಗ ರಚನೆಗೆ ಚಾಲನೆ ನೀಡುವ ಮೂಲಕ ಕೇಂದ್ರ ಸರ್ಕಾರ ತನ್ನ ನೌಕರರನ್ನು ಸಂತುಷ್ಟಗೊಳಿಸುವ ಕೆಲಸಕ್ಕೆ ಕೈಹಾಕಿದೆ.80 ಲಕ್ಷ  ಕೇಂದ್ರ ಸಿಬ್ಬಂದಿ  ಮತ್ತು ನಿವೃತ್ತ ನೌಕರರ ವೇತನ ಹಾಗೂ ಪಿಂಚಣಿ ಪರಿಷ್ಕರಣೆಗಾಗಿ ಏಳನೇ ವೇತನ ಆಯೋಗ ರಚಿಸಲು ಪ್ರಧಾನಿ ಮನಮೋಹನ್‌ ಸಿಂಗ್‌  ಸಮ್ಮತಿಸಿದ್ದಾರೆ ಎಂದು ಹಣಕಾಸು ಸಚಿವ ಪಿ.ಚಿದಂಬರಂ ಪ್ರಕಟಿಸಿದರು.2016ರಿಂದ ಜಾರಿ: ಆಯೋಗದ ಶಿಫಾರಸುಗಳನ್ನು ಜನವರಿ 1, 2016ರಿಂದ  ಅನ್ವಯ­ವಾಗುವಂತೆ ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು.ನವೆಂಬರ್‌ನಲ್ಲಿ ನಡೆಯಲಿರುವ ದೆಹಲಿ, ರಾಜಸ್ತಾನ, ಮಧ್ಯ ಪ್ರದೇಶ ಸೇರಿ ಐದು ರಾಜ್ಯಗಳ ವಿಧಾನಸಭೆ  ಚುನಾವಣೆ ಮತ್ತು ಇನ್ನು ಕೆಲವು ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ­ಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.ಎರಡು ವರ್ಷಗಳಲ್ಲಿ ಶಿಫಾರಸು: ಕೇಂದ್ರ ನೌಕರರ ವೇತನ, ಪಿಂಚಣಿ ಮತ್ತು ಭತ್ಯೆ ಪರಿಷ್ಕೃರಣೆ ಕುರಿತು ಈ ಆಯೋಗ ಎರಡು ವರ್ಷಗಳಲ್ಲಿ (2016) ಸರ್ಕಾರಕ್ಕೆ ಶಿಫಾರಸು ವರದಿ ಸಲ್ಲಿಸಲಿದೆ.ಭಾರತೀಯ ಸೇನೆ ಮತ್ತು ರೈಲ್ವೆ ಇಲಾಖೆಯ ನೌಕರರು ಸೇರಿದಂತೆ  50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 30 ಲಕ್ಷ ನಿವೃತ್ತ ನೌಕರರು ಇದರ ಲಾಭ ಪಡೆಯಲಿದ್ದಾರೆ ಎಂದು ಅವರು ತಿಳಿಸಿದರು.ತಜ್ಞರು ಮತ್ತು ಸಂಬಂಧಿಸಿದವರ ಜೊತೆ ಚರ್ಚಿಸಿ ಆಯೋಗದ ಅಧ್ಯಕ್ಷ ಮತ್ತು ಸದಸ್ಯರ ಹೆಸರು ಮತ್ತು ನಿಬಂಧನೆಗಳನ್ನು ಶೀಘ್ರ ಅಂತಿಮಗೊ­ಳಿಸಲಾಗುವುದು ಎಂದು ಚಿದಂಬರಂ ತಿಳಿಸಿದರು. ಸ್ವಾಗತ: ಕಾಂಗ್ರೆಸ್‌ ಮತ್ತು ಕೇಂದ್ರ ಸರ್ಕಾರಿ ನೌಕರರು ಯುಪಿಎ ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.ಕೇಂದ್ರ ಸರ್ಕಾರಿ ನೌಕರರು ಮತ್ತು ಉದ್ಯೋಗಿಗಳ ಮಹಾ ಒಕ್ಕೂಟದ ಅಧ್ಯಕ್ಷ ಕೆ.ಕೆ.ಎನ್‌. ಕುಟ್ಟಿ ಅವರು,  ಆಯೋಗದ ಶಿಫಾರಸು­ಗಳನ್ನು  ಜನವರಿ 1, 2011­ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿ­ಗೊಳಿ­ಸ­­ಬೇಕು ಎಂದು ಒತ್ತಾಯಿ­ಸಿದ್ದಾರೆ.ಏಳನೇ ವೇತನ ಆಯೋಗ ರಚಿಸುವಾಗ ಶೇ 50ರಷ್ಟು ತುಟ್ಟಿಭತ್ಯೆಯನ್ನು (ಡಿ.ಎ) ಮೂಲ­ವೇತನಕ್ಕೆ (ಬೇಸಿಕ್‌) ಸೇರಿಸುವ ಬೇಡಿಕೆಯನ್ನು ಪರಿಗಣಿಸುವಂತೆ ಸರ್ಕಾರದ ಜೊತೆ ನಡೆಸಿದ ಮಾತುಕತೆ ವೇಳೆಯಲ್ಲಿ ಒತ್ತಡ ಹೇರಲಾಗಿದೆ ಎಂದು  ಅವರು ತಿಳಿಸಿದರು.ಏನಿದು ವೇತನ ಆಯೋಗ?

ಪ್ರತಿ ಹತ್ತು ವರ್ಷಗಳಿಗೊಮ್ಮೆ ನೌಕರರ ವೇತನ, ಭತ್ಯೆ ಪರಿಷ್ಕರಣೆಗಾಗಿ  ಸರ್ಕಾರ ವೇತನ ಆಯೋಗ ರಚಿಸುವುದು ವಾಡಿಕೆ. ಈ ಶಿಫಾರಸು ಸಿದ್ಧಪಡಿಸಲು ಆಯೋಗ ಎರಡು ವರ್ಷ ತೆಗೆದುಕೊಳ್ಳಲಿದೆ.ಈ ಬಾರಿ 2016ರ ವೇಳೆಗೆ ಆಯೋಗ ಶಿಫಾರಸು­ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬಹುದು. ಶಿಫಾರಸು  ಜನವರಿ 1, 2016ರಿಂದ ಜಾರಿಯಾ­ಗಲಿವೆ ಎಂದು ಚಿದಂಬರಂ ತಿಳಿಸಿದ್ದಾರೆ.ಜನವರಿ 1, 2006ರಲ್ಲಿ ಆರನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡ ಲಾಗಿತ್ತು. ಅದೇ ರೀತಿ ನಾಲ್ಕು ಮತ್ತು ಐದನೇ ಆಯೋಗದ ಶಿಫಾರಸುಗಳನ್ನು ಅನುಕ್ರಮವಾಗಿ 1986 ಮತ್ತು 1996ರಲ್ಲಿ ಅನುಷ್ಠಾನ­ಗೊಳಿಸಲಾಗಿತ್ತು.ಆಯೋಗದ ಶಿಫಾರಸು­ಗಳನ್ನು ರಾಜ್ಯ ಸರ್ಕಾರಗಳು ಕೆಲವು ಮಾರ್ಪಾಡುಗಳೊಂದಿಗೆ ಅಳವಡಿಸಿ­ಕೊಳ್ಳುವುದು ವಾಡಿಕೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry